ಡಿ. ಎಸ್. ಕರ್ಕಿ
ಡಿ. ಎಸ್. ಕರ್ಕಿ
ಬಹುತೇಕ ಕನ್ನಡ ಸಮಾರಂಭಗಳು ಪ್ರಾರಂಭವಾಗುವುದು ‘ಹಚ್ಚೇವು ಕನ್ನಡದ ದೀಪ’ ಭಾವ ಗೀತೆಯಿಂದ. ಈ ಗೀತೆಯನ್ನು ಬರೆದವರು ನಮ್ಮ ನಾಡಿನ ಸಾಹಿತಿ ಡಿ. ಎಸ್. ಕರ್ಕಿ ಅವರು. ಅವರ ಮೊದಲ ಕವನ ಸಂಕಲನವಾದ ‘ನಕ್ಷತ್ರಗಾನ’ದಲ್ಲಿ ಮೂಡಿದ ಗೀತೆಯಿದು.
ದುಂಡಪ್ಪ ಸಿದ್ಧಪ್ಪ ಕರ್ಕಿ ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ 1907ರ ನವೆಂಬರ್ 15ರಂದು ಜನಿಸಿದರು. ಇವರ ತಾಯಿ ದುಂಡವ್ವ. ತಂದೆ ಸಿದ್ದಪ್ಪ. ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಕರ್ಕಿ ಅವರ ಪ್ರಾಥಮಿಕ ಶಿಕ್ಷಣ, ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು. ಬೆಳಗಾವಿಯ ಗಿಲಗಂಜಿ ಅರಟಾಳ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಕರ್ಕಿ ಅವರು 1940ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಹೈಸ್ಕೂಲಿನಲ್ಲಿಯೇ ಶಿಕ್ಷಕರಾದರು. 1949ರಲ್ಲಿ “ಕನ್ನಡ ಛಂದಸ್ಸಿನ ವಿಕಾಸ” ಮಹಾಪ್ರಬಂಧಕ್ಕಾಗಿ ಪಿ.ಹೆಚ್.ಡಿ ಪಡೆದರು. 1956ರಲ್ಲಿ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ 1966ರಲ್ಲಿ ನಿವೃತ್ತರಾದರು. ಆ ನಂತರ ನರೇಗಲ್ಲ ಕಾಲೇಜಿನ ಪ್ರಥಮ ಪ್ರಾಚಾರ್ಯರಾದರು. ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು.
ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಕರ್ಕಿ ಅವರ ಕಾವ್ಯದ ಜೀವಾಳಗಳಾಗಿವೆ. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದರು. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಎಸ್.ಡಿ. ಇಂಚಲ, ಬ.ಗಂ. ತುರಮರಿಯರೊಂದಿಗೆ ಸೇರಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮೂವರೂ ಸೇರಿ 'ಕನ್ನಡದ ಕಿಟ್' ಎಂದೇ ಹೆಸರುವಾಸಿಯಾಗಿದ್ದರು.
‘ನಕ್ಷತ್ರಗಾನ’, ‘ಭಾವತೀರ್ಥ’, ‘ಗೀತಗೌರವ’, ‘ನಮನ’, ‘ಕರ್ಕಿ ಕಣಗಲ’ ಇವು ಕರ್ಕಿ ಅವರ ಪ್ರಮುಖ ಕವನ ಸಂಕಲನಗಳು. ‘ಬಣ್ಣದ ಚೆಂಡು’, ‘ತನನ ತೋಂ’ ಮಕ್ಕಳ ಕವನ ಸಂಕಲನಗಳು. ‘ನಾಲ್ದೆಸೆಯ ನೋಟ’ ಅವರ ಪ್ರಮುಖ ಪ್ರಬಂಧ ಸಂಗ್ರಹ.
ಪ್ರೊ. ಕರ್ಕಿ ಅವರ ಕೃತಿ 'ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಹಾ ಕರ್ಕಿಯವರು ಸೇವೆ ಮಾಡಿದ್ದರು.
ಡಿ.ಎಸ್. ಕರ್ಕಿಯವರು 1984ರ ಜನೆವರಿ 16ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ.
On the birth anniversary of our great scholar and poet Dundappa Siddappa Karki
ಉತ್ತಮ ಸಂಗ್ರಹ ಮತ್ತು ಉತ್ತಮ ಪ್ರಯತ್ನ ಸರ್..
ಪ್ರತ್ಯುತ್ತರಅಳಿಸಿಚೆನ್ನಾಗಿ ಮಾಡಿದ್ದೀರ
ಪ್ರತ್ಯುತ್ತರಅಳಿಸಿವಿಶ್ವ ಒಂದು ವಾದ್ಯ ವೃಂದ ಈ ಗೀತೆ ಯಾರು ಬರೆದಿರುವುದು ದಯಮಾಡಿ ತಿಳಿಸಿ
ಪ್ರತ್ಯುತ್ತರಅಳಿಸಿ