ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ಗೋಪಿನಾಥ್


ಗೀತಾ ಗೋಪಿನಾಥ್ 


ಭಾರತೀಯ ಮೂಲದ ಗೀತಾ ಗೋಪಿನಾಥ್  ಜನವರಿ 2022- ಆಗಸ್ಟ್ 2025 ಅವಧಿಯಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (International Monetary Fund) ಪ್ರಪ್ರಥಮ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದವರು. 2019-2022 ಅವಧಿಯಲ್ಲಿ ಅವರು ಅಲ್ಲಿನ ಪ್ರಧಾನ ಆರ್ಥಿಕ ತಜ್ಞೆಯಾಗಿದ್ದರು. ಗೀತಾ ಗೋಪಿನಾಥ್ ನಮ್ಮ ಮೈಸೂರಿನ ಹುಡುಗಿ.  ಪ್ರಸಕ್ತ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು

ಗೀತಾ ಗೋಪಿನಾಥ್ 1971ರ ಡಿಸೆಂಬರ್ 8ರಂದು ಮೈಸೂರಿನಲ್ಲಿ ಜನಿಸಿದರು.  ತಂದೆ ಟಿ.ವಿ. ಗೋಪೀನಾಥ್.  ತಾಯಿ ವಿಜಯಲಕ್ಷ್ಮಿ.  ಮೈಸೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಗೀತಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಹಾಗೂ  ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ  ಪಿಎಚ್.ಡಿ ಸಾಧನೆ ಮಾಡಿದರು.  ತಮ್ಮ ಸಂಶೋಧನಾ ಪ್ರಬಂಧವಾಗಿ ಅವರು "Three essays on international capital flows: a search theoretic approach” ಅನ್ನು ಬೆನ್ ಬೆರ್ನಾಂಕೆ ಮತ್ತು ಕೆನ್ನೆಥ್ ರೊಗಾಫ್ ಅವರ ಮೇಲ್ವಿಚಾರಣೆಯಲ್ಲಿ ಮಂಡಿಸಿದ್ದರು.  ಅವರಿಗೆ ಸಂಶೋಧನಾ ಅವಧಿಯಲ್ಲಿ ಪ್ರಿನ್ಸ್ಟನ್ನಿನ 'ವುಡ್ರೋ ವಿಲ್ಸನ್ ಫೆಲೋಷಿಪ್ ಸಂಶೋಧನಾ ಪ್ರಶಸ್ತಿ’ ಸಂದಿತ್ತು.

ಗೀತಾ ಗೋಪಿನಾಥ್ ಈ ಹಿಂದೆ ಭಾರತೀಯ ರಿಜರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ನಂತರ ಐಎಂಎಫ್   ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಂಡ ಎರಡನೇ ಭಾರತೀಯ ಮೂಲದ ವ್ಯಕ್ತಿ.  2018 ರವರೆಗೆ ಮುಖ್ಯ ಅರ್ಥಶಾಸ್ತ್ರಜ್ಞರಾದ ಮೌರಿಸ್ ಅಬ್ಸ್ಟ್ಫೆಲ್ಡ್  ನಿವೃತ್ತಿಯ ನಂತರದಲ್ಲಿ  ಆ ಸ್ಥಾನವನ್ನು ಗೀತಾ ಗೋಪಿನಾಥ್ 2019ರ ಪ್ರಾರಂಭದಿಂದ 2022ರ ಆರಂಭದವರೆಗೆ ಈ ಹುದ್ದೆ ಅಲಂಕರಿಸಿದ್ದರು.  2022ರ ಜನವರಿಯಿಂದ ಆಗಸ್ಟ್ 2025 ವರೆಗೆ ಅವರು ಐಎಂಎಫ್‍ನ ಡೆಪ್ಯೂಟಿ ಡೈರೆಕ್ಟರ್ ಹುದ್ದೆ ನಿರ್ವಹಿಸಿದ್ದರು.?

ಜಿ 20 ರಾಷ್ಟ್ರಗಳ ‘ಗಣ್ಯ  ನಾಯಕರ ಸಲಹಾ ತಂಡ’ದ ಸದಸ್ಯರಾಗಿದ್ದ ಗೀತಾ ಗೋಪೀನಾಥ್ ಭಾರತದ ಹಣಕಾಸು ಇಲಾಖೆ ಪರ ಸೇವೆಯನ್ನೂ ಸಲ್ಲಿಸಿದ್ದರು.  2016ರಲ್ಲಿ ಗೀತಾ ಗೋಪಿನಾಥ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಆದರೆ ಗೀತಾ ಗೋಪಿನಾಥ್ ಅವರು ಮಾರುಕಟ್ಟೆ ಆರ್ಥಿಕತೆ ಮತ್ತು ಉದಾರ ನೀತಿಗಳನ್ನು ಹೆಚ್ಚು ಉತ್ತೇಜಿಸುತ್ತಿದ್ದರಾದ್ದರಿಂದ  ಸಿಪಿಎಂ ನಾಯಕರು ಆಕೆಯ ನೇಮಕಾತಿಯನ್ನು ವಿರೋಧಿಸಿದ್ದರು. 

ಗೀತಾ ಗೋಪಿನಾಥ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಜ್ವಾನ್ಸ್ಟ್ರಾ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್, ಎಕನಾಮಿಕ್ಸ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ.  ಇದಕ್ಕೂ ಮುನ್ನ ಆವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಗೀತಾ ಅವರನ್ನು ಐಎಮ್‌ಎಫ್ ಹಿರಿಯ ಹುದ್ದೆಗೆ ನೇಮಿಸಿದ್ದ ವ್ಯವಸ್ಥಾಪಕ ನಿರ್ದೇಶಕರಾದ ಕ್ರಿಸ್ಟಿನ್ ಲಾಗಾರ್ಡ್ ಅವರು “ಗೀತಾ ಗೋಪೀನಾಥ್ ಅತ್ಯುತ್ತಮ ಅರ್ಥಶಾಸ್ತ್ರಜ್ಞೆಯಾಗಿದ್ದು, ನಿಷ್ಕಳಂಕ ಶೈಕ್ಷಣಿಕ ರುಜುವಾತುಗಳನ್ನು ಹೊಂದಿದ್ದಾರೆ.  ಅಂತರರಾಷ್ಟ್ರೀಯ ಆರ್ಥಿಕ ವಿಚಾರಗಳಲ್ಲಿ ವ್ಯಾಪಕ ಅನುಭವ ಹೊಂದಿರುವ ಅವರು  ತಮ್ಮ ಅತ್ಯುತ್ತಮ ನಾಯಕತ್ವ ಸಾಮರ್ಥ್ಯವನ್ನೂ ಸಾಬೀತುಪಡಿಸಿದ್ದಾರೆ.  ಇಂತಹ ಪ್ರತಿಭಾನ್ವಿತರು ಐಎಂಎಫ್ ಆರ್ಥಿಕ ತಜ್ಞೆಯಾಗಿ ನೇಮಕ ಆಗಿರುವುದಕ್ಕೆ ಹರ್ಷವಾಗುತ್ತಿದೆ” ಎಂದು ನುಡಿದಿದ್ದರು.

ಇಷ್ಟೆಲ್ಲಾ ಸಾಧಿಸಿರುವ ಗೀತಾ ಗೋಪೀನಾಥ್ ವಿಶ್ವಮಟ್ಟದಲ್ಲಿ ಇನ್ನೂ  ಮಹತ್ವದ ಸೇವೆ ಸಲ್ಲಿಸುತ್ತಾರೆ ಎಂಬುದರ ಜೊತೆಗೆ, ನಮ್ಮ  ಭಾರತಕ್ಕೂ ಅವರ ಹೆಚ್ಚಿನ ಸೇವೆ ಸಲ್ಲಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.  

ಒಂದು ಕ್ಷಣ ಅನ್ನಿಸಿತು ಪ್ರತಿಭೆ ಎಲ್ಲಿದ್ದರೂ ಹುಡುಕಿ ಅಧಿಕಾರ ಕೊಡುವ ಅಮೆರಿಕಕ್ಕೂ,  ಅರ್ಹತೆಗಳಿಗೂ ನೇಮಕಾತಿಗಳಿಗೂ ಯಾವುದೇ ಸಂಬಂಧವಿಲ್ಲದ ನಮ್ಮ ದೇಶಕ್ಕೂ ಎಷ್ಟು ವೆತ್ಯಾಸ ಅಂತ.  


On the birthday of former Chief Economist of International Monetary Fund Gita Gopinath 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ