ಜಿ. ಆರ್. ಗೋಪಿನಾಥ್
ಕ್ಯಾಪ್ಟನ್ ಜಿ. ಆರ್. ಗೋಪಿನಾಥ್
ಜಿ. ಆರ್. ಗೋಪಿನಾಥ್ ವಿಮಾನಯಾನ ವ್ಯವಸ್ಥೆಯನ್ನು ಜನಸಾಮಾನ್ಯರ ಬಳಿತಂದು, ಆ ಉದ್ಯಮಕ್ಕೆ ವ್ಯಾಪಕತೆ ತಂದ ಅಸಾಮಾನ್ಯ ಸಾಹಸಿ, ನಿವೃತ್ತ ಸೇನಾನಿ, ಬರಹಗಾರ ಮತ್ತು ಸಮಾಜಮುಖಿ ಚಿಂತಕರು. ಅತಿ ಸರಳರಾದರೂ, ಇಂದು ಅವರ ಕಥೆ ಇತರ ಭಾಷಿಗರು ಪ್ರಸಿದ್ಧ ಸಿನಿಮಾ ಮಾಡುವಷ್ಟು ಮಹತ್ವದ್ದೆನಿಸಿದೆ.
ಗೋಪಿನಾಥ್ 1951ರ ನವೆಂಬರ್ 13ರಂದು ಗೊರೂರು ಗ್ರಾಮದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ಶಿಕ್ಷಕರಾಗಿದ್ದರು. ಇವರ ಅಜ್ಜಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಕ್ಕ.
ತಂದೆ ರಾಮಸ್ವಾಮಿ ಅಯ್ಯಂಗಾರ್ ಅವರಿಗೆ ಪುಟ್ಟ ಮಕ್ಕಳನ್ನು ಶಾಲೆ ಎಂಬ ವ್ಯವಸ್ಥೆಯಡಿಯಲ್ಲಿ ತಳ್ಳುವುದು ಇಷ್ಟವಿಲ್ಲದ ವಿಚಾರವಾಗಿದ್ದು ಮನೆಯಲ್ಲೇ ಶಿಕ್ಷಣ ನೀಡುತ್ತಿದ್ದರು. ಮುಂದೆ ಗೋಪಿನಾಥ್ ನೇರವಾಗಿ ಕನ್ನಡ ಮಾಧ್ಯಮದ ಶಾಲೆಗೆ 5ನೇ ತರಗತಿಯ ವಿದ್ಯಾರ್ಥಿಯಾಗಿ ದಾಖಲಾದರು.
1962ರಲ್ಲಿ ಗೋಪಿನಾಥ್ ಬಿಜಾಪುರದ ಸೈನಿಕ್ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಶಾಲೆಯಲ್ಲಿನ 3 ವರ್ಷದ ಕಠಿಣ ಶಿಕ್ಷಣ ಪಡೆದ ಅವರು, ನ್ಯಾಶನಲ್ ಡಿಫೆನ್ಸ್ ಅಕಾಡಮಿಯಲ್ಲಿ ಶಿಕ್ಷಣ ಪಡೆದು, ಮುಂದೆ ಇಂಡಿಯನ್ ಮಿಲಿಟರಿ ಅಕಾಡಮಿಯಲ್ಲಿ ಪದವಿ ಪಡೆದರು.
ಗೋಪಿನಾಥ್ ಭಾರತದ ಸೈನ್ಯ ಸೇವೆಯಲ್ಲಿ ಕ್ಯಾಪ್ಟನ್ ಸ್ಥಾನ ಗಳಿಸಿದರು. ಎಂಟು ವರ್ಷ ಸೈನ್ಯ ಸೇವೆಯಲ್ಲಿದ್ದ ಅವರು 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತೀಯ ಶೂರ ಯೋಧರಾಗಿದ್ದರು. ಕ್ಯಾಪ್ಟನ್ ಗೋಪಿನಾಥ್ ತಮ್ಮ 28ನೆಯ ವಯಸಿನಲ್ಲಿ ಸೈನ್ಯದ ಸೇವೆಯಿಂದ ನಿವೃತ್ತರಾದರು.
ಮುಂದೆ ಗೋಪಿನಾಥ್ ಪರಿಸರ ಸ್ನೇಹಿ ರೇಷ್ಮೆ ಸಾಕಾಣಿಕೆ ಆರಂಭಿಸಿದರು. ಅವರ ಸೃಜನಶೀಲ ಪ್ರಯತ್ನಗಳು 1996ರಲ್ಲಿ ಅವರಿಗೆ ರೋಲೆಕ್ಸ್ ಲಾರಿಯೆಟ್ ಪ್ರಶಸ್ತಿ ತಂದುಕೊಟ್ಟಿತು. ಮುಂದೆ ಹಾಸನದಲ್ಲಿ ರಾಯಲ್ ಎನ್‍ಫೀಲ್ಡ್ ಡೀಲರ್ಷಿಪ್ ಪಡೆದು ಮಲ್ನಾಡ್ ಮೊಬೈಕ್ಸ್ ಸ್ಥಾಪಿಸಿದರು.
ಕ್ಯಾಪ್ಟನ್ ಗೋಪಿನಾಥರು 1997ರಲ್ಲಿ ಕ್ಯಾಪ್ಟನ್ ಕೆ.ಜೆ ಸ್ಯಾಮ್‍ಯುಯಲ್ ಅವರೊಂದಿಗೆ ಚಾರ್ಟರ್ ಹೆಲಿಕಾಪ್ಟರ್ ಸೇವೆಯ ಡೆಕ್ಕನ್ ಏವಿಯೇಷನ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಹೆಲಿಕಾಪ್ಟರ್ ಸೇವೆಯನ್ನು ಅನೇಕ ಪ್ರಖ್ಯಾತ ಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ಗಣ್ಯರು ಪಡೆದುಕೊಳ್ಳುತ್ತಿದ್ದರು. ಭಾರತ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿನ ತುರ್ತು ಸೇವೆಗಳಿಗಾಗಿಯೂ ಈ ಸಂಸ್ಥೆಯ ಸೇವೆಗಳು ಬೇಡಿಕೆ ಪಡೆದಿದ್ದವು.
ಗೋಪಿನಾಥ್ 2003ರಲ್ಲಿ ಕಡಿಮೆ ಬೆಲೆಯಲ್ಲಿ ವಿಮಾನ ಸೌಲಭ್ಯ ಒದಗಿಸುವ ಏರ್ ಡೆಕ್ಕನ್ ಸಂಸ್ಥೆಯನ್ನು ಸ್ಥಾಪಿಸಿದರು. 2006ರಲ್ಲಿ ಫ್ರೆಂಚ್ ಸರಕಾರ ಗೋಪಿನಾಥ್ ಅವರಿಗೆ 'ಚೆವಲಿಯರ್ ಡಿ ಲ ಲೆಜಿಯನ್ ಡಿ'ಹನ್ನಿಯುರ್' ಪ್ರಶಸ್ತಿ ನೀಡಿತು. ಏರ್ ಡೆಕ್ಕನ್ ಸಂಸ್ಥೆ ಅನೇಕ ಪ್ರಶಸ್ತಿಗಳನ್ನು ಗಳಿಸಿತ್ತು.
2007ರಲ್ಲಿ ಏರ್ ಡೆಕ್ಕನ್ ಕಿಂಗ್‍ಫಿಷರ್ ಏರ್‍ಲೈನ್ಸ್ ಒಂದಿಗೆ ವಿಲೀನಗೊಂಡಿತು. ಆ ವೇಳೆಗಾಗಲೆ ಡೆಕ್ಕನ್ ಏವಿಯೇಷನ್ ಸಂಸ್ಥೆ ಭಾರತದ 69 ನಗರಗಳೊಂದಿಗೆ ವಿಮಾನ ಸಂಪರ್ಕ ಸೇವೆ ಕಲ್ಪಿಸಿತ್ತು. ಕ್ರಮೇಣವಾಗಿ ಗೋಪಿನಾಥ್ ಅವರು ಈ ಸಂಸ್ಥೆಯಲ್ಲಿನ ಬಹುತೇಕ ಷೇರುಗಳನ್ನು ಕಿಂಗ್‍ಫಿಷರ್ ಸಂಸ್ಥೆಗೆ ಮಾರಾಟ ಮಾಡಿದ್ದರು. (ಮುಂದೆ ಮಲ್ಯ ಅವರ ಒಡೆತನದ ಎಲ್ಲ ಸಂಸ್ಥೆಗಳ ಜೊತೆಗೆ ಕಿಂಗ್‍ಫಿಷರ್ ಕೂಡಾ ನೇಪಥ್ಯ ಸೇರಬೇಕಾಯ್ತು.)
ಗೋಪಿನಾಥ್ 2009ರಲ್ಲಿ ಡೆಕ್ಕನ್ 360 ಎಂಬ ಸರಕು ಸಾಗಾಣೆ ವಿಮಾನಯಾನ ಸಂಸ್ಥೆ ಸ್ಥಾಪಿಸಿದರು. 2013ರಲ್ಲಿ ಕರ್ನಾಟಕ ಹೈ ಕೋರ್ಟು ತನಗೆ ಎರಡು ಸಂಸ್ಥೆಗಳು ಬರಬೇಕಿದ್ದ ಹಣ ಸಂದಾಯಕ್ಕಾಗಿ ಸಲ್ಲಿಸಿದ್ದ ಅಹವಾಲಿನ ಇತ್ಯರ್ಥದಲ್ಲಿ, ಈ ಸಂಸ್ಥೆಯನ್ನು ಮುಚ್ಚಲು ಆದೇಶ ನೀಡಿತು.
2009 ಮತ್ತು 2014ರಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಜಿ. ಆರ್. ಗೋಪಿನಾಥ್ ಯಶಸ್ಸು ಗಳಿಸಲಿಲ್ಲ.
2017ರಲ್ಲಿ ಡೆಕ್ಕನ್ ಚಾರ್ಟರ್ ಸಂಸ್ಥೆ ಭಾರತ ಸರ್ಕಾರದ UDAN ಯೋಜನೆಯಡಿಲ್ಲಿನ ಸೇವೆಗಾಗಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ 34 ಭಾರತೀಯ ವೈಮಾನಿಕ ಮಾರ್ಗಗಳಿಗೆ ಸೇವೆ ಸಲ್ಲಿಸುವ ಪರವಾನಗಿ ಪಡೆದುಕೊಂಡಿತು.
ದೊಡ್ಡ ದೊಡ್ಡ ವಿಮಾನ ಸಂಸ್ಥೆಗಳು ವಿಮಾನ ಯಾನದಲ್ಲಿ, ಅವ್ಯವಹಾರದಲ್ಲಿ, ಅಸಮರ್ಪಕ ಆಡಳಿತದಲ್ಲಿ, ವಿಶ್ವ ಹಣಕಾಸು ವಾಣಿಜ್ಯ ವ್ಯಾಪಾರದ ಏರಿಳಿತಗಳಲ್ಲಿ, ಮುಗ್ಗಟ್ಟುಗಳಲ್ಲಿ ಮುಳುಗಿರಬಹುದು. ಸೋಲು ಗೆಲುವುಗಳು ಸದಾ ಬೆನ್ನ ಹಿಂದೆ ಇರಬಹುದು. ಗೋಪಿನಾಥ್ ಉತ್ಸಾಹ ಬತ್ತಿಲ್ಲ. ಅವರ ದೂರದರ್ಶಿತ್ವ ಮತ್ತು ಪರಿಶ್ರಮ ದೇಶದ ವಿಮಾನಯಾನ ವ್ಯವಸ್ಥೆ ಮತ್ತು ಅದರ ಅನೇಕ ಔದ್ಯಮಿಕ, ವಾಣಿಜ್ಯ ಲಾಭಗಳನ್ನು ದೇಶಕ್ಕೆ ನೀಡಿದೆ. ಎಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯನೊಬ್ಬನ ದೂರದೃಷ್ಟಿ ಹೇಗೆ ಬದುಕು-ಜನಜೀವನ-ದೇಶದ-ವಿಶ್ವದ ಬದುಕನ್ನೇ ಬದಲಿಸಬಹುದು ಎಂಬ ದೃಷ್ಟಾಂತ ಗೋಪಿನಾಥ್ ಅವರ ಸಾಹಸದಲ್ಲಿದೆ.
'ಸಿಂಪ್ಲಿ ಫ್ಲೈ' ಮತ್ತು ‘ಯು ಕೆನಾಟ್ ಮಿಸ್ ದ ಫ್ಲೈಟ್' ಎಂಬದು ಗೋಪಿನಾಥ್ ಅವರ ಪ್ರಸಿದ್ಧ ಪುಸ್ತಕಗಳು. ಅವರು ಅನೇಕ ಪ್ರಸಿದ್ಧ ಪತ್ರಿಕೆಗಳಲ್ಲಿ ಅಂಕಣಗಾರರಾಗಿದ್ದಾರೆ.
ಕ್ಯಾಪ್ಟನ್ ಗೋಪಿನಾಥ್ ಅವರ ಸಾಹಸಕಥೆಯನ್ನಾಧರಿಸಿ ತಮಿಳಿನಲ್ಲಿ 'ಸೂರಾರೈ ಪೊಟ್ರು' ಎಂಬ ಭರ್ಜರಿಚಿತ್ರ ನಿರ್ಮಾಣಗೊಂಡಿತ್ತು.
ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಇತರ ದೇಶಗಳ ಅಂತರರಾಷ್ಟ್ರೀಯ ಪ್ರಶಸ್ತಿಗಳೇ ಅಲ್ಲದೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ, ಕೆ ಜಿ ಫೌಂಡೇಷನ್ ಅವರ ದಶಮಾನದ ವ್ಯಕ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಈ ಮಹಾನ್ ಸಾಹಸಿ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆ ಹೇಳೋಣ.
On the birthday of Captain G. R. Gopinath who revolutionized Indian air travel
ಕಾಮೆಂಟ್‌ಗಳು