ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರತನ್ ನಾವಲ್ ಟಾಟ


ರತನ್ ನಾವಲ್ ಟಾಟ


ಇಂದು,  ಪ್ರಸಿದ್ಧ ‘ಟಾಟ’ ಉದ್ಯಮಗಳ ಉಚ್ಛ್ರಾಯ ಸ್ಥಿತಿಗೆ ಕಾರಣರಾದ  ಆ ಸಂಸ್ಥೆಯ ಮಾಜಿ ಮುಖ್ಯಸ್ಥರೂ ಹಾಗೂ ಟಾಟಾ ಸಾರ್ವಜನಿಕ ಹಿತಾಸಕ್ತಿ ಉದ್ದೇಶದ ಚಟುವಟಿಕೆಗಳ ಹಾಲಿ ಮುಖ್ಯಸ್ಥರೂ ಆದ  ರತನ್ ನಾವಲ್ ಟಾಟ ಅವರ ಜನ್ಮ ದಿನ.  

ರತನ್ ನಾವಲ್ ಟಾಟ ಅವರು 1937ರ ಡಿಸೆಂಬರ್ 28ರಂದು ಜನಿಸಿದರು.  ಅಜ್ಜಿಯ ಮೇಲ್ವಿಚಾರಣೆಯಲ್ಲಿ ಬದುಕನ್ನು ಕಳೆಯಬೇಕಾದ ಅನಿವಾರ್ಯತೆ ಉಂಟಾಯಿತು. ಒಮ್ಮೆ  ಅವರು  ಹಿಂದೆ ಅವರು ಮಾಡಿದ ಒಂದು ಉಪನ್ಯಾಸ ಓದುತ್ತಿದ್ದೆ.  “ನಮ್ಮ ಅಜ್ಜಿ ನಮ್ಮನ್ನು ಒಂದು ದೊಡ್ಡ ಕಾರಿನಲ್ಲಿ ಶಾಲೆಗೆ ಕಳುಹಿಸುತ್ತಿದ್ದಳು.   ಅಯ್ಯೋ, ನಮಗೆ ಸಾಮಾನ್ಯರಂತೆ ಇರಲು ಸಾಧ್ಯವಿಲ್ಲವಲ್ಲ ಎಂದೆನಿಸುತ್ತಿತ್ತು” ಎಂಬ ಅವರ ಮಾತುಗಳು ಅವರೊಳಗಿನ ಅಸಾಮಾನ್ಯತೆಯಲ್ಲಿನ ಸಾಮಾನ್ಯತೆಯ ಆಳದ ಬಗ್ಗೆ ಒಳಹೊಕ್ಕುವಂತೆ ಮಾಡುತ್ತದೆ.

ವಿದೇಶದಲ್ಲಿ ಓದು ಮುಗಿಸಿ ಐ.ಬಿ.ಎಮ್ ಸಂಸ್ಥೆಯಲ್ಲಿ ರತನ್ ಟಾಟ ಕೆಲಸಕ್ಕೆ ಆದೇಶ ಪತ್ರ ತೆಗೆದುಕೊಂಡಿದ್ದರು.  ಜೆ.ಆರ್.ಡಿ ಟಾಟ ಅವರು ರತನ್ ಅವರನ್ನು  ಭಾರತಕ್ಕೆ ಬಾ ಎಂದು ಕರೆದಾಗ ಟಾಟ ಸಂಸ್ಥೆಯಲ್ಲಿನ ಹಲವಾರು ಇಂಜಿನಿಯರುಗಳ ಮಧ್ಯೆ ಒಬ್ಬನಾಗಿ ಯಂತ್ರಗಳ ಮಧ್ಯೆ ಕೆಲಸ ಮಾಡಲು ಪ್ರಾರಂಭ ಮಾಡಿ ಮುಂದೆ 1991ರಿಂದ ಟಾಟಾ ಸಮೂಹಗಳ ಮುಖ್ಯಸ್ಥರೇ ಆದರು.

ಇವರ ಹಿಂದಿನ  ಟಾಟ ಸಮೂಹದ  ಮುಖ್ಯಸ್ಥ 'ಭಾರತರತ್ನ ಜೆ.ಆರ್.ಡಿ ಟಾಟ' ಅಪಾರ ಸಾಧಕ.  ಒಂದು ರೀತಿಯಲ್ಲಿ ವರ್ಣರಂಜಿತ ಮೋಹಕ ವ್ಯಕ್ತಿತ್ವ ಅವರದು.  ಅವರ ಸ್ಥಾನದಲ್ಲಿ ಈ ಗಂಭೀರ ಹೃದಯಿ ಬಂದಾಗ ಅಯ್ಯೋ ಆ ಸ್ಥಾನದಲ್ಲಿ ಈತ ಸಲ್ಲುತ್ತಾನೆಯೇ ಎಂಬ ಮಾತು ಎಲ್ಲೆಲ್ಲಿಯೂ ಮೂಡಿತ್ತು.  ಆದರೆ ರತನ್ ಮಾತನಾಡಲಿಲ್ಲ.  ಸುಮ್ಮನೆ ಕೆಲಸ ಮಾಡುತ್ತಾ ಹೋದರು.  ಈಗ ಅವರು ಮಾಡಿದ್ದೆಲ್ಲಾ ತಾನೇ ತಾನಾಗಿ ಪುಟಗಟ್ಟಲೆ ಕಥೆ ಹೇಳುತ್ತಿವೆ.  ಜೆ.ಆರ್.ಡಿ ಅವರು ನಿವೃತ್ತರಾದ ದಿನಗಳಿಂದ ರತನ್ ಆಳ್ವಿಕೆಯ ಕೊನೆಯ  ಅವಧಿಯ ವೇಳೆಗೆ (ಡಿಸೆಂಬರ್ 2012) ಟಾಟಾ ಸಮೂಹ ನಲವತ್ತು ಪಟ್ಟು ಬೆಳೆಯಿತು. ವಿಶ್ವದ ಪ್ರಮುಖ ಅಮೂಲ್ಯತೆಗಳನ್ನು ತನ್ನದಾಗಿಸಿಕೊಂಡಿತು.  ಜೊತೆಗೆ ತನ್ನನ್ನು ಎಲ್ಲೆಡೆ ಅಮೂಲ್ಯವಾಗಿಸಿಕೊಂಡು ಬೆಳೆಯಿತು.

ಇಂದು ವ್ಯಾಪಾರಿ ಉದ್ಯಮಗಳಲ್ಲಿ ಬಿಲಿಯನ್, ಟ್ರಿಲಿಯನ್ ಡಾಲರುಗಳ ಹಣ, ಷೇರು ಮೌಲ್ಯಗಳ ಬಗ್ಗೆ ಮಾತುಗಳನ್ನು ಕೇಳುತ್ತೇವೆ.  ಅದರ ಪ್ರಮುಖ ವ್ಯಕ್ತಿಗಳು ವೈಯಕ್ಕಿಕವಾಗಿ ಎಷ್ಟು ಬಿಲಿಯನ್ನುಗಳ ಸರದಾರರು ಎಂದು ಪ್ರತಿದಿನ ಓದುತ್ತೇವೆ.  ಅಂತಹ ಪ್ರಮುಖ ಬಿಲ್ಲಿಯನ್ನಾಧಿಪತಿ ರತನ್ ಟಾಟ ಅವರನ್ನು ನೋಡಿದವರಿಗೆ ಅದು ಆ ರತನ್ ಎಂಬ ಈ ‘ರತ್ನ’ ವ್ಯಕ್ತಿತ್ವದ ಮುಂದೆ ಅತೀ ಸಣ್ಣದು ಎನಿಸುತ್ತದೆ. ಬ್ರಹ್ಮಚಾರಿಯಾದ, ಜೀವನದಲ್ಲಿ ಬಹಳಷ್ಟು ವರ್ಷಗಳ ಕಾಲ ಸಾಮನ್ಯವಾದ  ಬ್ಯಾಚಲರ್ ಅಕಾಮಡೇಷನ್ ಎಂದು ಬಣ್ಣಿಸಲಾಗುವ ಜೋಪಡಿಯಲ್ಲಿ ಜೀವನ ಕಳೆದ ಅವರಿಗೆ ಅವರ ಶ್ರೀಮಂತಿಕೆ ಎಂದೂ ಪ್ರಾಧಾನ್ಯವಾಗಿಲ್ಲ.  ಅವರಿಗೆ ಬದುಕಿನ ಶ್ರೀಮಂತಿಕೆಯು  ಸಾಧನೆ, ಪರಿಶ್ರಮ ಮತ್ತು ಬದುಕಿನ ಮೌಲ್ಯಗಳಿಗೆ ಸೇರಿದ್ದು.

ಈ ನಮ್ಮ ದೇಶದಲ್ಲಿ ಇಂತಹ ಅತ್ಯುತ್ತಮ ರತ್ನಗಳು ಅಲ್ಲಲ್ಲಿ ಅರಳಿದ ಕಮಲಗಳಂತೆ ಕಂಗೊಳಿಸುತ್ತವೆ.  ಆದರೆ ಈ ಕಮಲಗಳ ಆಚೆಗೆ ಹರಡುತ್ತಿರುವ ಕೇಸರಿನಿಂದ ಭಾರತ ದೇಶ ತಲ್ಲಣಗೊಂಡಿದೆ.  ನೈತಿಕ, ಸಾಮಾಜಿಕ,  ಆರ್ಥಿಕ ಬಡತನಗಳ, ಭ್ರಷ್ಟ-ಭಂಡತನಗಳ ಮಧ್ಯೆ ಕಮಲಗಳು ಉದ್ಭವಿಸುವದೇ ದುಸ್ತರವೇನೋ ಎನಿಸುತ್ತವೆ.  ಇಂತಹ ಪ್ರಶ್ನೆಗಳು ಬಂದಾಗಲೆಲ್ಲಾ ರತನ್ ನಾವಲ್ ಟಾಟ ಅವರು ತಮ್ಮ ಹಿಂದಿನವರ ಮಾನವೀಯ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ  ಪ್ರಧಾನರಾಗಿ ಕಂಗೊಳಿಸಿದ್ದಾರೆ.

ಟಾಟಾ ಸಂಸ್ಥೆಯವರು  ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಹೋದಾಗ,   ಬಂಗಾಳದಲ್ಲಿ ಕಾರು ನಿರ್ಮಾಣದ ಘಟಕ ಪ್ರಾರಂಭಿಸಿದಾಗ ಹಾಗೂ ಕಳೆದ ವರ್ಷಗಳಲ್ಲಿ  ತಾಂಡವ ಆಡಿದ  ದೂರವಾಣಿ ವಿಚಾರದ ಪ್ರಕರಣಗಳಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಭ್ರಷ್ಟವ್ಯವಸ್ಥೆಗಳು ಹೇಗೆ ನಡೆದುಕೊಂಡಿವೆ ಎಂಬುದು ದೇಶಕ್ಕೆ ತಿಳಿದಿರುವ ವಿಚಾರ.  ರತನ್ ನಾವಲ್ ಟಾಟ ಅವರಿಗೆ ಪ್ರಗತಿ ಎಂದರೆ ಏನಾದರಾಗಲೀ ಮಾಡಿಯೇ ತೀರುತ್ತೇನೆ ಎಂಬ ಅಹಂಕಾರವಲ್ಲ.  ಈ ಗಂಭೀರ ವಾತಾವರಣಗಳಲ್ಲೆಲ್ಲಾ ಟಾಟಾ ಸಂಸ್ಥೆ ತನ್ನನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು.  ಜೊತೆಗೆ ಸಾಧನೆ ಎಂದರೆ ಏನು ಎಂದು ಲೋಕಕ್ಕೆ ತೋರಿಸಿಕೊಟ್ಟರು.

ಮುಂಬೈನಲ್ಲಿ ಭಯೋತ್ಪಾದನೆಯ ದೆಸೆಯಿಂದ ಅವರ ಹೋಟೆಲ್ ನಿರ್ನಾಮವಾದ ಹಿನ್ನಲೆಯಲ್ಲಿ, ಅಲ್ಲಿನ ಎಲ್ಲಾ ಉದ್ಯೋಗಿಗಳನ್ನೂ ಅಷ್ಟೇ ಅಲ್ಲ ಆ ಹೋಟೆಲಿನ ಬಳಿ ಇದ್ದ ಪಾವ್ ಬಾಜಿ ಮಾರಾಟಗಾರ, ಪಾನ್ ವಾಲ ಇತ್ಯಾದಿ ಎಲ್ಲರನ್ನೂ ಅವರ ಬದುಕಿನ  ಅವಶ್ಯಕತೆಗಳ ಬಗ್ಗೆ ಗೌರವಯುತವಾಗಿ ನೋಡಿಕೊಂಡ ರತನ್ ಅವರ ಬಗ್ಗೆ ಇಂದು ಭಾರತದ ಸಾಮಾನ್ಯ ಪ್ರಜೆ ಕೂಡಾ ಅತ್ಯಂತ ಗೌರವಯುತನಾಗಿ ಮಾತನಾಡುತ್ತಿದ್ದಾನೆ.  2012ರ ಅಂತ್ಯದಲ್ಲಿ ರತನ್ ಟಾಟಾ ಅವರು  ತಮ್ಮ ಅಧಿಕಾರವನ್ನು ಸೈರಸ್ ಮಿಸ್ತ್ರಿ ಎಂಬವರಿಗೆ ಹಸ್ತಾಂತರಿಸಿ ನಿವೃತ್ತಿಗೆ ಬಂದರು. ಮುಂದೆ ಮಿಸ್ತ್ರಿ ಅವರ ಉಚ್ಛಾಟನೆಯಲ್ಲಿ ಪಾತ್ರವಹಿಸಿ 2016 ವರ್ಷದಲ್ಲಿ ಕೆಲಕಾಲ  ಪುನಃ ಕಾರ್ಯನಿರ್ವಹಿಸಿದರು.   ಟಾಟಾ ಸಂಸ್ಥೆಯ ಜನೋಪಯೋಗಿ ಚಟುವಟಿಕೆಗಳಲ್ಲಿ  ಅವರ ನೇತೃತ್ವ  ನಿರಂತರವಾಗಿ ಮುನ್ನಡೆದಿದೆ.    ಅವರ ಉಪಯೋಗ ದೇಶಕ್ಕೆ ಮಾರ್ಗದರ್ಶಕವಾಗಿ ದೊರಕುತ್ತದೆ ಎಂಬ ಆಶಯ ಭಾರತೀಯರದು.

ಇಂತಹ ಸುಪುತ್ರರು ನಮ್ಮ ಕಾಲದಲ್ಲಿದ್ದಾರೆ ಎಂದು ಹೃದಯತುಂಬಿ ಬರುತ್ತದೆ.  ಈ ‘ಮಹಾನ್ ರತ್ನ’ ರತನ್ ಟಾಟ ಅವರಿಗೆ ಜನ್ಮದಿನದ ಶುಭಾಶಯಗಳು.

On the birth day of the great Ratan Noval Tata

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ