ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾನಕಿ ಅಮ್ಮಾಳ್


 ಜಾನಕಿ ಅಮ್ಮಾಳ್


ಜಾನಕಿ ಅಮ್ಮಾಳ್ ಸಸ್ಯ ಕ್ಷೇತ್ರದಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಹೆಸರು ಮಾಡಿದವರು.

ಜಾನಕಿ ಅಮ್ಮಾಳ್ ಕೇರಳದ ತಲಿಚೇರಿಯಲ್ಲಿ 1897ರ ನವೆಂಬರ್ 4ರಂದು ಜನಿಸಿದರು.  ಚಿಕ್ಕವಯಸ್ಸಿನಿಂದಲೂ ಸಸ್ಯಶಾಸ್ತ್ರದ ಕುರಿತು ಅವರು ಆಸಕ್ತಿ ತಳೆಯುವುದಕ್ಕೆ ತಂದೆ ದೇವನ್ ಬಹದೂರ್ ಕೃಷ್ಣನ್ ಅವರೇ ಪ್ರೇರಣೆ.  ತಾಯಿ ದೇವಿ ಸಹ ಅಷ್ಟೇ ಪ್ರತಿಭಾವಂತರಾಗಿದ್ದರು. ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಉಪನ್ಯಾಯಾಧೀಶರಾಗಿದ್ದ ತಂದೆ ದೇವನ್ ಬಹದೂರ್ ಕೃಷ್ಣನ್ ತಮ್ಮ ಬಿಡುವಿನ ವೇಳೆಯಲ್ಲೆಲ್ಲಾ ತಮ್ಮ ಮಕ್ಕಳಿಗೆ ಬೇರೆ ಬೇರೆ ಸಸ್ಯಗಳ ಹೆಸರು, ಅವುಗಳ ಉಪಯೋಗದ ಕುರಿತು ಮಾಹಿತಿ ನೀಡುವ ಹವ್ಯಾಸ ಇಟ್ಟುಕೊಂಡಿದ್ದರು. ಬಾಲಕಿ ಜಾನಕಿ ಇವನ್ನೆಲ್ಲ ಕೌತುಕದ ಕಣ್ಣುಗಳಲ್ಲಿ ಅತೀವ ಆಸಕ್ತಿಯಿಂದ ಕೇಳುತ್ತಿದ್ದಳು. ಹೀಗೆ ಗಿಡಗಳ ಕುರಿತ ಅವ್ಯಕ್ತ ಒಲವು ಜಾನಕಿಗೆ ಸ್ವಾಭಾವಿಕವಾಗಿ ಮೊಳೆದಿತ್ತು.

ಮಹಿಳೆಯರು ಶಿಕ್ಷಣ ಪಡೆಯುವುದೇ ಸವಾಲಾಗಿದ್ದ ಆ ಕಾಲದಲ್ಲಿ ತಂದೆ ತಾಯಿಯರ ಪ್ರೋತ್ಸಾಹದಿಂದ ಜಾನಕಿ ಅಮ್ಮಾಳ್ ಮದ್ರಾಸಿನ ಕ್ವೀನ್ ಮೇರಿ ಕಾಲೇಜಿನಲ್ಲಿ ಪದವಿ ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಆನರ್ಸ್ ಮುಗಿಸಿ, 1921ರಲ್ಲಿ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿದರು.

ಪ್ರತಿಭಾನ್ವಿತೆ ಜಾನಕಿ ಅವರಿಗೆ ಅಮೆರಿಕದ ಪ್ರತಿಷ್ಠಿತ ಮಿಚಿಗನ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ಅರಸಿಬಂತು.  ಅಲ್ಲಿ 1925ರಲ್ಲಿ ಸ್ನಾತಕೋತ್ತರ ಪದವಿ ಪಡೆದು ಭಾರತಕ್ಕೆ ಮರಳಿದ ಅಮ್ಮಾಳ್ ಮತ್ತೆ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಮುಂದುವರಿಸತೊಡಗಿದರು.

ಮುಂದೆ ಕೆಲವೇ ದಿನಗಳಲ್ಲಿ ಜಾನಕಿ ಅಮ್ಮಾಳ್ ಅವರು  ಪಿಎಚ್‌.ಡಿ ಪದವಿಗಾಗಿ ಮತ್ತೆ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿಂದ ಹಿಂತಿರುಗಿದ ನಂತರ 1932ರಿಂದ 34ರ ವರೆಗೆ ತಿರುವನಂತಪುರದ ಮಹಾರಾಜಾಸ್ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು.

ಜಾನಕಿ ಅಮ್ಮಾಳ್, ಭಾರತ ತನ್ನದೇ ಆದ ಸಿಹಿಕಬ್ಬು ತಳಿಗಳನ್ನು ಉತ್ಪಾದಿಸುವುದಕ್ಕೆ ಶಕ್ತವಾಗಬೇಕು ಎಂಬ ದೆಸೆಯಲ್ಲಿ 1920ರಲ್ಲಿ ಕೊಯಮತ್ತೂರಿನಲ್ಲಿ ಆರಂಭಗೊಂಡ  ಕಬ್ಬು ತಳಿ ಘಟಕಕ್ಕೆ ಸ್ವ-ಇಚ್ಛೆಯಿಂದ ಸೇರಿಕೊಂಡರು. ಅಲ್ಲಿಯವರೆಗೂ ಭಾರತ ಸಿಹಿ ಕಬ್ಬನ್ನು ಆಗ್ನೇಯ ಏಷ್ಯಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಸತತ ಅಧ್ಯಯನದ ನಂತರ ಕಸಿಯ ಮೂಲಕ ಭಾರತ ತನ್ನ ಭೌಗೋಳಿಕತೆಗೆ, ಹವಾಮಾನಕ್ಕೆ ಹೊಂದಿಕೊಳ್ಳುವಂಥ ಕಬ್ಬಿನ ತಳಿಯನ್ನು ಉತ್ಪಾದಿಸುವುದು ಸಾಧ್ಯ ಎಂಬುದನ್ನು ಸಾಬೀತುಪಡಿಸುವಲ್ಲಿ ಜಾನಕಿ ಅಮ್ಮಾಳ್ ಮತ್ತವರ ತಂಡ ಯಶಸ್ವಿಯಾಯಿತು!  ಇದು ಭಾರತದ ಕೃಷಿ ಇತಿಹಾಸದಲ್ಲೇ ಹೊಸ ಶಖೆ. ಸಕ್ಕರೆ, ಬೆಲ್ಲ ಮುಂತಾದ ಸಿಹಿ ಪದಾರ್ಥಕ್ಕಾಗಿ ಬೇರೆ ದೇಶಗಳ ಮೇಲೇ ಅವಲಂಬಿತವಾಗಿದ್ದ ಭಾರತ ಸ್ವಾವಲಂಬಿಯಾಯಿತು. 

1935ರಲ್ಲಿ ಸರ್ ಸಿ.ವಿ.ರಾಮನ್ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌) ಸ್ಥಾಪಿಸಿದಾಗ ಜಾನಕಿ ಅಮ್ಮಾಳ್ ಅವರನ್ನು ಸಂಶೋಧಕರನ್ನಾಗಿ ಆಯ್ದುಕೊಂಡರು. ಆದರೆ, ಹಲವು ಪುರುಷರೊಂದಿಗೆ ಏಕಾಂಗಿ ಮಹಿಳೆ ತನ್ನೆಲ್ಲ ಸ್ವತಂತ್ರ ನಿರ್ಧಾರಗಳನ್ನು ವ್ಯಕ್ತಪಡಿಸುತ್ತ ಬೆಳೆಯುವುದು ಸಾಧ್ಯವಿಲ್ಲ ಎಂದೆನಿಸಿದ ಜಾನಕಿ ತಕ್ಷಣವೇ ಅಲ್ಲಿಂದ ಹೊರಬಂದರು.

ಮುಂದೆ ಜಾನಕಿ ಅಮ್ಮಾಳ್ 1940ರಿಂದ 1945ರವರೆಗೆ ಲಂಡನ್ನಿನ ಜಾನ್ ಇನ್ಸ್ ಹಾರ್ಟಿಕಲ್ಚರಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಹಾಯಕ ಸೈಟೊಲಾಜಿಸ್‌ಟ್‌ (ಜೀವಕೋಶ ಶಾಸ್ತ್ರಜ್ಞೆ) ಆಗಿ ಸೇವೆ ಸಲ್ಲಿಸಿದರು. ಆಕೆಯ ಬುದ್ಧಿವಂತಿಕೆ ಮತ್ತು ಅಧ್ಯಯನದ ಕುರಿತ ಗಾಂಭೀರ್ಯವನ್ನು ಕಂಡ ಲಂಡನ್ನಿನ ವಿಸ್ಲೆಯ ರಾಯಲ್ ಹಾರ್ಟಿಕಲ್ಚರ್ ಸೊಸೈಟಿ ಅವರನ್ನು ಜೀವಕೋಶ ಶಾಸ್ತ್ರಜ್ಞರನ್ನಾಗಿ ನೇಮಿಸಿಕೊಂಡಿತು.  ಇಲ್ಲಿ ಅವರಿಗೆ ಜಗತ್ತಿನ ಸುಪ್ರಸಿದ್ಧ ಸಸ್ಯ ಶಾಸ್ತ್ರಜ್ಞರು ಮತ್ತು ಜೀವಕೋಶ ಶಾಸ್ತ್ರಜ್ಞರೊಡನೆ ಕಾರ್ಯನಿರ್ವಹಿಸುವ ಅವಕಾಶ ಒದಗಿಬಂತು. 1945ರಲ್ಲಿ ಆಕೆಯ ಗುರು ಮತ್ತು ಆಪ್ತ ಸ್ನೇಹಿತ ಸಿ.ಡಿ.ಹಾರ್ಲಿಂಗ್ಟೆನ್ ಅವರೊಂದಿಗೆ ಜಾನಕಿ ಅವರು ಬರೆದ The Chromosome Atlas of Cultivated Plants ಎಂಬ ಪುಸ್ತಕ ಜಗತ್ತಿನಾದ್ಯಂತ ಮಹಾನ್ ಶಾಸ್ತ್ರಜ್ಞರ  ಮೆಚ್ಚುಗೆ ಗಳಿಸಿತು.

1951ರಲ್ಲಿ ಪ್ರಧಾನಿ ನೆಹರೂ ಅವರ ಕರೆಯ ಮೇರೆಗೆ ಭಾರತಕ್ಕೆ ವಾಪಸಾದ ಜಾನಕಿ ಅವರನ್ನು ಭಾರತ ಸರ್ಕಾರ ಬಟಾನಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ಹೊಸದಿಕ್ಕು ನೀಡಬೇಕೆಂಬ ಬೇಡಿಕೆಯೊಂದಿಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿತು. ಆಕೆ ಅತ್ಯಂತ ಉನ್ನತ ಹುದ್ದೆಯಲ್ಲಿದ್ದರೂ ಪೊರಕೆ ಹಿಡಿದು ಕಚೇರಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತಿದ್ದರು ಎಂಬುದು ಅವರ ಕೆಲ ಸಹೋದ್ಯೋಗಿಗಳ ಮಾತು! 

ಜಾನಕಿ ಅಮ್ಮಾಳ್ ಅವರ ಮಹತ್ವದ ಕೊಡುಗೆಗಳಿಗಾಗಿ 1977ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವ ಸಂದಿತು.  ಜಮ್ಮುವಿನಲ್ಲಿರುವ ಒಂದು ಸಸ್ಯಾಧ್ಯಯನ ಕೇಂದ್ರಕ್ಕೆ ಆಕೆಯ ಹೆಸರಿಡುವ ಮೂಲಕ  ಗೌರವ ನೀಡಲಾಯಿತು.  ಲಂಡನ್ನಿನ ವಿಸ್ಲೆಯ ರಾಯಲ್ ಹಾರ್ಟಿಕಲ್ಚರ್ ಸೊಸೈಟಿಯ ಎದುರಲ್ಲಿನ ಉದ್ಯಾನದಲ್ಲಿ ದಿನವೂ ಅರಳಿ ಹೂನಗೆ ಸೂಸುವ ಬಿಳಿಯ ಪುಟ್ಟ ಪುಟ್ಟ ಹೂವುಗಳಿಗೆ ಇಟ್ಟಿರುವ ಹೆಸರು ಮ್ಯಾಗ್ನೋ ಲಿನಾ ಕೋಬಸ್ ಜಾನಕಿ ಅಮ್ಮಾಳ್! ಆಕೆ ಅಧ್ಯಯನ ನಡೆಸಿದ ಹೂವಿನ ಗಿಡಕ್ಕೆ ಆಕೆಯದೇ ಹೆಸರು ಬಂತು. 

ಜಾನಕಿ ಅಮ್ಮಾಳ್ ಅವರು 1984ರ ಫೆಬ್ರವರಿ 7ರಂದು ತಮ್ಮ 86 ವರ್ಷಗಳ ಇಹಯಾತ್ರೆಯನ್ನು ಮುಗಿಸಿದರು.

On the birth anniversary of great botanist Janaki Ammal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ