ಎಂ.ಎನ್. ಶ್ರೀನಿವಾಸ್
ಪ್ರೊ. ಎಂ.ಎನ್. ಶ್ರೀನಿವಾಸ್
ಮೈಸೂರು ನರಸಿಂಹಾಚಾರ್ ಶ್ರೀನಿವಾಸ್ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಶಾಸ್ತ್ರಜ್ಞರಾಗಿ, ಸಾಮಾಜಿಕ ಮಾನವ ಶಾಸ್ತ್ರದ ಅಧ್ವರ್ಯು ಎಂದು ಪ್ರಸಿದ್ಧರಾದವರು.
ಶ್ರೀನಿವಾಸ್ ಅವರು 1916ರ ನವೆಂಬರ್ 16ರಂದು ಮೈಸೂರಿನ ಬಳಿಯ ಅರಕೆರೆ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ನರಸಿಂಹಾಚಾರ್ಯರು. ಪ್ರಾರಂಭಿಕ ಶಿಕ್ಷಣವನ್ನು ಮೈಸೂರಿನ ಸದ್ವಿದ್ಯಾಶಾಲೆಯಲ್ಲಿ ಪೂರೈಸಿದ ಶ್ರೀನಿವಾಸನ್ ಮಹಾರಾಜಾ ಕಾಲೇಜಿನಿಂದ ಪದವಿ ಪಡೆದು ಮುಂಬೈನಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ‘ಕೊಡವಮತ-ಸಮಾಜ’ ಕುರಿತಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದರು. ಉನ್ನತ ವ್ಯಾಸಂಗವನ್ನು ಆಕ್ಸ್ ಫರ್ಡ್ ನಲ್ಲಿ ಕೈಗೊಂಡರು.
ಎಂ. ಎನ್. ಶ್ರೀನಿವಾಸರು ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ದೆಹಲಿ ವಿಶ್ವವಿದ್ಯಾಲಯದಲ್ಲೂ ಕೆಲಕಾಲ ಅಧ್ಯಾಪನ ನಡೆಸಿದರು. ದೇಶ ವಿದೇಶಗಳಲ್ಲಿ ಸಮಾಜಶಾಸ್ತ್ರ ಮತ್ತು ಮಾನವೀಯ ಶಾಸ್ತ್ರಗಳ ವಿಚಾರ ಸಂಕೀರ್ಣ ಮತ್ತು ಅಧ್ಯಯನ ಗೋಷ್ಠಿಗಳಲ್ಲಿ ಭಾಗಿಯಾದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಅಧ್ಯಯನ ಪೀಠ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಸಂಸ್ಥೆ ಮುಂತಾದ ಸಂಸ್ಥೆಗಳ ಮೂಲಸ್ಥಾಪಕರೆನಿಸಿದರು.
ಸಮಾಜದ ಅಧ್ಯಯನವೇ ಬದುಕಿನ ಪರಮಗುರಿ ಎಂದು ನಂಬಿದ್ದ ಶ್ರೀನಿವಾಸ್ ಅವರು ದೇಶ ವಿದೇಶಗಳಿಂದ ಆಹ್ವಾನಿತರಾಗಿ ಬೋಧನೆ ನಡೆಸಿದ್ದಲ್ಲದೆ, ಜನರ ನಡುವೆ ಬದುಕು ನಡೆಸಿ ಕನ್ನಡದಲ್ಲಿ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದರು. ‘ಕೊಡವರ ಧರ್ಮ ಮತ್ತು ಸಮಾಜ’ 1952ರಲ್ಲಿ ಪ್ರಕಟಗೊಂಡಿತು. ಈ ಗ್ರಂಥವು ಸಾಮಾಜಿಕ ರಚನಾ ಸಿದ್ಧಾಂತದ ಚೌಕಟ್ಟಿನಲ್ಲಿ ಬರೆದ ಪ್ರಥಮ ಸಮಾಜ ಶಾಸ್ತ್ರೀಯ ಗ್ರಂಥವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮೈಸೂರು ಜಿಲ್ಲೆಯ ರಾಮಾಪುರಕ್ಕೆ ತೆರಳಿ ಅಲ್ಲಿಯ ಜನರೊಡನೆ ಒಂದಾಗಿ ಬೆರೆತು ‘ದಿ ರಿಮೆಂಬರ್ಡ್ ವಿಲೇಜ್’ ಎಂಬ ಹೆಸರಿನಲ್ಲಿ ರಚಿಸಿದ ಗ್ರಂಥ, ಸಮಾಜ ಶಾಸ್ತ್ರೀಯ ಅಧ್ಯಯನದ ಪ್ರಮುಖ ಆಕರ ಗ್ರಂಥವೆನಿಸಿತು. ಈ ಕೃತಿಯನ್ನು 'ನೆನಪಿನ ಹಳ್ಳಿ' ಎಂದು ಪ್ರೊ. ಶಾಮ ಭಟ್ಟರು Shama Bhat ಕನ್ನಡದಲ್ಲಿ ಮೂಡಿಸಿದ್ದಾರೆ. 'ಸೋಷಿಯಲ್ ಚೇಂಜ್, ಇನ್ ಮಾಡರ್ನ್ ಇಂಡಿಯಾ’ ಮತ್ತು ‘ಇಂಡಿಯನ್ ಸೊಸೈಟಿ ಥ್ರೂ ಪರ್ಸನಲ್ ರೈಟಿಂಗ್ ಅಂಡ್ ಆನ್ ಲಿವಿಂಗ್ ಇನ್ ರೆವೆಲ್ಯೂಶನ್’ ಶ್ರೀನಿವಾಸನ್ ಅವರ ಮತ್ತೆರಡು ಪ್ರಮುಖ ಕೃತಿಗಳು.
ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಸ್ಟ್ಯಾನ್‌ಫರ್ಡ್, ಕಾರ್ನೆಲ್, ಕ್ಯಾನ್‌ಬೆರಾ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ್ದಲ್ಲದೆ, ಬ್ರಿಟಿಷ್ ಅಕಾಡಮಿ, ಆರ್.ಎ.ಐ. ಲಂಡನ್, ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ, ಫಿಲಿಡೆಲಿಯಾ ಸೊಸೈಟಿ, ಬೋಸ್ಟನ್ ಸೊಸೈಟಿ ಮುಂತಾದುವುಗಳಲ್ಲಿ ಫೆಲೋ ಆಗಿ ಆಯ್ಕೆಯಾದ ಗೌರವ ಪಡೆದರು.
ಎಂ. ಎನ್. ಶ್ರೀನಿವಾಸನ್ ಅವರಿಗೆ ದೊರೆತ ಪ್ರಮುಖ ಗೌರವಗಳೆಂದರೆ ಕೊಚ್ಚಿ ವಿಶ್ವವಿದ್ಯಾಲಯದಿಂದ ಎಂ.ವೈ. ಪೈಲೀ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜವಹರಲಾಲ್ ನೆಹರು ಪ್ರಶಸ್ತಿ, ಭಾರತ ಸರಕಾರದ ಪದ್ಮಭೂಷಣ ಪ್ರಶಸ್ತಿ, ಮುಂಬಯಿ ವಿಶ್ವವಿದ್ಯಾಲಯದ ಜಿ.ಎಸ್. ಗುರ್ಯೆಹ ಪ್ರಶಸ್ತಿ, ರಾಯಲ್ ಆಂಥ್ರೊ ಪೊಲಾಜಿಕಲ್ ಇನ್‌ಸ್ಟಿಟ್ಯೂಟಿನಿಂದ ‘ರಿವರ್ ಮೆಮೋರಿಯಲ್ ಮೆಡಲ್’ ಪಡೆದ ಭಾರತ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಮುಂತಾದವು.
ಪ್ರೊ. ಶ್ರೀನಿವಾಸನ್ ಅವರು 1999ರ ನವೆಂಬರ್ ಮಾಸದಲ್ಲಿ ಈ ಲೋಕವನ್ನಗಲಿದರು. ಅವರ ವಿದ್ವತ್ ಪೂರ್ಣ, ಸಂಶೋಧನಾ ಕಾರ್ಯಗಳಿಗಾಗಿ ಅವರು ಪ್ರಾತಃಸ್ಮರಣೀಯರು.
On the birth anniversary of Mysore Narasimhachar Srinivas who was a great sociologist and social anthropologist
ಕಾಮೆಂಟ್‌ಗಳು