ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುದ್ರಾಮಂಜೂಷ


 ಕೆಂಪು ನಾರಾಯಣನ ಮುದ್ರಾಮಂಜೂಷ


ಕೆಂಪು ನಾರಾಯಣನು 'ಮುದ್ರಾಮಂಜೂಷ' ಎಂಬ ಪ್ರಸಿದ್ಧ ಕನ್ನಡ ಗದ್ಯ ಗ್ರಂಥವನ್ನು ರಚಿಸಿದವನು. ಈತ ಮೈಸೂರು ಸಂಸ್ಥಾನವನ್ನು ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ (1794-1868) ಆಶ್ರಿತನಾಗಿದ್ದ. 1823ರಲ್ಲಿ ಈ ಗ್ರಂಥ ರಚಿತವಾಯಿತೆಂದು ಕವಿಯ ಮಾತುಗಳಿಂದ ತಿಳಿದುಬರುತ್ತದೆ.

ಮಗಧ ದೇಶದ ಅರಸರಾದ ನವನಂದರನ್ನು, ಅವರ ದಾಯಾದಿಯಾದ ಚಂದ್ರಗುಪ್ತ ಮೌರ್ಯ ದಂಡನೀತಿಶಾಸ್ತ್ರದಲ್ಲಿ ಪ್ರವೀಣನಾದ ಚಾಣಕ್ಯನೆಂಬ ಬ್ರಾಹ್ಮಣನ ಸಹಾಯದಿಂದ ಸಂಹರಿಸಿ, ಪಾಟಲೀಪುತ್ರದ ಸಿಂಹಾಸನವನ್ನು ಏರಿದ ಐತಿಹಾಸಿಕ ವೃತ್ತಾಂತವೇ ಮುದ್ರಾಮಂಜೂಷದ ಕಥಾವಸ್ತು. ಪುರಾಣಗಳಲ್ಲಿ ಸಂಕ್ಷೇಪವಾಗಿ ನಿರೂಪಿತವಾದ ಕಥೆಯನ್ನು ತಾನು ವಿಸ್ತಾರವಾಗಿ ಹೇಳುತ್ತಿರುವೆನೆಂದು ಗ್ರಂಥದ ಅವತರಣಿಕೆಯಲ್ಲಿ ಕವಿ ಹೇಳಿಕೊಂಡಿದ್ದರೂ ಸಂಸ್ಕೃತ ಸಾಹಿತ್ಯದಲ್ಲಿ ಪ್ರಖ್ಯಾತವಾಗಿರುವ ವಿಶಾಖದತ್ತನ ಮುದ್ರಾರಾಕ್ಷಸ ನಾಟಕವೇ ಈ ಕನ್ನಡ ಕೃತಿಗೆ ಮೂಲಾಧಾರ. ಈ ಮೂಲಕ ಆಧುನಿಕ ಕಾದಂಬರಿಯಂತೆ ರಮ್ಯವಾದ ಒಂದು ಗದ್ಯಕಥೆಯನ್ನು ಕನ್ನಡಿಗರಿಗೆ ಒದಗಿಸಿ ಕೊಟ್ಟಿದ್ದಾನೆ. 

ಕಥೆ ಹೇಳುವುದೇ ಕವಿಯ ಪರಮೋದ್ದೇಶವಲ್ಲ. ಕಥೆಯ ಜೊತೆಗೆ ರಾಜರಿಗೆ ಮಂತ್ರಿಗಳಿಗೆ ರಾಜನೀತಿ ದೊರಕಬೇಕೆಂಬ ಆಶಯದಿಂದ, ಕವಿ ಬಾಣನ ಕಾದಂಬರಿ, ಕಾಮಂದಕ ನೀತಿಸಾರ, ಭರ್ತೃಹರಿಯ ಶತಕತ್ರಯ - ಇದೇ ಮೊದಲಾದ ಗ್ರಂಥಗಳಿಂದ ತನ್ನ ಕೃತಿಗೆ ಬೇಕಾದ ರಾಜನೀತಿಯನ್ನು ಸಂಗ್ರಹಿಸಿದ್ದರೂ ಶುಕ್ರನೀತಿ ಗ್ರಂಥಕ್ಕೇ ವಿಶೇಷವಾಗಿ ಋಣಿಯಾಗಿದ್ದಾನೆ.

ಮಗಧದೇಶದ ದೊರೆ ಸರ್ವಾರ್ಥಸಿದ್ಧಿ. ಅವನ ಪಟ್ಟದ ರಾಣಿಯ ಮಕ್ಕಳಾದ ನವನಂದರು ದಾಯಾದಮತ್ಸರದಿಂದ, ತಂದೆಯ ಬಂಗಾರದ ಹೆಂಡತಿಯ ಮಗನಾದ ಮೌರ್ಯನನ್ನೂ ಅವನ 99ಜನ ಮಕ್ಕಳನ್ನೂ ನೆಲಮಾಳಿಗೆಯಲ್ಲಿ ಕೂಡಿ ಕೊಂದರು. ದೈವಾನುಗ್ರಹದಿಂದ ಬದುಕಿದ ಮೌರ್ಯಪುತ್ರ ಚಂದ್ರಗುಪ್ತ ಚಾಣಕ್ಯನೆಂಬ ಬ್ರಾಹ್ಮಣನ ಸಹಾಯದಿಂದ ಪರ್ವತರಾಜನ ಮನವೊಲಿಸಿ ನಂದರ ಮೇಲೆ ದಂಡೆತ್ತಿ ಬಂದ. ತನ್ನ ಮೇಲೆ ದಂಡೆತ್ತಿಬರುತ್ತಿದ್ದ ಲಂಪಾಕಾಧಿಪತಿಯನ್ನು ಕಾಮರೂಪಾಧಿಪತಿಗೆ ಬರೆದ ಕೇವಲ ಒಂದು ಪತ್ರದಿಂದ ನಿಗ್ರಹಿಸಿದುದರಿಂದಲೂ ಅರ್ಧರಾಜ್ಯದ ಆಶೆ ತೋರಿದುದರಿಂದಲೂ ಪರ್ವತರಾಜನಿಗೆ ಚಾಣಕ್ಯನಲ್ಲಿ ನಂಬಿಕೆ ಮೂಡಿತು. ಚಾಣಕ್ಯನ ಸ್ನೇಹಿತನಾದ ಇಂದುಶರ್ಮ ಕ್ಷಪಣಕನ ವೇಷದಿಂದ, ಅವನ ಶಿಷ್ಯರು ಇತರ ವೇಷಗಳಿಂದ ರಾಕ್ಷಸನನ್ನು ಆಶ್ರಯಿಸಿ ಅವನ ರಹಸ್ಯವನ್ನು ಭೇದಿಸಿದರು. ಇಂದುಶರ್ಮನ ಮಾತಿನಂತೆ ರಾಕ್ಷಸ ಗಂಗಾ ಸರಯೂ ನದಿಗಳ ಸಂಗಮದಲ್ಲಿ ಶತ್ರುಪಲಾಯನ ಜಪಶಾಲೆಯನ್ನು ನಿರ್ಮಿಸಿ ಮಾಸೋಪವಾಸಿಯೆಂಬುವವನನ್ನು ಅದರ ಮುಖ್ಯಸ್ಥನನ್ನಾಗಿ ಮಾಡಿದ. ಈ ಮಾಸೋಪವಾಸಿ ಚಾಣಕ್ಯನ ಶಿಷ್ಯನೆಂಬ ವಿಷಯ ರಾಕ್ಷಸನಿಗೆ ತಿಳಿಯದು. ನಂದರಿಗೂ ಪರ್ವತರಾಜನಿಗೂ ನಡೆದ ಯುದ್ಧದಲ್ಲಿ ರಾಕ್ಷಸನ ಪರಾಕ್ರಮದಿಂದ ನಂದರಿಗೆ ಜಯವಾಯಿತು. ರಾಕ್ಷಸ ಯುದ್ಧದ ಆಯಾಸದಿಂದ ನಿದ್ರೆಯಲ್ಲಿದ್ದಾಗ, ಮಾಸೋಪವಾಸಿ ನಂದರನ್ನು ಜಪಶಾಲೆಯ ಬಳಿಗೆ ಬರಮಾಡಿಕೊಂಡ. ನಂದರು ಜಪಶಾಲೆಗೆ ಬಂದದ್ದು ಪೂರ್ಣಾಹುತಿಯ ದರ್ಶನಕ್ಕೆ. ಆಗ ಅವರಿಗೆ ಮೈಗಾವಲಿರಲಿಲ್ಲ. ಅಲ್ಲದೆ ಮಲಯಕೇತು ಸೆರೆಸಿಕ್ಕಿರುವನೆಂಬ ದೂತವಾರ್ತೆಯನ್ನು ಅವರು ನಂಬಿದರು. ಸೆರೆ ಸಿಕ್ಕಿದ್ದವ ಕಪಟ ಮಲಯಕೇತು. ಹೀಗಾಗಿ ಶತ್ರುಗಳಿಂದ ಸುತ್ತುವರಿಯಲ್ಪಟ್ಟ ನಂದರು ಏಕಾಂಗಿಗಳಾದರೂ ವೀರರಂತೆ ಹೋರಾಡಿ ಮಡಿದರು. ಈ ವಿಷಯವನ್ನು ತಿಳಿದು, ನೊಂದ ರಾಕ್ಷಸ ಸ್ವಾಮಿಭಕ್ತಿಯನ್ನು ಮೆರೆಯಲು ಸಾಯದೆ ಉಳಿದುಕೊಂಡ.
ಸ್ವಾಮಿಭಕ್ತನಾದ ರಾಕ್ಷಸ ಚಂದ್ರಗುಪ್ತನನ್ನು ಕೊಲ್ಲಲು ಮಾಡಿದ ಪ್ರಯತ್ನಗಳು ಚಾಣಕ್ಯನ ಬುದ್ಧಿಶಕ್ತಿಯಿಂದ ವಿಫಲವಾದುವು. ರಾಕ್ಷಸ ಕ್ಷಪಣಕನ ಮೂಲಕ ಕಳುಹಿಸಿದ ವಿಷಕನ್ಯೆಯಿಂದ ಪರ್ವತರಾಜ ಸತ್ತನಾಗಿ ಅವನಿಗೆ ಮಾತಿನಂತೆ ಕೊಡಬೇಕಾದ ಅರ್ಧ ರಾಜ್ಯ ಚಂದ್ರಗುಪ್ತನಿಗೇ ಉಳಿಯಿತು. ಸರ್ವಾರ್ಥಸಿದ್ಧಿ ಆಶ್ರಮದಲ್ಲಿ ಮೃತನಾದ. 

ಚಾಣಕ್ಯ ತಮ್ಮ ಮೇಲೆ ಮುನಿದಿರುವನೆಂದು ಸುಳ್ಳು ನಂಬಿಕೆ ಹುಟ್ಟಿಸಿ ಸೇನಾಪತಿ ಭಾಗುರಾಯಣಾದಿಗಳು ಮಲಯಕೇತುವನ್ನು ರಾಜಧಾನಿಗೆ ಕರೆದುಕೊಂಡು ಹೋಗಿ ಅವನಲ್ಲಿ ಆಶ್ರಯಪಡೆದರು. ಅವನ ಜೊತೆಗೆ ಭದ್ರಭಟಾದಿಗಳೂ ಬಂದು ಸೇರಿದರು. ವೈದ್ಯ, ಶಿಲ್ಪಿ ದಾರುವರ್ಮ, ಮಾವಟಿಕ ಬರ್ಬರಕ, ಶಯನಾಗಾರದ ಪ್ರಮೋದಕ-ಇವರ ಮೂಲಕ ಚಂದ್ರಗುಪ್ತನನ್ನು ಕೊಲ್ಲಬೇಕೆಂದಿದ್ದ ರಾಕ್ಷಸನ ಉಪಾಯಗಳು ಅವನ ಕಡೆಯವರಿಗೇ ಮೃತ್ಯುವಾಗಿ ಪರಿಣಮಿಸಿದುವು. ಕೊನೆಯದಾಗಿ ಸೇಡನ್ನು ತೀರಿಸಿಕೊಳ್ಳಲು ರಾಕ್ಷಸ ಮಲಯಕೇತುವನ್ನು ಆಶ್ರಯಿಸಿ ಅವನಲ್ಲಿ ಸರ್ವಾಧಿಕಾರವನ್ನು ಪಡೆದ. ಇತ್ತ ಚಾಣಕ್ಯ ಪರ್ವತರಾಜನ ಸಾವಿಗೆ ಕಾರಣನಾದನೆಂಬ ನೆವದಿಂದ ಕ್ಷಪಣಕನನ್ನು ಪಟ್ಟಣದಿಂದ ಹೊರಡಿಸಿದ; ಶಕಟದಾಸನನ್ನು ಶೂಲಕ್ಕೆ ಏರಿಸಿದ; ರಾಕ್ಷಸನ ಹೆಂಡತಿ ಮಕ್ಕಳಿಗೆ ಆಶ್ರಯ ಕೊಟ್ಟಿರುವನೆಂದು ಚಂದನದಾಸನ್ನು ಸೆರೆಯಲ್ಲಿರಿಸಿದ. ಸೂಲಗಿತ್ತಿಯಿಂದ ರಾಕ್ಷಸನ ಮುದ್ರೆಯುಂಗರವನ್ನು ತರಿಸಿಕೊಂಡು ಶಕಟದಾಸನಿಂದ ತನ್ನ ಲೇಖನವನ್ನು ಬರೆಯಿಸಿ ಅದಕ್ಕೆ ರಾಕ್ಷಸನ ಮುದ್ರೆಯೊತ್ತಿ, ಅದನ್ನು ಸಿದ್ಧಾರ್ಥಕನ ವಶಕ್ಕೆ ಕೊಟ್ಟು ಅವನಿಂದ ಶೂಲಕ್ಕೇರಲಿದ್ದ ಶಕಟದಾಸನನ್ನು ಬಿಡಿಸಿ ಅವರಿಬ್ಬರನ್ನೂ ರಾಕ್ಷಸನ ಬಳಿಗೆ ಕಳುಹಿಸಿದ. 

ಇಷ್ಟೇ ಅಲ್ಲದೆ ಚಾಣಕ್ಯ ಚಂದ್ರಗುಪ್ತನೊಡನೆ ಕಪಟ ಕಲಹ ಮಾಡಿ, ತನಗೂ ಚಂದ್ರಗುಪ್ತನಿಗೂ ವೈರವುಂಟೆಂದು ಪ್ರಕಟಿಸಿದ. ಇದನ್ನು ನಂಬಿ ಮೋಸಹೋದ ರಾಕ್ಷಸ ಮಲಯ ಕೇತುವನ್ನು ಪ್ರೋತ್ಸಾಹಿಸಿ ಪಾಟಲಿಪುತ್ರದ ಮೇಲೆ ದಂಡೆತ್ತಿ ನಡೆದ. ಈ ನಡುವೆ ರಾಕ್ಷಸ ಚಂದ್ರಗುಪ್ತನ ಪಕ್ಷಪಾತಿ ಎಂಬ ವಿಷಬೀಜವನ್ನು ಭಾಗುರಾಯಣ ರಾಜಕುಮಾರನ ಮನಸ್ಸಿನಲ್ಲಿ ಬಿತ್ತಿದ್ದ. ಉಂಡಿಗೆ ಇಲ್ಲದೆ ಪಾಟಲಿಪುರಕ್ಕೆ ಹೋಗಬಯಸಿ ಸಿಕ್ಕುಬಿದ್ದ ಸಿದ್ಧಾರ್ಥಕನಲ್ಲಿದ್ದ ಶಕಟದಾಸ ಬರೆದ ಪತ್ರದಿಂದ, ರಾಕ್ಷಸ ಚಂದ್ರಗುಪ್ತ ಪಕ್ಷಪಾತಿ, ಚಿತ್ರವರ್ಮಾದಿಗಳು ದ್ರೋಹಿಗಳು ಎಂಬುದು ಸ್ಥಿರಪಟ್ಟು, ಮಲಯಕೇತುವಿನ ಆಶ್ರಯದಿಂದ ರಾಕ್ಷಸನ ಉಚ್ಚಾಟನೆಯಾಯಿತು. ನಿಸ್ಸಹಾಯಕನಾದ ಮಲಯಕೇತುವನ್ನು ಭದ್ರಭಟಾದಿಗಳು ಸೆರೆಹಿಡಿದರು. ಆಶ್ರಯವನ್ನು ಕಳೆದುಕೊಂಡ ರಾಕ್ಷಸ ಶೂಲಕ್ಕೇರಲು ಸಿದ್ಧನಾಗಿದ್ದ ಚಂದನದಾಸನನ್ನು ಬಿಡಿಸಲು ಕೈಕತ್ತಿಯನ್ನು ಬಿಸುಟು ಬಂದು, ಚಂದ್ರಗುಪ್ತನ ಮಂತ್ರಿಯಾಗಲು ಒಪ್ಪಿಕೊಳ್ಳಬೇಕಾಯಿತು. 

ಮುಲಯಕೇತುವಿಗೆ ತಂದೆಯ ರಾಜ್ಯ ದೊರಕಿತು. ಚಂದ್ರಗುಪ್ತನ ಪಟ್ಟಾಭಿಷೇಕವಾದ ಮೇಲೆ ಚಾಣಕ್ಯ ತಪೋವನಕ್ಕೆ ತೆರಳಿದ.

ಚಾಣಕ್ಯ-ರಾಕ್ಷಸರ ಕಥೆಯೆಂದರೆ ತಂತ್ರ ಪ್ರತಿತಂತ್ರಗಳ ಜಾಲ; ಬುದ್ಧಿಶಕ್ತಿಗಳ ಘರ್ಷಣೆ. ಈ ಎರಡು ಪಾತ್ರಗಳನ್ನು ಆಗಲೇ ವಿಶಾಖದತ್ತ ತನ್ನ ನಾಟಕದಲ್ಲಿ ಅದ್ಭುತವಾಗಿ ಚಿತ್ರಿಸಿದ್ದ. ಆದ್ದರಿಂದ ಕೆಂಪುನಾರಾಯಣ ತಾನು ಸೃಷ್ಟಿಸಿದ ಪೂರ್ವಕಥೆಯಲ್ಲಿ, ನಾಟಕಕಾರನಿಗೆ ಹೆಗಲೆಣೆಯಾಗಿ ಚಾಣಕ್ಯನ ಪ್ರಚಂಡ ಬುದ್ಧಿಶಕ್ತಿ, ರಾಕ್ಷಸನ ಶೌರ್ಯ ಹಾಗೂ ಸ್ವಾಮಿಭಕ್ತಿ, ಇಂದುಶರ್ಮನ ಕಾರ್ಯಕುಶಲತೆ-ಇದನ್ನು ಚಿತ್ರಿಸಿರುವುದಲ್ಲದೆ, ಪರ್ವತರಾಜ, ಶಬರವರ್ಮ, ಉಲೂಕ ಇವರೇ ಮೊದಲಾದ ದೊಡ್ಡ ಸಣ್ಣ ಪಾತ್ರಗಳನ್ನು ಸೃಷ್ಟಿಸಿ ತನ್ನ ವೈಶಿಷ್ಟ್ಯವನ್ನು ಮೆರೆದಿದ್ದಾನೆ.

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳ ಪ್ರಭಾವ ಕನ್ನಡ ಸಾಹಿತ್ಯದ ಮೇಲೆ ಬೀಳದಿದ್ದಾಗ ರಚಿತವಾದ ಮೊಟ್ಟವೊದಲನೆಯ ಕಾದಂಬರಿ ಮುದ್ರಾಮಂಜೂಷವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ