ಲಾಲ್ಗುಡಿ ರಾಜಲಕ್ಷ್ಮಿ
ಲಾಲ್ಗುಡಿ ರಾಜಲಕ್ಷ್ಮಿ
ಬೆಂಗಳೂರಿನ ನೆಲೆಸಿರುವ ವಿದುಷಿ ಲಾಲ್ಗುಡಿ ರಾಜಲಕ್ಷ್ಮಿ ಅವರು ಪ್ರಸಿದ್ಧ ಲಾಲ್ಗುಡಿ ಮನೆತನದ ಶ್ರೇಷ್ಠ ಸಂಗೀತಗಾರ್ತಿ, ಪಿಟೀಲು ವಾದಕಿ ಮತ್ತು ಗುರು.
ನವೆಂಬರ್ 5, ರಾಜಲಕ್ಷ್ಮಿಯವರ ಜನ್ಮದಿನ. ಅವರು ಸಂತ ತ್ಯಾಗರಾಜರ ಶಿಷ್ಯ ಪರಂಪರೆಯಿಂದ ಬಂದವರು. ಮಹಾನ್ ಪಿಟೀಲು ವಾದಕರ ಕುಟುಂಬದಲ್ಲಿ ಜನಿಸಿದ ರಾಜಲಕ್ಷ್ಮಿ ಅವರು, ಖ್ಯಾತ ಲಾಲ್ಗುಡಿ ಜಯರಾಮನ್ ಅವರ ತಂಗಿ. ಪಿಟೀಲು ನುಡಿಸುವ ಕಲೆಯನ್ನು ತಂದೆ ಲಾಲ್ಗುಡಿ ಗೋಪಾಲ ಅಯ್ಯರ್ ಅವರಿಂದ ಕಲಿತು ಮುಂದೆ ಸಹೋದರ ಲಾಲ್ಗುಡಿ ಜಯರಾಮನ್ ಅವರಿಂದ ವಾದ್ಯವನ್ನು ನುಡಿಸುವ ಸೂಕ್ಷ್ಮತೆಗಳಲ್ಲಿನ ತರಬೇತಿ ಪಡೆದರು. ಹೀಗೆ ಅವರು ಲಯ ಮತ್ತು ಸಾಹಿತ್ಯವನ್ನು ಸಂಯೋಜಿಸುವ ಅನುಗ್ರಹ, ನಿಖರತೆ ಮತ್ತು ಹಿತವಾದ ಮಧುರತೆಯನ್ನು ಕಟ್ಟಿಕೊಡುವ ಒಳನೋಟವನ್ನು ಗಳಿಸಿಕೊಂಡರು.
ರಾಜಲಕ್ಷ್ಮಿಯವರು ತಮ್ಮ 10ನೇ ವಯಸ್ಸಿನಲ್ಲಿ ತಮ್ಮ ಮೊದಲ ಸಂಗೀತ ಕಛೇರಿಯನ್ನು ನೀಡಿದರು. ಮುಂದೆ ಹಿಂತಿರುಗಿ ನೋಡದ ಅವರು ಪೂರ್ಣ ಪ್ರಮಾಣದ ಏಕವ್ಯಕ್ತಿ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿದರು, ಇದು ಶ್ರೇಷ್ಠ ಸಂಗೀತಜ್ಞರು ಮತ್ತು ರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಅವರು ತಮ್ಮ ಸಹೋದರ ಜಯರಾಮನ್, ಸಹೋದರಿಯರಾದ ಪಿಟೀಲು ವಾದಕಿ ವಿದುಷಿ ಶ್ರೀಮತಿ ಬ್ರಹ್ಮಾನಂದಂ, ವೈಣಿಕರಾದ ವಿದುಷಿ ಪದ್ಮಾವತಿ ಅನಂತಗೋಪಾಲನ್ ಅವರುಗಳೊಂದಿಗೂ ಕಾರ್ಯಕ್ರಮ ನೀಡಿದರು. ರಾಜಲಕ್ಷ್ಮಿ ಅವರ ಸುಪುತ್ರಿ ಡಾ. ಜಯಂತಿ ಕುಮರೇಶ್ ಅವರು ಪ್ರಮುಖ ವೀಣಾ ಕಲಾವಿದರಾಗಿ ಪ್ರಸಿದ್ಧರು. ಇವರ ಮೊಮ್ಮಗ ಅಭಿಷೇಕ್ ರಘುರಾಮ್ ಅದ್ಭುತ ಯುವ ಗಾಯಕರಾಗಿ ಪ್ರಸಿದ್ಧರು.
ರಾಜಲಕ್ಷ್ಮಿ ಅವರು ಸಂಗೀತ ಕಛೇರಿ ಕಲಾವಿದೆಯಾಗಿನ ತಮ್ಮ ಹಲವಾರು ದಶಕಗಳ ಅನುಭವದಲ್ಲಿ ಮಹಾನ್ ಕಲಾವಿದರಾದ ಎಂ.ಎಲ್. ವಸಂತಕುಮಾರಿ, ಡಿ. ಕೆ. ಪಟ್ಟಮಾಳ್, ಸರೋಜಾ ಮತ್ತು ಲಲಿತಾ, ರಾಧಾ ಮತ್ತು ಜಯಲಕ್ಷ್ಮಿ, ಮಣಿ ಕೃಷ್ಣಸ್ವಾಮಿ, ಸುಧಾ ರಘುನಾಥನ್, ಅರುಣಾ ಸಾಯಿರಾಂ, ನೆಯ್ವೇಲಿ ಸಂತಾನಗೋಪಾಲನ್, ಎನ್.ರಮಣಿ, ಮ್ಯಾಂಡೋಲಿನ್ ಶ್ರೀನಿವಾಸ್ ಸೇರಿದಂತೆ ಅನೇಕ ಕಲಾವಿದರಿಗೆ ಪಿಟೀಲು ಸಹವಾದನ ನೀಡಿದ್ದಾರೆ. ಅನೇಕ ಏಕವ್ಯಕ್ತಿ ಸಂಗೀತ ಕಚೇರಿಗಳನ್ನು ಸಹ ನೀಡಿದ್ದಾರೆ. ಮಲೇಷ್ಯಾ, ಸಿಂಗಾಪುರ, ಅಮೇರಿಕಾ, ಜಪಾನ್ ಸೇರಿದಂತೆ ಹಲವು ದೇಶಗಳಿಗೆ ತಮ್ಮ ಸಂಗೀತವನ್ನು ಕೊಂಡೊಯ್ದಿದ್ದಾರೆ. ಅವರು ಆಕಾಶವಾಣಿಗಾಗಿ ಸುಮಾರು ಒಂದು ದಶಕದ ಕಾಲ ಸಿಬ್ಬಂದಿ ಕಲಾವಿದರಾಗಿ ಕೆಲಸ ಮಾಡಿದ್ದ ಅವಧಿಯಲ್ಲಿ ಅನೇಕ ಸಂಗೀತ ವೈಶಿಷ್ಟ್ಯಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.
ರಾಜಲಕ್ಷ್ಮಿ ಅವರು ಸೃಜನಾತ್ಮಕ ಸಂಯೋಜಕಿಯಾಗಿ ಭಾರತಿಯಾರ್ ಮತ್ತು ವಾದಿರಾಜರಂತಹ ಮಹಾನುಭಾವರ ಸಾಹಿತ್ಯಕ್ಕೆ ರಾಗಗಳನ್ನು ರಚಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಬ್ಯಾಲೆಗಳಿಗೆ ಸಹ ಸಂಗೀತ ಸಂಯೋಜಿಸಿದ್ದಾರೆ.
ರಾಜಲಕ್ಷ್ಮಿ ಅವರು ಅಪಾರ ಬೇಡಿಕೆಯಿರುವ ಗೌರವಾನ್ವಿತ ಶಿಕ್ಷಕಿಯಾಗಿದ್ದಾರೆ. ಅವರು ವೀಣೆ ಮತ್ತು ಗಾಯನ ಸಂಗೀತವನ್ನು ಸಹ ಕಲಿಸುತ್ತಾರೆ.
ರಾಜಲಕ್ಷ್ಮಿ ಅವರಿಗೆ ಶ್ರೀ ತ್ಯಾಗರಾಜ ಭಜನಾ ಸಭಾದ ಕಲಾ ಜ್ಯೋತಿ, ರಾಮಕೃಷ್ಣ ಭಜನಾ ಸಭಾದಿಂದ ಸಂಗೀತ ಭೂಷಣ, ಗಾಯನ ಸಮಾಜದಿಂದ "ಸ್ವರಭೂಷಣಿ", ಪಿಟೀಲು ಅಕಾಡೆಮಿಯ ಪ್ರತಿಷ್ಠಿತ ಪಪ್ಪಾ ವೆಂಕಟರಾಮಯ್ಯ ಪ್ರಶಸ್ತಿ ಸೇರಿದಂತೆ ಅನೇಕ ಬಿರುದು, ಪ್ರಶಸ್ತಿ ಗೌರವಗಳು ಸಂದಿವೆ.
Great Volinist and Guru, Vidushi. Lalgudi Rajalakshmi 🌷🙏🌷
ಕಾಮೆಂಟ್‌ಗಳು