ಅನಂತ್ ಕುಮಾರ್
ಅನಂತ್ ಕುಮಾರ್ ಸಂಸ್ಮರಣೆ
ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಅನಂತ ಕುಮಾರ್ ನಿಧನರಾದದ್ದು 2018ರ ನವೆಂಬರ್ 12ರಂದು.
ಅನಂತ ಕುಮಾರ್ 1959ರ ಜುಲೈ 22ರಂದು ಜನಿಸಿದರು. 1970-80ರ ದಶಕದಲ್ಲಿ ಅನಂತ್ ಅವರ ಜೀವನ ಹುಬ್ಬಳ್ಳಿಯಲ್ಲಿ ಸಾಗಿತ್ತು. ಅವರ ತಂದೆ ನಾರಾಯಣ ಶಾಸ್ತ್ರಿ ರೈಲ್ವೆ ಉದ್ಯೋಗಿಯಾಗಿದ್ದು ಹಲವು ವರ್ಷಗಳ ಕಾಲ ಹುಬ್ಬಳ್ಳಿಯಲ್ಲೇ ವಾಸವಿದ್ದರು. ತಾಯಿ ಗಿರಿಜಾ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಹುಬ್ಬಳ್ಳಿಯಲ್ಲಿ ಜನಸಂಘದ ಸಕ್ರಿಯ ಕಾರ್ಯಕರ್ತೆಯಾಗಿದ್ದರು. 1985-1986 ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಪುರಸಭೆಯ ಎರಡನೇ ಮಹಿಳಾ ಉಪ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅನಂತ್ ತಮ್ಮ ಬಿ.ಎ ಪದವಿಯನ್ನು ಹುಬ್ಬಳ್ಳಿಯ ಕೆ. ಎಸ್. ಆರ್ಟ್ಸ್ ಕಾಲೇಜು ಮತ್ತು ಕಾನೂನು ಪದವಿಯನ್ನು ಮೈಸೂರಿನ ಜೆ. ಎಸ್. ಎಸ್. ಕಾನೂನು ಕಾಲೇಜಿನಲ್ಲಿ ಗಳಿಸಿದರು.
ಬಾಲ್ಯದಿಂದಲೂ ಅನಂತ ಕುಮಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್' ವಿದ್ಯಾರ್ಥಿ ವಿಭಾಗದಲ್ಲಿ ಕ್ರಿಯಾಶೀಲರಾಗಿದ್ದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 40 ದಿನ ಸೆರೆಮನೆಯಲ್ಲಿದ್ದರು.
ಅನಂತ ಕುಮಾರ್ 1987ರಲ್ಲಿ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಮುಂತಾದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದ ಬಿಜೆಪಿಯನ್ನು ಬಲಪಡಿಸಿದ ಪ್ರಧಾನ ವ್ಯಕ್ತಿಗಳಲ್ಲಿ ಅನಂತಕುಮಾರ್ ಕೂಡಾ ಒಬ್ಬರು.
ಅನಂತ ಕುಮಾರ್ 1996ರಿಂದ ಮೊದಲುಗೊಂಡು ಪ್ರತಿ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿ ಬಿಜೆಪಿ ಸರ್ಕಾರಗಳಲ್ಲಿ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಕ್ರೀಡೆ, ಯುವಜನ ಸಂಸ್ಕೃತಿ, ನಗರಾಭಿವೃದ್ದಿ, ಬಡತನ ನಿರ್ಮೂಲನೆ, ಸಂಸದೀಯ ವ್ಯವಹಾರ, ರಾಸಾಯನಿಕ ಮತ್ತು ರಸಗೊಬ್ಬರ ಮುಂತಾದ ಖಾತೆಗಳ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು.
ಅನಂತ್ ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಸ್ಮರಣಾರ್ಥ ಅವರ ಪತ್ನಿ ತೇಜಸ್ವಿನಿ ನೇತೃತ್ವದ 'ಅದಮ್ಯ ಚೇತನ'ದ ಮೂಲಕ ನಡೆಯುತ್ತಿರುವ ಸಾಮಾಜಿಕ ಸೇವೆಗಳ ಚೇತನವಾಗಿಯೂ ಇದ್ದರು.
ಅನಂತ ಕುಮಾರ್ ಕನ್ನಡದಲ್ಲಿ ಮಾತನಾಡುತ್ತಿದ್ದ ರೀತಿ ಸೊಗಸಿನದಾಗಿತ್ತು. ವಿಶ್ವಸಂಸ್ಥೆಯಲ್ಲಿ ಸಹಾ ಕನ್ನಡದಲ್ಲಿ ಭಾಷಣ ಮಾಡಿದವರು ಅನಂತ್.
ನಿರಂತರ ಕ್ರಿಯಾಶೀಲರಾಗಿದ್ದು ಅನಂತವ್ಯಾಪಿಯಾಗಿದ್ದ ಅನಂತ ಕುಮಾರ್ ಅವರ ಸೇವೆ, ಅವರು ಆರೋಗ್ಯ ಚೆನ್ನಾಗಿದ್ದ ದಿನಗಳಲ್ಲಿ ಕರ್ನಾಟಕ ರಾಜ್ಯದ ಆಡಳಿತಕ್ಕೆ ಸಿಕ್ಕಿದ್ದರೆ ಚೆನ್ನಿತ್ತು. ಇನ್ನೂ 59ರ ವಯಸ್ಸಿನಲ್ಲೇ 2018ರ ನವೆಂಬರ್ 12ರಂದು ಅವರು ನಿಧನರಾದರು.
ಕೆಲವೊಂದು ಜನರಲ್ಲಿ ನಾಯಕತ್ವಕ್ಕೆ ಬೇಕಾದ ಎಲ್ಲ ಗುಣಲಕ್ಷಣ ಚಾಕಚಕ್ಯತೆಗಳೂ ಮೈಗೂಡಿಕೊಂಡಿರುತ್ತವೆ. ಅನಂತ ಕುಮಾರ್ ಅಂತಹವರಲ್ಲೊಬ್ಬರಾಗಿದ್ದರು.
Ananta Kumar
ಕಾಮೆಂಟ್‌ಗಳು