ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜಾನಂದ್


 ರಾಜಾನಂದ್‌


'ರಂಗನಾಯಕಿ’ ಚಿತ್ರದಲ್ಲಿ ರಂಗಭೂಮಿ ಕಲಾವಿದನಾಗಿ 'ದಶರಥನ'  ಪಾತ್ರ ಮಾಡುತ್ತಾ, ಆ ಪಾತ್ರದಲ್ಲಿ ಕಾಡಿಗೆ ಹೊರಟುಹೋಗುವ ರಾಮನಿಗೆ ಪರಿತಪಿಸುತ್ತ ನಿಧನನಾಗುವ ದಶರಥನ ಪಾತ್ರದಲ್ಲಿ ಹಾಗೆಯೇ ಮೇಲೇಳದೆ ಅಸುನೀಗುವ ರಾಜಾನಂದ್ ಮರೆಯಲಾಗದ ಅಮರ ಕಲಾವಿದ.

‘ಗುರುಶಿಷ್ಯರು’ ಚಿತ್ರದಲ್ಲಿ ಗುರು ಪರಮಾನಂದರಾಗಿ ತಮ್ಮ ತುಂಟ  ಶಿಷ್ಯರೊಂದಿಗೆ ಗಂಭೀರ ಸುಜ್ಞಾನಿ ಗುರುಗಳಾಗಿ ಅಭಿನಯಿಸಿದ ರಾಜಾನಂದ್ ಅವರನ್ನು ಮರೆಯಲು ಹೇಗೆ ಸಾಧ್ಯ?

ರಾಜಾನಂದ್ 1927ರ ಡಿಸೆಂಬರ್ 2ರಂದು ಅರಸೀಕೆರೆ ತಾಲೂಕು ಹಾರನಹಳ್ಳಿಯಲ್ಲಿ ಜನಿಸಿದರು.  ಅವರ ಹುಟ್ಟು ಹೆಸರು ವೆಂಕಟರಾಜು.‍ ರಾಜಣ್ಣ ಎಂಬುದು ಬಳಕೆಯಲ್ಲಿದ್ದ ಹೆಸರು. ಬಾಲಕನಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳೆದರು.

ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡಿದರೂ ನಟನೆಯ ಹುಚ್ಚಿನಿಂದ ಕೆಲಸ ಬಿಟ್ಟು ಗುಬ್ಬಿ ಕಂಪೆನಿ ಸೇರಿದರು.  ಅಲ್ಲಿ ಅವರು ರಾಜಾನಂದರಾದರು. ಮುಂದೆ ರಾಜಾನಂದರು ಕಲ್ಕೋಟಿ, ಸಮಾಜ ವಿಕಸನ, ಕಮಲ ಕಲಾ, ಕರ್ನಾಟಕ ಕಲಾ ಮಂಡಳಿ, ಹಿರಣ್ಣಯ್ಯ ಮಿತ್ರಮಂಡಳಿ, ಗೋಕಾಕ್ ಕಂಪನಿ, ಜಮಖಂಡಿ ಕಂಪನಿಗಳ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ಸೋರಟ್ ಅಶ್ವಥ್, ಮಾಸ್ಟರ್ ಹಿರಣ್ಣಯ್ಯ, ಯೋಗಾನರಸಿಂಹ, ಎ. ಎಸ್. ಶೇಷಾಚಾರ್ ಮುಂತಾದವರು ಅವರ ಒಡನಾಡಿಗಳಾಗಿದ್ದರು. ರಂಗವೈಭವ ಎಂಬ ತಮ್ಮದೇ ನಾಟಕ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ರಚಿಸಿ,  ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದರು.

'ಧನಪಿಶಾಚಿ' ಚಿತ್ರದೊಂದಿಗೆ ಸಿನಿಮಾಲೋಕಕ್ಕೆ ಕಾಲಿಟ್ಟ ರಾಜಾನಂದರು  ಪ್ರವೇಶಿಸಿದ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.  ರಂಗಮಹಲ್ ರಹಸ್ಯ, ಎರಡು ಕನಸು, ಮಯೂರ, ಬಹದ್ದೂರ್ ಗಂಡು, ಭಾಗ್ಯವಂತರು, ತಾಯಿಗೆ ತಕ್ಕ ಮಗ, ಆಪರೇಷನ್ ಡೈಮಂಡ್ ರಾಕೆಟ್, ಹುಲಿಯ ಹಾಲಿನ ಮೇವು, ಭಕ್ತ ಪ್ರಹ್ಲಾದ, ರಣಧೀರ, ದೇವತಾ ಮನುಷ್ಯ, ಕುಂತೀಪುತ್ರ, ದೇವ, ರಂಗನಾಯಕಿ, ಗುರುಶಿಷ್ಯರು ಮುಂತಾದವು ಇವುಗಳಲ್ಲಿ ಸೇರಿವೆ.

ಬರವಣಿಗೆಯಲ್ಲೂ ಒಲವಿದ್ದ ರಾಜಾನಂದರು ಹಲವು ನಾಟಕಗಳು, ಕವಿತೆ, ವಚನಗಳನ್ನು ರಚಿಸಿದ್ದರು. ಶ್ರೇಷ್ಠ ಭಾವಾಭಿವ್ಯಕ್ತಿ, ಸುಸ್ಪಷ್ಟ ಕನ್ನಡ ಭಾಷೆಯುಳ್ಳ ಕಂಠಶ್ರೀ, ಪಾತ್ರದ ಘನತೆಗೆ ತಕ್ಕಂತ ನಡೆ ನುಡಿ ಇವೆಲ್ಲ ರಾಜಾನಂದರಲ್ಲಿ ಮನೋಜ್ಞ ರೀತಿಯಲ್ಲಿ ಮೇಳೈಸಿದ್ದವು. 

ರಾಜಾನಂದ್ 2004ರ ಆಗಸ್ಟ್ 26ರಂದು ಈ ಲೋಕವನ್ನಗಲಿದರು.

On the birth anniversary of great actor Rajanand

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ