ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್ ಕರ್ನಾಟಕದ ನಿಷ್ಠಾವಂತ ಸಮಾಜಮುಖಿ ರಾಜಕಾರಣಿಗಳಲ್ಲಿ ಒಬ್ಬರು.
ಎಸ್. ಸುರೇಶ್ ಕುಮಾರ್ 1955ರ ನವೆಂಬರ್ 11ರಂದು ಬೆಂಗಳೂರಿನಲ್ಲಿ ಜನಿಸಿದರು.
ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಸುರೇಶ್ ಕುಮಾರ್ ಬಿ.ಎಸ್‍ಸಿ ಪದವಿ ಗಳಿಸಿದ ನಂತರದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿದ ಕಾರಣದಿಂದಾಗಿ ಸೆರೆಮನೆ ಸೇರಿದರು. ಬೆಂಗಳೂರಿನ ಸೆಂಟ್ರಲ್ ಜೈಲು ವಾಸದಲ್ಲಿ ಅವರೊಂದಿಗೆ ಸಹಜೈಲುವಾಸಿಗಳಾಗಿ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿದ್ದರು. ಮುಂದೆ 1977-80 ಅವಧಿಯಲ್ಲಿ ಕಾನೂನು ಪದವಿಗಳಿಸಿದರು. ರಾಜಕೀಯಕ್ಕೆ ಇಳಿಯುವ ಮುಂಚೆ ಸ್ವಲ್ಪ ಕಾಲ ವಕೀಲರಾಗಿದ್ದರು.
ಸುರೇಶ್ ಕುಮಾರ್ 1983ರಿಂದ ಎರಡು ಅವಧಿಗಳಿಗೆ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾಯಿತರಾದರು. ಮಂದೆ 1994, 1999, 2008, 2013 ಮತ್ತು 2018ರ ಚುನಾವಣೆಗಳಲ್ಲಿ ರಾಜಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಆದರು.
2008ರ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಹಲವು ಖಾತೆಗಳ ಸಚಿವರಾಗಿದ್ದ ಸುರೇಶ್ ಕುಮಾರ್, ಹಿಂದಿನ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು.
ನಮ್ಮ ದೇಶದಲ್ಲಿ ಸರ್ಕಾರ ಮತ್ತು ಸಚಿವರುಗಳ ಯಶಸ್ಸುಗಳನ್ನು ನಿಷ್ಕರಿಸುವುದು ಮತ್ತು ಮೌಲ್ಯಮಾಪನ ಮಾಡುವುದು ನಮ್ಮಂತಹ ಸಾಮಾನ್ಯರಿಗೆ ಸಾಧ್ಯವಾದ ವಿಚಾರವಲ್ಲ.
ಜನರಿಗೆ ತಿನ್ನಲು ಇದೆ; ಎಲ್ಲರ ಬಳಿ ಸರ್ಟಿಫಿಕೇಟ್ ಇದೆ; ನಗರಗಳಲ್ಲೂ - ಹಳ್ಳಿ ಹಳ್ಳಿಗಳಲ್ಲೂ - ಎಲ್ಲೆಲ್ಲೆಲ್ಲೂ ರಾಜಕೀಯ ತುಂಬಿ ಹರಿಯುವಷ್ಟಿದೆ; ನದಿ ಕೆರೆಗಳು ಹರಿಯುವಲ್ಲಿ ಭವ್ಯ ಕಟ್ಟಡಗಳಿವೆ; ರಸ್ತೆಗಳಲ್ಲಿ ಜಾಗವೇ ಇಲ್ಲದಷ್ಟು, ಫುಟ್ ಪಾತುಗಳೇ ಇಲ್ಲದಷ್ಟು ಎಲ್ಲರ ಬಳಿ ಕಾರಿದೆ, ಬಾರುಗಳಿವೆ; ಮರಗಳಿದ್ದ ಕಡೆ ಕೊಳೆ ತುಂಬಿದ ಫ್ಲೈವೋರ್ - ಮೆಟ್ರೋದ ಬೃಹತ್ ಕಂಬಗಳಿವೆ; ಸದಾ ಬದುಕನ್ನೇ ಸ್ಥಬ್ದಗೊಳಿಸುವಂತೆ ರಸ್ತೆಗಳನ್ನು ಮುರಿದಿರುವ ಹೊಸ ಹೊಸತು ನಿರ್ಮಾಣವಾಗುತ್ತಲೇ ಇರುತ್ತೆ; ಇದೆಲ್ಲಾ ಅಭಿವೃದ್ಧಿಯೇ ಅಲ್ಲವೆ ಎಂಬುದು ಸದಾ ಕಾಡುವ ಉತ್ತರವಿಲ್ಲದ ಪ್ರಶ್ನೆ.
ಆದರೆ ರಾಜಕೀಯದಲ್ಲಿ, ತಮ್ಮನ್ನು ಸಾಮಾನ್ಯನೆಂದು ಭಾವಿಸುವ ಮನಗಳಿಗೆ ಇಲ್ಲಿ ತಮ್ಮ ಪ್ರತಿನಿಧಿ ತಮ್ಮಂತೆ ಕಾಣುವವನಿದ್ದಾನೆ; ಅವನು ಬೆರೆಲ್ಲೋ, ಯಾವುದೇ ಉಸಾಬರಿಯಿಲ್ಲದೆ, ತನ್ನ ಪಾಡಿಗೆ ತನ್ನ ವೈಯಕ್ತಿಕ ಬದುಕು ನೋಡಿಕೊಂಡು ರಾಜಕೀಯದವರನ್ನು, ಅಧಿಕಾರಿಗಳನ್ನು ಬೈದುಕೊಂಡು, ಪಕ್ಕದ ಮನೆಯವ ಒಳ್ಳೆಯವನಾಗಿರಲಿ ಎನ್ನುತ್ತಾ ಬುದ್ಧಿಜೀವಿಯಂತೆ ಬಾಳಬಹುದಿತ್ತು; ಆದರೂ ಟೀಕೆ ಮಾಡಿಸಿಕೊಂಡೂ ಹಗಲಿರುಳೂ ದುಡಿಯುತ್ತಾನೆ, ತಾನೇ ಕೊರೋನದಂತಹ ಭೀತಿಯ ರೋಗಕ್ಕೂ ಸಿಲುಕಿಕೊಳ್ಳುತ್ತಾನೆ; ಇವೆಲ್ಲ ನಿಜಕ್ಕೂ ಮನಮಿಡಿಯುವ ವಿಚಾರ. ಹಾಗೆ ಭಾವ ಹುಟ್ಟಿಸಿರುವ ಸಮಾಜಮುಖಿ ವ್ಯಕ್ತಿಗಳಲ್ಲಿ ಸುರೇಶ್ ಕುಮಾರ್ ಒಬ್ಬರು.
ನಾನು ಶ್ರೀರಾಮಪುರದ ಮಾರುತಿ ಬಡಾವಣೆಯಲ್ಲಿದ್ದಾಗ ಎಲ್ಲರಂತೆ ಸಾಧಾರಣರಾಗಿ ಅಲ್ಲಿನ ಜನರ ಸ್ಥಿತಿಗತಿಗಳನ್ನು ಸುರೇಶ್ ಕುಮಾರ್ ಖುದ್ದಾಗಿ ಪರಿಶೀಲಿಸುತ್ತಿದ್ದುದು, ಅವರು ಕಟ್ಟಿದ್ದ ಯುವಕ ತಂಡ ಆಗಾಗ ಬಂದು ತೊಂದರೆ ಸಲಹೆಗಳನ್ನು ಕೇಳುತ್ತಿದ್ದುದನ್ನು ನೋಡಿದ್ದೇನೆ. ಸಾರ್ವಜನಿಕವಾಗಿ ಕೂಡಾ ಸುರೇಶ್ ಕುಮಾರ್ ಸಾಕಷ್ಟು ಸದಭಿರುಚಿ, ಸದ್ವಿವಿವೇಕ, ಸುಂಸಂಸ್ಕೃತಿಗಳಿಗೆ ಹೆಸರಾದವರು. ವಿರೋಧ ಪಕ್ಷದಲ್ಲಿದ್ದಾಗ ಕೂಡಾ ಅವರ ಮಾತುಗಳು ಘನತೆಯಿಂದಿದ್ದವು. ಅವರ ಅಂಕಣ ಬರಹಗಳಲ್ಲಿ ಕೂಡಾ ಪಕ್ಷಭೇದವಿಲ್ಲದೆ ರಾಜಕೀಯ ವ್ಯಕ್ತಿಗಳ, ಅಧಿಕಾರಿಗಳ, ಜನಸಾಮಾನ್ಯರ ಗುಣಗಳನ್ನು ಗುರುತಿಸಿ ಗೌರವಿಸಿದ್ದಾರೆ. ತಮಗೆ ಮಂತ್ರಿ ಪದವಿ ಇಲ್ಲ ಎಂದು ದಿನಬೆಳಗಾದರೆ ಹಲುಬಿದವರಲ್ಲ.
ಜನಸಾಮಾನ್ಯರಿಗಾಗಿ ದುಡಿಯುತ್ತಾ ಬದುಕುತ್ತಾ ಬಂದಿರುವ ಎಸ್. ಸುರೇಶ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of dedicated politician S. Suresh Kumar
ಕಾಮೆಂಟ್‌ಗಳು