ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಳ್ಳಿಯ ಚೆಲುವೆಗೆ

 
ಹಳ್ಳಿಯ ಚೆಲುವೆಗೆ


ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ 

ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ 


ಬೆಳ್ಳಬೆಳ್ಳಗೆ ತೆಳ್ಳಗಿಹೆ ನೀನು

ಬೇಟೆಗಾರನ ಬಿಲ್ಲಿನಂತಿರುವೆ ನೀನು

ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು

ಪಾರಿವಾಳದ ಕಣ್ಗೆ ನೆರಳನಿತ್ತಿಹುದು

ನವಿಲೂರಿನೊಳಗೆಲ್ಲ....


ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು

ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು

ತುಂಬು ಹರೆಯದ ಹೆಣ್ಣೆ

ನೀನೊಲುಮೆಗೀಡು

ನಂಬಿ ನನ್ನನು ವರಿಸಿ ಸಂತಸದಿ ಬಾಳು

ನವಿಲೂರಿನೊಳಗೆಲ್ಲ....


ಹಗಲೆಲ್ಲ ದುಡಿಯುವೆನು ಕೆಸರ ಗದ್ದೆಯಲಿ

ಶ್ರಮವೆಲ್ಲ ಹೊನ್ನಹುದು ವರ್ಷದಂತ್ಯದಲಿ

ನಿನ್ನ ಹೊಟ್ಟೆಯ ತುಂಬ ಅನ್ನ ನೊರೆಹಾಲು

ನನ್ನ ನುಡಿಯನು ಕೇಳು; ನನ್ನೊಡನೆ ಬಾಳು

ನವಿಲೂರಿನೊಳಗೆಲ್ಲ....


ನಿನ್ನೊಲುಮೆ ತಾರೆಗಳ ಹರಡಿರುವ ಬಾನು 

ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ 

ಪ್ರೀತಿಯೊಂದನೆ ನಿನ್ನ ಕೇಳುವುದು ನಾನು 

ಮುಂದೆ ಹೋಗೆನ್ನದಿರು ನನ್ನ ಮನದರಸಿ 

ನವಿಲೂರಿನೊಳಗೆಲ್ಲ...


ರಚನೆ: ಕೆ.ಎಸ್.ನರಸಿಂಹಸ್ವಾಮಿ

Photo credits: Nimai Chandra Ghosh 


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ