ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋಮೇಶ್ವರಶತಕ18


 ಸೋಮೇಶ್ವರ ಶತಕ 18ನೇ ದಿನ


 ಪದ್ಯ  86
*ಮಡೆಯಂಗುತ್ತಮ ವಿದ್ಯೆ ಬೆಟ್ಟ; ಕುರುಡಂಗಂ ಮಾರ್ಗವೇ ಬೆಟ್ಟ; ಕೇ ,  ಳ್ಬಡವಂಗೆಲ್ಲರ ದ್ವೇಷ ಬೆಟ್ಟ; ಜಡದೇಹಿಗಂ ಜರಾ ಬೆಟ್ಟ; ಮು,  ಪ್ಪಡಿಸಿರ್ದಾತಗೆ ಪೆಣ್ಣು ಬೆಟ್ಟ; ಋಣವೇ ಪೇರ್ಬೆಟ್ಟ ಮೂಲೋಕದೊ, ಳ್ಕಡು ಲೋಭಿಂಗಣು ಬೆಟ್ಟವೈ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ದಡ್ಡನಾದವನಿಗೆ ಉತ್ತಮವಾದ ವಿದ್ಯೆಯೆಂಬುದು ಬೆಟ್ಟದಷ್ಟು ಗಹನವಾದುದು. ಹಾಗೆಯೇ ಕುರುಡನಿಗೆ ಮುಂದಿರುವ ದಾರಿಯು ಬೆಟ್ಟ. ಬಡವನಿಗೆ ಎಲ್ಲರ ದ್ವೇಷಗಳು ಬೆಟ್ಟದಂತೆ. ಸೋಮಾರಿಯಾದವನಿಗೆ ಮುಪ್ಪೆನ್ನುವುದು ಕಠಿಣ. ಮುಪ್ಪು ಅಡರಿರುವವನಿಗೆ ಹೆಣ್ಣು ಬೆಟ್ಟದಂತೆ ಕಷ್ಟವಾದರೆ ಎಲ್ಲಕ್ಕಿಂತಲೂ ದೊಡ್ಡದು ಸಾಲ. ಕಡುಲೋಭಿಗಂತೂ ಕಣಕಣವೂ ಕಷ್ಟವೇ ಆಗಿರುತ್ತದೆ. ಇಲ್ಲಿ ಬೆಟ್ಟ ಎನ್ನುವುದನ್ನು ಗಹನ, ಕಠಿಣ, ದೊಡ್ಡದು ಎಂಬ ಅರ್ಥದಲ್ಲಿ ಬಳಸಲಾಗಿದೆ.

ಪದ್ಯ  87
*ಶುಕ ಶಂಖಂ ಗಜ ವಾಜಿ ವೇಣು ಪಶು ತಾಳಂ ಭೇರಿ ಶೋಭಾನ ಪಾ, ಠಕ ನೃತ್ಯಂ ಗಣಿಕಾಂಗನಾದಿ ತಳಿರಂ ಪೂವಣ್ಣಂ ವಿಪ್ರದ್ವಯಂ, ಮುಕರಂ ಮಾಂಸವು ಮದ್ಯ ತುಂಬಿದ ಕೊಡಂ ಪೆರ್ಗಿಚ್ಚನಾರ್ಕಂಡಡಂ,  ಶಕುನಂ ಶೋಭನಕಾಸ್ಪದಂ; ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಗಿಳಿ, ಶಂಖ, ಆನೆ, ಕುದುರೆ, ಕೊಳಲು, ಹಸು, ತಾಳ, ಭೇರಿ, ಗಾಯನ ಮಾಡುವ ಜನರು, ನೃತ್ಯವಾಡುವ ಗಣಿಕೆಯರು, ಇಬ್ಬರು ಬ್ರಾಹ್ಮಣರು, ತಳಿರು, ಹೂವು, ಹಣ್ಣು, ಕನ್ನಡಿ, ಮಾಂಸ, ಮದ್ಯತುಂಬಿದ ಕೊಡ, ದೊಡ್ಡದಾದ ಅಗ್ನಿ ಇವುಗಳು ಎದುರಿಗೆ ಕಂಡರೆ ಶುಭಶಕುನಕ್ಕೆ ಕಾರಣ.

ಪದ್ಯ  88 
*:ಕಪಿಯಂ ಗಾಣಿಗ ಪಾವು ಕಾಷ್ಠ ಜಿನ ತಕ್ರಂ ತಾವಿರಕ್ತಂ ವಿರೋ , ಧಿಪನೋರ್ವಂ ದ್ವಿಜ ಮುಕ್ತಕೇಶಿ, ಜಟ, ರಕ್ತಂ, ರಿಕ್ತಕುಂಭಂ, ವಿರಾ , ಜಿಪ ಭಿನ್ನಾಂಗನ, ಕುಷ್ಠನಂ, ವಿಧವೆಯಂ, ಕೊಂದಾಟಮಂ, ಧೂಮಮಂ ,  ಚಪಳರ್ಕಂಡರೆ ಪೋಪರೇ ? ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಕಪಿ, ಗಾಣಿಗ, ಹಾವು, ಕಟ್ಟಿಗೆ, ಜಿನ, ಮಜ್ಜಿಗೆ, ಕೊಂದಾಟ, ಹೊಗೆ ಇವುಗಳ ಜೊತೆಗೆ ಒಂದು ಕಾಲದಲ್ಲಿ ಅಪಶಕುನವೆಂದು  ಭಾವಿಸಲಾಗಿದ್ದ ಹಲವು ಮಾತುಗಳು ಇಲ್ಲಿವೆ. ಆ ಕಾಲದಲ್ಲಿ ಇವಕ್ಕೆ ಹೆಚ್ಚು ಪ್ರಾಶಸ್ತ್ಯವಿದ್ದಿರಬಹುದು. ಕೆಲವೊಂದು ಜನ ಈ ಚಿಂತನೆಗಳನ್ನು  ಚಾಲ್ತಿಯಲ್ಲಿಟ್ಟುಕೊಂಡಿದ್ದಾರೆ.  (ಯಾವುದನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಯಾವುದಕ್ಕೆ ಮಹತ್ವ ನೀಡಬಾರದು ಎಂಬ ಪ್ರಜ್ಞೆ ನಮಗೆ ಅತ್ಯವಶ್ಯಕ)

ಪದ್ಯ  89
*ಹಣಮಂ, ನೆತ್ತರ, ನೆಳ್ಳು, ಕೋಣಂ, ಕುರಿಯಂ, ಹಾರಾಯುಧಂ, ಬೀಳ್ಪುದಂ,  ಕುಣಪಂ ಕೊಲ್ಲುದನಂಗಹೀನಪೊಸತಂ, ಮಿಂದಿರ್ಪುದಂ, ಯೇರುವಂ , ದಣಮಂ ಕೆಂಪಿನ ಪೂವನೆಣ್ಣೆದಲೆ ನೂತ್ನಾಗಾರಮಂ ದೈತ್ಯರಂ ,  ಕನಸೋಳ್ ಕಾಣಲು ಬಾರದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಹಣ, ರಕ್ತ, ಎಳ್ಳು, ಕೋಣ, ಕುರಿ, ಕೈಯಲ್ಲಿರುವ ಆಯುಧ, ಬೀಳುವುದು, ಜಿಪುಣ, ಕೊಲ್ಲುವ ದೃಶ್ಯ,ಸ್ನಾನಮಾಡುತ್ತಿರುವ ದೃಶ್ಯ, ಪಲ್ಲಕ್ಕಿ, ಕೆಂಪುಹೂ, ಎಣ್ಣೆಹಚ್ಚಿರುವ ತಲೆ, ಹೊಸಮನೆ, ರಕ್ಕಸರು ಇವೆಲ್ಲವನ್ನೂ ಸ್ವಪ್ನದಲ್ಲಿ ಕಾಣಬಾರದು, ಅದನ್ನು ಅಶುಭವೆನ್ನುವರು ಎಂಬ ಮಾತುಗಳು ಇಲ್ಲಿವೆ. (ಯಾವುದನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಯಾವುದಕ್ಕೆ ಮಹತ್ವ ನೀಡಬಾರದು ಎಂಬ ಪ್ರಜ್ಞೆ ನಮಗೆ ಅತ್ಯವಶ್ಯಕ)

ಪದ್ಯ  90
*ಕೊಳನಂ ತಾವರೆಯಂ ತಳಿರ್ತವನಮಂ ಪೂದೋಟಮಂ ವಾಜಿಯಂ ,  ಗಿಳಿಯಂ ಬಾಲಮರಾಳನಂ ಬಸವನಂ ಬೆಳ್ಳಕ್ಕಿಯಂ ಛತ್ರಮಂ , ತಿಳಿನೀರ್ಪೂರ್ಣ ತಟಾಕಮಂ ಕುಮುದಮಂ ದೇವರ್ಕಳಂ ತುಂಬಿಯಂ ,  ತಿಳಿಯಲ್ಸ್ವಪ್ನದಿ ಲೇಸೆಲೈ ! ಹರಹರಾ ಶ್ರೀ ಚೆನ್ನಸೋಮೇಶ್ವರಾ.*

ಕೊಳ, ತಾವರೆ, ಚಿಗುರಿದವನ, ಹೂದೋಟ, ಕುದುರೆ, ಗಿಳಿ, ಹಂಸದಮರಿ, ಎತ್ತು, ಬೆಳ್ಳಕ್ಕಿ, ಬೆಳ್ಗೊಡೆ, ತಿಳಿನೀರಿನಿಂದ ತುಂಬಿದ ಕೆರೆ, ಕಮಲದ ಹೂಗಳು, ದೇವತೆಗಳು, ದುಂಬಿ ಇವುಗಳನ್ನು ಸ್ವಪ್ನದಲ್ಲಿ ಕಂಡರೆ ಒಳ್ಳೆಯದು ಎನ್ನುವರು. ಶುಭಶಕುನಗಳು. ಇದೆಲ್ಲದರಿಂದ ಆಗಿನ ಜನಜೀವನದ ಶ್ರದ್ಧೆ, ನಂಬಿಕೆಗಳು ವ್ಯಕ್ತವಾಗುತ್ತವೆ.

ವಿವರಣೆ: ಸುಬ್ಬುಲಕ್ಷ್ಮಿ Lrphks Kolar

ನಾಳೆ ಮುಂದುವರೆಯುವುದು...

(ನಮ್ಮ ಕನ್ನಡ ಸಂಪದ  Kannada Sampada 
ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ