ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರವಿ ಬೆಳಗೆರೆ


ರವಿ ಬೆಳಗೆರೆ ನಮನ
ಕನ್ನಡದ ಅಸಾಮಾನ್ಯ ಪ್ರತಿಭೆ ರವಿ ಬೆಳಗೆರೆ ಇಂದು ನಿಧನರಾಗಿದ್ದಾರೆ. 'ಹಾಯ್ ಬೆಂಗಳೂರಿನ’ ರವಿ ಬೆಳಗೆರೆಯವರ ಪ್ರತಿಭೆಯನ್ನು ಕಂಡು ಅಚ್ಚರಿಪಡದಿರುವವರೇ ಇಲ್ಲ. ಅಷ್ಟೊಂದು ಅಪಾರವಾಗಿ ಸಾಧಿಸಿದ ವ್ಯಕ್ತಿ ಈತ. ಅಂದಿನ ದಿನಗಳಲ್ಲಿ ನಾವು ರಸ್ತೆಯ ಯಾವ ಮೂಲೆಯಲ್ಲೇ ಇರಲಿ ‘ಹಾಯ್ ಬೆಂಗಳೂರಿನ’ ಮುಖ ಪುಟಗಳ ತರಾವರಿ ದೊಡ್ಡಕ್ಷರಗಳ ಕೂಗುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅಂಗಡಿಗಳ ಮುಂದೆ ತೂಗು ಹಾಕಿರುವ ಪತ್ರಿಕೆಗಳ ಮೂಲಕವೋ, ಕೈಯಲ್ಲಿ ಒಬ್ಬರು ಹಿಡಿದಿದ್ದರೆ ಅದನ್ನು ಹತ್ತು ಜನ ಓದುವ ಬಸ್ಸುಗಳಲ್ಲ್ಲೋ, ಕೊಂಕುಳಲ್ಲಿ ಸಿಕ್ಕಿಸಿಕೊಂಡು ಕಾಫಿ ಹೀರುವವರ ಮೂಲಕವೋ ಹೇಗೋ ಒಟ್ಟಿನಲ್ಲಿ ಅದು ಎಲ್ಲೆಲ್ಲೂ ದರ್ಶನವಾಗುತ್ತಲಿತ್ತು. ಮುಂದೆ ರವಿ ಬೆಳಗೆರೆ ಒಂದು ರೀತಿಯಲ್ಲಿ ವಿಶ್ವರೂಪಿಯಾಗಿದ್ದರು. ಕ್ರೈಂ ಡೈರಿಯಲ್ಲಿ ಅವರು ಮಾಡುತ್ತಿದ್ದ ನಿರೂಪಣೆ, ವಾಹಿನಿಯೊಂದರ ಸಂಪಾದಕ ನೇತೃತ್ವ, ಅವರು ನಿರೂಪಿಸುವ ಸಂಗೀತ ಕಾರ್ಯಕ್ರಮಗಳು, ವ್ಯಕ್ತಿ ಪರಿಚಯಗಳು, ಧಾರಾವಾಹಿಗಳಲ್ಲಿನ ಮಿಂಚು, ಮಾಧ್ಯಮಗಳಲ್ಲಿನ ಜಟಾಪಟಿ, ವಿಭಿನ್ನ ಕಾದಂಬರಿಗಳು, ಪ್ರಾರ್ಥನಾ ಶಾಲೆ, ಹೀಗೆ ರವಿ ಬೆಳಗೆರೆ ಹಲವು ರೀತಿಯಲ್ಲಿ ವ್ಯಾಪಿಸಿದ್ದರು. ವಿಭಿನ್ನ ವಸ್ತುಗಳುಳ್ಳ ಅವರ ಪುಸ್ತಕಗಳೂ ಅವರ ವ್ಯಕ್ತಿತ್ವದಷ್ಟೇ ವೈವಿಧ್ಯಮಯ. ಕನ್ನಡದ ಕಾರ್ಯಕ್ರಮಗಳಲ್ಲಿ ನಾವು ಕೇಳುವ ಅವರ ನಿರೂಪಣೆಗಳು ನಮ್ಮ ನಾಡಿನ ಕಲಾವಿದರು, ಸಂಸ್ಕೃತಿ, ಸಾಹಿತ್ಯ ಮತ್ತು ಕಲಾವಿದರ ಬಗ್ಗೆ ಹೆಚ್ಚು ಹೆಚ್ಚು ಆಪ್ತತೆ ಉಂಟುಮಾಡುವಂತಹವು. ಅವರ ಮಾತು ಇನ್ನಷ್ಟು ಕೇಳಬೇಕು ಎಂದೆನಿಸುವಂತದ್ದು. ಇವೆಲ್ಲವುಗಳ ಜೊತೆ ಜೊತೆಗೆ ಹಲವಾರು ಟೀಕೆ, ಟಿಪ್ಪಣಿ, ವೈರುಧ್ಯ, ಗಾಳಿ ಸುದ್ಧಿ, ಹಲವು ದ್ವಂದ್ವಾತ್ಮಕ ರೀತಿಯ ಬದುಕಿನ ನಿಲುವುಗಳಿಗೆ ಅವರು ಹೊರತಾಗಿರಲಿಲ್ಲ ಎನ್ನುವುದು ಕೂಡಾ ಅಷ್ಟೇ ನಿಜ. “ಓದುತ್ತಿರುವ ಪುಸ್ತಕವನ್ನೊಮ್ಮೆ ಪಕ್ಕಕ್ಕಿಟ್ಟು ಕಣ್ಣಲ್ಲಿ ಒಸರುತ್ತಿರುವ ಕಣ್ಣೀರನ್ನು ಒರೆಸಿಕೊಂಡು ಪುನಃ ಓದುವಂತಾದರೆ ಅದೇ ನನಗೆ ಸಿಗುವ ಸಂತೃಪ್ತಿ” ಎನ್ನುತ್ತಿದ್ದರು ರವಿ ಬೆಳಗೆರೆ. ಒಬ್ಬ ಆತ್ಮೀಯ ಓದುಗನಾಗಿ ಮತ್ತು ಬರಹಗಾರನಾಗಿ ರವಿಬೆಳಗೆಯವರು ನಡೆಸುವ ಓದು ಮತ್ತು ನಿರೀಕ್ಷಿಸುವ ಪ್ರತಿಕ್ರಿಯೆ ಈ ತೆರೆನಾಗಿತ್ತು. ಯಾವುದೇ ಬರಹಗಾರ ತಾನು ಬದುಕನ್ನು ಅನುಭಾವಿಸದೆ ಇಂಥಹ ಪರಿಣಾಮವನ್ನು ಓದುಗನಲ್ಲೂ ತರಲಾರ, ಮಾತ್ರವಲ್ಲದೆ ತಾನೂ ಅದರ ಸಾರ್ಥಕ್ಯವನ್ನು ಅನುಭಾವಿಸಲಾರ. ರವಿ ಬೆಳಗೆರೆ ಅವರ ಬದುಕಿನಲ್ಲಿ ಇಂತಹ ವಿಫುಲ ಎಳೆಗಳಿವೆ. ರವಿ ಬೆಳಗೆರೆ 1958ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದರು. ಎರಡು ವರ್ಷ ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ ಓದಿದ್ದನ್ನು ಬಿಟ್ಟರೆ ಬಿ.ಎ. ವರೆಗಿನ ಅವರ ವ್ಯಾಸಂಗ ನಡೆದಿದ್ದು ಬಳ್ಳಾರಿಯಲ್ಲಿ. ನಂತರ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ ಅವರು ಓದಿದ್ದು ಧಾರವಾಡದಲ್ಲಿ. ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅದಕ್ಕೆ ಮುಂಚೆ ಮತ್ತು ಅದರ ನಂತರ ಸರಿಸುಮಾರು 9 ವೃತ್ತಿ ಬದಲಿಸಿದರು. ಹೈಸ್ಕೂಲ್ ಮೇಷ್ಟ್ರು, ಹೋಟೆಲ್ ಮಾಣಿ, ರೂಂ ಬಾಯ್, ರಿಸೆಪ್ಷನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ಮಾಲೀಕ, ಥಿಯೇಟರಿನಲ್ಲಿ ಗೇಟ್ ಕೀಪರ್, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು ಹೀಗೆ ನಾನಾ ಕಡೆ ದುಡಿದರು. ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಬರೆದರು. ರವಿ ಬೆಳಗೆರೆ ಅವರ ಸುಮಾರು 70 ಪುಸ್ತಕಗಳು ಪ್ರಕಟವಾಗಿದೆ. ಖುಷ್ವಂತ್ ಸಿಂಗ್, ಚಲಂ, ಪ್ರೊತಿಮಾ ಬೇಡಿ, ಬ್ರಿಗೇಡಿಯರ್ ಜಾನ್ ಪಿ ದಳವಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ ವೇಜ್, ವಿನೋದ್ ಮಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿದ್ದಾರೆ. ಸಣ್ಣ ಕಥೆ ಅವರ ಅತೀ ಇಷ್ಟವಾದ ಪ್ರಕಾರ. ಅದರಲ್ಲೂ ಹಲವಾರು ಪ್ರಶಸ್ತಿ ಬಹುಮಾನಗಳು ಬಂದಿವೆ. ’ಹಾಯ್ ಬೆಂಗಳೂರ್!’ ಕನ್ನಡ ವಾರಪತ್ರಿಕೆ ಹಾಗೂ ‘ಓ ಮನಸೇ’ ಪಾಕ್ಷಿಕದ ಸಂಪಾದಕರಾಗಿ, ಪ್ರಾರ್ಥನಾ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿ ಹಲವು ಪತ್ರಿಕೆಗಳ ಅಂಕಣಕಾರರಾಗಿ ಅಲ್ಲದೆ ಮೇಲೆ ಹೇಳಿದ ಹಲವು ಕ್ಷೇತ್ರಗಳಲ್ಲಿ ಅವರು ವ್ಯಾಪಿಸಿದ್ದಾರೆ. ರವಿ ಬೆಳಗೆರೆಯವರ ತಮ್ಮ ಪುಸ್ತಕಗಳ ಬರಹಗಳಿಗೆ ಆಯ್ದುಕೊಂಡಿರುವ ವಿಚಾರಗಳು ಗಮನಾರ್ಹವಾದದ್ದು ಎಂಬುದನ್ನು ಅವರ ಪುಸ್ತಕಗಳ ಶೀರ್ಷಿಕೆಗಳೇ ಹೇಳುತ್ತವೆ. ಪಾಪಿಗಳ ಲೋಕದಲ್ಲಿ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಹೇಳಿ ಹೋಗು ಕಾರಣ, ಮುಸ್ಲಿಂ, ನೀನಾ ಪಾಕಿಸ್ತಾನ, ಚಲಂ, ನೀ ಹಿಂಗ ನೋಡಬ್ಯಾಡ ನನ್ನ, ದಿ ಗಾಡ್ ಫಾದರ್, ಒಮರ್ಟಾ, ಹಿಮಾಲಯನ್ ಬ್ಲಂಡರ್, ಡಯಾನಾ, ಪ್ರೊತಿಮಾ ಬೇಡಿ ಆತ್ಮ ಚರಿತ್ರೆಯಾದ ಟೈಮ್ ಪಾಸ್, ಬ್ಲ್ಯಾಕ್ ಪ್ರೈಡೇ, ಇಂದಿರೆಯ ಮಗ ಸಂಜಯ, ಹಿಮಾಗ್ನಿ, ಉಡುಗೊರೆ, ಅಮ್ಮ ಸಿಕ್ಕಿದ್ದು, ಬಾಟಮ್ ಐಟಮ್ಸ್, ಲವ್ ಲವಿಕೆ, ಕಾಮರಾಜ ಮಾರ್ಗ, ಅನಿಲ್ ಲಾಡ್, ಖಾಸ್ ಬಾತ್, ಡಿ ಕಂಪನಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೀವನ ಚರಿತ್ರೆ, ರಾಜ್ ಲೀಲಾ ವಿನೋದ ಇತ್ಯಾದಿ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದರು. ಅವರ ಒಲವೇ, ಕನಸೇ, ಮನಸೇ ಅಂತಹ ದೃಶ್ಯ, ಶೃವ್ಯ ಮಾಧ್ಯಮಗಳ ಕಾಂಪಾಕ್ಟ್ ಡಿಸ್ಕುಗಳು ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿವೆ. ’ಫಸ್ಟ್ ಹಾಫ್’ ಎಂಬುದು ರವಿ ಬೆಳಗೆರೆ ಅವರಿಗೆ ಐವತ್ತು ತುಂಬಿದ ನೆನಪಲ್ಲಿ ಅವರ ಅಭಿಮಾನಿಗಳು ಮತ್ತು ಗೆಳೆಯರು ಅರ್ಪಿಸಿದ್ದ ಸಂಭಾವನಾ ಗ್ರಂಥ. ರವಿ ಬೆಳಗೆರೆ ಅಪಾರ ಸಾಧಿಸಿದ್ದರು. ಅಪಾರ ಪ್ರತಿಭೆ ಅವರದ್ದಾಗಿತ್ತು. ಭವ್ಯ ಬದುಕುಗಳ ಹಾದಿಗಳ ನಡುವೆ, ವಿಧಿ ಹೇಗೋ ತನ್ನದೇ ಆದ ಸುರಂಗ ಮಾರ್ಗವನ್ನೂ ನಿರ್ಮಿಸಿಕೊಂಡು, ಮನುಷ್ಯನನ್ನು ಹಾದಿ ತಪ್ಪಿಸಿ ಎಲ್ಲಿಗೋ ಎಳೆದುಕೊಂಡು ಹೋಗಿಬಿಡುತ್ತೆ. ಖಂಡಿತವಾಗಿ ಕನ್ನಡ ನಾಡು ತನ್ನ ಮಹಾನ್ ಪ್ರತಿಭಾವಂತನನ್ನು ಕಳೆದುಕೊಂಡಿದೆ.
Respects to the departed soul Ravi Belagere

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ