ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಸುದರ್ಶನ್


ಎಚ್. ಸುದರ್ಶನ್ 


ನಮ್ಮ ಕರ್ನಾಟಕದ ವೈದ್ಯರೊಬ್ಬರು ಗಿರಿಜನರ ಅಭಿವೃದ್ಧಿಗಾಗಿನ ತಮ್ಮ ಮಹತ್ತರವಾದ ಕೆಲಸಕ್ಕಾಗಿ ವಿಶ್ವದ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಪರಿಗಣಿತವಾಗಿರುವ ‘ರೈಟ್ ಲೈವ್ಲಿ ಹುಡ್ ಪ್ರಶಸ್ತಿಯನ್ನು 1994ರ ವರ್ಷದಲ್ಲಿ ಗಳಿಸಿ ವಿಶ್ವದೆಲ್ಲೆಡೆ ನಮ್ಮ ನಾಡಿನ ಕೀರ್ತಿಯನ್ನು ಬೆಳಗಿದರು.  ಅವರೇ ನಮ್ಮ ನಾಡಿನ ಹೆಮ್ಮೆಯ ಪುತ್ರ ಡಾ. ಹನುಮಪ್ಪ ಸುದರ್ಶನ್.  ಅವರ ಹುಟ್ಟಿದ ದಿನವಾದ ಡಿಸೆಂಬರ್ 30ರಂದು ಅವರ ಮಹತ್ತರ ಸಾಧನೆಗಳ ಹಾದಿಯಲ್ಲಿ ಸವೆಯುವ ಸಣ್ಣ ಪ್ರಯತ್ನವಿದು.  ಹೀಗಾದರೂ ಇಂತಹ ಸದ್ಗುಣ ಶೀಲ ಸ್ವಯಂಸೇವಕನನ್ನು ಅರಿಯುವ ಸೌಭಾಗ್ಯ ನಮ್ಮದಾಗಲಿ ಎಂಬ ಸಣ್ಣ ಆಂತರ್ಯ ಕೂಡ ಇಲ್ಲಿದೆ. 

ಬಿಳಿಗಿರಿ ರಂಗನ ಬೆಟ್ಟ ಎಂದರೆ ಸೊಗಸಾದ ಪ್ರಕೃತಿ ದರ್ಶನದ ಭಾವ ಅಂತರಾಳದಲ್ಲಿ ಮೂಡುತ್ತದೆ.  ಅಲ್ಲಿಯ ಬಿಳಿಗಿರಿ ರಂಗನಾಥ ಸ್ವಾಮಿ ಭಕ್ತಾದಿಗಳಿಗೆ ಆಪ್ತರಕ್ಷಕ.  ‘ಸೋಲಿಗರು’ ಅಲ್ಲಿಯ ಮೂಲ ನಿವಾಸಿಗಳು.  ಬಿಳಿಗಿರಿ ಬೆಟ್ಟಗಳು ಶತ ಶತಮಾನಗಳಿಂದ ಸೋಲಿಗರ ಆವಾಸ ಸ್ಥಾನ.  ಒಮ್ಮೆ ಅದು ಅವರ ನೆಮ್ಮದಿಯ ಬೀಡು.  ವನ್ಯ ಪ್ರಾಣಿ ಸಂಪತ್ತು ಹೇರಳವಾಗಿದ್ದ ದಿನಗಳಲ್ಲಿ ಈ ಸೋಲಿಗರು ಒಂದಷ್ಟು ಬೇಟೆ, ಅಲೆಮಾರಿ ವ್ಯವಸಾಯಗಳಲ್ಲಿ ಬದುಕನ್ನು ಕಾಣುತ್ತಿದ್ದವರು.  ಪ್ರಕೃತಿಯಲ್ಲೇ ದೇವರನ್ನು ಕಾಣತ್ತಾ ಪ್ರಾಕೃತಿಕ ಸಮತೋಲನದೊಂದಿಗೆ ಆತ್ಮೀಯ ಸಹಬಾಳ್ವೆ ನಡೆಸಿದವರು.  ಆದರೆ 1950ರಿಂದೀಚೆಗೆ ಭಾರತದ ರಾಜಕೀಯ ಸ್ವಾತಂತ್ರ್ಯದ ಅಪಹಾಸ್ಯವೋ ಎಂಬಂತೆ ಆದಿವಾಸಿಗಳ ಬದುಕು ದುಸ್ತರವಾಗಿ ಹೋಗಿತ್ತು.  ಈ ಆದಿವಾಸಿಗಳು ತಮ್ಮ ಬದುಕಿನ ನೆಲೆಯನ್ನು ಕೈಗಾರಿಕೆ ಮತ್ತು ಆಧುನಿಕ ಬೇಸಾಯಗಾರರ ಪಾರುಪತ್ಯಕ್ಕೆ ಕಳೆದುಕೊಂಡು  ನೆಲೆಯಿಲ್ಲದ ದಾರಿದ್ರ್ಯ ಮತ್ತು ಶೋಷಣೆಗೆ ಒಳಪಟ್ಟು ಜೀವನವನ್ನು ಕೇವಲ ಬದುಕುವುದಕ್ಕಾಗಿ ಉಸುರಿಸಬೇಕಾದ ಕರುಣಾಜನಕ ಪರಿಸ್ಥಿತಿ ನಿರ್ಮಾಣವಾಯಿತು.

1950ರ ಡಿಸೆಂಬರ್ 30ರಂದು ಜನಿಸಿದ ಹನುಮಂತಪ್ಪ ಸುದರ್ಶನ್ ಅವರು 1973ರಲ್ಲಿ ವೈದ್ಯಕೀಯ ಪದವೀಧರರಾದರು.  ವೈದ್ಯರಾಗಿ ಭೋಗ ಜೀವನದ ಭವಿತವ್ಯತೆಗೆ  ವಿಮುಖರಾಗಿ ನಿಂತ ಡಾ. ಸುದರ್ಶನ್, ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಜನಸೇವೆಯ ಹಾದಿಯತ್ತ ಮುಖಮಾಡಿ ನಿಂತರು.  ಪಶ್ಚಿಮ ಬಂಗಾಳದಲ್ಲಿ ಸ್ವಾಮಿ ವಿವೇಕಾನಂದರಿಂದ  ಜನ್ಯವಾದ ಬೇಲೂರು ಮಠಕ್ಕೆ ಆಗಮಿಸಿ ಅಲ್ಲಿನ ಕಾರ್ಯಸೂಚಿಯ ಮೇರೆಗೆ ಹಿಮಾಲಯ ಪರ್ವತ ಪ್ರಾಂತ್ಯಗಳ ಹಲವು ಸ್ಥಳಗಳಲ್ಲೂ, ಕೊಡಗಿನ ಪೊನ್ನಂಪೇಟೆಯಲ್ಲೂ ಹಲವು ವರ್ಷಗಳ ಕಾಲ ಬಡಜನರ ಸೇವಾಕರ್ತರಾಗಿ ದುಡಿದರು.  1979ರಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಆಗಮಿಸಿದ ಸುದರ್ಶನ್ ಇಲ್ಲಿನ ಸೋಲಿಗರೊಡನೆ ತಮ್ಮ ಬದುಕನ್ನು ನಿಶ್ಚಯಿಸಿಕೊಂಡರು. ಹೀಗೆ ಪ್ರಾರಂಭಿಸಿದ ಬದುಕಿನಲ್ಲಿ ಡಾ. ಸುದರ್ಶನ್ ಮೊದಲಿಗೆ ಇಲ್ಲಿನ ಜನರಿಗೆ ಮೂಲಭೂತ ಆರೋಗ್ಯ ಸಂಪದಕ್ಕಾಗಿ ಆಸ್ಪತ್ರೆಯನ್ನು ತೆರೆದರಲ್ಲದೆ,  ಜನರು ಆಸ್ಪತ್ರೆಗೆ ಬರಲು ಕಾಯದೆ ಅವರಿರುವ ಸ್ಥಳಗಳಿಗೇ ಹೋಗಿ ಶುಶ್ರೂಷೆ ಮಾಡಿ ಬರುವುದು ಅವರ ನಿತ್ಯ ಕೆಲಸವಾಯಿತು.   

ಮುಂದುವರಿದ ದಿನಗಳಲ್ಲಿ ಡಾ. ಸುದರ್ಶನ್ 1981ರ ವರ್ಷದಲ್ಲಿ ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು’ ಪ್ರತಿಷ್ಠಾಪಿಸಿ ಆದಿವಾಸಿಗಳ ಜೀವಾನಾಭಿವೃದ್ಧಿಗಾಗಿ ವಿಶಿಷ್ಟ ಕಾರ್ಯತಂತ್ರ ರೂಪಿಸತೊಡಗಿದರು.  “ಆದಿವಾಸಿಗಳ ಜೀವನ ಸಂಸ್ಕೃತಿಗಳಿಗೆ ಗೌರವ, ಆದಿವಾಸಿಗಳಲ್ಲಿ  ಗೌರವಯುತ  ಮೌಲ್ಯಪ್ರಧಾನ ಬದುಕಿನ ಆಶಯ ಮೂಡಿಸುವಿಕೆ, ಇವುಗಳ ಜೊತೆಗೆ ಆದಿವಾಸಿಗಳು ಇಂದಿನ ಪ್ರಪಂಚದಲ್ಲಿ ಸುವ್ಯವಸ್ಥಿತವಾಗಿ ಬದುಕಲು ಬೇಕಾದ ಅವಶ್ಯಕ ಸಾಮರ್ಥ್ಯ ಹಾಗೂ ಜ್ಞಾನಾಭಿವೃದ್ಧಿಯ ನಿರ್ಮಾಣ” ಇವು ಸುದರ್ಶನ್ ಅವರ ಪ್ರಮುಖ ಧ್ಯೇಯಗಳಾದವು.  ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ದ ಈ ನಿಟ್ಟಿನ ಕಾರ್ಯಕ್ರಮಗಳ ದೆಸೆಯಿಂದಾಗಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದು ತಮ್ಮ ಆರೋಗ್ಯ ಮತ್ತು ಬದುಕನ್ನು ಉತ್ತಮಗೊಳಿಸಿಕೊಳ್ಳುವಂತಾಯಿತು.

‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ’ ಮೂಲಕ 500 ಮಕ್ಕಳಿಗೆ ಅವಕಾಶವಿರುವ ಶಾಲೆಯನ್ನು ತೆರೆದು ಮಕ್ಕಳ ಜ್ಞಾನವಿಕಾಸ, ಸ್ವಾವಲಂಬನೆಯ ಬದುಕಿನ ಆಶಯ ನಿರ್ಮಾಣ ಮತ್ತು ಸಾಂಸ್ಕೃತಿಕ ಹಿರಿಮೆಯ ಅನುಭಾವ ಸೃಜನೆಯನ್ನು ಕಲ್ಪಿಸಿಕೊಡಲಾಗಿದೆ.  ಎಲ್ಲ ಶಾಲೆಗಳಲ್ಲಿ ಬೋಧಿಸುವಂತ ಪಠ್ಯಕ್ರಮಗಳ ಜೊತೆಗೆ ಪ್ರಕೃತಿ ಶಿಬಿರಗಳು, ಗಿಡಮೂಲಿಕೆಗಳ ತೋಟಗಾರಿಕೆ, ಗಿರಿಜನ ಸಂಸ್ಕೃತಿಗಳ ಮಹತ್ವವನ್ನು ಪ್ರಧಾನವಾಗಿರಿಸಿಕೊಂಡ ಮೌಲ್ಯಾಧಾರಿತ ಶಿಕ್ಷಣ, ಮತ್ತು ಆ ಸಂಸ್ಕೃತಿಗಳ ಮಹತ್ವಾಧಾರದಲ್ಲಿಯೇ ಮೂಡಿಸಿಕೊಳ್ಳಬಹುದಾದ ಉತ್ತಮ ಜೀವನಕ್ಕೆ ಪ್ರೋತ್ಸಾಹ ಇವುಗಳ ಚಿಂತನೆಯಲ್ಲಿ ಮಹತ್ವದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.  ಶೇಕಡಾ 95ಕ್ಕೂ ಹೆಚ್ಚು ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ.  ಬುಡಕಟ್ಟು ಜನಾಂಗಳ ಅರಣ್ಯ ಶಿಕ್ಷಣ ಶಾಲೆ ಮತ್ತು ಶುಶ್ರೂಷಾ ಶಾಲೆಗಳು ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸಿವೆ.  ಇಲ್ಲಿನ ಶಾಲೆಯಲ್ಲಿ   ಮುಂದೆ ಬಂದ ಮಕ್ಕಳು ವಿಶ್ವವಿದ್ಯಾಲಯ ಶಿಕ್ಷಣ ಪಡೆದು ತಮ್ಮ ಸಮಾಜಕ್ಕೆ ಸೇವೆ ಸಲ್ಲಿಸಲು ಹಿಂದಿರುಗಿ ಬಂದು ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ವನ್ನು ಮತ್ತಷ್ಟು ಶಕ್ತಿಯುತವನ್ನಾಗಿಸಿದ್ದಾರೆ. ‘ಜಡೇಗೌಡ’ ಎಂಬ ಸೋಲಿಗರ ಶಾಲೆಯ ವಿದ್ಯಾರ್ಥಿ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಹಿರಿಮೆಯನ್ನು ಪಡೆದುಕೊಂಡು ಬಂದು ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ‘ ಪ್ರಸಕ್ತ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ’ ಅಂಗಸಂಸ್ಥೆಯಾದ ಕುಶಲ ಕಲೆಗಳ ತರಬೇತು ಸಂಸ್ಥೆ ಹದಿನಾರು ವಿವಿಧ  ವೃತ್ತಿ ತರಬೇತಿಗಳನ್ನು ನೀಡುತ್ತಿದೆ.  ಸೋಲಿಗರಲ್ಲಿ ಶೇಕಡಾ ಅರವತ್ತಕ್ಕೂ ಮೀರಿದಷ್ಟು ಮಂದಿ, ವರ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ದುಡಿಮೆಯ ದಿನಗಳ ಪ್ರಯೋಜನವನ್ನು ಅರಣ್ಯ ಇಲಾಖೆ, ಗಿರಿಜನ ಸಹಕಾರ ಕೇಂದ್ರ ಮುಂತಾದ ಕ್ಷೇತ್ರಗಳಲ್ಲಿ ಪಡೆಯುತ್ತಿದ್ದಾರೆ.  

‘ವಿವೆಕಾನಂದ ಗಿರಿಜನ ಕಲ್ಯಾಣ ಕೇಂದ್ರದ’ ಮೂಲಕ ಸ್ಥಾಪನೆಯಾಗಿರುವ ಸಹಕಾರ ಸಂಘವೇ 1200ಕ್ಕೂ ಹೆಚ್ಚು  ಸೋಲಿಗರಿಗೆ ನೇರ ಉದ್ಯೋಗವನ್ನು ಒದಗಿಸಿಕೊಟ್ಟಿದೆ.  ಕಲ್ಯಾಣ ಕೇಂದ್ರವು ಅರಣ್ಯ ಮರಗಳ ಉಪಯೋಗಕ್ಕೆ ಬದಲಾಗಿ,  ಪರ್ಯಾಯ ಉತ್ಪನ್ನಗಳ ಸೃಷ್ಟಿ ಮತ್ತು ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅವುಗಳನ್ನು ಸಾಮಾಜಿಕ ಉಪಯೋಗಕ್ಕೆ ಸರಬರಾಜು ಮಾಡುವ  ಘಟಕಗಳನ್ನೂ ಹುಟ್ಟುಹಾಕಿದೆ.

‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ವು ತನ್ನ ಉಳಿದೆಲ್ಲ ಕಾರ್ಯಗಳಿಗಿಂತ, ಜನರಲ್ಲಿ ಸ್ವಯಂ ಅಭಿವೃದ್ಧಿಯ ಜಾಗೃತಿಯನ್ನು ಮೂಡಿಸುವಲ್ಲಿ ಮಾಡಬೇಕಾದ ಕೆಲಸ ಅತಿ ಮಹತ್ವದ್ದು ಎಂಬ ತತ್ವದಲ್ಲಿ ಮನ್ನಡೆಯುತ್ತಿದ್ದೆ ಮತ್ತು  ಆ ತತ್ವಕ್ಕೆ ಬದ್ಧವಾಗಿ  ನಡೆದು ಕೂಡ ತೋರಿಸುತ್ತಿದೆ.  ಕಲ್ಯಾಣ ಕೇಂದ್ರದ ಕಾರ್ಯ ನಿರ್ವಾಹಕ ಮಂಡಳಿಯಲ್ಲಿರುವ ಹದಿನೇಳು ಸದಸ್ಯರಲ್ಲಿ ಹತ್ತು ಜನ ಸೋಲಿಗರೇ ಇದ್ದಾರೆ.  ಪ್ರತಿಯೊಂದು ಹಳ್ಳಿಯೂ ತನ್ನದೇ ಆದ ಸಂಘವನ್ನು ಹೊಂದಿದ್ದು ಸಮಸ್ಯೆಗಳ ಪರಿಹಾರ ಮತ್ತು ಹಕ್ಕುಗಳ ಪ್ರತಿಪಾದನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.   ತಮ್ಮ ಭೂಮಿಯನ್ನು ಹಿಂದೆ ಕಳೆದುಕೊಂಡಿದ್ದ ಬಹುತೇಕ ಸೋಲಿಗರು ತಮ್ಮ ಭೂಮಿಯನ್ನು ಹಿಂದಿರುಗಿ ಪಡೆದುಕೊಂಡಿದ್ದಾರೆ.  ಸೋಲಿಗರ ಪ್ರತಿನಿಧಿಗಳು ಚುನಾವಣೆಗಳಲ್ಲೂ ಉತ್ತಮ ಫಲಿತಾಂಶ ಪಡೆಯುತ್ತಿದ್ದು ಹಲವು ಮಹಿಳಾ ಪ್ರತಿನಿಧಿಗಳು ಕೂಡ ಮಂಡಳಿಯ ನೇತೃತ್ವ ವಹಿಸಿದ್ದಾರೆ.

“ರೋಗ ವಾಸಿಯಾಗಬೇಕಿದ್ದಲ್ಲಿ, ಮೊದಲು ದಾರಿದ್ರ್ಯವನ್ನು ಕಿತ್ತೊಗೆಯಬೇಕು.  ಅದನ್ನು ಸಾಧಿಸಲು ಇರುವ ಏಕೈಕ ಮಾರ್ಗವೆಂದರೆ, ಜನರನ್ನು ತಮ್ಮ ಹಕ್ಕುಗಳಿಗಾಗಿ ವ್ಯವಸ್ಥೆಗೊಳಿಸುವುದು” ಇದು ಡಾ. ಸುದರ್ಶನ್ ಅವರ ಮೂಲಮಂತ್ರ.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ತನ್ನ ಕಾರ್ಯಕ್ರಮಗಳನ್ನು ಅರುಣಾಚಲ ಪ್ರದೇಶ, ಅಂಡಮಾನ್ ದ್ವೀಪಗಳು ಮತ್ತು ನೆರೆಯ ಆಂಧ್ರಪ್ರದೇಶಗಳಿಗೂ ವಿಸ್ತರಿಸಿದೆ.  

2013ರ  ವರ್ಷದಲ್ಲಿ  ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ 150ನೆ ಜನ್ಮದಿನ ಆಚರಣೆಯ ಸಂದರ್ಭದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅವರನ್ನು ಭೇಟಿ ಮಾಡಿ ಮಾತನಾಡಿದಾಗ ಅವರು ನನ್ನಂತಹ ಯಃಕಶ್ಚಿತ್ ವ್ಯಕ್ತಿಗೆ ನೀಡಿದ ಆತ್ಮೀಯ ಭಾವ ಹೃದಯಾಳವನ್ನು ಮೀಟುವಂತದ್ದು.  ಇದೇ ಸಂದರ್ಭದಲ್ಲಿ ಅವರು ನೀಡಿದ ಉಪನ್ಯಾಸದಲ್ಲಿ ಡಾ. ಸುದರ್ಶನ್ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಒಂದಾದ  ಅರುಣಾಚಲ ಪ್ರದೇಶದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿರುವುದರ ಬಗ್ಗೆ ಜನಮನವನ್ನು ತಟ್ಟುವಂತಹ ವಿಚಾರಗಳನ್ನು ತಿಳಿಸಿಕೊಟ್ಟಿದ್ದರು. 

ಡಾ. ಸುದರ್ಶನ್ ಅವರು 1986ರಲ್ಲಿ ‘ಕರುಣಾ ಟ್ರಸ್ಟ್’ ಅನ್ನು ಪ್ರಾರಂಭಿಸಿ ಸಮಗ್ರ ಗ್ರಾಮೀಣ ಆರೋಗ್ಯ, ವಿದ್ಯಾಭ್ಯಾಸ ಮತ್ತು ಜೀವನಾಧಾರ ಭದ್ರತೆಗಳ ಮಹದುದ್ದೇಶವನ್ನು ಅದಕ್ಕೆ ನೀಲಿನಕ್ಷೆಯನ್ನಾಗಿಸಿದ್ದಾರೆ.  ಅವರು ತಮ್ಮ ಸಂಗಡಿಗರೊಡನೆ ಮಾಡಿದ ನಿರಂತರ ಪ್ರಯತ್ನದ ಫಲವಾಗಿ ಹಿಂದೆ ಸಾವಿರದಲ್ಲಿ ಹದಿನೇಳು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕುಷ್ಟ ರೋಗಿಗಳ ಸಂಖ್ಯೆ ಇಂದು ಸಾವಿರಕ್ಕೆ 0.3 ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ.  ‘ಕರುಣಾ ಟ್ರಸ್ಟ್’ ಸಾರ್ವಜನಿಕ ಮತ್ತು ಖಾಸಗಿ ಸಹಯೋಗದಲ್ಲಿ ಅರುಣಾಚಲ ಪ್ರದೇಶ, ಮೇಘಾಲಯ, ಒರಿಸ್ಸಾ ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಯೋಜನೆಯನ್ನು ಕೈಗೊಂಡಿದ್ದು ಈಗಾಗಲೇ ಗಣನೀಯ ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಾಣ ಮಾಡಿದೆ.  ಈ ಮೂಲಕ ಪಟ್ಟಣ ಮತ್ತು ಗ್ರಾಮೀಣ ಆರೋಗ್ಯ ಸೌಲಭ್ಯಗಳಲ್ಲಿರುವ  ಬೃಹದ್  ವೆತ್ಯಾಸಗಳನ್ನು ಕಡಿಮೆಗೊಳಿಸುವುದರ ಜೊತೆಗೆ ಟೆಲಿಮೆಡಿಸನ್, ಆರೋಗ್ಯ ವಿಮೆ, ಸಮಗ್ರ ಮಾನಸಿಕ ಆರೋಗ್ಯ ನಿರ್ಮಾಣ ಹಾಗೂ ಅಭಿವೃದ್ಧಿ ಮುಂತಾದ ಹೊಸ ಹೊಸ ಆವಿಷ್ಕಾರಗಳ ಬಗೆಗೂ ಅಪ್ರತಿಮವಾದ ಕೆಲಸ ಮಾಡುತ್ತಿದೆ.

ಡಾ. ಸುದರ್ಶನ್ ಅವರು ಹಲವಾರು ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ  ಗಣ್ಯ ಪ್ರಾತಿನಿಧ್ಯ, ಸ್ಥಾನಗೌರವಗಳನ್ನು ಹೊಂದಿದವರಾಗಿದ್ದು, ಜೊತೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ, ರಾಷ್ಟ್ರೀಯ ಬುಡಕಟ್ಟು ಜನಾಂಗಗಳ ಅಭಿವೃದ್ಧಿಮಂಡಳಿ, ಕರ್ನಾಟಕ ಲೋಕಾಯುಕ್ತ ಮುಂತಾದ ಸಂಸ್ಥೆಗಳ ಪ್ರಮುಖ ಪ್ರತಿನಿಧಿಗಳೂ ಆಗಿದ್ದಾರೆ. ಜೊತೆಗೆ Task Force on Health & Family Welfareನ ಅಧ್ಯಕ್ಷರಾಗಿ ಸರ್ಕಾರಕ್ಕೆ ಸಮಗ್ರ ಸಂಶೋಧನೆ ಮತ್ತು ಶಿಫಾರಸ್ಸುಗಳನ್ನು ತಯಾರಿಸಿಕೊಟ್ಟಿದ್ದಾರೆ.  

ಪ್ರತಿಷ್ಟಿತ ‘ರೈಟ್ ಲೈವ್ಲಿ ಹುಡ್ ಪ್ರಶಸ್ತಿ’ಯಲ್ಲದೆ, ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಮಾನವ ಹಕ್ಕುಗಳ ಸಂಸ್ಥೆಯ ಪ್ರಶಸ್ತಿ, ಸಾರ್ವಜನಿಕ ಆರೋಗ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವದ ಕೊಡುಗೆಗಾಗಿ 'ಭಾರತ ಸಾರ್ವಜನಿಕ ಆರೋಗ್ಯ ಸಂಸ್ಥೆ' ನೀಡುವ ಜೀವಮಾನದ ಸಾಧಾನಾ ಪ್ರಶಸ್ತಿಗಳನ್ನೂ ಡಾ. ಸುದರ್ಶನ್ ಸ್ವೀಕರಿಸಿದ್ದಾರೆ.   

“ನಾವು ಅತ್ಯಂತ ಸುಸಂಸ್ಕೃತರು ಎಂದು ಹೇಳಿಕೊಳ್ಳುವ ಸಮಾಜ  ಆದಿವಾಸಿ ಜನಾಂಗಗಳಿಂದ ಕಲಿಯಬೇಕಿರುವುದು ಬಹಳಷ್ಟು ಇದೆ” ಎಂದು ಸೌಜನ್ಯದಿಂದ ಆದರೆ ಅಷ್ಟೇ ನಿರ್ಭಿಡೆಯಿಂದ ಹೇಳುವ ಡಾ. ಸುದರ್ಶನರ  ಮಾತು ಎಲ್ಲೋ ನಮ್ಮನ್ನು ತಟ್ಟುವಂತಿದೆಯೇನೋ ಅನಿಸುತ್ತಿದೆ.

On the birth anniversary of great social worker Dr. H Sudarshan, H. Sudarshan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ