ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಗದೀಶ್ಚಂದ್ರ ಬೋಸ್


 ಮಹಾನ್ ವಿಜ್ಞಾನಿ ಜಗದೀಶ್ಚಂದ್ರ ಬೋಸ್


ಸರ್ ಜಗದೀಶ್‌ಚಂದ್ರ ಬೋಸ್ ಅವರು  ನಮಗೆಲ್ಲ ತಿಳಿದ ಹಾಗೆ  ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿ.  ರೇಡಿಯೊ,  ದೂರಸಂಪರ್ಕ,  ಪ್ರಕಾಶ ಶಾಸ್ತ್ರ,  ಸಸ್ಯ ಜೀವಶಾಸ್ತ್ರ ಹೀಗೆ ವಿವಿಧ ವಿಜ್ಞಾನದ ಶಾಖೆಗಳಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ತಮ್ಮ ಕಾಲದ ಶ್ರೇಷ್ಟ ವಿಜ್ಞಾನಿಗಳಲ್ಲೊಬ್ಬರಾಗಿದ್ದರು.

ಜಗದೀಶ್ಚಂದ್ರ ಬೋಸ್ ಅವರು  "ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆ" ಎಂಬುದನ್ನು  ಜಗತ್ತಿಗೆ ಸಾಬೀತು ಪಡಿಸಿದರು. ಭಾರತದ ಉಪಖಂಡದಲ್ಲಿ ಪ್ರಯೋಗವಿಜ್ಞಾನಕ್ಕೆ ಅಡಿಪಾಯ ಹಾಕಿದರು. ರೇಡಿಯೋ ವಿಜ್ಞಾನದ ತಂದೆ ಎಂದೂ ಇವರನ್ನು ಗೌರವಿಸಲಾಗುತ್ತಿದೆ.    ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್ ಮುಂತಾದ ಉಪಕಾರಣಗಳನ್ನು ಸ್ವಯಂ ತಾವೇ ಸೃಜಿಸಿದರು.

ಬೋಸ್ 1858ರ ನವೆಂಬರ್ 30ರಂದು ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು.   ಕಲಕತ್ತೆಯ ಸೇಂಟ್ ಝೇವಿಯರ್ ಶಾಲೆ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಓದಿ, ಲಂಡನ್ನಿಗೆ ವೈದ್ಯಕೀಯವನ್ನು ಕಲಿಯಲು ತೆರಳಿದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಹೆಚ್ಚು ಕಾಲ ಅಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಲಾಗಲಿಲ್ಲ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ 1884ರಲ್ಲಿ ಕಲ್ಕತ್ತೆಗೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಜನಾಂಗಭೇದವಿದ್ದಾಗ್ಯೂ ಮತ್ತು ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣದ ಸಹಾಯ ಇಲ್ಲದೇ ಇದ್ದಾಗ್ಯೂ ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ರೇಡಿಯೋ ಮತ್ತು ವೈರ್ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಅವರು ತಮ್ಮ ಸಂಶೋಧನೆಗಳಿಂದ  ವಾಣಿಜ್ಯಿಕ ಲಾಭ ಮಾಡಿಕೊಳ್ಳುವುದರ ಬದಲು ತಾವು ಕಂಡುಹಿಡಿದುದನ್ನು ಉಳಿದವರು ಅಭಿವೃದ್ಧಿಪಡಿಸಲಿ ಎಂಬ ಮನೋಧರ್ಮದಲ್ಲಿ  ಬಹಿರಂಗಪಡಿಸಿದರು. ನಂತರದಲ್ಲಿ, ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿತೋರಿಸಿದರು.

ಹಿತೈಷಿಗಳ ಒತ್ತಡಕ್ಕೆ ಮಣಿದು ತಮ್ಮ ಸಂಶೋಧನೆಗಳಲ್ಲಿ ಒಂದಕ್ಕೆ ಪೇಟೇಂಟ್ಗಾಗಿ ಅರ್ಜಿ ಸಲ್ಲಿಸಿದರಾದರೂ ಯಾವುದೇ ಬಗೆಯ ಪೇಟೆಂಟ್ ಪಡೆಯುವುದರಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. “ನಾನೇನೂ ಸೃಷ್ಟಿಕರ್ತನಲ್ಲ.  ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು  ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು” ಎಂಬುದು ಅವರ ವಿಚಾರಧಾರೆಯಾಗಿತ್ತು.

ಅವರು ತೀರಿಕೊಂಡ ಹಲವಾರು  ವರುಷಗಳ ನಂತರ ಅವರು ಆಧುನಿಕ ವಿಜ್ಙಾನಕ್ಕೆ ಸಲ್ಲಿಸಿದ ಅನೇಕ ಕೊಡುಗೆಗಳಿಗಾಗಿ ಅವರನ್ನು ಗುರುತಿಸಲಾಗುತ್ತಿದೆ.

ಬೋಸ್ ಅವರು ಹಲವಾರು ಕೃತಿಗಳನ್ನೂ ರಚಿಸಿದರು.  ಅವುಗಳಲ್ಲಿ 
Response in the Living and Non-living(1902),
Plant response as a means of physiological investigation(1906),
Comparative Electro-physiology: A Physico-physiological Study(1907),
Researches on Irritability of Plants(1913),
Physiology of the Ascent of Sap(1923),
The physiology of photosynthesis(1924),
The Nervous Mechanisms of Plants(1926),
Plant Autographs and Their Revelations(1927),
Growth and tropic movements of plants(1928),
Motor mechanism of plants(1928)
ಮುಂತಾದವು ಪ್ರಮುಖವೆನಿಸಿವೆ.

ಬೋಸ್ ಅವರಿಗೆ ರವೀಂದ್ರನಾಥ್ ಠಾಗೂರ್ ಅವರೊಂದಿಗೆ ಆಪ್ತ ಸ್ನೇಹವಿತ್ತು. ಐನ್ ಸ್ಟೀನ್ ಅವರೊಂದಿಗೂ  ಸಂಪರ್ಕವಿತ್ತು.  ಜಗದೀಶ್ ಚಂದ್ರ ಬೋಸರಲ್ಲಿ ಆಧ್ಯಾತ್ಮಿಕ - ವೈಜ್ಞಾನಿಕ ಚಿಂತನೆಗಳೆರಡೂ ಒಂದಾಗಿ ಮೇಳೈಸಿದ್ದವು ಎಂಬುದು ಪ್ರಾಜ್ಞರ ಅಭಿಮತ.

ಬೋಸರಿಗೆ 1916ರಲ್ಲಿ ನೈಟ್ ಹುಡ್ ಪ್ರಶಸ್ತಿ ಸಂದಿತು. ಬೋಸರು 1917ರಲ್ಲಿ ಬೋಸ್ ಅವರು ಬೋಸ್ ಇನ್ಸ್ಟಿಟ್ಯೂಟನ್ನು  ಕಲ್ಕತ್ತದಲ್ಲಿ ಸ್ತಾಪಿಸಿದರು.  1920ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. 1927ರ ವರ್ಷದಲ್ಲಿ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ 14ನೇ ಅಧಿವೇಶನದ ಅಧ್ಯಕ್ಷತೆಯ ಗೌರವವನ್ನು ಪಡೆದರು.  1928ರ ವರ್ಷದಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ಗೌರವ ಲಭಿಸಿತು.  1929ರಲ್ಲಿ ಅವರಿಗೆ ಫಿನ್ನಿಶ್ ಸೊಸೈಟಿ ಆಫ್ ಸೈನ್ಸನ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ ಸಂದಿತು.  ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು.  ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು.  ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು 2009ರ ಜೂನ್ 25ರಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.

ಜಗದೀಶ್ಚಂದ್ರ ಬೋಸರು 1937ರ ನವೆಂಬರ್ 23ರಂದು ನಿಧನರಾದರು.

On the birth anniversary Sir Jagdish Chandra Bose, Jagadish Chandra Bose

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ