ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿತಾರಾ ದೇವಿ


 ಸಿತಾರಾ ದೇವಿ


ಸಿತಾರಾ ದೇವಿ ಕಥಕ್ ನೃತ್ಯ ಸಾಮ್ರಾಜ್ಞಿ ಎಂದು ಪ್ರಸಿದ್ಧರಾಗಿದ್ದವರು. ಅವರ ಸಂಸ್ಮರಣಾ ದಿನವಿದು. 

ಸಿತಾರಾ ದೇವಿ 1920ರ ನವೆಂಬರ್ 8ರಂದು ಕೊಲ್ಕತ್ತಾದಲ್ಲಿ ಜನಿಸಿದರು.  ದೀಪಾವಳಿ ಹಬ್ಬದ ದಿನದಂದು ಜನಿಸಿದ ಹಿನ್ನೆಲೆಯಲ್ಲಿ ಇವರಿಗೆ ಧನಲಕ್ಷ್ಮಿ ಎಂದು ಹೆಸರಿಟ್ಟಿದ್ದರು. ತಂದೆ  ಸುಖದೇವ್ ಮಹಾರಾಜ್ ಸಂಸ್ಕೃತ ವಿದ್ವಾಂಸರಾಗಿದ್ದರು. ತಾಯಿ ಮರ್ತ್ಸ್ಯಕುಮಾರಿ. ತಂದೆ ವಾರಾಣಾಸಿ ಮೂಲದವರಾಗಿದ್ದು ಇವರಿಗೆ ನೃತ್ಯದ ಕಲೆ ರಕ್ತಗತವಾಗಿ ಬಂದಿತ್ತು. ಸಿತಾರಾ ದೇವಿಯವರಿಗೆ ಅವರ ತಂದೆಯೇ ಮೊದಲ ಗುರುವಾಗಿದ್ದರು. ಸಿತಾರಾ ದೇವಿ 16ನೇ ವಯಸ್ಸಿನಲ್ಲಿ ವೇದಿಕೆ ಮೇಲೆ ಕಥಕ್ ನೃತ್ಯ ಪ್ರದರ್ಶಿಸಿ ಕವಿ ರವೀಂದ್ರನಾಥ್ ಠಾಗೂರ್ ಅವರ ಮೆಚ್ಚುಗೆಗೆ ಪಾತ್ರರಾಗಿ,  ಅವರಿಂದ 'ನೃತ್ಯ ಸಾಮ್ರಾಜ್ಞಿ' ಬಿರುದು ಪಡೆದರು. ಮುಂದೆ ಸಿತಾರಾ ದೇವಿ ಅವರು 1967ರಲ್ಲಿ ಲಂಡನ್‌ನ ರಾಯಲ್ ಅಲ್ಬರ್ಟ್ ಹಾಲ್ ಹಾಗೂ ನ್ಯೂಯಾರ್ಕ್‌ನ ಕರ್ನೀಜ್ ಹಾಲ್ ಸೇರಿದಂತೆ ವಿದೇಶ ಮತ್ತು ಭಾರತ ದೇಶದ ಮೂಲೆ ಮೂಲೆಗಳಲ್ಲೂ ಕಥಕ್ ನೃತ್ಯ ಪ್ರದರ್ಶನ ನೀಡಿದ್ದರು. ತಮ್ಮದೇ ನೃತ್ಯ ಶೈಲಿ ಬಳಸಿ ಅನೇಕ ನೃತ್ಯಗಳನ್ನು ಸಂಯೋಜಿಸಿದ್ದರು. ಸಿತಾರಾ ದೇವಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಾಳಿದಾಸ ಸಮ್ಮಾನ್ ಮತ್ತು ನೃತ್ಯ ನಿಪುಣೆ ಪ್ರಶಸ್ತಿಗಳು ಸಂದಿದ್ದವು. ತಮಗೆ ನೀಡಲಾದ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ ಸೀತಾರ ದೇವಿ, ಭಾರತ ರತ್ನ ಪ್ರಶಸ್ತಿ ಹೊರತುಪಡಿಸಿ ಬೇರೆ ಯಾವುದೇ ಪ್ರಶಸ್ತಿ ನೀಡಿದರೂ ಅದನ್ನು ತಿರಸ್ಕರಿಸುತ್ತೇನೆ ಎಂದಿದ್ದರು. ಕೇವಲ ಕಥಕ್ ಅಲ್ಲದೆ, ಭರತನಾಟ್ಯ, ಪಾಶ್ಚಿಮಾತ್ಯ ನೃತ್ಯ, ರಷ್ಯನ್ ಬ್ಯಾಲೆಟ್ ನೃತಗಳಲ್ಲಿಯೂ ಪರಿಣತಿ ಹೊಂದಿದ್ದ ಸಿತಾರಾ ದೇವಿ, ಕಥಕ್ ನೃತ್ಯದ ಗುರುವಾಗಿ ಸೇವೆ ಸಲ್ಲಿಸಿದ್ದರು. ಅವರು ನಟಿಯರಾದ ಮಧುಬಾಲ, ರೇಖಾ, ಮಾಲಾ ಸಿನ್ಹಾ, ಕಾಜೋಲ್ ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರಿಗೆ ಕಥಕ್ ನೃತ್ಯ ಕಲಿಸಿದ ಕೀರ್ತಿವಂತರಾಗಿದ್ದರು.

95 ವರ್ಷ ಜೀವನ ನಡೆಸಿದ್ದ ಸಿತಾರಾದೇವಿ ಅವರು 2014ರ ನವೆಂಬರ್ 25ರಂದು ಈ ಲೋಕವನ್ನಗಲಿದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ