ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.‍ಎಸ್. ರಾಮಮೂರ್ತಿ


 ಕೆ.ಎಸ್. ರಾಮಮೂರ್ತಿ


ಪ್ರೊ. ಕೆ.ಎಸ್ ರಾಮಮೂರ್ತಿ ಅವರು ಪ್ರಾಧ್ಯಾಪಕರಾಗಿ, ಲೇಖಕರಾಗಿ, ಜಾನಪದ ಸಂಶೋಧಕರಾಗಿ, ಅನುವಾದಕರಾಗಿ, ಪತ್ರಕರ್ತರಾಗಿ, ಆಕಾಶವಾಣಿ ಸುದ್ದಿ ವಾಚಕರಾಗಿ, ಸುದ್ದಿ ಸಂಪಾದಕರಾಗಿ, ಶಿಕ್ಷಣ ಸಂಶೋಧನೆ DS.E.R.T ಯ ಸಂಪನ್ಮೂಲ ವ್ಯಕ್ತಿಗಳಾಗಿ ಹೀಗೆ ಬಹುಮುಖಿಯಾಗಿ ಕ್ರಿಯಾಶೀಲರಾದವರು.

ರಾಮಮೂರ್ತಿ ಅವರು 1952ರ ನವೆಂಬರ್ 22ರಂದು ಜನಿಸಿದರು. ಕೋಲಾರದ ಮೂಲದವರಾದ ಇವರು ಮೈಸೂರು ವಿಶ್ವವಿದ್ಯಾಲಯದಿಂದ 
ಬಿ ಎ (ಆನರ್ಸ್) ಮತ್ತು ಕನ್ನಡ ಎಂ .ಎ ಪದವಿಗಳನ್ನು ಗಳಿಸಿ 35 ವರ್ಷಗಳ ಕಾಲ ನಾಡಿನ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ  ಕನ್ನಡ ಪ್ರಾಧ್ಯಾಪಕರಾಗಿ
ನಿವೃತ್ತರಾಗಿದ್ದಾರೆ.

 ರಾಮಮೂರ್ತಿ ಅವರ ಪ್ರಕಟಿತ ಕೃತಿಗಳಲ್ಲಿ
 'ಲೋಕಪ್ರಿಯ ವಿಜ್ಞಾನಿಗಳು', ಜನಪದ ಸೊಗಡಿನ ಕವಿ ಚಂದ್ರಶೇಖರ ಕಂಬಾರ, 
ಸಂಗೀತ ಕಲಾನಿಧಿ ಟಿ ಚೌಡಯ್ಯ, ತಿರುಮಲೆಯ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸುಪ್ರಭಾತ, ಸದಾಶಿವ ಬ್ರಹ್ಮೇಂದ್ರರು ಸೇರಿವೆ. ಇವರ ಬರಹಗಳು ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ,  ಸಪ್ತಗಿರಿ, ಪ್ರಬುದ್ಧ ಕರ್ನಾಟಕ, ಜೀವನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ರಾಮಮೂರ್ತಿ ಅವರು ಸಂಶೋಧಕರಾಗಿ ಜಾನಪದ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಕೆಲಸ ಮಾಡಿದ್ದಾರೆ.  
ಅನುವಾದಕರಾಗಿ ಇಂಗ್ಲೀಷ್ ಮತ್ತು ತೆಲುಗಿನಿಂದ ಭಾಷಾಂತರ  ಮಾಡಿದ್ದಾರೆ. 
ಆಕಾಶವಾಣಿಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಬೆಂಗಳೂರು ಆಕಾಶವಾಣಿ ಪ್ರದೇಶ ಸಮಾಚಾರ ವಾಚಕರಾಗಿ ಹೆಸರಾಗಿದ್ದಾರೆ. 20 ವರ್ಷಗಳ ಕಾಲ ಸಹಾಯಕ ಸುದ್ದಿ ಸಂಪಾದಕರಾಗಿ 'ಯುವವಾಣಿ' ,'ಕನ್ನಡ ಭಾರತೀ' ಹಾಗೂ 'ಪರಿಮಳ' ಕಾರ್ಯಕ್ರಮಗಳಲ್ಲಿ, ದೂರದರ್ಶನ ಚಂದನ ವಾಹಿನಿಯ  ವಾರ್ತಾ ವಿಭಾಗದಲ್ಲಿ ವ್ಯಾಪಕವಾದ ಸೇವೆ ಸಲ್ಲಿಸಿದ್ದಾರೆ. ದೇವನಹಳ್ಳಿಯ ಶಿಲ್ಪ ಕಲಾ ಶಾಲೆಯ ಸಾಕ್ಷ್ಯ ಚಿತ್ರದ ನಿರ್ಮಾಣ - ನಿರ್ದೇಶನ ಮಾಡಿದ್ದಾರೆ. ಪತ್ರಕರ್ತರಾಗಿ ವಿಶಾಲ ಕರ್ನಾಟಕ ಹಾಗೂ ಕೋಲಾರ ಪತ್ರಿಕೆಗಳಲ್ಲಿ ವರದಿಗಾರಿಕೆ/ ಸುದ್ದಿ ಸಂಪಾದನೆ ಮಾಡಿದ್ದಾರೆ.

ಪ್ರೊ. ರಾಮಮೂರ್ತಿ ಅವರಿಗೆ ಪಿಟೀಲು ಟಿ  ಚೌಡಯ್ಯ ಪ್ರತಿಷ್ಠಾನದಿಂದ ಮೈಸೂರು ರಾಜವಂಶಸ್ಥರಾದ  ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಸನ್ಮಾನ ಸಂದಿದೆ. 

ಸರಳ ಸುಸಂಸ್ಕೃತ ಸಹೃದಯಿ ಆತ್ಮೀಯ ರಾಮಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of Teacher, writer, editor, news reader, Prof. K. S.  Ramamurthy 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ