ಎಚ್. ಎಸ್. ಹರಿಶಂಕರ್
ಎಚ್. ಎಸ್. ಹರಿಶಂಕರ್
ಹರಿಶಂಕರ್ ಅಂದರೆ ಮೊದಲು ನೆನಪಾಗುವುದು, ನಾವು ಬೆಳೆಯುತ್ತಿರುವ ದಿನಗಳಲ್ಲಿ "ಓ ನಮ್ಮ ಕನ್ನಡ ರಷ್ಯಾದಲ್ಲೂ ಇದೆ, ಅದು ಹೇಗೆ?" ಎಂದು ನಮ್ಮಲ್ಲಿ ತುಂಬಿಸಿದ್ದ ಅಚ್ಚರಿಯ ಭಾವ! ರೇಡಿಯೋ ಮಾಸ್ಕೋದಲ್ಲಿ ಕೆಲವು ವರ್ಷ ಕನ್ನಡವನ್ನು ಮೊಳಗಿಸಿದ್ದವರು ಹರಿಶಂಕರ್. ರಷ್ಯಾದ ಶ್ರೇಷ್ಠ ಸಾಹಿತ್ಯವನ್ನು ಮೂಲ ರಷ್ಯನ್ ಭಾಷೆಯಲ್ಲೇ ಪ್ರಭುತ್ವ ಸಾಧಿಸಿ ಕನ್ನಡಕ್ಕೆ ತಂದ ಅಪ್ರತಿಮ ಪ್ರತಿಭೆ ಹರಿಶಂಕರರದು. ಮಹತ್ವದ ವಿದ್ವಾಂಸರಾಗಿ, ಲೇಖಕರಾಗಿ, ಭಾಷಾಂತರಕಾರರಾಗಿ, ಸಂಶೋಧಕರಾಗಿ, ಬೋಧಕರಾಗಿ, ವಿಶ್ವಭಾಷೆಗಳಿಗೂ ಕನ್ನಡಕ್ಕೂ ಸೇತುವೆಯಾಗಿ ಅಪಾರ ಕಾರ್ಯಮಾಡಿದವರು ಪ್ರೊ. ಎಚ್. ಎಸ್ ಹರಿಶಂಕರ್.
ಪ್ರೊ. ಎಚ್. ಎಸ್. ಹರಿಶಂಕರ್ ಅವರಿಗೆ ಇಂದು 80ರ ಹುಟ್ಟುಹಬ್ಬದ ಸಂಭ್ರಮ. ಅವರು 1940ರ ಡಿಸೆಂಬರ್ 8ರಂದು ಹರಿಹರದಲ್ಲಿ ಜನಿಸಿದರು. ತಂದೆ ಕನ್ನಡ ಸಾಹಿತ್ಯಲೋಕದ ಮಹಾನ್ ಪ್ರಕಾಶಕ, ಲೇಖಕ ಮತ್ತು ಪ್ರಾಧ್ಯಾಪಕರಾಗಿ ಹೆಸರಾದ ಪ್ರೊ. ಎಚ್. ಎಂ. ಶಂಕರನಾರಾಯಣ ರಾವ್ ಅವರು. ತಾಯಿ ಲಕ್ಷ್ಮೀದೇವಮ್ಮ. ಸಮಸ್ತ ಸಾಹಿತ್ಯಲೋಕವನ್ನೇ ತಮ್ಮ ಸ್ನೇಹದಲ್ಲಿ ಆವರಿಸಿದ್ದ ತಂದೆಯವರ ಮೂಲಕ ಹರಿಶಂಕರ್ ಕನ್ನಡದ ವಿದ್ವತ್ ಲೋಕದ ಸವಿಯನ್ನು ಆಸ್ವಾದಿಸುತ್ತಾ ಬೆಳೆದರು.
ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಹರಿಶಂಕರ್, ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್, ಸೀನಿಯರ್ ಇಂಟರ್‌ಮೀಡಿಯಟ್ ಮುಗಿಸಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪದವೀಧರರಾದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ., ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆಯಲ್ಲಿ ಎಂ.ಎ., ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್ (ಭಾಷಾಂತರ); ಮೈಸೂರು ವಿಶ್ವವಿದ್ಯಾಲಯದಿಂದ ಡಿಪ್ಲೊಮ ಇನ್ ರಷ್ಯನ್; ಮಾಸ್ಕೊ ವಿಶ್ವವಿದ್ಯಾಲಯದಿಂದ ಸರ್ಟಿಫಿಕೇಟ್ ಕೋರ್ಸ್ ಇನ್ ರಷ್ಯನ್ ಹೀಗೆ ಬೆಳೆದದ್ದು ಎಚ್. ಎಸ್. ಹರಿಶಂಕರ್ ಅವರ ವಿದ್ಯಾರ್ಜನೆ. ಅವರು ಸಂಸ್ಕೃತ ಕಾವ್ಯ ಓದಿದ್ದು ಮೈಸೂರು ಸರಕಾರದ ಶಿಕ್ಷಣ ಇಲಾಖೆಯಿಂದ. ಇಷ್ಟೇ ಅಲ್ಲ, ಸ್ವಲ್ಪ ಇರಿ. ನಮ್ಮಂತವರ ವಿದ್ಯಾಭ್ಯಾಸವೆಲ್ಲ ಕಾಲೇಜು ಮುಗಿದ ಮೇಲೆ ಮುಗಿದು ಹೋಗಿರುವಂತದ್ದು. ಆದರೆ, ಎಚ್. ಎಸ್. ಹರಿಶಂಕರ್ ಅವರದ್ದು ನಿರಂತರ ಕಲಿಕೆ.
ಹರಿಶಂಕರ್ ಅವರದ್ದು ರಷ್ಯನ್ ಭಾಷೆಯಲ್ಲಿ ಕೇವಲ ಸರ್ಟಿಫಿಕೇಟ್ ಸಾಧನೆಯಲ್ಲ. ರಷ್ಯನ್ ಭಾಷೆ ಬಿಟ್ಟು ಬೇರೇನೂ ಬರದವರೊಂದಿಗೆ ಅವರ ಭಾಷೆ ಕಲಿತು, ಕಲಿಸಿ, ಅದರ ಸೊಗಡನ್ನು ಕನ್ನಡದಲ್ಲಿ ತಂದ ಪ್ರಾವೀಣ್ಯತೆ ಅವರದ್ದು. 1964ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆ ಕಲಿಸುವ ತರಗತಿ ಆರಂಭವಾಯಿತು. ಹರಿಶಂಕರ್ ಆಗ ರಷ್ಯನ್ ಭಾಷೆ ಕಲಿತರು. ರಷ್ಯಾ ಭಾಷೆ ಕಲಿಸಲು ಮಾಸ್ಕೊದಿಂದ ಮೈಸೂರಿಗೆ ಬಂದವರಿಗೆ ಬೇರೆ ಭಾಷೆ ಬರುತ್ತಿರಲಿಲ್ಲ. ಅವರೊಂದಿಗೆ ಸ್ನೇಹದಿಂದಿದ್ದು ರಷ್ಯನ್ ಭಾಷೆಯನ್ನು ಅಂತರಂಗಕ್ಕೆ ತಂದುಕೊಂಡರು. ಮುಂದೆ ರಷ್ಯಾದಲ್ಲಿಯೇ ಕುಳಿತು ಅಲ್ಲಿನ ಭಾಷೆಯ ಶ್ರೇಷ್ಠ ಗ್ರಂಥಗಳನ್ನು ಕನ್ನಡದ ಶ್ರೇಷ್ಠ ವಿದ್ವಾಂಸರು ಶ್ಲಾಘಿಸುವ ರೀತಿಯಲ್ಲಿ ಕನ್ನಡಕ್ಕೆ ತಂದರು. ಅಲ್ಲಿನ ರೇಡಿಯೋ ಮೂಲಕ ವಿಶ್ವಕ್ಕೆ ಕನ್ನಡ ಕಸ್ತೂರಿಯನ್ನು ಪಸರಿಸಿದರು.
ಹರಿಶಂಕರ್ ಎಂ.ಎ ಪದವಿಯ ನಂತರ ಅಧ್ಯಾಪಕರಾಗಿ ಹಾರ್ಡ್ವಿಕ್ ಹೈಸ್ಕೂಲಿನಲ್ಲಿ. ಕೆಲಕಾಲ ಸೇವೆ ಸಲ್ಲಿಸಿ, 1967ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಭಾಷಾಂತರಕಾರರಾಗಿ ಪ್ರವೇಶಿಸಿದರು. 1967ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಸಹಾಯಕ ಅನುವಾದಕರಾಗಿ ವೃತ್ತಿ ಆರಂಭಿಸಿದ ಹರಿಶಂಕರ್ 1970ರಲ್ಲಿ ಅಧ್ಯಾಪಕರಾದರು. 1999ರಲ್ಲಿ ಪ್ರೊಫೆಸರ್ ಆದರು. ಕನ್ನಡ ಮತ್ತು ಅನುವಾದ ವಿಷಯಗಳನ್ನು ಅವರು ಬೋಧಿಸುತ್ತಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭವಾದ ವಿದೇಶಿ ಭಾಷಾ ವಿಭಾಗದಲ್ಲಿ 4 ವರ್ಷಗಳ ಕಾಲ ರಷ್ಯನ್ ಭಾಷೆ ಪಾಠವನ್ನೂ ಮಾಡಿದರು.
ನಾಲ್ಕು ಮಂದಿ ಪಿಎಚ್.ಡಿ ಹಾಗೂ 5 ಮಂದಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.
1972ರಲ್ಲಿ ರಷ್ಯನ್ ಫೆಲೋಷಿಪ್ ಪಡೆದ ಹರಿಶಂಕರ್ ಅನುವಾದ ತಂತ್ರಗಳು ಮತ್ತು ರಷ್ಯನ್ ಭಾಷೆಯನ್ನು ಮಾಸ್ಕೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ಒಂದು ವರ್ಷ ಕಲಿತರು. ರಷ್ಯಾ ಭಾಷೆ ಚೆನ್ನಾಗಿ ಬರುತ್ತಿದ್ದರಿಂದ ಸೋವಿಯತ್ ಯೂನಿಯನ್ ಜೊತೆ ಅವರ ಸಂಪರ್ಕ ಬೆಳೆದಿತ್ತು. ಮಾಸ್ಕೊದ ಪೀಪಲ್ಸ್ ಫ್ರೆಂಡ್‌ಶಿಪ್ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ 1975ರಲ್ಲಿ ಮಾಸ್ಕೊಗೆ ತೆರಳಿದ ಹರಿಶಂಕರ್ ಅಲ್ಲಿ 40 ದಿನ ಇದ್ದರು. ‘ಕನ್ನಡದ ಮೇಲೆ ರಷ್ಯನ್ ಸಾಹಿತ್ಯದ ಪ್ರಭಾವ’ ಕುರಿತು ಉಪನ್ಯಾಸ ನೀಡಿದರು. ನಂತರ 1978ರಲ್ಲಿಯೂ ಇದೇ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಅವರು ಆಗಲೂ 40 ದಿನ ರಷ್ಯಾದಲ್ಲಿದ್ದರು. ರಷ್ಯಾ ಸರ್ಕಾರದ ‘ರಾದುಗಾ (ಕಾಮನಬಿಲ್ಲು) ಪಬ್ಲಿಕೇಷನ್’ ಕರೆಯ ಮೇರೆಗೆ 1988ರಿಂದ 1990ರವರೆಗೆ ರಷ್ಯಾದಲ್ಲಿಯೇ ಇದ್ದ ಹರಿಶಂಕರ್ ರಷ್ಯಾದ ಸಾಕಷ್ಟು ಕೃತಿಗಳನ್ನು ಕನ್ನಡಕ್ಕೆ ತಂದರು. ಅದೇ ಸಂದರ್ಭದಲ್ಲಿ ರೇಡಿಯೊ ಮಾಸ್ಕೊದಲ್ಲಿ ಉದ್ಘೋಷಕರಾಗಿಯೂ ಅವರು ಕೆಲಸ ನಿರ್ವಹಿಸಿದರು. ಆಗ ರೇಡಿಯೊ ಮಾಸ್ಕೊದಲ್ಲಿ ಪ್ರತಿ ದಿನ ಮಧ್ಯಾಹ್ನ 2ರಿಂದ 2.30ರವರೆಗೆ ಹಾಗೂ ಸಂಜೆ 4.30ರಿಂದ 5 ಗಂಟೆಯವರೆಗೆ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಇದರಲ್ಲಿ ರಷ್ಯಾದ ಸುದ್ದಿಗಳನ್ನು ಹರಿಶಂಕರ್ ಕನ್ನಡದಲ್ಲಿ ಓದುತ್ತಿದ್ದರು. ಹೀಗೆ ಹಲವಾರು ಬಾರಿ ರಷ್ಯನ್ ಹಾಗೂ ಕನ್ನಡ ಭಾಷೆಯ ಸೇತುವೆಯಾಗಿ ಮತ್ತು ಕನ್ನಡ ಸಂಸ್ಕೃತಿಯ ರಾಯಭಾರಿಯಾಗಿ ಅವರು ಜವಾಬ್ದಾರಿ ನಿರ್ವಹಿಸಿದರು.
ಹರಿಶಂಕರ್ ರಷ್ಯನ್ ಭಾಷೆಯ ಮೇಲಿನ ಪ್ರೌಢಿಮೆಯಿಂದ ರಷ್ಯನ್ ಮೂಲದಿಂದಲೇ ಕನ್ನಡಕ್ಕೆ ಹಲವಾರು ಕೃತಿಗಳನ್ನು ಅನುವಾದಿಸಿದರು. ಹೀಗೆ ರಷ್ಯಾದ ಟಾಲ್ ಸ್ಟಾಯ್, ಚೆಕಾಫ್, ದಾಸ್ತೊವೊಸ್ಕಿ ಮುಂತಾದ ಪ್ರಸಿದ್ಧರ ಬರಹಗಳು ರಷ್ಯನ್ ಭಾಷೆಯಿಂದ ಕನ್ನಡಕ್ಕೆ ನೇರ ದಕ್ಕುವಂತಾಯಿತು. ಇವುಗಳಲ್ಲಿ ಚೆಕಾಫ್‌ನ ಕತೆಗಳು, ಕಜಾಕರು (ಟಾಲ್ ಸ್ಟಾಯ್ ಕಾದಂಬರಿ), ನರಿ ಮತ್ತು ಮೊಲ (ರಷ್ಯಾ ಜನಪದ ಕತೆಗಳು), ಷಿಲ್ತೂಹಿನ್; ಒಂದು, ಎರಡು, ಮೂರು (ಮಕ್ಕಳ ಕವಿತೆಗಳು); ಮಾನವ ಹೇಗೆ ಬಲಶಾಲಿಯಾದ, ದ್ಯಯ್‍ಷೆನ್, ನಕ್ಷತ್ರ ಮತ್ತು ಗ್ರಹಗಳನ್ನು ಕುರಿತು, ಬುರಾತಿನೋ ಸಾಹಸಗಳು, ಇರುವೆ ಮತ್ತು ಪಾರಿವಾಳ, ತುರ್ಕಮೆನಿಸ್ಥಾನದ ಜಾನಪದ ಕಥೆಗಳು, ನೈಜ ಮಾನವನ ಕತೆ, ಉಭಯಚರಿ; ತೂಫಿ, ತೋಮ್ಕ ಮತ್ತು ಮ್ಯಾಗ್ ಪೈ;. ಹಾರುವ ಕಂಬಳಿಹುಳು, ಋಷಿ ಮತ್ತು ಗುಲಾಬಿ, ಕವಿ ಜಿರೇನ್‌ಷೆ ಮತ್ತು ಸುಂದರಿ ಕರಾಪಷ್ ಸೇರಿವೆ.
ಹರಿಶಂಕರರು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳಲ್ಲಿ ಎರಡು ಮಹಾ ಕಾವ್ಯಗಳು, ಜಗತ್ತನ್ನು ತಲ್ಲಣಗೊಳಿಸಿದ ಹತ್ತು ದಿನಗಳು, ಜಾರ್ಜ್ ಡಬ್ಲ್ಯು ಸೌತ್‌ಗೇಟ್ ಅವರ ಯುರೋಪಿನ ಆಧುನಿಕ ಇತಿಹಾಸ ಭಾಗ 1 ಮತ್ತು ಭಾಗ 2 ಸೇರಿವೆ. ಇದಲ್ಲದೆ ಭಾರತೀಯ ವಿದ್ಯಾಭವನಕ್ಕಾಗಿ ಸಾಮ್ರಾಜ್ಯಕ್ಕಾಗಿ ಹೋರಾಟ, ದೆಹಲಿ ಸುಲ್ತಾನ ಅಧಿಪತ್ಯ, ಮುಘಲ್ ಸಾಮ್ರಾಜ್ಯ, ದೆಹಲಿ ಸುಲ್ತಾನ ಅಧಿಪತ್ಯ, ಬ್ರಿಟಿಷ್ ಪಾರಮ್ಯ ಮತ್ತು ಭಾರತೀಯ ಪುನರುಜ್ಜೀವನ, ಸ್ವಾತಂತ್ರ್ಯ ಸಂಗ್ರಾಮ ಕುರಿತಾದ ಹಲವು ಸಂಪುಟಗಳಲ್ಲಿನ ಅನೇಕ ಭಾಗಗಳ ಅನುವಾದ ಕಾರ್ಯಮಾಡಿದ್ದಾರೆ.
ಹರಿಶಂಕರ್ ಅವರ ಸ್ವತಂತ್ರ ಕೃತಿಗಳಲ್ಲಿ ಸುಂದರ ಮಾಸ್ಕೊ ಮತ್ತು ಸುಂದರ ರಷಿಯಾ (ಪ್ರವಾಸ ಕಥನ); ತಿರುಮಲಾರ್ಯ, ಸಿಂಗರಾರ್ಯ (ವಿಮರ್ಶೆ); ಸಿಂದಬಾದ್ ನಾವಿಕ, ಮೀನುಗಾರ ಖಲೀಫ (ಮಕ್ಕಳ ಕಥೆಗಳು), ಚಿಕ್ಕದೇವರಾಜ ಸಪ್ತಪದಿ, ಅನುವರ್ತನ, ಸರ್ವಜ್ಞನ ವಚನಗಳು (ಸಂಗ್ರಹ), ಶಾರದಾ ಮಂದಿರದ ರೂವಾರಿ ಎಚ್. ಎಂ. ಎಸ್ (ಜೀವನ ಚರಿತ್ರೆ); ತಲಕಾಡಿನ ಗಂಗರು ಮತ್ತು ಬೆಳ್ಳಾಲ ಒಕ್ಕಲಿಗರು, ಸ್ವಾಧ್ಯಾಯ, ವಾಸಂತಿ (ಸಂಪಾದನೆಗಳು); ಕನ್ನಡ ಭಾಗವತ ಸಂಪುಟ 1 ಮತ್ತು ಸಂಪುಟ 2 (ಸಂಶೋಧನಾ ಮಂಡಳಿ ಸದಸ್ಯತ್ವದ ಭಾಗವಹಿಕೆ) ಸೇರಿವೆ.
ಹರಿಶಂಕರರು ಇಂಗ್ಲಿಷಿನಲ್ಲಿ Sanci Honnamma, a poetess of 17th Century; The Yogaratnakar : A work of Mystic poet Shantarasa (Jinamajari); ಮತ್ತು ಇತರರೊಂದಿಗೆ The history of Kanakagiri ಕೃತಿ ರಚಿಸಿದ್ದಾರೆ.
ಹರಿಶಂಕರರು ಹಲವಾರು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಗೋಷ್ಠಿ ಮತ್ತು ಸಮ್ಮೇಳನಗಳಲ್ಲಿ ಭಾಗಿಯಾಗಿ ಪ್ರಬಂಧ ಮಂಡಿಸಿದ್ದಾರೆ. ಬೆಂಗಳೂರಿನ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಸೈನ್ಸ್, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಹೈದರಾಬಾದಿನ ಸಿ.ಐ.ಇ.ಎಫ್.ಎಲ್., ಮಾಸ್ಕೋದ ಪ್ಯಾಟ್ರಿಸ್ ಲುಮುಂಬ ವಿಶ್ವವಿದ್ಯಾನಿಲಯ, ಚಳ್ಳಕೆರೆ, ದಾವಣಗರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳ ಅಧ್ಯಕ್ಷತೆ ಮುಂತಾದ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ.
ಪುಸ್ತಕ ಪ್ರಪಂಚ, ಪ್ರಬುದ್ಧ ಕರ್ನಾಟಕ, ಕನ್ನಡ ವಿಶ್ವಕೋಶದ ಸಂಪುಟಗಳು, ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಹರಿಶಂಕರರ ವಿಫುಲ ಬರಹಗಳಿವೆ.
ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು, ದೇಜಗೌ, ಸರ್ಪಭೂಷಣ ಶಿವಯೋಗಿ, ಎಚ್. ಎಲ್. ನಾಗೇಗೌಡ, ಶಂಕರೇಗೌಡ, ಗಮಕ ವಿದ್ವಾನ್ ವೆಂಕಟಸುಬ್ಬಯ್ಯ, ಎಚ್. ಎಂ. ಶಂಕರನಾರಾಯಣರಾವ್, ಬಿ. ಎಂ. ಶ್ರೀ, ತಿರುಕಣಾಂಬಿ ಚಿಕುಪಾಧ್ಯಾಯ, ಕೆ. ವೆಂಕಟರಾಮಪ್ಪ, ಟಾಲ್ಸ್ಟಯ್, ಹಾಮಾನಾ, ಗುರುಸಿದ್ಧರಾಮೇಶ್ವರ ಮುಂತಾದ ಅನೇಕರ ಕುರಿತ ಗೌರವ ಸಂಚಿಕೆಗಳಲ್ಲಿ ಬರಹ ಮೂಡಿಸಿದ್ದಾರೆ.
ಹರಿಶಂಕರರು ರಷ್ಯ, ಲಾತ್ವಿಯ, ಉಕ್ರೇನ್, ಪೋಲೆಂಡ್, ಜರ್ಮನಿ, ಹಾಲೆಂಡ್, ಇಂಗ್ಲೆಂಡ್, ಫ್ರಾನ್ಸ್, ಮಲೇಷಿಯಾ, ಅಮೆರಿಕ, ಈಜಿಪ್ಟ್, ಸಿಂಗಪೂರ್, ಯುಎಇ, ನೇಪಾಳ, ಜಪಾನ್ ಮುಂತಾದ ದೇಶಗಳಲ್ಲಿ ಸಂಚರಿಸಿದ್ದಾರೆ.
ಹರಿಶಂಕರರಿಗೆ ಸೋವಿಯತ್ ಲ್ಯಾಂಡ್ ನೆಹರು ರಾಷ್ಟ್ರೀಯ ಪ್ರಶಸ್ತಿ, ಸಿರ್ಗೆಯ್ ಇಸೆನಿನ್ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು ಸಂದವು. ಇದಲ್ಲದೆ ಮೈಸೂರು ತ್ಯಾಗರಾಜ ಸಂಗೀತ ಸಭಾ, ಎಫ್.ಪಿ. ಇ. ಎ ಮೈಸೂರು ವಿಭಾಗದ ಸನ್ಮಾನ,ಹುಣಸೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ ಸನ್ಮಾನ, ಮೈಸೂರು ವಿಭಾಗದ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನ, ಮೈಸೂರಿನಲ್ಲಿ ಷಷ್ಠಿಪೂರ್ತಿ ಸನ್ಮಾನ, ಎಪ್ಪತ್ತು ವರ್ಷ ತುಂಬಿದ (2010) ಶುಭಸಂದರ್ಭದಲ್ಲಿ ಹಿತೈಷಿಗಳು, ಅಭಿಮಾನಿಗಳು ‘ಹರಿಚಂದನ’ ಎಂಬ ಗೌರವ ಗ್ರಂಥ ಅರ್ಪಣೆ ಮುಂತಾದ ಗೌರವಗಳು ಹರಿಶಂಕರ್ ಅವರಿಗೆ ಸಂದಿವೆ.
ಹರಿಶಂಕರರ ಪ್ರವಾಸ ಕಥನವಾದ 'ಸುಂದರ ಮಾಸ್ಕೊ ಮತ್ತು ಸುಂದರ ರಷಿಯಾ' ಕೃತಿಯ ಕುರಿತಾಗಿ ಅದರಲ್ಲಿ ಮುದ್ರಿತವಾಗಿರುವ ಕನ್ನಡ ಸಾಹಿತ್ಯಲೋಕದ ಮಹಾನ್ ಹಿರಿಯರುಗಳು ನುಡಿದಿರುವ ಮಾತುಗಳು ಹರಿಶಂಕರರು ಸಾಧಿಸಿರುವ ಹಿರಿಮೆ ಮತ್ತು ಗಳಿಸಿರುವ ಹಿರಿಯರ ಅಗಾಧ ಪ್ರೀತಿಗಳ ಕುರಿತು ಬಹಳಷ್ಟು ಹೇಳುತ್ತದೆ.
ಮಹಾನ್ ವಿದ್ವಾಂಸರಾಗಿ ಅಷ್ಟೆಲ್ಲ ಸಾಧಿಸಿದ್ದರೂ ನಮ್ಮೆಲ್ಲರ ಜೊತೆ ಸರಳತೆಯಿಂದ ಬೆರೆತು ಅಕ್ಕರೆಯ ಸವಿ ಹಂಚುತ್ತಿರುವ ಎಚ್. ಎಸ್. ಹರಿಶಂಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our great scholar Prof. Harishankar H S
What a personnality, very restless life as his most of the time is spent on study research teaching and writing.very well written ,and my humble thanks to the writer as he has given a very clear and close information on Prof.shri Harishankar.Thank you once again for the good writing on Profe.HS
ಪ್ರತ್ಯುತ್ತರಅಳಿಸಿ