ಸ್ವಾಮಿ ರಾಮ
ಸ್ವಾಮಿ ರಾಮ
'ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ' ಕೃತಿಯಿಂದ ವಿಶ್ವವಿಖ್ಯಾತರಾದ ಸ್ವಾಮಿ ರಾಮ ಅವರು ಮಹಾನ್ ಯೋಗ ಗುರು ಎನಿಸಿದ್ದವರು. Living with Himalayan Masters ಎಂಬ ಈ ಇಂಗ್ಲಿಷ್ ಕೃತಿ ವಿಶ್ವದಾದ್ಯಂತ ಪ್ರಸಿದ್ಧಗೊಂಡಿದೆ.
ಸ್ವಾಮಿ ರಾಮ ಅವರ ಮೊದಲ ಹೆಸರು ಬ್ರಿಜ್ ಕಿಶೋರ್. ಅವರು 1925 ವರ್ಷದಲ್ಲಿ ಘರವಾಲ್ ಹಿಮಾಲಯದ ತೋಲಿ ಎಂಬ ಗ್ರಾಮದಲ್ಲಿ ಜನಿಸಿದರು. ಅವರು ಯೋಗಿಗಳಾದ ಶ್ರೀ ಮಾಧವಾನಂದ ಭಾರತಿ ಅವರ ಆಶ್ರಯದಲ್ಲಿ ಹಿಮಾಲಯದ ಗುಹೆಗಳಲ್ಲಿ ಬೆಳೆದರು.
ಹಿಮಾಲಯದಲ್ಲಿ ಕಂಡ ಅನೇಕ ಯೋಗಿಗಳ ವಿವರಗಳು ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಕೃತಿಯಲ್ಲಿವೆ. ಗುರುಗಳ ಆಶ್ರಯ ಇದೆ ಎಂಬ ಅಹಂನಲ್ಲಿ ಅದ್ದೂರಿ ಪ್ರಾಪಂಚಿಕ ಬಾಳನ್ನು ಬಾಳುತ್ತಿದ್ದ ಇವರಿಗೆ, ಗುರುಗಳು ಅಗಾಧ ಸಂಪತ್ತನ್ನು ಕಣ್ಮುಂದೆ ಕಾಣಿಸಿ, ಈ ಐಶ್ವರ್ಯ ಬೇಕೋ, ಅಧ್ಯಾತ್ಮಲೋಕ ಬೇಕೊ ಆಯ್ಕೆ ಮಾಡಿಕೋ ಎಂದಾಗ, ಆಧ್ಯಾತ್ಮಿಕ ಲೋಕವನ್ನು ಆಯ್ದುಕೊಂಡು ಪ್ರಗತಿ ಸಾಧಿಸುತ್ತಾರೆ. ಅವರು ತಮ್ಮ 24ನೆಯ ವಯಸ್ಸಿನಲ್ಲಿ ಕರವೀರಪೀಠದ ಶಂಕರಾಚಾರ್ಯರಾಗುತ್ತಾರೆ. ಆ ಸಮಯದಲ್ಲಿ ಅನೇಕ ಅನುಪಯುಕ್ತ ಸಂಪ್ರದಾಯಗಳಿಗೆ ತೆರೆ ಎಳೆಯುತ್ತಾರೆ. ಕೊನೆಗೆ ಎಲ್ಲೋ ತಮ್ಮ ಜೀವನದ ಅಮೂಲ್ಯ ಸಮಯ ಅನುಪಯುಕ್ತವಾಗಿ ವ್ಯಯವಾಗುತ್ತಿದೆ ಎನಿಸಿ, 1952ರಲ್ಲಿ ಪೀಠವನ್ನು ತೊರೆದು ಹಿಮಾಲಯದಲ್ಲಿ ಹೆಚ್ಚಿನ ಸಾಧನೆಗೆ ಮುಂದಾಗುತ್ತಾರೆ.
1969ರಲ್ಲಿ ಅಮೆರಿಕ ತಲುಪಿದ ಸ್ವಾಮಿ ರಾಮ ಅವರು ಅನೇಕ ದೇಗುಲಗಳು, ಚರ್ಚ್ ಮತ್ತು YMCA ಕೇಂದ್ರಗಳಲ್ಲಿ ಉಪನ್ಯಾಸ ನೀಡತೊಡಗುತ್ತಾರೆ. ಯೋಗ, ಧ್ಯಾನ ಮತ್ತು ಅಧ್ಯಾತ್ಮ ಚಿಂತನೆಗಳು ಅವರ ಉಪನ್ಯಾಸಗಳಲ್ಲಿ ಮೂಡುತ್ತವೆ.
1966ರಲ್ಲಿಅವರು ಕಾನ್ಪುರದಲ್ಲಿ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಯೋಗ ಸೈನ್ಸ್ ಅಂಡ್ ಫಿಲಾಸಫಿ ಕೇಂದ್ರವವನ್ನು ಸ್ಥಾಪಿಸಿದರು. ಮುಂದೆ 1971ರಲ್ಲಿ ಇಲಿನಾಯ್ಸ್ ಎಂಬಲ್ಲಿ ಮತ್ತೊಂದು ಕೇಂದ್ರ ಸ್ಥಾಪಿಸಿ, 1977ರಲ್ಲಿ ಪೆನ್ಸಿಲ್ವೇನಿಯಾದ ಬಳಿಯ ಹೊನೆಸ್‍ಡೇಲ್ ಎಂಬಲ್ಲಿಗೆ ಈ ಕೇಂದ್ರವನ್ನು ಸ್ಥಳಾಂತರಿಸಿದರು. ಇದು ಅಮೆರಿಕ, ಯೂರೋಪ್ ಮತ್ತು ಭಾರತದಲ್ಲಿ ಅನೇಕ ಕೇಂದ್ರಗಳನ್ನು ಹೊಂದಿದೆ. ಇದಲ್ಲದೆ ಸ್ವಾಮಿ ರಾಮ ಅವರು ಉತ್ತರಕಾಂಡದ ಡೆಹ್ರಾಡೂನಿನಲ್ಲಿ ಪರ್ವತಪ್ರದೇಶದ ಬಡ ನಿವಾಸಿಗಳಿಗಾಗಿ ಬೃಹತ್ ಆರೋಗ್ಯಕೇಂದ್ರವನ್ನು ಸ್ಥಾಪಿಸಿದರು.
ಸ್ವಾಮಿ ರಾಮ ಅವರು ಪ್ರಸಿದ್ಧ 'ಯೋಗ ನಿದ್ರಾ' ಸೆರಿದಂತೆ ಅನೇಕ ಯೋಗ ಪದ್ದತಿಗಳನ್ನು ಸೃಜಿಸಿದರು.
ಸ್ವಾಮಿ ರಾಮ ಅವರು ತಾವು ಯೋಗಿಯಾಗಿ ರೂಪುಗೊಂಡ ಕುರಿತಾದ ವಿವರಗಳುಳ್ಳ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 1976ರಲ್ಲಿ ತಾವು ಸಹಲೇಖಕರಾಗಿ ಪ್ರಕಟಿಸಿದ Yoga and Psychotherapy ಕೃತಿಯಲ್ಲಿ ಹಠಯೋಗವನ್ನು ಪಾಶ್ಚಿಮಾತ್ಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಿದ್ದಾರೆ.
"ಪರಮಾತ್ಮನನ್ನು ಹೊರಗೆಲ್ಲೋ ಅರಸಬೇಕಿಲ್ಲ. ಈಗಾಗಲೇ ಅವನು ನಿಮ್ಮೊಳಗಿದ್ದಾನೆ ಎಂಬುದನ್ನು ಕಂಡುಕೊಳ್ಳಿ. ಆಗ ನಿಮ್ಮ ಬದುಕಿನ ರೀತಿ ಬದಲಾಗುತ್ತದೆ" ಎಂಬುದು ಅವರ ಅನೇಕ ಪ್ರಸಿದ್ಧ ಬೋಧನೆಗಳಲ್ಲಿ ಒಂದು.
ಸ್ವಾಮಿ ರಾಮ ಅವರು 1996ರ ನವೆಂಬರ್ 13ರಂದು ನಿಧನರಾದರು.
On Remembrance Day of Guru Sri Swami Rama
ಕಾಮೆಂಟ್‌ಗಳು