ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಲಿಲ್ ಚೌಧುರಿ


 ಸಲಿಲ್ ಚೌಧುರಿ 


ಸಲಿಲ್ ಚೌಧುರಿ ಭಾರತೀಯ ಚಿತ್ರರಂಗದ ಮಹಾನ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು.  ಕನ್ನಡ ಚಿತ್ರಗಳೂ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಿಗೆ ಸಂಗೀತ ನೀಡಿರುವ ಸಲಿಲ್ ಚೌಧುರಿಯವರ ಸಂಗೀತ, ಪ್ರಧಾನವಾಗಿ ಬೆಂಗಾಲಿ, ಹಿಂದಿ ಮತ್ತು ಮಲಯಾಳಂ ಚಿತ್ರಗಳಿಗೆ ಸಂದಿವೆ.  ‘ಸಲಿಲ್ ದಾ’ ಎಂದು ಚಲನಚಿತ್ರ ಜಗತ್ತಿನಲ್ಲಿ ಗೌರವಾನ್ವಿತರಾಗಿದ್ದ ಅವರು ಕವಿ, ನಾಟಕಕಾರರೂ ಆಗಿದ್ದರು.  ಚಿತ್ರ ಸಂಗೀತದಲ್ಲಿ ತಮ್ಮದೇ ವೈಶಿಷ್ಟ್ಯತೆಗಳಿಗೆ ಹೆಸರಾಗಿದ್ದ ಸಲಿಲ್ ಚೌಧುರಿಯವರು ಕೊಳಲು, ಪಿಯಾನೋ ಅಂತಹ ಅನೇಕ ವಾದ್ಯಗಳಲ್ಲಿ ಪರಿಣತಿ ಹೊಂದಿದ್ದರು.

ಸಲಿಲ್ ಚೌಧುರಿ 1922ರ  ನವೆಂಬರ್ 19ರಂದು ಪಶ್ಚಿಮ ಬಂಗಾಳದ ಗಜಿಪುರ್ ಎಂಬ ಹಳ್ಳಿಯಲ್ಲಿ ಜನಿಸಿದರು.  ಅಸ್ಸಾಂನ ಚಹಾ ಉದ್ಯಾನಗಳ ನಡುವೆ ಅವರ ಬಾಲ್ಯ ಕಳೆಯಿತು.  ಬಾಲ್ಯದಿಂದಲೇ ಅವರು ತಮ್ಮ ತಂದೆಯವರು ಸಂಗ್ರಹಿಸಿದ್ದ ಪಾಶ್ಚಿಮಾತ್ಯ ಸಂಗೀತವನ್ನು ಆತ್ಮೀಯವಾಗಿ ಆಲಿಸುತ್ತಿದ್ದರು.  ಅವರ ತಂದೆಯವರು ಚಹಾ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಂದ ನಾಟಕಗಳನ್ನಾಡಿಸುತ್ತಿದ್ದರು.  

1944ರ ವರ್ಷದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಬಂಗಬಸಿ ಕಾಲೇಜಿಗೆ  ಬಂದ ಸಲಿಲ್ ಚೌಧುರಿ ಅವರು ತಮ್ಮ ಪದವಿ ಅಧ್ಯಯನದ ವರ್ಷಗಳಲ್ಲಿ  ಸಂಗೀತದ ಬಗ್ಗೆ ಪ್ರೌಢತೆಯನ್ನೂ, ರಾಜಕೀಯ ಚಿಂತನೆಗಳ ಪ್ರವೃತ್ತಿಯನ್ನೂ ರೂಢಿಸಿಕೊಂಡಿದ್ದರು.  ತಮ್ಮ ಕಾಲೇಜಿನ ದಿನಗಳಲ್ಲಿ ಅವರು ಕಲ್ಕತ್ತಾದಲ್ಲಿನ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಂಗವಾಗಿದ್ದ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ಗೆ ಸೇರಿದರು.  ಅಲ್ಲಿ ಅವರು ಅನೇಕ ಹಾಡುಗಳನ್ನು ಬರೆದು  ಸಂಗೀತಕ್ಕಳವಡಿಸಿದರು.  ಈ ಕಲಾ ಸಂಘಟನೆಯು ನಗರ, ಗ್ರಾಮಗಳಲ್ಲೆಲ್ಲಾ ಪರ್ಯಟನೆ ನಡೆಸುತ್ತಾ ಈ ಹಾಡುಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುತ್ತಿತ್ತು.  ಆ ದಿನಗಳಲ್ಲಿ ಅವರು ಮೂಡಿಸಿದ ಬಿಚ್ರಪತಿ, ರನ್ನರ್ ಮತ್ತು ಅಬಕ್ ಪ್ರತಿಬಿ ಮುಂತಾದ ಗೀತೆಗಳು ಅಪಾರ ಜನಪ್ರಿಯತೆಯನ್ನು ಗಳಿಸಿದ್ದವು.  

ಸಲಿಲ್ ಚೌಧುರಿ ಅವರು ತಮ್ಮ ಇಪ್ಪತ್ತರ ಹರಯದಲ್ಲಿ ಸಂಗೀತ ಸಂಯೋಜಿಸಿದ ‘ಗಾಯೇರ್ ಬೋಧು’ ಎಂಬ ಗೀತೆಗಳ ಗುಚ್ಛ ಬಂಗಾಳಿ ಸಂಗೀತದಲ್ಲಿ ಹೊಸ ಅಲೆಯಾಗಿ ಹೊರಹೂಮ್ಮಿತು.  ಅಂದಿನ ದಿನಗಳಲ್ಲಿ ಬಂಗಾಳದಲ್ಲಿ  ಪ್ರಖ್ಯಾತಿ ಪಡೆದಿದ್ದ ದೇಬಬ್ರತ, ಬಿಸ್ವಾಸ್, ಹೇಮಂತ ಮುಖರ್ಜಿ, ಶ್ಯಾಮಲ ಮಿತ್ರ, ಮನಬೇಂದ್ರ ಮುಖರ್ಜಿ, ಪ್ರತಿಮಾ ಬ್ಯಾನರ್ಜಿ ಅವರನ್ನೊಳಗೊಂಡಂತೆ  ಎಲ್ಲಾ ಹಾಡುಗಾರರೂ ಸಲಿಲ್ ಚೌಧುರಿ ಅವರ ಗೀತೆಗಳನ್ನು  ಹಾಡುತ್ತಿದ್ದರು.  

ಸಲಿಲ್ ದಾ ಅವರ ಪ್ರಥಮ ಚಲನಚಿತ್ರ ‘ಪರಿವರ್ತನ್’ 1949ರ ವರ್ಷದಲ್ಲಿ ಬಿಡುಗಡೆಗೊಂಡಿತು.  ಅವರ ಚೊಚ್ಚಲ  ಗೀತೆಯನ್ನು ಹಾಡಿದವರು ದೇಬಬ್ರತ ಬಿಸ್ವಾಸ್.  1994ರ ವರ್ಷದಲ್ಲಿ ಬಿಡುಗಡೆಗೊಂಡ ‘ಮಹಾಭಾರತಿ’ ಸಲಿಲ್ ಚೌಧುರಿ ಅವರ 41 ಬಂಗಾಳಿ ಚಿತ್ರಗಳಲ್ಲಿ ಕೊನೆಯದು.

ಸಲಿಲ್ ದಾ ಅವರು 1953ರ ವರ್ಷದಲ್ಲಿ ಬಿಮಲ್ ರಾಯ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ದೋ ಬಿಘಾ ಜಮೀನ್’ ಮೂಲಕ   ಹಿಂದಿ ಚಲನಚಿತ್ರರಂಗಕ್ಕೆ ಬಂದರು.  ಈ ಚಿತ್ರ ಸಲಿಲ್ ಚೌಧುರಿ ಅವರದೇ ಆದ ‘ರಿಕ್ಷಾವಾಲ’ ಕಥೆಯನ್ನಾಧರಿಸಿತ್ತು.  ಈ ಚಿತ್ರ, ಫಿಲಂಫೇರ್’ನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುದೇ ಅಲ್ಲದೆ ಕೇನ್ಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರಶಸ್ತಿ ಗಳಿಸಿತು.  ಮುಂದೆ ಅವರು ಸಂಗೀತ ನೀಡಿದ ಅನೇಕ ಚಿತ್ರಗಳ ಗೀತೆಗಳು ಇಂದೂ ಸಂಗೀತ ಪ್ರಿಯರನ್ನು ಮುದಗೊಳಿಸುತ್ತಿವೆ.   ನೌಕರಿ, ಬಿರಜ್ ಬಹು, ಟಾಂಗೇವಾಲಿ, ಅಮಾನತ್, ಪರಿವಾರ್, ಜಾಗ್ತೇ ರಹೋ, ಆವಾಜ್, ಏಕ್ ಗಾಂವ್ ಕಿ ಕಹಾನಿ, ಮುಸಾಫಿರ್, ಮಧುಮತಿ, ದಿ ರಿವರ್, ಪರಾಖ್, ಹನಿಮೂನ್, ಕಾನೂನ್, ಕಾಬೂಲಿವಾಲ, ಛಾಯಾ, ಮಾಯಾ, ಮೇಮ್ ದೀದಿ, ಸಪ್ನೇ ಸುಹಾನೇ, ಹಾಲ್ಫ್ ಟಿಕೆಟ್, ಝೂಲಾ, ಪ್ರೇಮ್ ಪತ್ರ್, ಲಾಲ್ ಪತ್ಥರ್, ಚಾಂದ್ ಔರ್ ಸೂರಜ್, ಪಿಂಜರೇ ಕೆ ಪಂಛೀ, ಸಾರಾ ಆಕಾಶ್, ಆನಂದ್, ರಜನೀಗಂಧ, ಚೋಟಿ ಸಿ ಬಾತ್, ಜೀವನ್ ಜ್ಯೋತಿ, ಆನಂದ ಮಹಲ್, ಮೃಗಯಾ, ಜೀನಾ ಯಹಾಂ, ಅಗ್ನಿ ಪರೀಕ್ಷಾ, ಮುಂತಾದ ಸುಮಾರು 75 ಹಿಂದೀ ಚಿತ್ರಗಳಿಗೆ ಸಲೀಲ್ ಚೌಧುರಿ ಸಂಗೀತ ನೀಡಿದರು.  ‘ಮಧುಮತಿ’ ಚಿತ್ರದ ಸಂಗೀತ ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ತಂದುಕೊಟ್ಟಿದ್ದಲ್ಲದೆ ಇಂದಿಗೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ.

ಮಲಯಾಳಂ ಚಿತ್ರ ಸಂಗೀತದ ಅತ್ಯಂತ ಶ್ರೇಷ್ಠ ಸಂಗೀತ ನಿರ್ದೇಶಕರ ಸಾಲಿನಲ್ಲಿ ಸಲಿಲ್ ಚೌಧುರಿ ಚಿರವಿರಾಜಿತರು.  ಚೆಮ್ಮೀನ್, ಏಳು ರಾತ್ರಿಗಳ್, ಅಭಯಂ, ಸ್ವಪ್ನಂ, ನೆಲ್ಲು, ರಾಸಲೀಲಾ, ನೀಲ ಪೊನ್ಮಾನ್, ರಾಗಂ, ತೋಮಸಲೀಹ, ತುಲಾ ವರ್ಷಂ,  ಅಪರಾಧಿ, ವಿಶುಕ್ಕನಿ, ಈ ಗಾನಂ ಮರಕ್ಕುಂ, ಮದನೋತ್ಸವಂ, ಎದೋ ಒರು ಸ್ವಪ್ನಂ, ಚುವ್ವನ್ ಚೈರಾಕುಕಳ್, ಪುದಿಯ ವೆಳಿಚಂ, ಮುಂತಾದ 26 ಚಿತ್ರಗಳಿಗೆ ಅವರು ಸುಶ್ರಾವ್ಯ ಸಂಗೀತ ಹರಿಸಿದ್ದಾರೆ. 

ಕನ್ನಡದಲ್ಲಿಯೂ ಸಂಶಯ ಫಲ, ಒಂದೇ ರೂಪ ಎರಡು ಗುಣ, ಚಿನ್ನಾ ನಿನ್ನಾ ಮುದ್ದಾಡುವೆ, ಕೋಕಿಲಾ ಮುಂತಾದ ಚಿತ್ರಗಳಲ್ಲಿ ಸಲೀಲ್ ಚೌಧುರಿ ಅವರು ಸುಮಧುರ ಗೀತೆಗಳನ್ನೂ, ಹಿತವಾದ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ.

ಬಂಗಾಳಿ, ಹಿಂದೀ, ಮಲಯಾಳಂ, ಕನ್ನಡ ಬಾಷೆಗಳಲ್ಲದೆ, ತಮಿಳು, ತೆಲುಗು, ಗುಜರಾಥಿ, ಅಸ್ಸಾಮಿ, ಮರಾಠಿ, ಒರಿಯಾ ಚಿತ್ರಗಳಿಗೂ ಸಲಿಲ್ ಚೌಧುರಿ ಸಂಗೀತ ನೀಡಿದ್ದರು.

ಸಲಿಲ್ ಚೌಧುರಿ ಅವರ ಸಂಗೀತ ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತದ ಎರಡೂ ಗುಣಗಳನ್ನು ಒಳಗೊಂಡಿರುವುದರ  ಜೊತೆಗೆ, ಪ್ರಕೃತಿಯಲ್ಲಿನ ಇಂಚರ, ಜಾನಪದದ ಸೊಗಡು ಇವೆಲ್ಲವುಗಳನ್ನೂ ಸುಮಧುರತೆಯಿಂದ ಬೆಸೆದು ತಮ್ಮದೇ ಆದ ಪ್ರತ್ಯೇಕ ವೈಶಿಷ್ಟ್ಯವನ್ನು ಪ್ರತಿನಿಧಿಸುತ್ತಿವೆ.  

ಸಂಗೀತ ಪ್ರೇಮಿಗಳ ಕುಟುಂಬವಾಗಿದ್ದ ಸಲಿಲ್ ಚೌಧುರಿ ಅವರ ಕುಟುಂಬದಲ್ಲಿ ಅವರ ಪತ್ನಿ ಜ್ಯೋತಿ ಚೌಧುರಿ ಮತ್ತು ಅವರ ಮಕ್ಕಳು ಕೂಡಾ ಉತ್ತಮ ಸಂಗೀತ ಜ್ಞಾನ ಹೊಂದಿದವರಾಗಿದ್ದಾರೆ.  ಅವರ ಮೊದಲ ಪುತ್ರಿ ಅನಿತಾ ಚೌಧುರಿ ಕನ್ನಡದ ‘ದೇಹಕೆ ಉಸಿರೇ ಸದಾ ಭಾರ’ ಗೀತೆಗೆ ಬಾಲಕಿಯಾಗಿ ಧ್ವನಿಯಾಗಿದ್ದರು.  ಅವರ ಮತ್ತೊಬ್ಬ ಪುತ್ರಿ ಅಂತರಾ ಚೌಧುರಿ ಅನೇಕ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುತ್ತಿದ್ದಾರೆ.  

ಸಲಿಲ್ ಚೌಧುರಿ ಅವರಿಗೆ ಮಧುಮತಿ ಚಿತ್ರಕ್ಕೆ ಶ್ರೇಷ್ಠ ಸಂಗೀತ ಸಂಯೋಜನೆಗಾಗಿ ಫಿಲಂ ಫೇರ್ ಗೌರವ, ಕೆಲವು ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ,  1958ರ ವರ್ಷದಲ್ಲಿ ಮತ್ತು 1988ರ ವರ್ಷದಲ್ಲಿ ಸಂಗೀತ ನಾಟಕ ಆಕಾಡೆಮಿ ಗೌರವ ಮುಂತಾದ ಹಲವು ಗೌರವಗಳು ಸಂದಿತ್ತು.

ಸಲೀಲ್ ಚೌಧುರಿ ಅವರು 1995ರ ಸೆಪ್ಟೆಂಬರ್ 5ರಂದು ಈ ಲೋಕವನ್ನಗಲಿದರು.

On the birth anniversary of great music composer Salil Chowdhury 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ