ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಎನ್. ವರದರಾಜ್


 ಎಸ್. ಎನ್. ವರದರಾಜ್


ಶ್ರೀರಾಮನವಮಿ ಎಂದರೆ ನೆನಪಾಗುವ ಪ್ರಮುಖ ಸಂತಸಗಳಲ್ಲಿ ಚಾಮರಾಜಪೇಟೆ ಕೋಟೆ ಹೈಸ್ಕೂಲು ಆವರಣದಲ್ಲಿ ನಡೆಯುವ  ರಾಮೋತ್ಸವ ಸಂಗೀತ ಕಛೇರಿಗಳು ಮುಖ್ಯವಾದವು.‍ ಇಲ್ಲಿನ ಕಛೇರಿಗಳನ್ನು ಮಾತ್ರವಲ್ಲದೆ, ಇಲ್ಲಿ ಕಛೇರಿ ನೀಡುವುದೆಂದರೆ ತಮ್ಮ ಸೌಭಾಗ್ಯ ಎಂದು ಅನೇಕ ಶ್ರೇಷ್ಠ ಸಂಗೀತಗಾರರು ಹೇಳುವುದನ್ನು ನಾವು ನಿರಂತರವಾಗಿ ಕೇಳುತ್ತ ಬೆಳೆದವರು. 

ಈ ಪ್ರಸಿದ್ಧ ಶ್ರೀರಾಮನವಮಿ ಸಂಗೀತೋತ್ಸವವನ್ನು 1939ರಲ್ಲಿ ಪ್ರಾರಂಭಿಸಿದವರು ಎಸ್ . ವಿ.  ನಾರಾಯಣಸ್ವಾಮಿಯವರು. 1939ರಲ್ಲಿ ಇನ್ನೂ ಹದಿನಾಲ್ಕು ವರ್ಷದವರಾಗಿದ್ದಾಗಲೇ ಸಣ್ಣ ಪ್ರಮಾಣದಲ್ಲಿ ಕೆಲವು ಸ್ನೇಹಿತರೊಂದಿಗೆ ಚಾಮರಾಜಪೇಟೆಯಲ್ಲಿ ಇವರು ಪ್ರಾರಂಭಿಸಿದ ರಾಮೋತ್ಸವ, ಕ್ರಮೇಣ ಬೃಹತ್ ಪ್ರಮಾಣವನ್ನು ಪಡೆದು ಇಂದು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿ, ಶ್ರೀರಾಮ ಸೇವಾ ಮಂಡಳಿ ಎಂಬ ಹೆಸರಿನಿಂದ ಸೇವೆ ಸಲ್ಲಿಸುತ್ತಿದೆ. ನಮ್ಮ ದೇಶದ ಶಾಸ್ತ್ರೀಯ ಸಂಗೀತದ ಎಲ್ಲ ಮಹಾನ್ ಕಲಾವಿದರನ್ನೂ ಇಲ್ಲಿಗೆ ಕರೆಸಿ, ಅವರ ಅದ್ಭುತ ಪ್ರತಿಭೆಯನ್ನು ಅಸ್ವಾದಿಸುವ ಸುವರ್ಣಾವಕಾಶವನ್ನು ಕಲ್ಪಿಸಿದ ಹೆಗ್ಗಳಿಕೆ ಈ ವೇದಿಕೆಯದು. ನಾರಾಯಣ ಸ್ವಾಮಿ ಅವರ  ಈ ಅಮೂಲ್ಯ ಸೇವೆಯನ್ನು ಗುರುತಿಸಿ, ಮಹಾನಗರ ಪಾಲಿಕೆಯು 2001ರ ಏಪ್ರಿಲ್ 21ರಂದು ಟಿಸಿಎಂ ರಾಯನ್ ವೃತ್ತದಿಂದ ಚಾಮರಾಜಪೇಟೆ ಐದನೇ ಮುಖ್ಯರಸ್ತೆ ‌ ಸೇರುವ ಮಾರ್ಗಕ್ಕೆ ಎಸ್. ವಿ . ನಾರಾಯಣಸ್ವಾಮಿ ರಸ್ತೆ ಎಂದು ಹೆಸರಿಸಿದೆ. 

ಎಸ್. ವಿ. ನಾರಾಯಣಸ್ವಾಮಿ ಅವರ ಈ ಉನ್ನತ ಸೇವಾ ಪರಂಪರೆಯನ್ನು ಅವರ ಪುತ್ರ ಎಸ್. ಎನ್. ವರದರಾಜ್ ಕಳೆದ 24  ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದು, ನಾಡಿನ ಭವ್ಯಪರಂಪರೆಯನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕಾಯಕದಲ್ಲಿ ನಿರತರಾಗಿದ್ದಾರೆ. 

ಆತ್ಮೀಯರೂ ಮಹಾನ್ ಸಾಂಸ್ಕೃತಿಕ ಸಂಘಟಕರೂ ಆದ ಎಸ್. ಎನ್. ವರದರಾಜ್ ಇಂದು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.  ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ಅವರಿಂದ ನಮ್ಮ ನಾಡಿನ ಶ್ರೇಷ್ಠ ಕಲಾಪರಂಪರೆ ನಿರಂತರ ಬೆಳಗುತ್ತಿರಲಿ.

On the birthday of Varadaraj SN a great heart behind  Sri Ramaseva Mandali, Chamarajpet, Bengaluru 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ