ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಾರಲ್ಸ್ ಬಾಬೇಜ್

 


ಚಾರಲ್ಸ್ ಬಾಬೇಜ್

ಚಾರಲ್ಸ್ ಬಾಬೇಜ್ ಇಂಗ್ಲಿಷ್ ಗಣಿತವಿದ. ಈತನನ್ನು ಆಧುನಿಕ ಗಣಕ ಯಂತ್ರಗಳ ಪಿತಾಮಹ ಎಂದು ಕರೆಯುವುದಿದೆ.

ಚಾರಲ್ಸ್ ಬಾಬೇಜ್ ನೈಋತ್ಯ ಇಂಗ್ಲೆಂಡಿನ ಡೆವೆನ್‍ಷೈರ್ ಕೌಂಟಿಯ ಟೈನ್‍ಮಾತ್ ಎಂಬಲ್ಲಿ 1792 ಡಿಸೆಂಬರ್ 26ರಂದು ಜನಿಸಿದ. ತಂದೆ ಬ್ಯಾಂಕರ್ ಆಗಿ ಕೆಲಸಮಾಡುತ್ತಿದ್ದರು. ಇದರಿಂದಾಗಿ ಬಾಬೇಜನಿಗೆ ಮುಂದೆ ಸಾಕಷ್ಟು ಪಿತ್ರಾರ್ಜಿತ ಹಣ ದೊರೆಯಿತು. ಹದಿನೆಂಟನೆಯ ವಯಸ್ಸಿನಲ್ಲಿ ಕೇಂಬ್ರಿಜನ್ನು ಸೇರಿ (1810) ವಿದ್ಯಾಭ್ಯಾಸ ಮುಂದುವರಿಸಿದ. ಇಂಗ್ಲೆಂಡಿನ ಖಗೋಳವಿಜ್ಞಾನಿ ಜಾನ್ ಫ್ರೆಡರಿಕ್ ವಿಲಿಯಮ್ ಹರ್ಷೆಲ್ (1792-1871) ಎಂಬವನೊಡಗೂಡಿ ಅನಲಿಟಿಕ್ ಸೊಸೈಟಿ ಎಂಬ ಸಂಘ ಸ್ಥಾಪಿಸಿದ (1815). ಈತ ಒಂದು ಕಾಲಕ್ಕೆ ಕೇಂಬ್ರಿಜಿನಲ್ಲಿ ಗಣಿತವಿಜ್ಞಾನ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದ. ಐರೋಪ್ಯ ರಾಷ್ಟ್ರಗಳಲ್ಲಿ ನಡೆದಿದ್ದ ಗಣಿತ ವಿಜ್ಞಾನ ಪ್ರವರ್ಧನೆಗಳ ಬಗ್ಗೆ ಇಂಗ್ಲೆಂಡಿನಲ್ಲೂ ಜಾಗೃತಿ ಮೂಡಿಸಲು ಮತ್ತು ಐಸಾಕ್ ನ್ಯೂಟನನ ಮರಣಾನಂತರ ಇಂಗ್ಲೆಂಡಿನಲ್ಲಿ ತಲೆದೋರಿದ್ದ ಉತ್ಸಾಹಭಂಗ ಪರಿಸ್ಥಿತಿಯನ್ನು ತೊಡೆದುಹಾಕಲು ಈ ಸಂಘದ ಸ್ಥಾಪನೆ ಆಗಿತ್ತು. ಇವನಿಗೆ 1816ರದಲ್ಲಿ ರಾಯಲ್ ಸೊಸೈಟಿಯ ಫೆಲೋ ಗೌರವ ಸಂದಾಯವಾಯಿತು. ಈತ ಸ್ಥಾಪಿಸಿದ ಸಂಘದಿಂದಾಗಿ ಮೋಬಿಯಸ್, ಲೊಬಾಚೆವಿಸ್ಕಿ, ಕ್ಯಾಂಟರ್ ಮೊದಲಾದ ಗಣಿತವಿದರು ಪೋಷಿಸಿ ಪಾಲಿಸಿಕೊಂಡು ಬಂದ ಗಣಿತ ಪ್ರಗತಿಗಳನ್ನು ಕುರಿತು ಪರಸ್ಪರ ಚರ್ಚಿಸಲು ಸಾಧ್ಯವಾಯಿತು.

ಉತ್ಪನ್ನಗಳನ್ನು ಕುರಿತ ಕಲನವಿಜ್ಞಾನದ ಬಗ್ಗೆ ಬಾಬೇಜ್ ಅಧ್ಯಯನ ನಡೆಸಿದ್ದ. ಗಣಿತಕೋಷ್ಟಕಗಳಲ್ಲಿದ್ದ ನ್ಯೂನತೆ ಮತ್ತು ಸ್ಖಾಲಿತ್ಯಗಳನ್ನು ಈತ ವಿವೇಚನೆ ನಡೆಸಿದ ಕಾರಣ ಮುಂದೆ ಗಣಕಯಂತ್ರವೊಂದರ ಉಪಜ್ಞೆಗೆ ಎಡೆಯಾಯಿತು. ಆದರೆ ಆ ಯಂತ್ರ ಮಾತ್ರ ಪೂರ್ಣವಾಗಲೇ ಇಲ್ಲ. ಈತ ಆಗಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ವಿಜ್ಞಾನದ ಅಧ್ಯಯನಕ್ಕಾಗಿ ಇದ್ದ ಅನನುಕೂಲ ಪರಿಸ್ಥಿತಿ ಕುರಿತು ಒಂದು ಪುಸ್ತಕ ಬರೆದ (1830). ಇದು ವಾದವಿವಾದಗಳಿಗೆ ಎಡೆಮಾಡಿಕೊಟ್ಟಿತು. ಅಂಚೆಪತ್ರವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರವಾನಿಸುವುದರಲ್ಲಿ ತಗಲುವ ಖರ್ಚು, ದೇಹದುಡಿಮೆ ಇತ್ಯಾದಿಗಳ ಬಗ್ಗೆ ತಿಳಿಸುವ ಅಪರೇಷನ್ಸ್ ರಿಸರ್ಚ್ (ಪರಿಕರ್ಮಗಳ ಸಂಶೋಧನೆ) ಎಂಬ ಗಣಿತಪ್ರಕಾರ ಕುರಿತ ಅಧ್ಯಯನ ನಡೆಸಿದ. ಮುಂದೆ ಇದರಿಂದ ಬ್ರಿಟಿಷ್ ಸರ್ಕಾರಕ್ಕೆ ದೇಶಾದ್ಯಂತ ಆಧುನಿಕ ಅಂಚೆ ವ್ಯವಸ್ಥೆ ಏರ್ಪಡಿಸುವುದು ಸಾಧ್ಯವಾಯಿತು. ಜೀವನಾಂಕನ ಕೋಷ್ಟಕ (ಆಕ್ಚ್ಯುಯರಿ ಟೇಬಲ್) ಮತ್ತು ವೇಗಮಾಪಕಗಳ ಬಗ್ಗೆಯೂ ಬಾಬೇಜ್ ಕೆಲಸಮಾಡಿದ. ರೇಲ್ವೆ ಎಂಜಿನ್ನಿನ ಮುಂಭಾಗಕ್ಕೆ ಅಳವಡಿಸುವ ಪಶುನಿವಾರಕ (ಕೌ ಕ್ಯಾಚರ್) ಸಲಕರಣೆಯನ್ನು ಉಪಜ್ಞಿಸಿದ. ನೇತ್ರದರ್ಶಕವನ್ನು 1847ರಲ್ಲಿ ಉಪಜ್ಞಿಸಿದ್ದನಾದರೂ ಅದು ಜನರ ಗಮನಕ್ಕೆ ಬರಲೇ ಇಲ್ಲ. ನಾಲ್ಕು ವರ್ಷಗಳ ಅನಂತರಜರ್ಮನಿಯ ವೈದ್ಯ ಹರ್ಮನ್ ಹೆಲ್ಮ್‍ಹೋಲ್ಟ್ಸ್‍ನಿಗೆ ಸಂದಾಯವಾಯಿತು.

ಗಣಕಯಂತ್ರಗಳ ಬಗ್ಗೆ ಪಾಸ್ಕಲ್, ಲೈಪ್‍ನಿಟ್ಸ್ ಮೊದಲಾದವರು ಮೊದಲೇ ಕೆಲಸಮಾಡಿದ್ದರೂ ಇನ್ನೂ ಕಠಿಣತರ ಯಂತ್ರಗಳ ಬಗ್ಗೆ ಬಾಬೇಜನ ಆಲೋಚನೆ ಹರಿದಿತ್ತು. ಇದಕ್ಕಾಗಿ ಹಣ ಹೂಡುವಂತೆ ಬಾಬೇಜ್ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿದ. ಹಣ ಒದಗಿಬಂತು. ಈತ ತನ್ನ ಕೆಲಸ ಮುಂದುವರಿಸಿದ. ಆದರೆ ಇವನ ಯೋಜನೆ ಇನ್ನೇನು ಮುಗಿಯುತ್ತದೆ ಎನ್ನುವ ಹೊತ್ತಿಗೆ ಮತ್ತೊಂದು ಕಠಿಣತಮ ಯೋಜನೆಯೊಂದನ್ನು ಮುಂದಿಟ್ಟ. ಹೀಗಾಗಿ ಹಿಂದಿನದೆಲ್ಲವನ್ನೂ ಕೈಬಿಡಬೇಕಾಗಿ ಬಂತು. ರಂಧ್ರಿತ ಕಾರ್ಡುಗಳ ಸಹಾಯದಿಂದ ಕೆಲಸ ಮಾಡಬಲ್ಲ ಗಣಕವೊಂದರ ರೂಪಣೆಯನ್ನು ಈತ ಮುಂದಿಟ್ಟದ್ದೂ ಉಂಟು. ಹೆಚ್ಚಿನ ಗಣಿತೀಯ ಪರಿಕರ್ಮಗಳಿಗೆ ಅಗತ್ಯವಾದ ಆಂಶಿಕಉತ್ತರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ರಂಧ್ರಿತ ಪತ್ರಗಳಲ್ಲಿ ಸಾಧ್ಯ ಇತ್ತು. ಇಂಥ ಪತ್ರಗಳಿಂದ ಮುಂದೆ ಫಲಿತಾಂಶ ಮುದ್ರಣಕ್ಕೂ ಅವಕಾಶ ಇರುವುದಿತ್ತು. ಆಧುನಿಕ ಗಣಕಕ್ಕೆ ಸಂಬಂಧಿಸಿದ ಹೆಚ್ಚಿನ ಮೂಲಭೂತ ತತ್ತ್ವಗಳ ಬಗ್ಗೆಯೂ ಬಾಬೇಜ್ ಚಿಂತಿಸಿದ್ದ. ಈತನ ಬಳಿ ಇದ್ದದ್ದು ಯಾಂತ್ರಿಕ ಸಲಕರಣೆಗಳು ಮಾತ್ರ. ಮುಂದೆ ಸರ್ಕಾರದಿಂದ ಆರ್ಥಿಕ ಸಹಾಯ ಬಾರದೆ ಕೆಲಸ ದುಸ್ತರವಾದಾಗ್ಯೂ ಸ್ವಂತ ಹಣದಿಂದಲೇ ಆ ಯಂತ್ರಗಳ ಬಗ್ಗೆ ಅಧ್ಯಯನ ಮತ್ತು ಪ್ರಯೋಗ ಮುಂದುವರಿಸಿದ. ತಾತ್ತ್ವಿಕ ಚಿಂತನೆ ಪ್ರಯೋಗಗಳು ಮುಂದುವರಿದಂತೆಲ್ಲ ಯಂತ್ರದ ಜಟಿಲತೆಯೂ ಹೆಚ್ಚಾಗತೊಡಗಿತು. ಈತ ರೂಪಿಸಿದ ಅಪೂರ್ಣ ಗಣಕವನ್ನು ಲಂಡನ್ನಿನ ಸೈನ್ಸ್ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಮುಂದೆ ಈತ ಕುದುರೆ ಜೂಜಿನ ಪಂದ್ಯಗಳಲ್ಲಿ ಭಾಗವಹಿಸುವ ಮೋಜನ್ನು ಬೆಳೆಸಿಕೊಂಡ ಕಾರಣ ತನ್ನ ಎಲ್ಲ ಹಣವನ್ನೂ ಕಳೆದುಕೊಳ್ಳಬೇಕಾಯಿತು. ಒಂದು ಶತಮಾನದ ಬಳಿಕ ಅಮೆರಿಕದ ಗಣಿತವಿದ ನಾರ್ಬರ್ಟ್ ವೀನರ್ (1894-1964) ಗಣಕದ ಹಿನ್ನಲೆಯ ಗಣಿತೀಯ ತತ್ತ್ವಗಳ ಬಗ್ಗೆ ಅಧ್ಯಯನ ನಡೆಸಿದ್ದರೂ ಅಮೆರಿಕದ ಎಂಜಿನಿಯರ್ ವನ್ನೇವರ್ ಬುಷ್ (1890) ಎಲೆಕ್ಟ್ರಾನಿಕ್ ವಿಧಾನಗಳಿಂದ ಉತ್ತಮ ಹಾಗೂ ನಾಜೂಕಿನ ಗಣಕಗಳನ್ನು ನಿರ್ಮಿಸಿದ್ದರೂ ಬಾಬೇಜನನ್ನೇ ಆಧುನಿಕ ಗಣಕ ಯಂತ್ರಗಳ ಪಿತಾಮಹ ಎಂದು ಕರೆಯುವುದಿದೆ.

ಬಾಬೇಜ್  1871 ಅಕ್ಟೋಬರ್ 18 ರಂದು ಲಂಡನ್ನಿನಲ್ಲಿ ನಿಧನನಾದ. 

ಮಾಹಿತಿ ಆಧಾರ: ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ

On the birth anniversary of mathematician Charles Babbage who introduced concept of digital programming


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ