ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಬಾಲಚಂದ್ರರಾವ್


ಎಸ್. ಬಾಲಚಂದ್ರರಾವ್ 


ಪ್ರೊ. ಎಸ್. ಬಾಲಚಂದ್ರರಾವ್ ವಿಜ್ಞಾನ ಕ್ಷೇತ್ರದಲ್ಲಿ ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ.

ಬಾಲಚಂದ್ರರಾವ್ ಅವರು 1944ರ ಡಿಸೆಂಬರ್ 30ರಂದು ಜನಿಸಿದರು.  ಮೂಲತಃ ಸಾಗರದವರಾದ ಬಾಲಚಂದ್ರರಾವ್ ಬೆಂಗಳೂರಿನ ಶೇಷಾದ್ರಿಪುರಂ ಹೈಸ್ಕೂಲಿನಲ್ಲಿ ಓದಿದ ನಂತರ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುದೇ ಅಲ್ಲದೆ,  ಸೆಂಟ್ರಲ್ ಕಾಲೇಜಿನಿಂದ ಫ್ಲುಯಿಡ್ ಮೆಕಾನಿಕ್ಸ್ ಅಧ್ಯಯನಗಳನ್ನು ಸಾಧಿಸಿದವರು.

ಬಾಲಚಂದ್ರರಾವ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಧ್ಯಾಪಕರಾಗಿ, ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗೂ ಪ್ತಿನ್ಸಿಪಾಲರಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತರಾದರು.  ನಿವೃತ್ತಿಯ ನಂತರದಲ್ಲಿ ಭಾರತೀಯ ವಿದ್ಯಾಭವನದ ಭವಾನ್ಸ್ ಗಾಂಧೀ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಅಧ್ಯಯನ ವಿಭಾಗದ ನಿರ್ದೇಶಕರಾಗಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಪ್ರೊ. ಬಾಲಚಂದ್ರರಾವ್ ಅವರು ಕಳೆದ ಕೆಲವು ದಶಕಗಳಿಂದ ಪ್ರಾಚೀನ ಭಾರತೀಯ ಗಣಿತ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ 'ಇಂಡಿಯನ್ ನ್ಯಾಷನಲ್ ಸೈನ್ಸ್  ಅಕಾಡಮಿ' (INSA) ಆಶ್ರಯದಲ್ಲಿ ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಲ್ಲದೆ,  ಆ‍ ಸಂಸ್ಥೆಯ ಭಾಗವಾದ ರಾಷ್ಟ್ರೀಯ ಇತಿಹಾಸ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ 2019 ವರ್ಷ ರಾವ್ ಅವರಿಗೆ International Astronomical Union ಸದಸ್ಯತ್ವ ಗೌರವ ಸಂದಿದೆ.

ಭಾರತೀಯ ಖಗೋಳ ಶಾಸ್ತ್ರದ ಮಹತ್ವದ ಸಂಶೋಧಕರಾದ ಬಾಲಚಂದ್ರರಾವ್ ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 30ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.  ಹಲವಾರು ಸಂಶೋಧನಾ ಪ್ರಬಂಧಗಳನ್ನೂ ಮಂಡಿಸಿರುವ ರಾವ್ ಅವರು ಖಗೋಳಶಾಸ್ತ್ರದ ಅನೇಕ ಪಿಎಚ್.ಡಿ ಪ್ರಬಂಧಕಾರರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.

ಡಾ. ಬಾಲಚಂದ್ರರಾವ್ ಅವರ ಕನ್ನಡ ಕೃತಿಗಳಲ್ಲಿ ಆರ್ಯಭಟ; ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು; ವೇದಾಂಗ ಜ್ಯೋತಿಷ - ಲಗಧ ಮಹರ್ಷಿಯ ಖಗೋಳವಿಜ್ಞಾನ; ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು; ಗ್ರಹಗಣಿತ (ಗಣೇಶದೈವಜ್ಞನ 'ಗ್ರಹಲಾಘವಮ್'); ಸಂಪ್ರದಾಯ ವಿಜ್ಞಾನ ಮತ್ತು ಸಮಾಜ; ಫಲಜ್ಯೋತಿಷ-ನಂಬುವಿರಾ; ವೇದಿಕ್ ಮ್ಯಾಥಮೆಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ; ಭಾಸ್ಕರಾಚಾರ್ಯ ವಿರಚಿತ ಲೀಲಾವತಿ - 108 ಆಯ್ದ ಲೆಕ್ಕಗಳು; ಆರ್ಯಭಟ ವಿರಚಿತ ಆರ್ಯಭಟೀಯಮ್; ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ; ಭಾರತದಲ್ಲಿ ಸಂಖ್ಯಾಪದ್ಧತಿ ಮತ್ತು ರೇಖಾಗಣಿತ; ಮಾಯಾಚೌಕಗಳ ರಹಸ್ಯ; ಭಾರತದ ಪ್ರಸಿದ್ಧ ಗಣಿತಜ್ಞರು ಮುಂತಾದವು ಸೇರಿವೆ.

ಬಾಲಚಂದ್ರರಾವ್ ಅವರು ವೈಯಕ್ತಿಕವಾಗಿ ಮತ್ತು ಇತರ ಸಮಾನ ಮನಸ್ಕರೊಡಗೂಡಿ ಇಂಗ್ಲಿಷಿನಲ್ಲಿ ರಚಿಸಿರುವ ಕೃತಿಗಳಲ್ಲಿ
Indian Mathematics and Astronomy : Some Landmarks;  Transits and Occultations: In Indian Astronomy; Eclipses:In Indian Astronomy; Indian Astronomy - A Primer; Indian Astronomy an introduction; Aryabhata -I, Bhaskarvharaya-I and his Astronomy; Grahalaghavam of Ganesha Daivajna & Karankutuhalam of Bhaskaracharya I; Ancient Indian Astronomy with Planetary positions and Eclipses; Astrology Believe it or not?  ಮುಂತಾದವು ಸೇರಿವೆ.

ಪೂಜ್ಯ ಹಿರಿಯರಾದ ಪ್ರೊ. ಬಾಲಚಂದ್ರರಾವ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.

Prof. Balachandra Rao Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ