ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀರಕೇಸರಿ


ವೀರಕೇಸರಿ ಸೀತಾರಾಮಶಾಸ್ತ್ರಿ 


ವೀರಕೇಸರಿ ಸೀತಾರಾಮಶಾಸ್ತ್ರಿಗಳು ಕನ್ನಡ ಸಾಹಿತಿಗಳಾಗಿ,  ಕೆಚ್ಚೆದೆಯ ಪತ್ರಿಕೋದ್ಯಮಿಯಾಗಿ, ನಿಷ್ಠಾವಂತ ದೇಶಭಕ್ತರಾಗಿ ಅಮರ ವ್ಯಕ್ತಿ.

ಸೀತಾರಾಮ ಶಾಸ್ತ್ರಿಗಳು 1893 ವರ್ಷದ ನವೆಂಬರ್ 4ರಂದು ನಂಜನಗೂಡಿನಲ್ಲಿ ಜನಿಸಿದರು.  ಇನ್ನೂ ಒಂದು ವರುಷವಾಗಿದ್ದಾಗಲೆ, ತಂದೆ  ನಾಗೇಶಶಾಸ್ತ್ರಿಗಳು ತೀರಿಹೋದಾಗ, ಶಾಸ್ತ್ರಕೋವಿದರಾಗಿ ಶೃಂಗೇರಿಯಲ್ಲಿ ಗುರುಗಳ ಸನ್ನಿಧಿಯಲ್ಲಿ ಇದ್ದ ಅವರ ಸೋದರ ಮಾವಂದಿರು ಕರೆಸಿಕೊಂಡು ವಿದ್ಯೆಕಲಿಯಲು ಸಹಾಯಮಾಡಿದರು. 

ದುರದೃಷ್ಟವಶಾತ್ ಚಿಕ್ಕಂದಿನಲ್ಲೇ ಗೆಳೆಯರೊಂದಿಗೆ ಗಿಲ್ಲಿ-ದಾಂಡು ಆಡುವಾಗ ಸೀತಾರಾಮ ಶಾಸ್ತ್ರಿಗಳು  ಒಂದು ಕಣ್ಣನ್ನೇ ಕಳೆದುಕೊಂಡರು. ಆದರೂ ಧೃತಿಗೆಡದೆ ಶೃಂಗೇರಿ ಶ್ರೀ ಶಾರದ ಪೀಠದಲ್ಲಿ,   ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳ ಸಹಾಧ್ಯಾಯಿಯಾಗಿ ಸಾಹಿತ್ಯ, ವೇದಾಂತ, ತರ್ಕಗಳಲ್ಲಿ ಉದ್ಧಾಮ ಪಂಡಿತರೆನಿಸಿಕೊಂಡರು.
    
ಶಾಸ್ತ್ರಿಗಳು  ಹತ್ತೊಂಬತ್ತನೇ ವಯಸ್ಸಿಗಾಗಲೇ ಅನೇಕ ಲೇಖನಗಳನ್ನು ಬರೆದು ಹೆಸರು ಪಡೆದಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಆಸ್ಥಾನದಲ್ಲಿ ಧರ್ಮಾಧಿಕಾರಿಗಳಾಗಿದ್ದ ಶಾಸ್ತ್ರಿಗಳ ಇನ್ನೊಬ್ಬ ಸೋದರಮಾವ ಕೃಷ್ಣಶಾಸ್ತ್ರಿಗಳಿಗೆ ಈ ವಿಷಯ ತಿಳಿದು ಶಾಸ್ತ್ರಿಗಳನ್ನು ತಮ್ಮಲ್ಲಿಗೆ ಕರೆಯಿಸಿಕೊಂಡು ಅವರನ್ನು ಎಂ. ವೆಂಕಟಕೃಷ್ಣಯ್ಯನವರ ಬಳಿಗೆ ಕಳುಹಿಸಿದರು. ಅಲ್ಲಿ 'ತಾಯಿನಾಡು' ಮತ್ತು 'ಸಾಧ್ವಿ' ಪತ್ರಿಕೆಗಳಿಗೆ ಲೇಖನಗಳನ್ನು  ಒದಗಿಸತೊಡಗಿದರು. ಅನಂತರ ಬೆಂಗಳೂರಿಗೆ ತಮ್ಮವಾಸ್ತವ್ಯವನ್ನು ಬದಲಾಯಿಸಿ ಶಂಕರಮಠದ ಆಡಳಿತವ್ಯವಸ್ಥೆಯನ್ನು ವಹಿಸಿಕೊಂಡರು.

1927ರಲ್ಲಿ ಸೀತಾರಾಮಶಾಸ್ತ್ರಿಗಳು ಗ್ರಾಮಜೀವನ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡ ಮರುವರ್ಷವೇ  ತಾವೇ  ಪತ್ರಿಕೆಯನ್ನು ಪ್ರಾರಂಭಿಸಿದರು. ಲೋಕಮಾನ್ಯ ತಿಲಕರಿಂದ 'ಕೇಸರಿ' ಪತ್ರಿಕೆ ಮಾಡಿದಂತಹ ಜನಜಾಗೃತಿ ಕರ್ನಾಟಕದಲ್ಲಿಯೂ ಆಗಲೆಂದು ತಮ್ಮಪತ್ರಿಕೆಗೆ ವೀರಕೇಸರಿ ಎಂದು ಹೆಸರಿಟ್ಟರು.

ವೀರಕೇಸರಿ ಸೀತಾರಾಮಶಾಸ್ತ್ರಿಗಳ  ಪತ್ರಿಕಾ ಬರಹದ ನಿರ್ಭೀತಿಯ ಕೆಲವು ಸಾಲುಗಳು ಇಂತಿವೆ:  "ಸರ್ಕಾರವು ಸ್ವಯಂಕೃತಾಪರಾಧದಿಂದ ಮುರಿದುಬಿದ್ದ ಕ್ರೋಧದಿಂದ, ದೋಷದಿಂದ ರೋಷದಿಂದ ಪ್ರಜಾಕ್ಷೋಭೆಯನ್ನು ಲೆಕ್ಕಿಸದೇ, ಪರಿಣಾಮಗಳನ್ನು ಚಿಂತಿಸದೇ, ಅಂಧಕಾರದಲ್ಲಿ ಓಡುತ್ತಿದೆ. ಅದನ್ನು ಹಿಡಿದು ನಿಲ್ಲಿಸುವವರು ಯಾರು? ನಿಲ್ಲಿಸುವುದು ಹೇಗೆ?".
    
ಶಾಸ್ತ್ರಿಗಳು ಕೆಲವು ವರ್ಷ ಆಗಿನ ನ್ಯಾಯವಿಧೇಯಕ ಸಭೆಗೆ ಸದಸ್ಯರಾಗಿ ನೇಮಕಗೊಂಡಿದ್ದರು.  ಆ ವೇದಿಕೆಯನ್ನು ಜನಪರಧೋರಣೆಗಳ ಪ್ರತಿಪಾದನೆಗೆ ಸಮರ್ಥವಾಗಿ ಬಳಸಿಕೊಂಡರು. "ನೇಮಕಗೊಂಡ ಸದಸ್ಯರಿರುವುದು ಕೋಲೇಬಸವನಂತೆ ಸರ್ಕಾರದ ಮಂತ್ರಿಗಳು ಮಾಡಿದ್ದಕ್ಕೆಲ್ಲ ಸರಿಯೆಂದು ಹೂಂಗುಟ್ಟುವುದಕ್ಕಲ್ಲ, ಸರ್ಕಾರ ದಾರಿತಪ್ಪಿದಾಗ ಸರಿದಾರಿಗೆ ತರಲು, ಸರ್ಕಾರಕ್ಕೂ ಪ್ರಜಾಮುಖಂಡರಿಗೂ ಸಮನ್ವಯತರಲು ನಾವಿಲ್ಲಿರುವುದು" ಎಂಬುದು ಅವರ ಅಭಿಮತವಾಗಿತ್ತು.
 
ಆ ದಿನಗಳಲ್ಲಿ ಕಾವೇರುತ್ತಿದ್ದ ಸ್ವಾತಂತ್ರಹೋರಾಟಕ್ಕೆ ಸಹಜವಾಗಿಯೇ ಧುಮುಕಿದ ವೀರಕೇಸರಿ ಸೀತಾರಾಮಶಾಸ್ತ್ರಿಗಳು  ಗಾಂಧೀಜಿಯವರ ನಿಕಟವರ್ತಿಯಾದರು.    
    
ಅಪಾರವಾದ ಜ್ಞಾನಸಂಪಾದನೆ ಮಾಡಿದ್ದ ಶಾಸ್ತ್ರಿಗಳಿಗೆ ಜ್ಞಾಪಕಶಕ್ತಿಯೂ ಒಂದು ವರದಾನವಾಗಿತ್ತು. ಸಾವಿರಾರು ಶ್ಲೋಕಗಳೂ, ಶೃತಿಸ್ಮೃತಿ ವಾಕ್ಯಗಳೂ ಅವರಿಗೆ ವಾಚೋವಿಧೇಯವಾಗಿತ್ತು. ಆದರೆ ಅಧ್ಯಯನದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳಲು ವಿಧಿ ಬಿಡಲಿಲ್ಲ. ಅವರ ಬಾಲ್ಯದಲ್ಲಿಯೇ ಒಂದು ಕಣ್ಣು ಕುರುಡಾಗಿ ಒಂದೇ ಕಣ್ಣಿನಿಂದ ಅಧ್ಯಯನ ಮಾಡುತ್ತಿದ್ದ ಅವರು ತಮ್ಮ 54ನೇ ವರ್ಷದಲ್ಲಿ,  ಭಾರತಕ್ಕೆ ಸ್ವಾತಂತ್ರ ಬಂದ 1947 ವರ್ಷದ ಆಗಸ್ಟ್ 15ರ ದಿನವೇ ತಮ್ಮ ಎರಡನೆಯ ಕಣ್ಣನ್ನೂ ಕಳೆದುಕೊಂಡರು. ಆದರೂ ಧೈರ್ಯಗೆಡದೆ ಪ್ರತಿನಿತ್ಯ ಹಲವು ಗಂಟೆಗಳ ಕಾಲ ಅಂದಂದಿನ ಪತ್ರಿಕೆಗಳನ್ನೂ ಗ್ರಂಥಗಳನ್ನೂ ಓದಿಸಿ ಕೇಳುತ್ತಿದ್ದರು. ಒಮ್ಮೆ ಕಿವಿಯಿಂದ ಕೇಳಿದ ಮಾತು ಅವರ ನೆನಪಿನ ಪುಟದಲ್ಲಿ ಅಚ್ಚೊತ್ತಿರುತ್ತಿತ್ತು. ಹಾಗಾಗಿಯೇ ಸಾವಿರಾರು ಪುಟದ ಸಾಹಿತ್ಯವನ್ನು ನಿರರ್ಗಳವಾಗಿ ಹೇಳುತ್ತಾ ಬರೆಯಿಸುತ್ತಿದ್ದರು. ಈ ರೀತಿ ಸುಮಾರು ನಲವತ್ತು ವರ್ಷಗಳ ಕಾಲ ಹಲವಾರು ಕಾದಂಬರಿ ಲೇಖನಗಳನ್ನು ಬರೆಸಿದರು. 

ವೀರಕೇಸರಿ ಸೀತಾರಾಮಶಾಸ್ತ್ರಿಗಳು ಶಿವಾಜಿಯನ್ನು ಕುರಿತಾದ ಏಳೆಂಟು ನೂರು ಪುಟದ ಕಾದಂಬರಿ, ವಿಜಯನಗರಸಾಮ್ರಾಜ್ಯವನ್ನು ಕುರಿತು ಐದು ಕಾದಂಬರಿ ಮತ್ತು ಪ್ರಖ್ಯಾತವಾದ ದೌಲತ್, ನಗರದ ರಾಣಿ, ಶ್ರೀರಂಗರಾಯ, ಆದಿಲ್‍ಶಾಹಿಯ ಕೊನೆಯದಿನಗಳು, ಗೋಲ್ಕಂಡಪತನ ಮುಂತಾದ ಅನೇಕ ಐತಿಹಾಸಿಕ ಕಾದಂಬರಿಗಳನ್ನು ಮೂಡಿಸಿದರು.

"ಆ ಮನೋಹರವಾದ ರಾತ್ರಿ ವನಲಕ್ಷ್ಮಿಯು ನೋಡಿಕೊಳ್ಳುವ ಮುಕುರಬಿಂಬದಂತೆ ಚಂದ್ರನು ಥಳಥಳಿಸುತ್ತಿದ್ದನು.ಆ ಕುಂದೇಂದು ಧವಳಚ್ಛವಿಯು ಭೂಮ್ಯಾಕಾಶವನ್ನು ವ್ಯಾಪಿಸಿತ್ತು. ತಾರಾರಮಣಿಯರು ನಗುತ್ತ ಮುಂದೆಬಂದು ಆನಿಶಾನಾಥನನ್ನು ಓಲೈಸುತ್ತಿದ್ದರು. ಆ ಸಾಂದ್ರವಾದ ವನದಲ್ಲಿ ವೃಕ್ಷಲತೆಗಳೆಲ್ಲೆಲ್ಲ ವನಪುಷ್ಪಗಳು ಪುಷ್ಪಿಸಿ, ವನಲಕ್ಷ್ಮಿಯನ್ನು ಆರಾಧಿಸುತ್ತಿದ್ದವು.” ಇದು ಅವರ ದೌಲತ್ ಕಾದಂಬರಿಯ ಪುಟಪುಟಗಳಲ್ಲಿ  ಕಾಣುವ ವೀರ, ಶೃಂಗಾರರಸಗಳ ಸಮನ್ವಯ.  ಇಂತಹ ರಮಣೀಯ ಶೈಲಿಗೆ ಅವರ ಕೃತಿಗಳು ಪ್ರಸಿದ್ಧಗೊಂಡಿವೆ. 

ಈ ಮಹಾನ್ ತೇಜಸ್ವಿ ಸೀತಾರಾಮ ಶಾಸ್ತ್ರಿಗಳು 1971 ವರ್ಷದ ಜನವರಿ 7ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮನ.

Great scholar, journalist and Novelist Veera Kesari Seetharamashastri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ