ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೋಗಿ


ಜೋಗಿ


ಜೋಗಿ ಬಹುಮುಖಿ ಪ್ರತಿಭಾನ್ವಿತ ಬರಹಗಾರರು. 

ಗಿರೀಶ್ ರಾವ್ ಹತ್ವಾರ್ ಎಂಬ‍ ಮೂಲ ಹೆಸರಿನ ಜೋಗಿ  1965ರ ನವೆಂಬರ್ 16ರಂದು ಜನಿಸಿದರು.  ಅವರು ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮಕ್ಕೆ ಸೇರಿದವರು.  ತಂದೆ ಕೃಷಿಕರಾದ ಶ್ರೀಧರರಾವ್ ಮತ್ತು ತಾಯಿ ಶಾರದೆ ಅವರು.  ಗಿರೀಶ್ ರಾವ್ ಅವರ ಸಹೋದರ ಹತ್ವಾರ್ ನಾರಾಯಣ ರಾವ್ ಅವರು ಯಕ್ಷಗಾನ ಪ್ರಸಂಗಗಳ ಬರಹಗಾರರಾಗಿ, ತಾಳಮದ್ದಲೆ ಅರ್ಥಧಾರಿಗಳಾಗಿ ಮತ್ತು ಲೇಖಕರಾಗಿ ಪ್ರಸಿದ್ಧರಾದವರು.  

ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಬಿ.ಕಾಂ ಪದವಿ ಪಡೆದ ಗಿರೀಶ್ ರಾವ್,  ತಮ್ಮ ಓದಿನ ದಿನಗಳಲ್ಲೇ  ಬಲ್ಲ ವೆಂಕಟರಮಣ ಅವರಿಂದ  ಸಾಹಿತ್ಯಾಸಕ್ತಿಯ ಪ್ರೇರಣೆ ಪಡೆದರು.  ಮುಂದೆ ಕನ್ನಡ ಪತ್ರಿಕಾ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರಾದ ವೈ ಎನ್ ಕೆ ಅವರ ಗರಡಿಯಲ್ಲಿ ಪತ್ರಕರ್ತರಾಗಿ ಬೆಳೆದು ಹಲವು ದಶಕಗಳಿಂದ ಬೃಹತ್ ಪ್ರತಿಭಾನ್ವಿತ ‘ಜೋಗಿ’ಯಾಗಿ ಕನ್ನಡಿಗರ ಮನೆ-ಮನಗಳ ಮಾತಾಗಿದ್ದಾರೆ.

ಕನ್ನಡಪ್ರಭ ಪತ್ರಿಕೆಯ 'ಬಾಲಿವುಡ್ ಘಾಸಿಪ್',  ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ 'ರವಿ ಕಾಣದ್ದು'  ಬರೆಯುತ್ತಿದ್ದ ಜೋಗಿ, ಪತ್ರಕರ್ತರಾಗಿ, ಉಪಸಂಪಾದಕರಾಗಿ ಮತ್ತು ಸಂಪಾದಕರಾಗಿ ಹೀಗೆ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ.  ಅವರ ಅಂಕಣಗಳು, ಪುರವಣಿಗಳಲ್ಲಿನ ಹರಹುಗಳು  ಪ್ರಸಿದ್ಧಿ ಪಡೆದಿವೆ.  ಚಲನಚಿತ್ರ ಮತ್ತು  ಪುಸ್ತಕ ವಿಮರ್ಶೆಗಳು ತಮ್ಮ ಲವಲವಿಕೆಗಳಿಂದ ಗಮನಸೆಳೆದಿವೆ.  ಜೊತೆ ಜೊತೆಗೆ ಅವರ ಕತೆ, ಕಾದಂಬರಿಗಳೂ ವಿವಿಧ ಹಂದರಗಳಿಂದ  ಬಹುಮುಖಿ ವ್ಯಾಪ್ತಿಯಲ್ಲಿ ಓದುಗರ ಮನಗಳನ್ನು ತಟ್ಟುತ್ತಾ ಸಾಗಿ ಬಂದಿವೆ.   ಆಧುನಿಕ ಯುಗದ ಸಿನಿಮಾ, ಕಿರುತೆರೆಗಳನ್ನೂ  ಬೆಳಗುತ್ತಿವೆ.  

ನದಿಯ ನೆನಪಿನ ಹಂಗು, ಯಾಮಿನಿ,ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಎಲ್ಲಾನು ಮಾಡುವುದು ಹೊಟ್ಟೆಗಾಗಿ,  ವಿರಹದ ಸಂಕ್ಷಿಪ್ತ ಪದಕೋಶ, ಬೆಂಗಳೂರು, ಬಿ ಕ್ಯಾಪಿಟಲ್ ಮುಂತಾದವು ಜೋಗಿ ಅವರ ಕಾದಂಬರಿಗಳು.  ಸೀಳುನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕತೆಗಳು, ಕಥಾ ಸಮಯ, ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ, ನಾಳೆ ಬಾ ಮುಂತಾದವು ಅವರ ಅನೇಕ ಕಥಾಸಂಕಲನಗಳಲ್ಲಿ ಕೆಲವು ತಕ್ಷಣ ಕಣ್ಣ ಮುಂದೆ ಬರುವ ಕೆಲವು.  

ಅಂಕಣ ಸಾಹಿತ್ಯದಲ್ಲಿ ಜೋಗಿ ಅವರದ್ದು ವ್ಯಾಪಕ ಕೃಷಿ.  ಇವುಗಳಲ್ಲಿ ಬಾಲಿವುಡ್ ಘಾಸಿಪ್, ರವಿ ಕಾಣದ್ದು- ರವಿ ಕಂಡದ್ದು, ಜಾನಕಿ ಕಾಲಂ,  ರವಿ ಕಾಣದ್ದು, ಜೋಗಿಮನೆ, ಜೋಗಿ ಕಾಲಂ, ರೂಪರೇಖೆ, ಸೀಕ್ರೆಟ್ ಡೈರಿ, ಮಹಾನಗರ, ನೋಟ್ ಬುಕ್, ಅರೆ ಬೆಳಕು, ಅಂಕಣಗಾಳಿಯಾಟ, ಮಸಾಲೆ ದೋಸೆಗೆ ಕೆಂಪು ಚಟ್ನಿ, ಸಹಜ ಖುಷಿ ಮುಂತಾದವು ಕೃತಿರೂಪ ತಾಳಿಕೊಂಡಿವೆ.

ಲೈಫ್ ಈಸ್ ಬ್ಯೂಟಿಫುಲ್, ತಂದೆ ತಾಯಿ ದೇವರಲ್ಲ, ಪ್ರೀತಿಸುವವರನ್ನು ಕೊಂದುಬಿಡಿ, ಒಂದಾನೊಂದು ಊರಲ್ಲಿ, ಎಂ. ರಂಗರಾವ್ (ವ್ಯಕ್ತಿ ಚಿತ್ರ), ಸದಾಶಿವ ಅವರ ಆಯ್ದ ಕತೆಗಳು (ಸಂಪಾದಿತ) - ನುಡಿ ಪುಸ್ತಕ, ಮಾತು ಮೌನ ಧ್ಯಾನ ವಿಷ್ಣುವರ್ಧನ- ಪತ್ರಕರ್ತನ ಅನಿಸಿಕೆ, ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ, ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ (ನೀನಾಸಂ ತಿರುಗಾಟ 2017), ಹಲಗೆ ಬಳಪ (ಹೊಸ ಬರಹಗಾರರಿಗೆ ಪಾಠ), ಕತೆ ಚಿತ್ರಕಥೆ ಸಂಭಾಷಣೆ (18 ನಿರ್ದೇಶಕರ ಬರಹ ಸಹಿತ) , ‘ಸಾವು: ದಿ ಆರ್ಟ್ ಆಫ್‌ ಡೈಯಿಂಗ್‌’ ಮುಂತಾದವು ಜೋಗಿ ಅವರ ಇತರ ವೈವಿಧ್ಯ ಬರಹಗಳಲ್ಲಿನ ಪಟ್ಟಿಯ ಕೆಲವು ತುಣುಕುಗಳು.

ಉಷ್ಷಪ್ಪ  ಅಂದ್ರ!, ಇನ್ನೂ ತುಂಬಾ ಇದೆ ತಾಳಿ!  ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ, ಶುಭಮಂಗಳ ಮುಂತಾದ ಕಿರುತೆರೆ ಧಾರಾವಾಹಿಗಳಿಗೆ  ಜೋಗಿ  ಸಂಭಾಷಣೆ ಬರೆದಿದ್ದಾರೆ.  ಶೀರ್ಷಿಕೆ ಗೀತೆಗಳನ್ನೂ ಬರೆದಿದ್ದಾರೆ. ಅನಂತಮೂರ್ತಿಯವರ 'ಮೌನಿ' ಕತೆಯ ಚಲನಚಿತ್ರ ಅಳವಡಿಕೆಗೆ  ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅವರದೇ ಕತೆ ಕಾಡಬೆಳದಿಂಗಳು ಚಿತ್ರವಾಗಿ ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿಯನ್ನೂ ಗಳಿಸಿದೆ.

ಯಾವುದೇ ಸಮಾರಂಭದಲ್ಲಿ ಸಿಕ್ಕಾಗ ಅವರನ್ನು ಮಾತಾಡಿಸಿದರೆ ತಮಗೂ ತಮ್ಮ ಸಾಧನೆಗಳಿಗೂ ಯಾವುದೇ ನಂಟೂ ಇಲ್ಲ ಎಂಬಂತೆ ಸಾಧಾರಣರಂತೆ ಅತ್ಯಂತ ಆಪ್ತ ಸ್ನೇಹಿತನಂತೆ ಮಾತಿಗೆ ತೊಡಗಿಕೊಂಡು ಬಿಡುತ್ತಾರೆ.  ಸುತ್ತಾಡುವುದು ಜೋಗಿ ಅವರಿಗೆ ಇಷ್ಟ.  ವಿಶ್ವದೆಲ್ಲೆಡೆ ಆಗಾಗ ಸಂಚಾರ ಮಾಡುತ್ತಾರೆ.  ತಮ್ಮ ಅನುಭವವನ್ನೆಲ್ಲಾ ಬರವಣಿಗೆಗಳಲ್ಲಿ ಹಂಚುತ್ತಲೂ ಇರುತ್ತಾರೆ.

ಹೀಗೆ ವೈವಿಧ್ಯಮಯವಾಗಿ, ಬೋರು ಹೊಡೆಯದಂತೆ, ಲವಲವಿಕೆಯಿಂದ ಬಹುಕಾಲದವರೆಗೆ ಬರೆಯುತ್ತಿರುವ ಈ ಜೋಗಿ ಎಂಬ ಅಗಾಧತೆಗೆ ಹುಟ್ಟುಹಬ್ಬದ ಶುಭಹಾರೈಕೆ. ಅದು ನಿರಂತರವಾಗಿ ಸಾಗುತ್ತಿರಲಿ, ಅವರ ಬದುಕು ಸುಂದರವಾಗಿರಲಿ ಎಂದು ಆತ್ಮೀಯವಾಗಿ ಶುಭಹಾರೈಸೋಣ.  

Happy birthday Jogi Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ