ಶಾರುಕ್ ಖಾನ್
ಶಾರುಕ್ ಖಾನ್
ಪ್ರಸಿದ್ಧ ನಟ ಶಾರುಕ್ ಖಾನ್ ಹುಟ್ಟಿದ್ದು 1965ರಲ್ಲಿ ನವೆಂಬರ್ 2ರಂದು. ಶಾರುಕ್ ಖಾನ್ ತನ್ನ ಮುಗುಳ್ನಗೆಯಿಂದ, ಹುಡುಗಾಟದ ತೆರನಾದ ಸಹಜತೆಯಿಂದ ಹಲವು ಪಾತ್ರಗಳಲ್ಲಿ, ದೂರದರ್ಶನದ ಪ್ರದರ್ಶನಗಳಲ್ಲಿ ಮತ್ತು ಹಲವಾರು ಮಾತುಕತೆಗಳಲ್ಲಿ ನಮ್ಮನ್ನು ಮುದ್ದು ಮಗುವೊಂದು ಆಕರ್ಷಿಸುವಂತೆ ಆಕರ್ಷಿಸಿಬಿಡುತ್ತಾನೆ.
ತೊಂಬತ್ತರ ದಶಕದಲ್ಲಿ ಫೌಜಿ, ಸರ್ಕಸ್, ಇಂತಜಾರ್ ಅಂತಹ ದೂರದರ್ಶನದ ಹಲವಾರು ಸರಣಿ ಧಾರವಾಹಿಗಳಲ್ಲಿ ಅಭಿನಯಿಸಿ ತನ್ನ ನಗೆ, ಹುಡುಗುತನ, ಸ್ನೇಹಪರ ಕಣ್ಣುಗಳಿಂದ ಗಮನಸೆಳೆದ ಶಾರುಕ್ ಚಿತ್ರರಂಗಕ್ಕೆ ಬಂದದ್ದು 1991ರಲ್ಲಿ. ಅಮಿತಾಬರ ವರ್ಚಸ್ಸು, ಅಮೀರ್ ಖಾನನ ಗಾಂಭೀರ್ಯ ಇವೆಲ್ಲಾ ಇಲ್ಲದಿದ್ದರೂ, ಶಾರುಕ್ ತನ್ನ ಹುಡುಗುತನದ ಸಹಜ ಗುಣಗಳನ್ನೇ ತನ್ನ ಶಕ್ತಿಯನ್ನಾಗಿಸಿಕೊಂಡು, ನಿರಂತರ ಪರಿಶ್ರಮದಿಂದ ಗಣನೀಯ ಯಶ್ಸಸ್ಸನ್ನು ಗಳಿಸಿಕೊಂಡಿದ್ದಾರೆ.
ಒಂದು ರೀತಿಯಲ್ಲಿ ಆತನ ಯಶಸ್ವಿಯಾದ ಪಾತ್ರಗಳೂ ಸಹಾ ಆತನ ಸಹಜತನದ ಹುಡುಗಾಟಿಕೆಯನ್ನೇ ಬಿಂಬಿಸಿವೆ. ಅದನ್ನು ಮೀರಿ ಗಾಂಭೀರ್ಯದಲ್ಲೋ, ಡಾನ್ ಅಂತಹ ಬಿರುಸಿನಲ್ಲೋ ಆತ ಪ್ರಯತ್ನಮಾಡಿದಾಗ ಅಷ್ಟೊಂದು ಸಹಜನೆನಿಸುವುದಿಲ್ಲ ಎಂಬುದು ಕೂಡಾ ಅಷ್ಟೇ ನಿಜ. ಆದರೆ, ಆತನ ಅಭಿನಯದ ಸಾಮರ್ಥ್ಯಗಳನ್ನು ಮೀರಿ ಆತನ ಕುರಿತಾದ ಆಕರ್ಷಣೆ ಮತ್ತು ನಿರೀಕ್ಷೆಗಳು ಆತನ ಬಹುತೇಕ ಚಿತ್ರಗಳನ್ನು ಯಶಸ್ವಿಯಾಗಿಸಿವೆ.
‘ದಿಲ್ವಾಲೆ ದುಲ್ಹನಿಯ ಲೆ ಜಾಯೇಂಗೆ’, ‘ಪರದೇಶ್’, 'ಕುಚ್ ಕುಚ್ ಹೋತಾ ಹೈ’, ‘ದಿಲ್ ತೊ ಪಾಗಲ್ ಹೈ’, ‘ಚಕ್ ದೆ ಇಂಡಿಯಾ’, ‘ಕಲ್ ಹೋ ನ ಹೋ’, ‘ಓಂ ಶಾಂತಿ ಓಂ’, ‘ಕಭಿ ಖುಷಿ ಘಂ’, ‘ಸ್ವದೇಶ್’, 'ಚಕ್ ದೇ! ಇಂಡಿಯಾ', 'ಮೈ ನೇಮ್ ಈಸ್ ಖಾನ್' ಮುಂತಾದ ಚಿತ್ರಗಳಲ್ಲಿ ಶಾರುಕ್ ಖಾನ್ ಸುಂದರವಾಗಿ ಮಿಂಚಿದ್ದಾರೆ. ಹಲವು ಹೊಸ ಪ್ರತಿಭೆಗಳ ಜೊತೆ ಅಭಿನಯಿಸುವುದರೊಂದಿಗೆ ತೆರೆದ ಹೃದಯ ಕೂಡಾ ಪ್ರದರ್ಶಿಸಿದ್ದಾರೆ. ಕೆಲವು ನಾಯಕ ನಟರ ಚಿತ್ರಗಳು ಅಂದರೆ ಪ್ರಾರಂಭದ ಕೆಲವೇ ದಿನಗಳಲ್ಲಿ ಹಲವು ನೂರು ಕೋಟಿಗಳನ್ನು ಬಾಚುತ್ತವೆ ಎಂಬುದು ಮಾಧ್ಯಮಗಳು ಹೇಳುವ ವ್ಯವಹಾರ ಲೆಕ್ಕಾಚಾರ. ಈ ಸಾಲಿನಲ್ಲಿ ಕಂಗೊಳಿಸುವ ಪ್ರಮುಖ ಹೆಸರು ಶಾರುಕ್ ಖಾನ್. ಮೆಲ್ಕಂಡ ಚಿತ್ರಗಳಲ್ಲದೆ ಚೆನ್ನೈ ಎಕ್ಸ್ಪ್ರೆಸ್, ಹ್ಯಾಪಿ ನ್ಯೂ ಇಯರ್, ದಿಲ್ವಾಲೆ, ರಾಈಸ್ ಮುಂತಾದ ಅನೇಕ ಶಾರುಕ್ ಅಭಿನಯದ ಚಿತ್ರಗಳು ಇಂತಹ ಸಾಧಿತ ಪಟ್ಟಿಯಲ್ಲಿವೆ.
ಶಾರುಕ್ ಅವರಿಗೆ ಪದ್ಮಶ್ರಿ ಗೌರವವೇ ಅಲ್ಲದೆ ಅನೇಕ ಪ್ರಶಸ್ತಿಗಳು ಸಂದಿವೆ. ಹದಿನಾಲ್ಕು ಬಾರಿ ಫಿಲಂಫೇರ್ ಪ್ರಶಸ್ತಿ ಸಂದಿದೆ. ಹೋದೆಡೆಯಲ್ಲಿ ಕುಣಿದು ಕುಪ್ಪಳಿಸಿ ಸ್ನೇಹಪರತೆ ತೋರುವ ಶಾರುಕ್ ಖಾನ್ ಬದುಕಿನಲ್ಲಿ ಎಲ್ಲ ರೀತಿಯಲ್ಲಿ ಯಶಸ್ವಿಯಾಗಲಿ, ಆತನ ಬದುಕು ಸುಂದರವಾಗಿರಲಿ ಎಂದು ಹಾರೈಸೋಣ.
On the birth day of ever energetic, happy and sweet smiling Shahrukh Khan...
ಕಾಮೆಂಟ್‌ಗಳು