ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ರಂಗನಾಥಾನಂದರು


 ಸ್ವಾಮಿ ರಂಗನಾಥಾನಂದರು


ಶ್ರೀರಾಮಕೃಷ್ಣ ಪರಮಹಂಸರು ಮತ್ತು ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಭಾರತೀಯತೆಯ ಪುನರುತ್ಥಾನಕ್ಕೆ ನೀಡಿದ ಕೊಡುಗೆ ವಿಶ್ವಮಾನ್ಯವಾದದ್ದು. ಇವರ ಪೀಳಿಗೆಯಲ್ಲಿಯೇ ಉದಯಿಸಿದವರು ಸ್ವಾಮಿ ರಂಗನಾಥಾನಂದರು.  ಇವರು ರಾಮಕೃಷ್ಣ ಮಠದ 13ನೇ ಅಧ್ಯಕ್ಷರಾಗಿದ್ದರು.  

ಸ್ವಾಮಿ ರಂಗನಾಥಾನಂದರ ಪೂರ್ವಾಶ್ರಮದ ಹೆಸರು ಶಂಕರನ್ ಕುಟ್ಟಿ.  ಶಂಕರನ್ ಕುಟ್ಟಿ ಕೇರಳದ ತ್ರಿಚೂರ್ ಬಳಿಯ ತ್ರಿಕ್ಕೂರು ಎಂಬ ಹಳ್ಳಿಯಲ್ಲಿ 1908ರ ಡಿಸೆಂಬರ್ 15ರಂದು ಜನಿಸಿದರು. ಚಿಕ್ಕಂದಿನಿಂದಲೇ  ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ಬೋಧನೆಗಳಿಂದ  ಆಕರ್ಷಿತರಾದ ಶಂಕರನ್ ಕುಟ್ಟಿ, 1926ರಲ್ಲಿ ಮೈಸೂರಿನ ರಾಮಕೃಷ್ಣ ಮಠದಲ್ಲಿ ಬ್ರಹ್ಮಚಾರಿಯಾಗಿ ಸೇರ್ಪಡೆಗೊಂಡರು.   ಮೈಸೂರಿನಲ್ಲಿ ಸ್ವಾಮಿ ಸಿದ್ಧೇಶ್ವರಾನಂದರ ಬಳಿ 9 ವರ್ಷ ಹಾಗೂ ಬೆಂಗಳೂರಿನಲ್ಲಿ 3 ವರ್ಷವಿದ್ದರು.  ಮುಂದೆ ಶಂಕರನ್ ಕುಟ್ಟಿ 1933ರಲ್ಲಿ ಸ್ವಾಮಿ ವಿವೇಕಾನಂದರ 70ನೇ ಜನ್ಮಜಯಂತಿ ಸಂದರ್ಭದಲ್ಲಿ, ಶ್ರೀ ರಾಮಕೃಷ್ಣರ ನೇರ ಶಿಷ್ಯರಾಗಿದ್ದ ಸ್ವಾಮಿ ಶಿವಾನಂದರಿಂದ  ಸನ್ಯಾಸ ದೀಕ್ಷೆ ಪಡೆದು, ಸ್ವಾಮಿ ರಂಗನಾಥಾನಂದರಾದರು.  

1939ರಿಂದ 1942ರ ಅವಧಿಯಲ್ಲಿ ಸ್ವಾಮಿ ರಂಗನಾಥಾನಂದರು ರಂಗೂನಿನಲ್ಲಿರುವ ರಾಮಕೃಷ್ಣ ಮಿಷನ್ನಿನ ಕಾರ್ಯದರ್ಶಿಗಳಾಗಿದ್ದರು. 1942ರಿಂದ 1948ರ ಅವಧಿಯಲ್ಲಿ  ಕರಾಚಿ ಆಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಂದಿನ ದಿನಗಳಲ್ಲಿ ಇವರ ಉಪನ್ಯಾಸಗಳಿಂದ  ತಾವು ಪ್ರೇರಣೆ ಪಡೆದಿದ್ದಾಗಿ  ಹಿರಿಯ ರಾಜಕಾರಣಿ ಲಾಲ್ ಕೃಷ್ಣ ಅದ್ವಾನಿ ಹೇಳಿದ್ದಾರೆ.  ‘ಇಸ್ಲಾಂ ಮತ್ತು ಮಹಮದ್ ಪೈಗಂಬರ್’  ಕುರಿತಾದ ಸ್ವಾಮಿ ರಂಗನಾಥನಂದರ  ಉಪನ್ಯಾಸವನ್ನು ಕೇಳಿದ ಮಹಮ್ಮದ್ ಅಲಿ ಜಿನ್ನಾ “ಒಬ್ಬ ಮುಸಲ್ಮಾನ ಹೇಗಿರಬೇಕು ಎಂದು ನನಗೆ ಈಗ ಮನವರಿಕೆಯಾಯಿತು” ಎಂದು ಉದ್ಘರಿಸಿದರಂತೆ.   ದೇಶದ ವಿಭಜನೆಯ ನಂತರದಲ್ಲಿ  ಕರಾಚಿಯಲ್ಲಿ ಆಶ್ರಮವನ್ನು ನಡೆಸುವುದು ಅಸಾಧ್ಯವಾದ ಪರಿಸ್ಥಿತಿಯಲ್ಲಿ ಸ್ವಾಮೀಜಿಯವರು ಭಾರತಕ್ಕೆ ಆಗಮಿಸಿದರು.

1949ರಿಂದ 1962ರವರೆಗೆ ಸ್ವಾಮಿ ರಂಗನಾಥಾನಂದರು ದೆಹಲಿಯ ರಾಮಕೃಷ್ಣ ಮಿಷನ್ನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 1962ರಿಂದ 1967ರವರೆಗೆ ಕೊಲ್ಕೊತ್ತಾದಲ್ಲಿ ರಾಮಕೃಷ್ಣ ಮಿಷನ್ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ಕಾರ್ಯದರ್ಶಿಗಳಾಗಿ, ಸ್ಕೂಲ್ ಆಫ್ ಹ್ಯೂಮಾನಿಸ್ಟಿಕ್ಸ್ ಅಂಡ್ ಕಲ್ಚರಲ್ ಸ್ಟಡೀಸ್ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ರಾಮಕೃಷ್ಣ ಮಿಷನ್ನಿನ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಸ್ವಾಮಿ ರಂಗನಾಥಾನಂದರು 1973ರಲ್ಲಿ ಹೈದರಾಬಾದಿನ ರಾಮಕೃಷ್ಣಾಶ್ರಮದ ಅಧ್ಯಕ್ಷರಾದರು.  

1988ರ ವರ್ಷದಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್ನಿನ  ಉಪಾಧ್ಯಕ್ಷರಾಗಿ ಆಯ್ಕೆಯಾದ ಸ್ವಾಮಿ ರಂಗನಾಥಾನಂದರು 1998ರ ವರ್ಷದಲ್ಲಿ ಈ ಸಂಸ್ಥೆಗಳ ಅಧ್ಯಕ್ಷರಾಗಿ ಆಯ್ಕೆಗೊಂಡರು.   ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಅಡುಗೆಯವರಾಗಿದ್ದ ಸ್ವಾಮೀಜಿಯವರು ಉನ್ನತ ಪದವಿಯನ್ನು ಪಡೆದವರೇನಲ್ಲ. ಹಾಗಿದ್ದೂ ಅವರು ಅನೇಕ ಭಾಷೆಗಳನ್ನು ಕಲಿತರು. ವಿದೇಶಗಳಲ್ಲಿ ವೇದಾಂತದ ಪ್ರವಚನ ನೀಡುವ ಮಟ್ಟಕ್ಕೆ ಬೆಳೆದರು. ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾದರು. ಹಲವರಿಗೆ ಸ್ಫೂರ್ತಿಯಾದರು. 1950ರ ದಶಕದ ಮಧ್ಯದ ವೇಳೆಗಾಗಲೇ ಭಾರತದಲ್ಲೆಲ್ಲ  ‘ಬದುಕಿನಲ್ಲಿ ವೇದಾಂತದ ಅನುಷ್ಟಾನ’ದ ಕುರಿತಾಗಿನ ಉಪನ್ಯಾಸಗಳಿಂದ ಸ್ವಾಮಿ ರಂಗನಾಥರ ಹೆಸರು ಎಲ್ಲೆಡೆ ಪ್ರಖ್ಯಾತಿ ಗಳಿಸಿತ್ತು. 

ಸ್ವಾಮಿ ರಂಗನಾಥಾನಂದರು 1958ರಿಂದ 1972ರ ವರೆಗೆ ಐವತ್ತಕ್ಕೂ ಹೆಚ್ಚು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಾಗೂ 1972ರಿಂದ 1986ರ ಅವಧಿಯಲ್ಲಿ ಅಮೆರಿಕ, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಲ್ಲಿ ಸಂಚರಿಸಿ ಶ್ರೀ ರಾಮಕೃಷ್ಣರು ಮತ್ತು ಸ್ವಾಮಿ  ವಿವೇಕಾನಂದರು ವಿವರಿಸಿದ ವೇದಾಂತದ ಸಂದೇಶವನ್ನು ಪ್ರಸಾರ ಮಾಡಿದರು. ಇರಾನ್ ಮತ್ತು ಅಂದಿನ ಅವಿಭಾಜ್ಯ ಸೋವಿಯನ್ ಯೂನಿಯನ್ ದೇಶಗಳಲ್ಲಿ ಸಹಾ ಅವರ ಪ್ರವಚನಗಳು ನಡೆದವು.  ವೇದಾಂತದ ತತ್ವಗಳು  ಮತ್ತು ಪಾಶ್ಚಿಮಾತ್ಯ ವಿಜ್ಞಾನಗಳಲ್ಲಿನ ಅಪೂರ್ವ ಬೆಸುಗೆಗಳ  ಮೆರುಗುಗಳಿಂದ ಸಮ್ಮಿಲನಗೊಂಡಿರುತ್ತಿದ್ದ ಅವರ ಉಪನ್ಯಾಸಗಳು ವಿಶ್ವಮಾನ್ಯಗೊಂಡಿದ್ದವು.  

ಸ್ವಾಮಿ ರಂಗನಾಥಾನಂದರಿಗೆ  1997ರ ವರ್ಷದಲ್ಲಿ ಸಂದ ಪ್ರಪ್ರಥಮ  ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿಯೇ ಅಲ್ಲದೆ 1999ರ ವರ್ಷದಲ್ಲಿ ಗಾಂಧೀ ಪುರಸ್ಕಾರ ಪ್ರಶಸ್ತಿ ಅರ್ಪಿಸಲಾಯಿತು.  2000ದ ವರ್ಷದಲ್ಲಿ ಅವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿದಾಗ ಅದಕ್ಕೆ ತಮ್ಮನ್ನು ಒಬ್ಬ ವ್ಯಕ್ತಿಯಾಗಿ ಪರಿಗಣಿಸಿದ್ದು ಶ್ರೀರಾಮಕೃಷ್ಣ ಮಿಷನ್ ಅನ್ನು ಪರಿಗಣಿಸಿದಿರುವುದರಿಂದ ಅದನ್ನು ನಿರಾಕರಿಸಿದರು. 

ಸ್ವಾಮಿ ರಂಗನಾಥಾನಂದರಿಗೆ ನೀಡಲಾದ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ  ಸನ್ಮಾನ ಪತ್ರದಲ್ಲಿ ಹೀಗೆ ಹೇಳಲಾಗಿದೆ: “ತಮ್ಮ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪ್ರಪಂಚದ ಎಲ್ಲೆಡೆಗಳಲ್ಲಿ, ಅದನ್ನು  ಬಯಸಿದ ಎಲ್ಲ ಬಗೆಯ ಜನರಿಗೂ ನೀಡುವುದರೊಂದಿಗೆ ಮಾನವ ಸೇವೆಯ ಕ್ಷೇತ್ರದಲ್ಲಿ ಸ್ವಾಮಿ ರಂಗನಾಥಾನಂದರು ಮಹತ್ಸಾಧನೆಯನ್ನು ಮಾಡಿದ್ದಾರೆ. 1943ರಲ್ಲಿ ಬಂಗಾಳದ ಕ್ಷಾಮವಿರಬಹುದು, 1947ರಲ್ಲಿ ಭಾರತ ವಿಭಜನೆಯ ನಂತರ ಜನಗಳು ಪಟ್ಟ ಕಷ್ಟವಿರಬಹುದು, ಅಥವಾ ದೇಶದ ನಾನಾ ಭಾಗಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡ ಪ್ರವಾಹಗಳಿರಬಹುದು, ಸಂತ್ರಸ್ತರ ಪರಿಹಾರ ಪುನರ್ವಸತಿಗಳನ್ನು ಸಂಘಟಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. ಉಪನ್ಯಾಸಗಳ ಮೂಲಕ ವೇದಾಂತದ ಅಡಿಪಾಯವಾಗಿರುವ ಸಮನ್ವಯ ತತ್ವ, ಭಾರತದಲ್ಲಿ ಹಾಸುಹೊಕ್ಕಾಗಿರುವ ಪರಂಪರೆ-ಸಂಸ್ಕೃತಿಗಳು ಮತ್ತು ಮಾನವ ವ್ಯಾಪಾರಗಳಿಗೆ ಸಂಬಂಧಿಸಿದಂತೆ ವಿಜ್ಞಾನ- ತಂತ್ರಜ್ಞಾನಗಳ ಹೊಸ ಸಂದರ್ಭದಲ್ಲಿ ಅವುಗಳ ಪಾತ್ರ ಇವುಗಳ ಕುರಿತಾಗಿ ಸ್ವಾಮಿ ರಂಗನಾಥಾನಂದರು ಜನರನ್ನು ಸ್ಫೂರ್ತಿಗೊಳಿಸುತ್ತಿದ್ದಾರೆ.”  ಈ ಮಾತುಗಳು ಸ್ವಾಮಿ ರಂಗನಾಥಾನಂದರ ವ್ಯಕ್ತಿತ್ವವನ್ನು ವಿವರಿಸುತ್ತವೆ.

ಸ್ವಾಮಿ ರಂಗನಾಥಾನಂದರು  ಮಹಾನ್ ವಿದ್ವಾಂಸರೆಂದೂ ಮತ್ತು  ಶ್ರೇಷ್ಠ ಶಿಕ್ಷಕರೆಂದೂ  ಪ್ರಸಿದ್ಧರಾಗಿದ್ದಾರೆ. ಸುಮಾರು 50 ಗ್ರಂಥಗಳನ್ನು ಅವರು ರಚಿಸಿದ್ದಾರೆ. ಅವುಗಳಲ್ಲಿ 29 ಗ್ರಂಥಗಳನ್ನು ಭಾರತೀಯ ವಿದ್ಯಾ ಭವನವು ಪ್ರಕಟಿಸಿದೆ.   ಅವರ ಪ್ರಸಿದ್ಧ ಪುಸ್ತಕಗಳಲ್ಲಿ ‘ಬದಲಾಗುತ್ತಿರುವ ಸಮಾಜಕ್ಕೆ ಶಾಶ್ವತ ಮೌಲ್ಯಗಳು’ (Eternal values for a changing society), ಭಗವದ್ಗೀತೆ ಮತ್ತು ಉಪನಿಷತ್ತುಗಳ ಕುರಿತಾದ ವ್ಯಾಖ್ಯಾನಗಳು, ಸಂದೇಶಗಳು ಮುಂತಾದವು ಸೇರಿವೆ.  ಅತ್ಯಂತ ಶ್ರೇಷ್ಠ ಭಾಷಣಕಾರರೆಂದು ಕೀರ್ತಿಪಡೆದಿದ್ದ ಸ್ವಾಮಿ ರಂಗನಾಥಾನಂದರು  ತಮ್ಮ ಭಾಷಣಗಳಲ್ಲಿ  ಸರ್ವಸಮನ್ವಯ ದೃಷ್ಟಿಯುಳ್ಳ ಧರ್ಮ ಮತ್ತು ವೇದಾಂತದ ಆಚರಣೆಯನ್ನು ಪ್ರಸ್ತಾಪಿಸುತ್ತಿದ್ದ ರೀತಿ  ವಿಶ್ವದೆಲ್ಲೆಡೆ ಪ್ರಖ್ಯಾತಿ ಗಳಿಸಿತ್ತು.  ಸ್ವಾಮಿ  ರಂಗನಾಥರು ಮೈಸೂರು, ಬೆಂಗಳೂರಿನಲ್ಲಿದ್ದ  ಕಾರಾಗ್ರಹಗಳಲ್ಲಿನ ಖೈದಿಗಳಿಗೆ ಸನ್ನಡತೆಯ ಕುರಿತಾದ  ಕಾರ್ಯಾಗಾರಗಳನ್ನು ನಡೆಸಿದ್ದರಲ್ಲದೆ ದೆಹಲಿಯಲ್ಲಿನ  ಆಸ್ಪತ್ರೆಗಳಲ್ಲೂ ಸಮಾಜ ಸೇವೆಯನ್ನು ಮಾಡಿ ಕುಷ್ಟರೋಗಿಗಳ ಶುಶ್ರೂಷೆಗಳಂತಹ ಕಾರ್ಯಗಳಲ್ಲೂ  ಭಾಗಿಯಾಗಿದ್ದರು.  

ತಮ್ಮ ಅಂತಿಮ ವರ್ಷಗಳನ್ನು ಬೇಲೂರಿನ ರಾಮಕೃಷ್ಣ ಮಿಷನ್ನಿನ ಕೇಂದ್ರದಲ್ಲಿ ಕಳೆದ ಸ್ವಾಮಿ ರಂಗನಾಥಾನಂದರು ಹೃದಯಾಘಾತಕ್ಕೊಳಗಾಗಿ 2005ರ ಏಪ್ರಿಲ್ 25ರಂದು ಕೊಲ್ಕೊತ್ತಾದ ಆಸ್ಪತ್ರೆಯೊಂದರಲ್ಲಿ  ನಿಧನರಾದರು. ಆಗ ಅವರಿಗೆ 96 ವರ್ಷ ವಯಸ್ಸಾಗಿತ್ತು. 

ಭಾರತೀಯ ಅಂಚೆ ಇಲಾಖೆಯು ಸ್ವಾಮಿ ರಂಗನಾಥಾನಂದರ ಜನ್ಮಶತಾಬ್ಧಿ ವರ್ಷವಾದ 2008ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಗೌರವ ಸಲ್ಲಿಸಿತು. ಈ ಸಂದರ್ಭದಲ್ಲಿ  ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು  ಸ್ವಾಮಿ ವಿವೇಕಾನಂದ ಮತ್ತು ಸ್ವಾಮಿ ರಂಗನಾಥಾನಂದ ಅವರುಗಳನ್ನು “ವೈಜ್ಞಾನಿಕ ದೃಷ್ಟಿ ಮತ್ತು ಆಧುನಿಕ  ಮನೋಭಾವವುಳ್ಳ ಶ್ರೇಷ್ಠ ನಾಯಕರು” ಎಂದು ಸ್ಮರಿಸಿದರು.

ಸ್ವಾಮಿ ರಂಗನಾಥಾನಂದರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಸ್ವಾಮಿ ರಂಗನಾಥಾನಂದ ಜನ್ಮಶತಮಾನೋತ್ಸವ ಸಮಿತಿಯು 'ಮಾಂಕ್ ವಿಥೌಟ್ ಫ್ರಾಂಟಿಯರ್ಸ್‌' ಎಂಬ ಗ್ರಂಥವನ್ನು ಹೊರತಂದಿತ್ತು. ಅದರಲ್ಲಿ ಸ್ವಾಮೀಜಿಯವರ ಬಹುಮುಖ ವ್ಯಕ್ತಿತ್ವವನ್ನು ಕಟ್ಟಿಕೊಡುವ 135 ಲೇಖನಗಳಿವೆ.  ಇದೇ ಕೃತಿ ಕನ್ನಡದಲ್ಲಿ 'ಸರಹದ್ದುಗಳಿಲ್ಲದ ಸಂತ' ಎಂದು ಮೂಡಿಬಂದಿದೆ.  

On the birth anniversary of Swami Ranganathananda who was known for great lectures on Vedanta and science 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ