ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜೇಂದ್ರ ಲಾಹಿರಿ


ಶೌರ್ಯ, ಸಾಹಸದ ವೀರ ಹೋರಾಟಗಾರ ಲಾಹಿರಿ

(ಇಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಲಾಹಿರಿ ಗಲ್ಲಿಗೇರಿದ ದಿನ ಅಂತ ಓದಿದೆ.  ಈ ಮಹಾತ್ಮನ ಕುರಿತು ನನ್ನ ಮೆಚ್ಚಿನ ಬರಹಗಾರರಾದ ಬಾಬು ಕೃಷ್ಣಮೂರ್ತಿ ಅವರ ಬರಹ ಓದಿದೆ.  ಅದು ನಿಮ್ಮ ಅಂತರಂಗವನ್ನೂ ತಟ್ಟೀತು. ಕೆಲವು ಕಡೆ ರಾಜೇಂದ್ರ ಲಾಹಿರಿ ಗಲ್ಲಿಗೇರಿದ ದಿನ ಡಿಸೆಂಬರ್ 17 ಅಂತ ಇದೆ.  ಬಾಬು ಕೃಷ್ಣಮೂರ್ತಿ ಅವರ ಲೇಖನದಲ್ಲಿ ಡಿಸೆಂಬರ್ 18 ಎಂದಿದೆ.  ಶ್ರೇಷ್ಠತೆಯನ್ನು ನೆನೆಯುವಾಗ ದಿನ ಎಂಬುದು ಒಂದು ನೆಪ ಮಾತ್ರಾ. ಹೃದಯಾಂತರಾಳದ ಭಾವ ಇದ್ದರಾಯ್ತು.) 

‘ನೋಡಿ, ನೀವು ಮೂವರೂ ಎರಡನೆಯ ತರಗತಿಯ ಡಬ್ಬಿಯಲ್ಲಿ ಹತ್ತಬೇಕು. ಪೂರ್ವಯೋಜಿತ ಸ್ಥಾನ ಬಂದಕೂಡಲೇ ನಾಟಕ ಹೂಡಿ ಡಬ್ಬಿಯಲ್ಲಿ ಗಲಭೆ ಎಬ್ಬಿಸಬೇಕು. ಬಹು ಬಾರಿ ಆಭರಣಗಳು ಕಳುವಾಗಿವೆ ಎನ್ನಬೇಕು. ರೈಲನ್ನು ನಿಲ್ಲಿಸಬೇಕು. ಸರಿ, ನೀವು ಸಿದ್ಧ ಮಾಡಿಕೊಳ್ಳಿ’. ನಾಯಕ ಮೂವರಿಗೆ ಅಪ್ಪಣೆ ಮಾಡಿದ.

ಕೂಡಲೇ ಕೆಳಕ್ಕೆ ನೆಗೆದು ರೈಲುಬಂಡಿಯ ಆ ತುದಿಯಿಂದ ಈ ತುದಿಯವರೆಗೂ ಹಬ್ಬಿ ನಿಂತುಕೊಳ್ಳಿ. ಗಗನದತ್ತ ಗುಂಡು ಹಾರಿಸಿ. ಭಯ ಹುಟ್ಟಿಸಿ’. ನಾಯಕ ಇನ್ನು ಆರು ಮಂದಿಗೆ ಅಪ್ಪಣೆ ಮಾಡಿದ.

ಷಹಜಹಾನ್ಪುರದ ರೈಲು ನಿಲ್ದಾಣ. ಲಖನೌಗೆ ಹೋಗುವ ರೈಲು ಬಂದ ಕೂಡಲೆ ಮೂರು ಮಂದಿ ಎರಡನೆಯ ತರಗತಿಯ ಡಬ್ಬಿಯನ್ನೂ ಮಿಕ್ಕ ಆರು ಮಂದಿ ಮತ್ತು ನಾಯಕ ಮೂರನೆಯ ತರಗತಿಯ ಡಬ್ಬಿಯನ್ನೂ ಹತ್ತಿದ್ದಾರೆ. ರೈಲು ಹೊರಟಿದೆ. ಭರಭರನೆ ಸಾಗುತ್ತ ವೇಗ ಹೆಚ್ಚಿಸಿದೆ. ಪೂರ್ವಯೋಜನೆಯಂತೆ ನಿರ್ದಿಷ್ಟ ಸ್ಥಾನ ಬರುತ್ತಿದ್ದಂತೆಯೇ ಎರಡನೆಯ ತರಗತಿ ಡಬ್ಬಿಯಲ್ಲಿ ಒಬ್ಬ ಸ್ಪುರದ್ರೂಪಿ ಯುವಕ ಎದ್ದು ನಿಂತು ಗಲಭೆ ಎಬ್ಬಿಸಿದ್ದಾನೆ. ‘ಅಯ್ಯೋ! ಅಯ್ಯೋ! ಭಾರಿ ಆಭರಣಗಳ ಪೆಟ್ಟಿಗೆ ನಿಲ್ದಾಣದಲ್ಲಿಯೇ ಉಳಿದುಹೋಯಿತು!’ ‘ಆಂ ಹೌದೆ! ನಿಲ್ಲಿಸಿ, ರೈಲು ನಿಲ್ಲಿಸಿ! ಸರಪಳಿ ಎಳೆಯಿರಿ!’ ಡಬ್ಬಿಯಲ್ಲಿ ಗುಲ್ಲೋ ಗುಲ್ಲು.

ರೈಲು ನಿಂತಿತು. ಮೂವರು ಯುವಕರು ಹೊರಹಾರಿದರು. ಆ ವೇಳೆಗೆ ಮಿಕ್ಕ ಆರು ಮಂದಿ ಮತ್ತು ನಾಯಕ ಹೊರಹಾರಿ ರೈಲಿನ ಉದ್ದಗಲಕ್ಕೂ ಹಬ್ಬಿ ನಿಂತು ಮೇಲಕ್ಕೆ ಗುಂಡು ಹಾರಿಸುತ್ತಿದ್ದಾರೆ. ಕ್ಷಣಮಾತ್ರದಲ್ಲಿ ರೈಲಿನಲ್ಲಿ ಬರುತ್ತಿದ್ದ ಸರ್ಕಾರಿ ಖಜಾನೆ ಲೂಟಿಯಾಯಿತು. ಅದೇ ಕಾಕೋರಿ ರೈಲು ದರೋಡೆ. ಅದು ನಡೆದದ್ದು 1925ರ ಆಗಸ್ಟ್ 9ರಂದು.

ಈ ಟೋಳಿಯ ನಾಯಕ ಪಂಡಿತ ರಾಮಪ್ರಸಾದ್ ಬಿಸ್ಮಿಲ್. ಎರಡನೆಯ ತರಗತಿಯ ಡಬ್ಬಿ ಹತ್ತಿದವರು ಮೂವರು; ರಾಜೇಂದ್ರ ಲಾಹಿರಿ, ಅಶ್ಪಾಕ್ ಉಲ್ಲಾಖಾನ್, ಶಚೀಂದ್ರ ಭಕ್ಷಿ. ಡಬ್ಬಿಯಲ್ಲಿ ಗಲಭೆ ಎಬ್ಬಿಸಿ ಕೂಗಿಕೊಂಡವನೇ ರಾಜೇಂದ್ರ ಲಾಹಿರಿ!

1925ರ ಸೆಪ್ಟೆಂಬರ್ 26ರಂದು ಉತ್ತರ ಭಾರತದಲ್ಲಿ ಅನೇಕ ಬಂಧನಗಳಾದವು. ಕಾಕೋರಿಗೆ ಸಂಬಂಧಿಸಿದ ಹೆಚ್ಚು ಕಡಿಮೆ ಎಲ್ಲ ಮುಖ್ಯಸ್ಥರೂ ಕೈದಿಗಳಾದರು. ಆದರೆ ಲಾಹಿರಿ ಇನ್ನೂ ಸಿಕ್ಕಿಬಿದ್ದಿರಲಿಲ್ಲ. ಬಾಂಬ್ ತಯಾರಿಕೆಯ ತರಬೇತಿಗಾಗಿ ಅವನನ್ನು ಬಂಗಾಳದ ದಕ್ಷಿಣೇಶ್ವರಕ್ಕೆ ಕಳಿಸಲಾಗಿತ್ತು. ಕೆಲ ದಿನಗಳ ಬಳಿಕ ಲಾಹಿರಿ ಮತ್ತು ಅವನ ಕ್ರಾಂತಿಕಾರಿ ಗೆಳೆಯರು ಪೊಲೀಸರ ಕೈಗೆ ಸಿಕ್ಕಿಬಿದ್ದರು. ಕಾಕೋರಿ ಮೊಕದ್ದಮೆಯ ಮುಖ್ಯ ಆಪಾದಿತ ರಾಜೇಂದ್ರ ಲಾಹಿರಿ ಬಂಗಾಲದ ದಕ್ಷಿಣೇಶ್ವರದಲ್ಲಿ ಕೈದಿಯಾದ. ಬಂಧಿತ ರಾಜೇಂದ್ರನನ್ನು ಪೊಲೀಸರು ದಕ್ಷಿಣೇಶ್ವರದಿಂದ ಲಖನೌಗೆ ಕರೆದುತಂದರು. ಅಲ್ಲಿ ನಡೆಯುತ್ತಿದ್ದ ಕಾಕೋರಿ ಮೊಕದ್ದಮೆಯಲ್ಲಿ ಇವನನ್ನು ಪ್ರಮುಖ ಆರೋಪಿಯನ್ನಾಗಿ ಹಾಜರುಪಡಿಸಿದರು. ಕಾಕೋರಿ ಮೊಕದ್ದಮೆಗೂ ದಕ್ಷಿಣೇಶ್ವರ ಮೊಕದ್ದಮೆಗೂ ಏನಾದರೂ ಗಂಟುಹಾಕಿ ಬೃಹದ್ರೂಪ ನೀಡಬೇಕೆಂಬುದು ಪೊಲೀಸರ ಯತ್ನ. ಆದರೆ ಅದು ಸಫಲವಾಗಲಿಲ್ಲ. ರಾಜೇಂದ್ರನಿಗೂ ದಕ್ಷಿಣೇಶ್ವರದ ಮೊಕದ್ದಮೆಗೂ ಸಂಬಂಧ ಮಾತ್ರ ಸ್ಥಿರಪಡಿಸಲಾಯಿತು.

ಲಖನೌವಿನ ಜೈಲು. ರಾಮಪ್ರಸಾದರು ಅಲ್ಲೂ ತಮ್ಮ ತರಬೇತಿ ಕೆಲಸ ಕೈ ಬಿಡಲಿಲ್ಲ. ಕುಸ್ತಿಯ ಅಖಾಡ ಸಿದ್ಧಗೊಳಿಸಿದರು. ಠಾಕೂರ್ ರೋಶನ್ಸಿಂಹನನ್ನು ಜೊತೆಗೆ ಹಾಕಿಕೊಂಡು ಎಲ್ಲರಿಗೂ ಕುಸ್ತಿ ಕಲಿಸಿದ್ದೂ ಕಲಿಸಿದ್ದೇ. ರಾಜೇಂದ್ರ, ರಾಜಕುಮಾರರಂತೂ ಕಬಡ್ಡಿ ಪ್ರಾಂಗಣ ಹಾಕಿ ಆಟ ಪ್ರಾರಂಭಿಸಿಯೇ ಬಿಟ್ಟರು. ಆಟ, ವ್ಯಾಯಾಮಗಳು, ಗೀತಗಾಯನಗಳು ಅವರ ನಿತ್ಯದ ಹವ್ಯಾಸ. ರಾಜೇಂದ್ರ ಲಾಹಿರಿ ಸುಂದರ ವ್ಯಕ್ತಿ. ಪ್ರಮಾಣಬದ್ಧ, ಸುದೃಢ ಶರೀರ. ಸದಾ ಹಸನ್ಮುಖ. ಆ ಮುಖದ ಹಿಂದೆ ಅಡಗಿದ್ದುದು ಅಪಾರ ಪಾಂಡಿತ್ಯ. ಹಿಡಿದ ಕೆಲಸದಲ್ಲಿ ಏಕನಿಷ್ಠೆ. ಎಂತಹ ಸಮಸ್ಯೆಯೇ ಬರಲಿ ಅದನ್ನು ಜಾಣ್ಮೆಯಿಂದ ಬಿಡಿಸುವ ಚೈತನ್ಯ. ಗೆಳೆಯರನ್ನು ನಿಷ್ಕಲ್ಮಶ ಹೃದಯದಿಂದ, ನೇರ ಬಿಚ್ಚು ಮಾತಿನಿಂದ ಸೆರೆಹಿಡಿಯುವ ಸಹೃದಯಿ. ಎಂ.ಎ. ಓದುತ್ತಿದ್ದ ವಿದ್ಯಾರ್ಥಿ.

ರಾಜೇಂದ್ರನ ತಂದೆ ಕ್ಷಿತಿಜ ಮೋಹನ ಲಾಹಿರಿ. ಬಹು ಉದಾರಿ, ಶಾಂತ ಮನಸ್ಕ, ಜನೋಪಕಾರಿ. ಒಂದು ಪ್ರೌಢಶಾಲೆಯನ್ನು ಕೆಲಕಾಲ ನಡೆಸಿದ ವಿದ್ಯಾದಾನಿ. ತಾಯಿ ಬಸಂತಕುಮಾರಿ ಆದರ್ಶ ಗೃಹಿಣಿ. 1901ನೇ ವರ್ಷದಲ್ಲಿ ಇವರಿಗೆ ರಾಜೇಂದ್ರ ಲಾಹಿರಿ ಜನಿಸಿದ. ಅವನು ಜನಿಸಿದ್ದು ಬಂಗಾಳದ ಪಬಾನಾ ಜಿಲ್ಲೆಯ ಒಂದು ಹಳ್ಳಿ ಮೋಹನಾಪುರ (ಇದು ಈಗ ಬಾಂಗ್ಲಾದೇಶದಲ್ಲಿದೆ).

1909ರ ವೇಳೆಗೆ ಕ್ಷಿತಿಜ ಮೋಹನರು ಕಾಶಿಗೆ ಬಂದು ನೆಲೆಸಿದರು. ಅಲ್ಲಿ ರಾಜೇಂದ್ರನ ವಿದ್ಯಾಭ್ಯಾಸ ಪ್ರಾರಂಭವಾಯಿತು. ರಾಜೇಂದ್ರ ಬಹು ಕುಶಾಗ್ರಮತಿ, ಚಿಂತನಶೀಲ ವಿದ್ಯಾರ್ಥಿ. ಇತಿಹಾಸ, ಅರ್ಥಶಾಸ್ತ್ರಗಳು ಅವನ ಪ್ರಿಯ ವಿಷಯಗಳು. ಅದರಲ್ಲೇ ಕಾಶಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಓದುತ್ತಿದ್ದಾಗ ಅಸಹಕಾರ ಆಂದೋಲನದ ಕಾವು ಮುಗಿಲು ಮುಟ್ಟಿತ್ತು. ಇವನು ಚಳವಳಿಯಲ್ಲಿ ಭಾಗವಹಿಸಿದ್ದ. ಬಂದಿಯಾಗಿ ಶಿಕ್ಷೆ ಅನುಭವಿಸಿದ್ದ. 1922ರ ಅಸಹಕಾರಿ ಆಂದೋಳನ ವಿಫಲವಾಯಿತು. ಮತ್ತೆ ಕ್ರಾಂತಿಕಾರಿಗಳ ಕಾರ್ಯಚಟುವಟಿಕೆ ಆರಂಭವಾಯಿತು. ಬಂಗಾಳದ ಅನುಶೀಲನ ಸಮಿತಿ, ಕ್ರಾಂತಿಕಾರಿ ದಳಗಳು ಕಾಶಿಯಲ್ಲಿ ಶಾಖೆಗಳನ್ನು ತೆರೆದು ಸಂಘಟನೆಯಲ್ಲಿ ತೊಡಗಿದ್ದವು. ರಾಜೇಂದ್ರನು ಈ ಕ್ರಾಂತಿಕಾರಿಗಳಿಂದ ಸನ್ಯಾಲ್ ಮತ್ತು ಶಚೀಂದ್ರ ಬಕ್ಷಿಯವರ ಕ್ರಾಂತಿಕಾರಿ ದಳ ಮತ್ತು ಅನುಶೀಲನ ಸಮಿತಿಗಳು ಒಂದು ಗೂಡಿ ‘ಹಿಂದೂಸ್ಥಾನ್ ಪ್ರಜಾತಂತ್ರ ಸೇನೆ’ಯನ್ನು ಸ್ಥಾಪಿಸಿದ್ದವು.

ಸರಳ, ಆಡಂಬರರಹಿತ, ಸತ್ಯವಾದಿ, ಸಾಹಿತ್ಯಾರಾಧಕ, ಸೌಜನ್ಯಶೀಲ ರಾಜೇಂದ್ರ ತನ್ನ ಕರ್ತವ್ಯಶ್ರದ್ಧೆ, ಏಕನಿಷ್ಠೆ, ಸಂಘಟನಾ ಚತುರತೆಗಳಿಂದ ಶೀಘ್ರದಲ್ಲಿಯೇ ಸಂಸ್ಥೆಯ ಒಬ್ಬ ಪ್ರಮುಖ ವ್ಯಕ್ತಿಯಾದ. ಕಾಶಿಯ ಕ್ರಾಂತಿಕಾರಿ ಸಂಘಟನೆಯ ಪೂರ್ಣ ಜವಾಬ್ದಾರಿ ರಾಜೇಂದ್ರನದೇ. ಅವನ ನಾಯಕತ್ವವನ್ನು ಪ್ರಶ್ನಿಸಿದವರೇ ಇಲ್ಲ. ದೂರದೃಷ್ಟಿಯಿಂದ ತೀರ್ಮಾನ ಕೈಗೊಳ್ಳುವುದು ಅವನ ವಿಶೇಷ. ಆದ್ದರಿಂದ ‘ಹಿಂದುಸ್ಥಾನ ಪ್ರಜಾತಂತ್ರ ಸೇನೆ’ಯ ಕೇಂದ್ರ ಸಮಿತಿ ಸದಸ್ಯನೂ ಆದ. ಜೋಗೇಶಚಂದ್ರ ಚಟರ್ಜಿ, ಶಚೀಂದ್ರ ಸನ್ಯಾಲರಂತೂ ಇವನೇ ಸಂಸ್ಥೆಯ ಮುಂದಿನ ನಾಯಕನೆಂದು ಪರಿಚಯ ಮಾಡಿಕೊಡುತ್ತಿದ್ದರು. ಮೊದಮೊದಲು ರಾಜೇಂದ್ರನಿಗೆ ದರೋಡೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಆನಂತರ ಉತ್ಸಾಹದಿಂದ ಭಾಗವಹಿಸುತ್ತಿದ್ದ.

1925ರಲ್ಲಿ ಶಚೀಂದ್ರ ಸನ್ಯಾಲರ ಬಂಧನವಾದ ಮೇಲೆ ಇಡೀ ಸಂಸ್ಥೆಯ ನೇತೃತ್ವ ರಾಮಪ್ರಸಾದರದಾಯಿತು. ಸಂಘಟನಾತ್ಮಕ ಕೆಲಸವನ್ನೆಲ್ಲ ರಾಜೇಂದ್ರನ ಪಾಲಿಗೆ ಒಪ್ಪಿಸಲಾಯಿತು. ಆಗ ಇವನ ಅದ್ಭುತ ಸಂಘಟನಾ ಸಾಮರ್ಥ್ಯದ ಪರಿಚಯ ಸಿಕ್ಕಿತು. ಕಾಕೋರಿ ರೈಲು ದರೋಡೆಯಾಗಿ ರಾಜೇಂದ್ರ ಸಿಕ್ಕಿಬಿದ್ದಮೇಲೆ ನಿಜಕ್ಕೂ ಅವನ ಜೀವನದ ಓಟಕ್ಕೆ ಒಂದು ಪೂರ್ಣವಿರಾಮ ಹಾಕಿದಂತಾಯಿತು. ನಾಲ್ಕು ಗೋಡೆಗಳು, ಅವುಗಳ ಮಧ್ಯೆ ಅವನು. ಬರಬರುತ್ತ ಹೆಚ್ಚು ಅಂತಮುಖಿ. ಮನೋರಾಜ್ಯದಲ್ಲಿ ವಿಚಾರಗಳ ಸಂಘರ್ಷ.

ಲಖನೌ ನ್ಯಾಯಾಲಯದಲ್ಲಿ ನ್ಯಾಯಾಧೀಶ ಹ್ಯಾಮಿಲ್ಟನ್ನನ ಸಮ್ಮುಖದಲ್ಲಿ 18 ತಿಂಗಳ ದೀರ್ಘಕಾಲ ವಿಚಾರಣೆ ನಡೆದು, 1922ರ ಏಪ್ರಿಲ್ 6ರಂದು ತೀರ್ಪು. ಅದಕ್ಕೆ ಹಿಂದಿನ ದಿನ ಕ್ರಾಂತಿ ಗೆಳೆಯರೆಲ್ಲರೂ ಒಂದುಗೂಡಿದ್ದರು. ನಾಳೆ ಸಿಗಲಿರುವ ಶಿಕ್ಷೆಗಳು ಏನೇನೋ ಯಾರು ಬಲ್ಲರು? ಒಬ್ಬರಿಗೊಬ್ಬರು ಅಂದು ಪ್ರೀತಿಯಿಂದ ಆಹಾರ ತಿನ್ನಿಸಿದರು. ಅನಂತರ ರಾಜೇಂದ್ರ ತನ್ನ ಹಾಸಿಗೆಯ ಮೇಲೆ ಕುಳಿತು ಚಿಂತಿಸುತ್ತಿದ್ದ. ಅತ್ತ ಗೆಳೆಯರೆಲ್ಲರೂ ಯಾರ್ಯಾರಿಗೆ ಯಾವ ಶಿಕ್ಷೆ ಎಂದು ನಾಟಕ ಆಡುತ್ತಿದ್ದರು; ನಗುವಿನ ಅಬ್ಬರ ಕೇಳುತ್ತಿತ್ತು.

ಇತ್ತ ಠಾಕೂರ್ ರೋಶನ್ಸಿಂಹ ಮೆಲ್ಲನೆ ರಾಜೇಂದ್ರನ ಹಾಸಿಗೆಯ ಬಳಿ ಬಂದು ಕುಳಿತು ಮೆಲ್ಲನೆ ಕೇಳಿದ; ‘ಲಾಹಿಡಿ ದಾ! ನಿಮಗೆ ಏನನ್ನಿಸುತ್ತಿದೆ? ನಿಮಗೇನು ಶಿಕ್ಷೆ ಆದೀತು? ಆಗಲೆ ಬಂಗಾಳದಿಂದ ಬರುತ್ತಲೇ ಹತ್ತು ವರ್ಷ ಶಿಕ್ಷೆ ಪಡೆದು ಬಂದಿದ್ದೀರಿ’.

ರಾಜೇಂದ್ರ ಮುಗುಳುನಗುತ್ತಾ ಬಂಗಾಳಿಯಲ್ಲಿ ಹೇಳಿದ; ‘ನಿಜ, ಠಾಕೂರ್ ಭಾಯ್. ನನಗೆ ಕಡಿಮೆ ಎಂದರೆ ಆಜೀವ ಕಾರಾವಾಸ ಆಗಿಯೇ ಆಗುತ್ತದೆ. ಅವರು ಫಾಸಿ ಬೇಕಾದರೂ ಕೊಟ್ಟಾರು. ನಾನೇನೋ ಅದಕ್ಕೂ ಸಿದ್ಧ’.

ಏಪ್ರಿಲ್ 6. ಮುಂಜಾನೆ ತೀರ್ಪು ಹೊರಬಿತ್ತು. ಮೂವರಿಗೆ ಫಾಸಿ; ಬಿಸ್ಮಿಲ್, ಲಾಹಿರಿ, ರೋಶನ್. (ಅಶ್ಪಾಕ್ನ ಫಾಸಿ ಶಿಕ್ಷೆಯ ತೀರ್ಪು ಬೇರೆ ಆಗಿತ್ತು.) ಅವರಲ್ಲೆಲ್ಲ ಕಿರಿಯ ಲಾಹಿರಿ. ಎಲ್ಲರೂ ಹೊರಬಂದರು. ಪೊಲೀಸರ ಪರವಾನಗಿ ಪಡೆದು ಮಿಕ್ಕೆಲ್ಲ ಕ್ರಾಂತಿಕಾರಿ ಗೆಳೆಯರು ಇವರ ಕಾಲುಗಳಿಗೆ ನಮಿಸಿದರು. ಕಿರಿಯ ಲಾಹಿರಿ ನಿಂತಿದ್ದಾನೆ. ಎಲ್ಲರಿಗಿಂತಲೂ ಹಿರಿಯ ನಾಯಕ, ವಯಸ್ಸಿನಲ್ಲೂ ಹಿರಿಯ ಶಚಿಂದ್ರನಾಥ ಸನ್ಯಾಲರ ಭಾವಕುಂಭ ಉಕ್ಕುತ್ತಿದೆ. ಕಣ್ಣೀರಾಗಿ ಹರಿಯುತ್ತಿದೆ. ಅವರು ನೇರವಾಗಿ ಲಾಹಿರಿಯ ಕಾಲುಗಳನು ಹಿಡಿದು ನಮಿಸುತ್ತಿದ್ದಾರೆ. ಗಳಗಳ ಅಳುತ್ತಿದ್ದಾರೆ. ‘ದಾದಾ! ಇದೇನು ನೀವು ಮಾಡುತ್ತಿರುವುದು?’ ಅನ್ನುತ್ತಿದ್ದಾನೆ ರಾಜೇಂದ್ರ. ‘ಇಂದು ನೀನು ಜ್ಯೇಷ್ಠನಾಗಿದ್ದೀಯೆ. ನಿನಗೆ ನಮಸ್ಕಾರ ಮಾಡುವುದರಿಂದ ನಮಗೆ ಪುಣ್ಯ ಸಂಚಯನ’ ಎನ್ನುತ್ತಿದ್ದಾರೆ ಶಚೀಂದ್ರನಾಥ್. ಅವರಂತೆ ಸುರೇಶಚಂದ್ರ ಭಟ್ಟಾಚಾರ್ಯ, ರಾಮಕೃಷ್ಣ ಖತ್ರಿ ಮುಂತಾದ ಹಿರಿಯರು ನಮಿಸುತ್ತಿದ್ದಾರೆ. ಆನಂತರ ಎಲ್ಲರೂ ಭಾರವಾದ ಹೃದಯಗಳಿಂದ ಅಲ್ಲಿಂದ ಹೊರಟಿದ್ದಾರೆ; ಮೂಕ ಮಾರ್ವಿುಕ ಬೀಳ್ಕೊಡುಗೆ. ನ್ಯಾಯಾಲಯದಿಂದ ಕೈದಿಗಳನ್ನು ಹೊತ್ತ ವ್ಯಾನುಗಳು ಹೊರಬರುತ್ತಿದ್ದಂತೆ ಅಪಾರ ಜನಸಾಗರ ಜಯಕಾರ ಮಾಡುತ್ತಿದೆ, ‘ಭಾರತಮಾತಾಕಿ ಜೈ!’ ‘ವಂದೇಮಾತರಂ!’ ‘ಬಿಸ್ಮಿಲ್-ರೋಶನ್-ಲಾಹಿರಿ ಅಮರರಾಗಲಿ!’

1927ರ ಡಿಸೆಂಬರ್ 19ರಂದು ಬಿಸ್ಮಿಲ್, ರೋಶನ್, ಅಶ್ಪಾಕ್ ಗಲ್ಲಿಗೆ ಏರಲಿದ್ದಾರೆ. ರಾಜೇಂದ್ರ ಕಿರಿಯ. ಆ ಹಿರಿಯರಿಬ್ಬರ ಸ್ವಾಗತಕ್ಕಾಗಿ ಒಂದು ದಿನ ಮುಂಚೆಯೇ ಅವನು ಅಲ್ಲಿಗೆ ತೆರಳಲಿದ್ದಾನೆ. ಡಿಸೆಂಬರ್ ಹದಿನಾಲ್ಕರಂದು ಗೆಳೆಯನೊಬ್ಬನಿಗೆ ಒಂದು ಪತ್ರ ಬರೆದಿದ್ದಾನೆ-‘ನೀವೆಲ್ಲ ನಮ್ಮ ಪ್ರಾಣ ರಕ್ಷಿಸಲು ಬಹಳಷ್ಟು ಮಾಡಿದ್ದೀರಿ; ಮಾಡದೇ ಇದ್ದ ಪ್ರಯತ್ನವೇ ಇಲ್ಲ. ಆದರೆ ದೇಶದ ಬಲಿವೇದಿಗೆ ನಮ್ಮ ರಕ್ತದ ಅವಶ್ಯಕತೆ ಇದೆ. ಸಾವು ಎಂದರೇನು? ಜೀವನದ ಮತ್ತೊಂದು ಮುಖವಷ್ಟೇ ಅಲ್ಲದೆ ಇನ್ನೇನೂ ಅಲ್ಲ. ಆದ್ದರಿಂದ ಮನುಷ್ಯ ಮೃತ್ಯುವನ್ನು ಕಂಡು ಏಕೆ ದುಃಖಪಡಬೇಕು? ಭಯಪಡಬೇಕು? ಅದೊಂದು ಅತಿ ಸ್ವಾಭಾವಿಕ ಕ್ರಿಯೆ. ಪ್ರಾತಃಕಾಲದಲ್ಲಿ ಸೂರ್ಯೋದಯವಾಗುವಷ್ಟು ಸ್ವಾಭಾವಿಕ. ನಮ್ಮ ಮೃತ್ಯು ವ್ಯರ್ಥವಾಗುವುದಿಲ್ಲ.

ಎಲ್ಲರಿಗೂ ನಮಸ್ಕಾರ-ಕೊನೆಯ ನಮಸ್ಕಾರ. ನಿಮ್ಮ ರಾಜೇಂದ್ರ’.

ಡಿಸೆಂಬರ್ 18. ಪ್ರಾತಃಕಾಲ. ನಿತ್ಯ ಕರ್ಮವಿಮುಕ್ತ ರಾಜೇಂದ್ರ ಸಾವನ್ನು ಎದುರು ನೋಡುತ್ತ ಕುಳಿತಿದ್ದಾನೆ. ಗೊಂಡಾ ಜೈಲಿನ ಫಾಸಿಕೋಣೆಯಲ್ಲಿ ಫಾಸಿ ಕಂಬದ ಬಳಿಗೆ ಅವನನ್ನು ಕರೆದೊಯ್ಯಲಾಗುತ್ತಿದೆ.

ನಿರಂತರ ಗಾನ ಮಾಡುತ್ತಿದ್ದಾನೆ. ‘ವಂದೇ ಮಾತರಂ’, ‘ತೇರಾ ವೈಭವ ಅಮರ ರಹೇ ಮಾ. ಹಮ್ ದಿನ್ ಚಾರ್ ರಹೆ ನ ರಹೇ’ (ನಾಲ್ಕು ದಿನ ಬದುಕಬಹುದು ಬದುಕದಿರಬಹುದು. ಅಮ್ಮಾ! ನಿನ್ನ ವೈಭವ ಅಮರವಾಗಲಿ. ಅಮರವಾಗಲಿ) ಮಾತೃದೇವಿಯ ವಿಜಯದ ಆಕಾಂಕ್ಷೆಯನ್ನೇ ಹೃದಯದಲ್ಲಿ ಧರಿಸಿ, ನಾಲಗೆಯಲ್ಲಿ ನುಡಿಸಿ ಗಲ್ಲುಗಂಬವನ್ನೇರಿ ತಾನೇ ಅಮರನಾಗಲಿದ್ದಾನೆ ರಾಜೇಂದ್ರ!

ನಿರೀಶ್ವರವಾದದ ಜಗತ್ತಿನಲ್ಲಿ ಕೆಲಕಾಲ ವಿಹರಿಸಿ ಹಿಂದಿರುಗಿದ ರಾಜೇಂದ್ರ ತನ್ನ ಶವಸಂಸ್ಕಾರವನ್ನು ಹಿಂದೂ ಪದ್ಧತಿಯಲ್ಲಿ ಮಾಡುವಂತೆ ಪ್ರಾರ್ಥಿಸಿದ್ದ ಪ್ರಕಾರ ಅವನ ಶವಸಂಸ್ಕಾರವನ್ನು ಗೊಂಡಾ ನಿವಾಸಿಗರು ವೇದಮಂತ್ರ ವಿಧಿಸಹಿತ ಮಾಡಿದ್ದಾರೆ. ಭಾರತಮಾತೆಯ ಈ ಸುಪುತ್ರ ತನುಮನಧನಗಳ ಮೂಲಕ ತಾಯಿಯನ್ನು ಅರ್ಚಿಸಿ ಕಟ್ಟಕಡೆಗೆ ತನ್ನ ಜೀವಜ್ಯೋತಿಯಿಂದಲೇ ಆಕೆಗೆ ಆರತಿ ಎತ್ತಿದ್ದಾನೆ.

ಕೃಪೆ: ಬಾಬು ಕೃಷ್ಣಮೂರ್ತಿ ಅವರ ವಿಜಯವಾಣಿ ಪತ್ರಿಕೆಯಲ್ಲಿನ ಅಂಕಣ ‘ಹೋರಾಟದ ಹಾದಿ’

On the day our great freedom fighter Rajendra Lahiri was sentenced to death

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ