ಸದ್ಯೋಜಾತ ಭಟ್ಟ
ಸದ್ಯೋಜಾತ ಭಟ್ಟ
ಇಂದು ನಮ್ಮ ನಡುವಿನ ವಿದ್ವಾಂಸರಾದ ಸದ್ಯೋಜಾತ ಭಟ್ಟರ ಜನ್ಮದಿನ. ಹೆಸರೇ ಸುಂದರ. ಸದ್ಯೋಜಾತ ಭಟ್ಟರು ತಮ್ಮ ಹೆಸರಿನಂತೆಯೇ ಮಹಾನ್ ಇಚ್ಛಾಶಕ್ತಿಯ ದ್ಯೋತಕರು. ಅವರ ಪ್ರಸಿದ್ಧ ಪುಸ್ತಕಗಳಲ್ಲಿನ 'ಕಾಲಯಾನ' ಎಂಬ ಶೀರ್ಷಿಕೆ ಅವರನ್ನು ಕುರಿತು ಇನ್ನಷ್ಟು ಹೇಳುತ್ತದೆ. ಕಾಲಗಳ ನಡುವೆ ನಮ್ಮನ್ನು ಸಂಚಲಿಸುವಂತೆ ಮಾಡುವ ಅಪೂರ್ವತೆ ಅವರ ಬರಹಗಳಲ್ಲಡಗಿದೆ.
ಫೇಸ್ಬುಕ್ ಅಂದರೆ ಮೂಗು ಮುರಿಯುವವರು ಮೊದಲು ನಮ್ಮ ಸದ್ಯೋಜಾತ ಭಟ್ಟರು ಅವರ ಫೇಸ್ಬುಕ್ ಅನ್ನು ಅಚ್ಚುಕಟ್ಟಾಗಿ ಬಾಳೆಲೆಯ ಮಾಡಿ ಅದರ ಮೇಲೆ ಪ್ರತಿನಿತ್ಯ ಬಡಿಸುತ್ತಿರುವ ಕಾಲಾತೀತ ಲೋಕದ ರಸಪಾಕವನ್ನು ಒಮ್ಮೆ ಸವಿಯಬೇಕು.
ಅಪಾರ ಆಸಕ್ತಿ, ಸಂಶೋಧನೆ, ಪರಿಶೀಲನ, ಅಧ್ಯಯನ ಇತ್ಯಾದಿ ಏನೇನೇನೋ ಭಟ್ಟರ ಬರಹಗಳ ಅಡುಗೆಯಲ್ಲಿದೆ. ಓದಿದರೆ ತಕ್ಷಣ ಗೊತ್ತಾಗುತ್ತದೆ, ಅವರು ಪಾಂಡಿತ್ಯವನ್ನು ಪ್ರದರ್ಶನಕ್ಕಿಡಲೋ, ಯಾರೋ ಪಂಡಿತ ಪಾಮರರನ್ನು ಮೆಚ್ಚಿಸಲೋ ಈ ಕೆಲಸವನ್ನು ಮಾಡುತ್ತಿಲ್ಲ ಎಂದು. ಅವರ ಬರಹಗಳಲ್ಲಿ ಎದ್ದು ಕಾಣುವುದು ಅವರ ಸರಳ ಸಜ್ಜನಿಕೆ. ಹುತ್ತಕಟ್ಟದೆ ಅವರ ಚಿತ್ತ ಕೆತ್ತಿರುವಂತದಲ್ಲ. ಅದರ ಹಿಂದೆ ಅಪಾರವಾದ ತಪಸ್ಸಿನಂತಹ ಪರಿಶ್ರಮವಿದೆ. ಈ ಲೋಕ ಯಾವುದನ್ನೋ ಕ್ಲಿಷ್ಟ ಅಂತ ಬದಿಗಿಟ್ಟಿದ್ದನ್ನು ಮತ್ತು ಪುರಾಣದ ಕಟ್ಟು ಕಥೆ ಎಂದು ಉಪೇಕ್ಷಿಸಿದ್ದನ್ನು ಇದರಲ್ಲೂ ಏನಾದರೂ ಇರಲೇಬೇಕು ಎಂದು ಹುಡುಕಿದವರು ಅವರು. ಅಂತೆಯೇ ಲೋಕ ಯಾವುದೋ ಕ್ರಿಮಿಯಂತ ವಸ್ತುವನ್ನು ವಿಸ್ತರಿಸಿ ದೊಡ್ಡದು ಎಂದು ಮಾಡಿರುವಂತವೆಲ್ಲವನ್ನೂ ಸ್ವಯಂ ಅರಿತುಕೊಂಡವರು. ಯಾವುದನ್ನೂ ಅವರು ನಕರಾತ್ಮಕವಾಗಿ ಅಳೆಯ ಹೋಗಿ ಅಸತ್ಯ ಎನ್ನುವ ಮನೋಭಾವದವರಲ್ಲ. ಬದಲಿಗೆ 'ನಾಸತ್ಯ - ನ ಅಸತ್ಯ' ಎಂದು ಅರಸಿ ಅರಗಿಸಿಕೊಂಡು ತಾವು ಕಂಡುಕೊಂಡ ಸತ್ಯವನ್ನು ಲೋಕದಲ್ಲಿನ ಓದುಗರಿಗೆ ಉಣಬಡಿಸುತ್ತಿದ್ದಾರೆ.
ಡಿಸೆಂಬರ್ 31 ಸದ್ಯೋಜಾತಾ ಭಟ್ಟರ ಜನ್ಮದಿನ. ಅವರು ಉಡುಪಿಯವರು. ಓದಿದ್ದು ಧಾರವಾಡ ಮೈಸೂರುಗಳಲ್ಲಿ. ಪ್ರಾಚೀನ ವಿವಿಧ ಮಾದರಿಯ ಬರಹಗಳನ್ನು ಅಭ್ಯಸಿಸಿ ಅವುಗಳ ಮೇಲೆ ಬೆಳಕು ಚೆಲ್ಲುವ ಪ್ಯಾಲಿಯೋಗ್ರಫಿ ಅವರ ಕ್ಷೇತ್ರ. ಆಳವಾದ ಸಂಸ್ಕೃತ, ಕನ್ನಡ ಮತ್ತಿತರ ಭಾಷಾ ಜ್ಞಾನ ಅವರಲ್ಲಿ ಹಾಸುಹೊಕ್ಕಾಗಿದೆ. ಹಲವು ಪ್ರಾಚೀನ ಭಾಷೆಗಳ ಅರಿವು ಖಂಡಿತ ಅವರಿಗಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
ವೇದ, ಪುರಾಣಗಳಿಂದ ಮೊದಲುಗೊಂಡು ಇಂದಿನ ತಲೆಮಾರಿನ ಬರಹಗಳ ಎಲ್ಲ ಶಾಖೆಗಳೂ ಅವರ ಜ್ಞಾನ ಪರಿಧಿಯ ಅಂಕಣದಲ್ಲಿ ನೃತ್ಯಶೋಭೆಯಂತೆ ಬೆಳಗುತ್ತಿವೆ.
ಸದ್ಯೋಜಾತ ಭಟ್ಟರು ಅವರ ಆಪ್ತ ಬಳಗದ ಆಶಯದ ಮೇರೆಗೆ ಇದುವರೆವಿಗೂ ಶಿಲೆಗಳಲ್ಲಡಗಿದ ಸತ್ಯ, ನಾಸತ್ಯ ಮತ್ತು ಕಾಲಯಾನ, ಮಿಹಿರಕುಲಿ, ಮಾಗಧೇಯ, ಜಿತ್ವರೀ ಎಂಬ ಕಾಶಿ ಮುಂತಾದ ಭವ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಸಹಾ ಅವರ ಬರಹಗಳು ಜ್ಞಾನಜ್ಯೋತಿಯನ್ನು ಬೆಳಗುತ್ತಿವೆ.
ಸದ್ಯೋಜಾತ ಭಟ್ಟರ ಬಗ್ಗೆ ಇನ್ನೂ ಹೆಚ್ಚು ಹೇಳಬೇಕು ಅಂತ ಆಶಯ. ಅದಕ್ಕೆ ಮುಂಚೆ ಅವರನ್ನು ಇನ್ನೂ ಸುದೀರ್ಘವಾಗಿ ಓದಬೇಕು, ಅವರೊಡನೆ ಭೇಟಿ ಆಗಿ ಅವರ ಸ್ನೇಹ ಪಾಂಡಿತ್ಯಗಳ ರಸದೌತಣವನ್ನು ನೇರ ಸವಿಯಬೇಕು. ಅದು ಬೇಗ ಕೂಡಿಬರಲಿ ಎಂದು ಆಶಿಸುತ್ತಾ ಅವರಿಗೆ ಆಪ್ತವಾಗಿ, ಪ್ರಣಾಮಗಳೊಂದಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸುತ್ತೇನೆ.
ಸದ್ಯೋಜಾತ ಭಟ್ ಸಾರ್, ತಮ್ಮಂತಹವರ ಮೇಲಿನ ತಂಗಾಳಿ ನಮ್ಮ ಮೇಲೂ ಹಾದು ಹೋಗುತ್ತಿದೆ ಎಂಬ ಧನ್ಯತೆ ನಮ್ಮದು 🌷🙏🌷
On the birth day of our great scholar Sadyojata Bhat Sir
ಕಾಮೆಂಟ್‌ಗಳು