ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಮೂರ್ತಿ ಪುರಾಣಿಕ


 ಕೃಷ್ಣಮೂರ್ತಿ ಪುರಾಣಿಕ


ಕನ್ನಡದ ಕಾದಂಬರಿ ಲೋಕದ ಪ್ರಮುಖರಲ್ಲಿ  ಕೃಷ್ಣಮೂರ್ತಿ ಪುರಾಣಿಕರು ಸದಾ ವಿರಾಜಮಾನರು.  ಜನಪ್ರಿಯತೆ, ಗಾತ್ರ ಮತ್ತು ಗುಣಾತ್ಮಕ ಅಂಶಗಳ ವಿವಿಧ ತುಲನೆಗಳಲ್ಲಿ ಕೃಷ್ಣಮೂರ್ತಿ ಪುರಾಣಿಕರು ಮಹತ್ವದ ಹೆಸರಾಗಿದ್ದಾರೆ.  ಅವರ ಕಾದಂಬರಿಗಳ ಸಂಖ್ಯೆಯೇ ಎಂಭತ್ತರ ಸಂಖ್ಯೆಯನ್ನು ಮೀರಿದ್ದು.  ಅವರ ಇತರ ಕೊಡುಗೆಗಳಾದ ಸಣ್ಣಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ ಇತ್ಯಾದಿಗಳು ಕೊಡಾ ಗಣನೀಯವಾದವು.

ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳು ಜನಸಾಮಾನ್ಯರ ಆದರಣೆಯ ಓದಿಗೆ ಪಾತ್ರವಾದಂತೆಯೇ, ಕನ್ನಡ ಚಿತ್ರರಂಗದ ಸಾಮಾಜಿಕ ಕಾದಂಬರಿ ಆಧಾರಿತ ಚಿತ್ರಗಳ ನಿಟ್ಟಿನಲ್ಲಿ ಪ್ರಮುಖ ಕೊಡುಗೆಗಳೂ ಹೌದು.  ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳಾದ ‘ಕರುಣೆಯೇ ಕುಟುಂಬದ ಕಣ್ಣು’, ‘ಕುಲವಧು’, ‘ಸನಾದಿ ಅಪ್ಪಣ್ಣ’ , ‘ಹಾಲುಂಡ ತವರು’, 'ಅನಿರೀಕ್ಷಿತ' ಎಂಬ ಹೆಸರಲ್ಲಿ ವಸುಂಧರ ಕಾದಂಬರಿ,  ಮುಂತಾದವು ಉತ್ತಮ ಚಲನಚಿತ್ರಗಳಾಗಿಯೂ ಚಿರಸ್ಮರಣೀಯವಾಗಿ ಉಳಿದಿದೆ.  
  
ಕೃಷ್ಣಮೂರ್ತಿ ಪುರಾಣಿಕರು ಬಾಗಲಕೋಟೆ ಜಿಲ್ಲೆಯ ಬೀಳಗಿಯವರು, ಆದರೆ ನೆಲೆಸಿದ್ದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಕೃಷ್ಣಮೂರ್ತಿ ಪುರಾಣಿಕರು 1911ರ  ಸೆಪ್ಟೆಂಬರ್ 5ರಂದು ಜನಿಸಿದರು.    ತಾಯಿ ಲಕ್ಷ್ಮೀಬಾಯಿ. ತಂದೆ ತಮ್ಮಣ್ಣಭಟ್ಟರು. ಪುರಾಣಿಕರು ವೈದಿಕ ವೃತ್ತಿಯ ಸುಸಂಸ್ಕೃತ ಮನೆತನದಲ್ಲಿ ಸದಾ ಪುರಾಣ-ಪುಣ್ಯ ಕತೆಗಳ ಪರಿಸರದಲ್ಲಿ ಬೆಳೆದವರು.  ಕೃಷ್ಣಮೂರ್ತಿ ಪುರಾಣಿಕರು ಬಿ.ಎ.,  ಬಿ.ಟಿ ಪದವಿ ಪಡೆದ ಬಳಿಕ ಗೋಕಾಕ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು.

ಪುರಾಣಿಕರಿಗೆ ಮನೆಯಲ್ಲಿ ಸಾಹಿತ್ಯದ ಬಗ್ಗೆ ರುಚಿ ತೋರಿಸಿದವರು ತಂದೆ ತಾಯಿಗಳಾದರೆ ಹೊರಗೆ ರಂ.ಶ್ರೀ. ಮುಗಳಿ, ಭಾವಗೀತೆಗಳಲ್ಲಿ ಬೇಂದ್ರೆ, ಸರಳ ರಗಳೆಯ ನಾಟಕಗಳಿಗೆ ಕುವೆಂಪುರವರು ಮಾರ್ಗದರ್ಶಕರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿದ್ದಾಗಲೇ ಕತೆ, ಕವನಗಳ ರಚನೆ ಮಾಡಿದ್ದರು. ವಾರಾನ್ನದ ಹುಡುಗನಾಗಿ ಬಾಗಲಕೋಟೆಯ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ಊಟಮಾಡುತ್ತಿದ್ದ ಮನೆಯಲ್ಲಿ,  ಮದುವೆಯಾದ ವರ್ಷವೇ ವಿಧವೆಯಾಗಿ ಬಂದ ಹದಿಹರೆಯದ ಹುಡುಗಿಯೊಬ್ಬಳನ್ನು ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದರಂತೆ.  ಅಚಾನಕವಾಗಿ ಇವರ ಕಣ್ಣಿಗೆ ಬಿದ್ದ ಆಕೆ, ‘ಕೃಷ್ಣ ಕೊಂಚ ವಿಷ ತಂದು ಕೊಡು, ಬದುಕು ಬೇಡವಾಗಿದೆ’ ಎಂದಳಂತೆ. ಅವಳ ದುಃಖದ ಜೀವನವು ಇವರನ್ನು ಹಿಂಡಿ ಹಿಪ್ಪೆಮಾಡಿ, ಮನದಾಳದಲ್ಲಿ ಮೂಡಿದ ದುಃಖ

ಸುಡು ಸುಡಲೇ ಸುಡುಜೀವ
ಸುಡುಗಾಡು ಸೇರಿಹಳು ಹುಡುಕದಿರು
ಸಂತಸದ ಬಾಳಿನಲಿ…..
ಎಂದು ಕವನವಾಗಿ ಹೊಮ್ಮಿತಂತೆ. 

ಆದರ್ಶದ ಕನಸು ಕಾಣುತ್ತಿದ್ದ ಯುವಕನಿಗೆ ಬಾಳಿನ ನೋವಿನ ದರ್ಶನವಾದಂತೆಲ್ಲ ಬರೆದದ್ದು ಹಲವಾರು ಕತೆಗಳು ಹಾಗೂ ಕವಿತೆಗಳು. ಹೀಗೆ ಬರೆದ ಕತೆ, ಕವನಗಳು ಕನ್ನಡಿಗ, ಕರ್ನಾಟಕ ವೈಭವ, ಜಯಕರ್ನಾಟಕ, ಜಯಂತಿ, ವಸಂತ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು.  ಇವರ ಮೊದಲ ಗದ್ಯಕೃತಿ ‘ರಾಮೂನ ಕತೆಗಳು’ ಪ್ರಕಟವಾದದ್ದು  1946ರಲ್ಲಿ. ಮೊದಲ ಕವನ ಸಂಕಲನ ‘ಬಾಳ ಕನಸು’ 1947ರಲ್ಲಿ.

ಒಮ್ಮೆ ಶಿವರಾಮಕಾರಂತರು, ದ.ಬಾ. ಕುಲಕರ್ಣಿಯವರು ಗೋಕಾಕಕ್ಕೆ ನಾಡಹಬ್ಬದ ಸಲುವಾಗಿ ಬಂದಾಗ, ಇವರ ಮನೆಗೂ ಬಂದರು. ಪುರಾಣಿಕರು ಹೊಸದಾಗಿ ಬರೆದ ಕವನವನ್ನು ಹಾಡಿ ತೋರಿಸಿದರು. ಕಾರಂತರು  ಕೇಳಿ ಮೆಚ್ಚಿದರು. ಜೊತೆಗೆ ಮತ್ತೊಂದು ಮಾತನ್ನೂ ಸೇರಿಸಿದರು. ‘ನಾವು ಬರೆಯುವುದು ಜನರಿಗೆ ಮುಟ್ಟಬೇಕು, ಅವರಲ್ಲಿ ಜಾಗೃತಿಯನ್ನುಂಟುಮಾಡಬೇಕು, ಇದು ಕಾವ್ಯದಿಂದ ಆಗುವುದೆಂದು ಅನ್ನಿಸುವುದಿಲ್ಲ. ನೀವು ಗದ್ಯದಲ್ಲೇ ಬರೆಯಲು ಪ್ರಾರಂಭಿಸಿ’ ಎಂದರಂತೆ.

ಸಮಾಜ ಜೀವನದಲ್ಲಿರುವ ಅಂಕುಡೊಂಕುಗಳು, ಏರು-ಪೇರುಗಳು, ಕಷ್ಟ-ಕಾರ್ಪಣ್ಯಗಳೇ ಇವರ ಕಾದಂಬರಿಗಳ ವಸ್ತುವಾಗಿ ಬರೆದ ಮೊದಲ ಕಾದಂಬರಿ ‘ಮುಗಿಲಮಲ್ಲಿಗೆ’ (1948) ಪ್ರಕಟಗೊಂಡಾಗ ಕನ್ನಡ ಜನತೆ ಸಂತಸದಿಂದ ಬರಮಾಡಿಕೊಂಡಿತು.  ಒಮ್ಮೆ ಅ.ನ.ಕೃ.ರವರು ಪ್ರಕಾಶಕರೊಬ್ಬರೊಡನೆ ಮಾಡಿಕೊಂಡ ಒಪ್ಪಂದದಂತೆ ಕಾದಂಬರಿಯೊಂದನ್ನು ಬರೆದು ಕೊಡಬೇಕಿತ್ತು. ಆದರೆ ಬರವಣಿಗೆ ಸಾಗದಿದ್ದಾಗ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನು ಶಿಫಾರಸ್ಸು ಮಾಡಿದರು. ಇದರಿಂದ ಅ.ನ.ಕೃ ರವರ ಕಾದಂಬರಿಯನ್ನು ಕಾಯುತ್ತಿದ್ದವರು ಪುರಾಣಿಕರ ಕಾದಂಬರಿಯನ್ನು ಓದಿ ಇವರ ಕಾದಂಬರಿಗಳಿಗಾಗಿ ಕಾಯುವಂತಾಯಿತು. ಕತೆ, ಕಾದಂಬರಿ ಓದುವುದೇ ಮುಖ್ಯ ಮನರಂಜನೆಯಾಗಿದ್ದ ಕಾಲದಲ್ಲಿ ಸುಸಂಸ್ಕೃತ ಬರಹದ ಕಾದಂಬರಿಗಳಿಗೆ ಬಹುಬೇಡಿಕೆ ಇತ್ತು. ಒಂದಾದಮೇಲೊಂದರಂತೆ ಬರೆದ ಪುರಾಣಿಕರ ಕಾದಂಬರಿಗಳಿಗೆ ಹಳೆಯ ಮೈಸೂರು ಪ್ರದೇಶದ ಓದುಗರಿಂದಲೂ ಅಭೂತಪೂರ್ವ ಸ್ವಾಗತ ದೊರೆಯಿತು. ಪುರಾಣಿಕರು ಓದುಗರ ಮನೆಮಾತಾದರು.

ಅಂದಿನ  ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ  ಕೀಳುದರ್ಜೆಯ ಕಾದಂಬರಿಗಳ ಪ್ರಕಟಣೆಯೂ ಪ್ರಾರಂಭವಾಗಿದ್ದು, ಓದುಗರಿಗೆ ಆಯ್ಕೆಯೂ ಕಷ್ಟಕರವಾಗಿತ್ತು.  ರಂ.ಶ್ರೀ. ಮುಗಳಿಯವರು ಒಮ್ಮೆ ಪುರಾಣಿಕರನ್ನು ಪರಿಚಯಿಸುತ್ತಾ, “ಸಾಮಾನ್ಯವಾಗಿ ನಾನು ಮೊದಲು ಕಾದಂಬರಿಯನ್ನು ಓದಿ ನಂತರ ಮನೆಯವರ ಕೈಲಿಡುತ್ತೇನೆ. ಆದರೆ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಯನ್ನು ನೇರವಾಗಿ ಮಗಳಿಗೆ ಕೊಡುತ್ತೇನೆ” ಎಂದಿದ್ದರಂತೆ.  ಇದು ಪುರಾಣಿಕರ ಕಾದಂಬರಿಗಳ ಬಗ್ಗೆ, ಅವರ ಸುಸಂಸ್ಕೃತ ಬರಹದ ಬಗ್ಗೆ ಇದ್ದ  ಸದಭಿಪ್ರಾಯ. ಹೀಗೆ ಪ್ರಾಚೀನ ಪರಂಪರೆ, ಜೀವನ ಮೌಲ್ಯಗಳು, ಹೆಣ್ಣಿನ ದುಃಖ-ದುಮ್ಮಾನ ಮೊದಲಾದವುಗಳೇ ಅವರ ಕಾದಂಬರಿಗಳ ವಸ್ತುವಾಗಿದ್ದರಿಂದ ಮನೆಯವರೆಲ್ಲರೂ ಓದುವುದಷ್ಟೇ ಅಲ್ಲದೆ ಕುಳಿತು ಚರ್ಚಿಸಬಲ್ಲ ಸಹ್ಯ ಸಾಹಿತ್ಯ ಸೃಷ್ಟಿಸಿದರು.

ಸುಮಾರು 80 ಕಾದಂಬರಿಗಳು, 11 ಗೀತನಾಟಕಗಳು, 12 ಸಣ್ಣಕಥಾ ಸಂಕಲನಗಳು, 4 ಕವನ ಸಂಕಲನಗಳು, 8 ಶಿಶು ಸಾಹಿತ್ಯ ಕೃತಿಗಳು ಸೇರಿ ಕೃಷ್ಣಮೂರ್ತಿ ಪುರಾಣಿಕರು  ಒಟ್ಟು 115 ಕೃತಿಗಳನ್ನು ರಚಿಸಿದ್ದಾರೆ.

ಕಾಲೇಜು ದಿನಗಳಲ್ಲೇ ಬರೆದ ‘ಸೈರಂಧ್ರಿ’ ಸುಂದರ ಸರಳ ರಗಳೆಯ ನಾಟಕ. ಇದು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡ ನಂತರ ರಂಗಭೂಮಿಯ ಮೇಲೂ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಸರಳ ರಗಳೆಯ ಕೃತಿ ರಚನೆಯಲ್ಲಿ ಪುರಾಣಿಕರಿಗೆ  ಕುವೆಂಪುರವರೇ ಆದರ್ಶ. ಕುವೆಂಪುರವರ ಕೆಲ ಕೃತಿಗಳನ್ನು ಸಾರ್ವಜನಿಕವಾಗಿ ವಾಚನ ಮಾಡತೊಡಗಿದ ನಂತರ, ಇದರಿಂದ ಸ್ಫೂರ್ತಿಗೊಂಡು ರಚಿಸಿದ್ದು ‘ಮಗನ ಗೆಲುವು’, ‘ಸೈರಂಧ್ರಿ’, ‘ರಾಧೇಯ’, ‘ರತಿವಿಲಾಸ’, ‘ಜಯಭೇರಿ’, ‘ವಾಸವದತ್ತ’ ಮೊದಲಾದ ಕೃತಿಗಳು.  ಅಂದಿನ ದಿನಗಳಲ್ಲೇ  ಸೈರಂಧ್ರಿಯ ಎಪ್ಪತ್ತು ಸಾವಿರ ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿತು.

ಹೀಗೆ ಕೃಷ್ಣಮೂರ್ತಿ ಪುರಾಣಿಕರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ದುಡಿದಿದ್ದರೂ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. “ಗೃಹಿಣಿಯರಿಗೆ ಪಥ್ಯವಾಗುವ ರೀತಿಯಲ್ಲಿ ಕಾದಂಬರಿ ರಚಿಸಿರುವೆ.   ಸೀತಾ, ದ್ರೌಪದಿ, ಕುಂತಿ ಮುಂತಾದವರು ಪಟ್ಟ ಕಷ್ಟ, ತೋರಿದ ಎದೆಗಾರಿಕೆ ಇಂದಿನ ಮಹಿಳೆಯರಿಗೆ ಬೇಕಾಗಿದೆ. ಹೀಗೆ ಚಿತ್ರಿಸುವಾಗ ವಿವೇಕ, ಕಲಾವಂತಿಕೆಯನ್ನೂ ತೋರಿಸುವ ಶಕ್ತಿ ನಿನ್ನಲ್ಲಿದೆ, ಮುಂದುವರೆಸು” ಎಂದು ಬೇಂದ್ರೆಯವರು ಹಾರೈಸಿದರಂತೆ.

ಅದರಂತೆ ಯಾವಾಗಲೂ ಅನುಕಂಪದ ಪನ್ನೀರಿನಲ್ಲಿ ಅದ್ದಿ ಬರೆದ ಪುರಾಣಿಕರ ಲೇಖನಿಯಿಂದ ಮುತ್ತೈದೆ(ಕರುಣೆಯೇ ಕುಟುಂಬದ ಕಣ್ಣು), ಮಣ್ಣಿನ ಮಗಳು, ಧರ್ಮದೇವತೆ, ಮಂಗಳಾಕ್ಷತೆ, ಗಂಧದ ಬಳ್ಳಿ, ಕಣ್ಣು ತುಂಬಿದ ಕರುಣೆ, ಹಿಮಗಿರಿಯ ಗೌರಿ, ಹಾಲುಂಡ ತವರು,  ವಸುಂಧರಾ(ಅನಿರೀಕ್ಷಿತ ಚಿತ್ರ) ಮುಂತಾದ ಕಾದಂಬರಿಗಳು ಓದುಗರಿಗೆ ಮೆಚ್ಚುಗೆಯಾದವು.

ಚಿತ್ರೋದ್ಯಮಿಗಳು ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸತೊಡಗಿದ್ದೂ ಪುರಾಣಿಕರ ಕಾದಂಬರಿಗಳಿಂದಲೇ. ಪ್ರಥಮ ಚಲನಚಿತ್ರವಾದ ಕಾದಂಬರಿ ‘ಧರ್ಮದೇವತೆ’ಯು ‘ಕರುಣೆಯೇ ಕುಟುಂಬದ ಕಣ್ಣು’ ಎಂಬ ಹೆಸರಿನಿಂದ 1962ರ ವರ್ಷದಲ್ಲಿ  ಚಲನಚಿತ್ರವಾಗಿ ಜನಪ್ರಿಯವಾಯಿತು. ಸುಮಾರು 11 ಕಾದಂಬರಿಗಳು  ಚಲನಚಿತ್ರವಾಗಿ ಕೃಷ್ಣಮೂರ್ತಿ ಪುರಾಣಿಕರಿಗೆ ಖ್ಯಾತಿಯನ್ನು ತಂದು ಕೊಟ್ಟವು.

ಮಗಳ ಮದುವೆಯ ಸಂದರ್ಭದಲ್ಲಿ ಕಡಿಮೆಬಿದ್ದ ಒಂದೂವರೆ ಸಾವಿರ ರೂಪಾಯಿಗೆ ಭಗವಂತನ ಮೇಲೆ ಭಾರ ಹಾಕಿ ಪ್ರಾರ್ಥಿಸುತ್ತಿದ್ದರಂತೆ.  ಆ ಸಂದರ್ಭದಲ್ಲಿ  ತಮಿಳಿನ ಎ.ವಿ.ಎಂ. ಪಿಕ್ಚರ್ಸ್ ಪ್ರತಿನಿಧಿ ‘ಮುತ್ತೈದೆ’ ತಮಿಳು ತರ್ಜುಮೆಯ ಚಿತ್ರೀಕರಣಕ್ಕೆ ಮುಂಗಡ ಹಣವೆಂದು ಒಂದೂವರೆ ಸಾವಿರ ರೂಪಾಯಿ ಕೊಟ್ಟು ಹೋದರಂತೆ.  “ಕನ್ನಡದಲ್ಲಿ ಮುತ್ತೈದೆ ಹಸೆಗೆ ಬರುವುದರ ಮೊದಲೇ ತಮಿಳು ಚಿತ್ರರಂಗದವರು ಆರತಿ ಬೆಳಗಿದ್ದು ಸ್ವಾರಸ್ಯಕರ ಸಂಗತಿ” ಎಂದು ಎಚ್ಚೆಸ್ಕೆ ಬರೆಯುತ್ತಾರೆ.

ಹೀಗೆ ಚಲನಚಿತ್ರಗಳಾದ ಕಾದಂಬರಿಗಳೆಂದರೆ ಧರ್ಮದೇವತೆ (1962), ಕುಲವಧು(1963), ಭಾಗೀರಥಿ(1969), ಮಣ್ಣಿನ ಮಗಳು (1974), ಪಾವನ ಗಂಗಾ ಮತ್ತು ಸನಾದಿ ಅಪ್ಪಣ್ಣ (1977) ಮುಂತಾದವುಗಳಲ್ಲದೆ ಮುತ್ತೈದೆ, ದೇವರ ಕೂಸು, ಮೌನಗೌರಿ ಬೆವರಿನಬೆಲೆ, ಮಂಗಳಾಕ್ಷತೆ,  ವಸಂತಲಕ್ಷ್ಮಿ ಮುಂತಾದ ಕಾದಂಬರಿಗಳು ರಜತ ಪರದೆಯನ್ನೇರಿದವು. ‘ಸನಾದಿ ಅಪ್ಪಣ್ಣ’ ಚಿತ್ರವಂತೂ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ವಾದನ, ರಾಜ್ ಕುಮಾರ್ ಅವರ ಪ್ರಬುದ್ಧ ಅಭಿನಯ, ಜಯಪ್ರದಾ ಅವರ ಮನಮೋಹಕ ನೃತ್ಯಪ್ರದರ್ಶನದಂತಹ ಶ್ರೇಷ್ಠ ಕಲಾ ಸಮ್ಮಿಲನಕ್ಕೆ ಒಂದು ವೇದಿಕೆಯನ್ನೇ ಸೃಷ್ಟಿಸಿತು.  ‘ಹಾಲುಂಡ ತವರು’ ಕಾದಂಬರಿ ವಿಷ್ಣುವರ್ಧನ್ ಅವರ ಉತ್ತಮ ಅಭಿನಯದ ಚಿತ್ರಗಳಲ್ಲಿ ಒಂದೆನಿಸಿದ್ದು,  ತನ್ನ ಕಥಾನಕ ಮೌಲ್ಯಗಳಿಂದ ಕನ್ನಡದ ಜನತೆಯ ಮನಸೂರೆಗೊಂಡಿತು. 

ಕನ್ನಡದಲ್ಲಿ ಗದ್ಯಸಾಹಿತ್ಯವನ್ನು ಬೆಳೆಸಿದ್ದಲ್ಲದೆ ಕನ್ನಡಿಗರಲ್ಲಿ ವಾಚನಾಭಿರುಚಿಯನ್ನು ಬೆಳೆಯುವಂತೆ ಮಾಡಿದ ಕೃಷ್ಣಮೂರ್ತಿ ಪುರಾಣಿಕರಿಗೆ ಸಂದ ಪ್ರಶಸ್ತಿ ಗೌರವಗಳೂ ಹಲವಾರು.  ಕೆ.ವಿ. ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ 1957ರಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ, ‘ಮಣ್ಣಿನ ಮಗಳು’ ಕಾದಂಬರಿಗೆ ಮೈಸೂರು ರಾಜ್ಯ ಸರಕಾರದ ಮೊದಲ ಬಹುಮಾನ, ಶ್ರೀ ತರಳಬಾಳು ಜಗದ್ಗುರುಗಳಿಂದ ‘ಕಾದಂಬರಿ ಶ್ರೀ’ ಬಿರುದು. ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಧಾರವಾಡದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ‘ಕಾದಂಬರಿ ಮತ್ತು ಚಲನಚಿತ್ರ’ ಗೋಷ್ಠಿಯ ಅಧ್ಯಕ್ಷತೆ, ಶೃಂಗೇರಿ ಜಗದ್ಗುರುಗಳಿಂದ ಶಾರದಾಂಬ ಚಿನ್ನದ ಪದಕ, ವಿಜಾಪುರ, ಸೊಲ್ಲಾಪುರ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂತಾದ ಪ್ರಶಸ್ತಿ ಗೌರವಗಳ ಜೊತೆಗೆ 1974ರಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಕಾದಂಬರಿ ದರ್ಶನ’. 

‘ಮುತ್ತೈದೆ’, ‘ಮಣ್ಣಿನ ಮಗಳು’, ‘ಧರ್ಮದೇವತೆ’, ‘ಕಣ್ಣು ತುಂಬಿದ ಕರುಣೆ’, ‘ವೇಷಧಾರಿ’, ‘ಮಂಗಳಾಕ್ಷತೆ’, ‘ಮಂದಾರ ಮಂದಾಕಿನಿ’, ‘ಗಂಧದ ಬಳ್ಳಿ’, ‘ಹಾಲುಂಡ ತವರು’, ‘ಬೆವರಿನ ಬೆಲೆ’, ‘ಹಿಮಗಿರಿಯ ಗೌರಿ’, ‘ಚಂದ್ರ ಚಂದ್ರಾನನೆ’, ‘ಕಾಂಚನ ಕಸ್ತೂರಿ’, ‘ದೇವರಕೂಸು’, ‘ಶಾಂತಿಸುಧಾ’, ‘ಬಯಲುಗಾಳಿ’, ‘ಹಬ್ಬಿದ ಬಳ್ಳಿ’, ‘ಸನಾದಿ ಅಪ್ಪಣ್ಣ’ ಮುಂತಾದವು ಪುರಾಣಿಕರ ಕೆಲವೊಂದು ಕಾದಂಬರಿಗಳು.    ‘ಬಾಳ ಕನಸು’, ‘ಜೀವನಾದ’ ಕವನ ಸಂಕಲನಗಳು.  ‘ಸೈರಂಧ್ರಿ’, ‘ಜಯಭೇರಿ’ ನಾಟಕಗಳು.  ‘ಸಾಹಿತ್ಯ ಪ್ರಬಂಧಗಳು’ ವಿಮರ್ಶಾ ಸಂಗ್ರಹ.  ‘ಬೆಳವಾಡಿ ಮಲ್ಲಮ್ಮ’, ‘ಅಳಿಯ ದೇವರ ಆಟ’ ಮಕ್ಕಳ ಕೃತಿಗಳು.  

ಮಧ್ಯಮವರ್ಗದ ಜನಸಾಮಾನ್ಯರ ದೈನಂದಿನ ಬದುಕಿನ ಚಿತ್ರಣವನ್ನೇ ತಮ್ಮ ಕಾದಂಬರಿಗಳ ಮೂಲ ದ್ರವ್ಯವಾಗಿಸಿಕೊಂಡು ಹಲವಾರು ಕಾದಂಬರಿಗಳನ್ನೂ ರಚಿಸಿ ಅ.ನ.ಕೃ.ರವರಂತೆ ಕನ್ನಡಿಗರಲ್ಲಿ ಓದುವ ಹವ್ಯಾಸವನ್ನೂ ಬೆಳೆಸಿದ ಪುರಾಣಿಕರು 1985ರ  ನವೆಂಬರ 13ರಂದು ಈ ಲೋಕವನ್ನಗಲಿದರು.  ಅವರು ನೀಡಿದ ಹಲವಾರು  ಸ್ಮರಣೀಯ ಕೃತಿಗಳಿಂದ ಕನ್ನಡ ಕಥಾಲೋಕದಲ್ಲಿ ಅಮರರಾಗಿದ್ದಾರೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


On the birth anniversary of our great novelist Krishnamurthi Puranika 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ