ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಓಶೋ


 ಓಶೋ

ಡಿಸೆಂಬರ್ 11 ಓಶೋ ಅವರು ಜನಿಸಿದ ದಿನ. 

ಓಶೋ ಅವರ ಪುಸ್ತಕಗಳನ್ನು ಓದುತ್ತಾ ಹೋದಂತೆ ಅವರ ವಿಚಾರಗಳ ಬಗೆಗೆ ಮಾತ್ರವಲ್ಲ ಬದುಕಿನ ಬಗೆಗೆ ಒಂದು ರೀತಿಯ ಪ್ರೀತಿ ಸಹಾ ನಮ್ಮನ್ನಾವರಿಸುತ್ತಾ ಹೋಗುತ್ತದೆ.  ನಾವು ಇನ್ನೂ ಬೆಳೆಯುವ ವಯಸ್ಸಿನಲ್ಲಿ ಓಶೋ ಅಂದರೆ ಅವರೊಂದು ವಿವಾದದ ಸರಕು ಎಂಬಂತಹ ಸುದ್ಧಿಗಳೇ ಎಲ್ಲೆಲ್ಲೂ ಕೇಳಿ ಬರುತ್ತಿದ್ದು, ಅವರೆಂದರೆ ಒಂದು ರೀತಿಯ ಗುಮ್ಮ ನಮ್ಮೆಲ್ಲರನ್ನೂ ಕಾಡುತ್ತಿತ್ತು.  ಇಷ್ಟಾದರೂ ಅವರು ತಮ್ಮ ದಿವ್ಯ ಚಿಂತನಗಳಿಂದ ಹಚ್ಚಿದ ದೀಪಗಳು ಅವರ ಕೃತಿಗಳ ರೂಪದಲ್ಲಿ ಎಲ್ಲೆಲ್ಲೂ ಬೆಳಗುತ್ತಿದ್ದು  ಅವರು ಈ ಲೋಕದಲ್ಲಿ  ಅಜರಾಮರರಾಗಿ ಉಳಿದಿದ್ದಾರೆ.

ಲಂಡನ್ನಿನ ಸಂಡೇ ಟೈಮ್ಸ್ ಪತ್ರಿಕೆಯಲ್ಲಿ ಆಂಗ್ಲ ಕಾದಂಬರಿಕಾರ ಟಾಮ್ ರಾಬಿನ್ಸ್ “ಓಶೋ ಜೀಸಸ್ ಕ್ರಿಸ್ತನ ನಂತರದ ಅತ್ಯಂತ ಅಪಾಯಕಾರಿ ಮನುಷ್ಯ” ಎಂದು ಉದ್ಘರಿಸಿದ್ದರು.  ಓಶೋ ಅವರಷ್ಟು, ನಾವು ಬೆಳೆದು ಬಂದಿರುವ, ಚಿಂತಿಸುವ, ಪೂರ್ವಾಗ್ರಹ ಪೀಡಿತ ಬದುಕಿನ ಕ್ರಮದಿಂದ ಹೊರಬರಲು ಕೆಣಕುವ ಚಿಂತನಕಾರರು ಅಪರೂಪವೇ ಸರಿ.  ಅವರೊಂದು ಕಡೆ ಹೇಳುತ್ತಾರೆ “ನಾನು ನಿಮಗೆ ಅತ್ಯಂತ ಮಹತ್ತರವಾದ ಸವಾಲನ್ನು ನೀಡುತ್ತಿದ್ದೇನೆ.  ನಾನು ಬಯಸುವ ಹೊಸ ಮನುಷ್ಯನೆಂದರೆ ಒಂದೇ ಕಾಲದಲ್ಲಿ  ಬುದ್ಧನಂತೆ ಧ್ಯಾನಾಸಕ್ತನಾಗಿ, ಕೃಷ್ಣನಂತೆ ಪ್ರೇಮಿಸುವವನಾಗಿ, ಮೈಕೆಲ್ ಎಂಜೆಲೋ ಅಂತೆ  ಕ್ರಿಯಾಶೀಲನಾಗಿರುವ ಸಂಯುಕ್ತ  ವ್ಯಕ್ತಿತ್ವ ಉಳ್ಳವ.  “ಝೋರ್ಬಾದ ಬುದ್ಧ” ಎಂದು ತಮ್ಮ ಅನುಯಾಯಿಗಳಿಂದ ಪರಿಭಾವಿಸಲ್ಪಡುವ  ಓಶೋ,  ಝೋರ್ಬಾನಂತೆ ಭೌತಿಕ ಜೀವನದ ಸಕಲ ಆನಂದಗಳಿಗೆ ಮಾನ್ಯತೆ ನೀಡಬಲ್ಲ ಮತ್ತು ಗೌತಮ ಬುದ್ಧರಂತೆ ಮೌನವಾಗಿ ಧ್ಯಾನಕ್ಕೆ ಇಳಿಯ ಬಲ್ಲ ನವಮಾನವನನ್ನು ಆಶಿಸುತ್ತಾರೆ. ಈತ ಭೌತಿಕತೆ ಮತ್ತು ಆಧ್ಯಾತ್ಮಿಕತೆಗಳೆರಡರಲ್ಲೂ ಸಮೃದ್ಧ.  ”ಝೋರ್ಬಾದ ಬುದ್ಧ” ಒಬ್ಬ ಸಮಗ್ರ ಹಾಗೂ ಅವಿಚ್ಚಿನ್ನ ವ್ಯಕ್ತಿ.

ಓಶೋ ಅವರ ಮಾತುಕತೆಗಳಲ್ಲಿ ಯಾವುದೇ ಮುಚ್ಚು ಮರೆ ಕಾಣುವುದಿಲ್ಲ.  ಅವರು, ಸುಳ್ಳಿನಲ್ಲಿ ಸುರುಳಿ ಸುತ್ತಿಕೊಂಡಿರುವ ನಮ್ಮನ್ನು ಬಿಡಿಸಿಬಿಡಿಯಾಗಿ  ಹೊರತೆಗೆದಿಟ್ಟು ನಮ್ಮನ್ನು ನಾವೇ ಮುಕ್ತವಾಗಿ ತೆರೆದುಕೊಳ್ಳಲು ಅನುವುಮಾಡಿಕೊಡುತ್ತಾರೆ.   ಅವರ ಪ್ರಕಾರ  ‘ಅರಿವೆಂಬ ಜಾಗೃತಿ ಮತ್ತು  ಪಾಪ ಪ್ರಜ್ಞೆಯಿಂದ ಮುಕ್ತಿ’ ಇವು ನಮ್ಮನ್ನು ಅನುಭಾವಕ್ಕೆ ತೆರೆದಿರಿಸಿಕೊಳ್ಳಲು ಬೇಕಾದ ಅಗತ್ಯವಾದ ಸಿದ್ಧತೆ.  ಅವರು ನಮ್ಮಲ್ಲಿ  ವಿಶ್ವದಲ್ಲೊಂದಾಗುವಿಕೆಗೆ ಹುಟ್ಟಿಸುವ ಪ್ರೀತಿ ಅದ್ಭುತವಾದದ್ದು, ಅಸಾಮಾನ್ಯವಾದದ್ದು ಮತ್ತು  ಮತ್ತೆಲ್ಲೂ ಸಿಗದಂತೆ ಅಪರೂಪವಾದದ್ದು.  

ಈ ವಿಶ್ವದಲ್ಲಿ ಯಾರು ಯಾರು  ಮಡಿವಂತಿಕೆಯ ಸೋಗಿನಿಂದ ಹೊರಬಂದು ಮುಕ್ತವಾಗಿ ಮಾತನಾಡುತ್ತಾರೋ ಅವರೆಲ್ಲರನ್ನೂ ಸಮಾಜ ಹಲವು ರೀತಿಯ ಪೂರ್ವಾಗ್ರಹಗಳಿಂದ, ಸಮಾಜಬಾಹಿರ ದೃಷ್ಟಿಯಲ್ಲಿ ಕಾಣತೊಡಗುತ್ತದೆ.  ಇಂತಹವರು  ಹೇಳಿದ ವಿಷಯಗಳನ್ನು ಮನಸೋ ಇಚ್ಚೆಯಲ್ಲಿ  ಆಯ್ದು  ಹೆಕ್ಕಿತೆಗೆದು ಅವರುಗಳ ಕುರಿತು ಕೀಳುನೋಟ ಸೃಷ್ಟಿಸುವ ಪ್ರಯತ್ನಗಳು ಈ ವಿಶ್ವದಲ್ಲಿ ಸಾಕಷ್ಟು ನಡೆದಿವೆ.  ಓಶೋ ಅವರ ವಿಚಾರದಲ್ಲಿ ಸಹಾ ಹೀಗೆ ನಡೆದಿದ್ದನ್ನು ನಾವು ಸಾಕಷ್ಟು ಕಂಡಿದ್ದೇವೆ.

ತಮ್ಮ ಪ್ರವಚನಗಳ ಮೂಲಕ ಓಶೋ ಅವರು  ಮಾನವ-ಚೇತನದ ವಿಕಾಸದ ಎಲ್ಲಾ ಸ್ತರಗಳತ್ತಲ್ಲೂ ಪ್ರಕಾಶ ಬೀರಿದ್ದಾರೆ. ಬುದ್ಧ, ಮಹಾವೀರ, ಕೃಷ್ಣ, ಶಿವ, ಶಾಂಡಿಲ್ಯ, ನಾರದ, ಜೀಸಸ್ ಮುಂತಾದವರೊಂದಿಗೆ ಭಾರತದ ಆಧ್ಯಾತ್ಮಿಕ ಜಗತ್ತಿನ ತಾರೆಗಳಾದ ಆದಿಶಂಕರಾಚಾರ್ಯ, ಗೋರಾಖ್, ಕಬೀರ್, ನಾನಕ್, ಮಾಲೂಕ್ ದಾಸ್, ರೈದಾಸ್, ದರಿಯಾದಾಸ್, ಮೀರಾ ಮುಂತಾದವರ ಬಗ್ಗೆ ಸಹಾ ಅವರು ಸಾವಿರಾರು ಪ್ರವಚನಗಳನ್ನು ನೀಡಿದ್ದಾರೆ.  ಇವರ ಪ್ರವಚನಗಳು ಸ್ಪರ್ಶಿಸದೆ ಇರುವಂತಹ ಜೀವನದ ಆಯಾಮಗಳೇ  ಇಲ್ಲವೆನ್ನಬೇಕು. ಯೋಗ, ತಂತ್ರ, ಝೆನ್, ಹಸೀದ್, ಸೂಫಿ ಮುಂತಾದ ಸಾಧನೆಯ ಪರಂಪರೆಗಳ ಗೂಢ ರಹಸ್ಯಗಳ ಮೇಲೆ ಇವರು ಸವಿಸ್ತಾರವಾಗಿ ಬೆಳಕು ಚೆಲ್ಲಿದ್ದಾರೆ. ಇದರೊಟ್ಟಿಗೆ ರಾಜನೀತಿ, ಕಲೆ, ವಿಜ್ಞಾನ, ಮನೋವಿಜ್ಞಾನ, ದರ್ಶನ, ಶಿಕ್ಷಣ, ಪರಿವಾರ, ಸಮಾಜ, ಬಡತನ, ಜನಸಂಖ್ಯಾಸ್ಪೋಟ, ಪರಿಸರ ಮತ್ತು ಸಂಭವನೀಯ ಪರಮಾಣು ಯುದ್ಧ,  ಏಡ್ಸ್ ಮಹಾಮಾರಿ ಮುಂತಾದ ವಿಶ್ವ-ಸಂಕಟಗಳ ಬಗ್ಗೆಯೂ ಇವರು ತಮ್ಮ ಕ್ರಾಂತಿಕಾರಕ ದೃಷ್ಟಿಯನ್ನು ಬೀರಿದ್ದಾರೆ.

ಓಶೋ ಅವರು ತಮ್ಮ ಶಿಷ್ಯಂದಿರು ಮತ್ತು ಸಾಧಕರಿಗೆ ನೀಡಿದ  ಪ್ರವಚನಗಳು 650ಕ್ಕೂ ಹೆಚ್ಚು ಪುಸ್ತಕಗಳ ರೂಪದಲ್ಲಿ ಮುದ್ರಿತಗೊಂಡಿವೆ ಮತ್ತು ಮೂವತ್ತಕ್ಕೂ ಹೆಚ್ಚುಭಾಷೆಗಳಲ್ಲಿ ಭಾಷಾಂತರ ಮಾಡಲ್ಪಟ್ಟಿವೆ.  ಅವರ ಪ್ರವಚನಗಗಳು ಧ್ವನಿಮುದ್ರಿಕೆಗಳ ರೂಪದಲ್ಲಿಯೂ ಅಪಾರವಾದ ಸಂಚಲನೆಯಲ್ಲಿವೆ. ಓಶೋ ಹೇಳುತ್ತಾರೆ, ”ನನ್ನ ಸಂದೇಶಗಳು ಯಾವುದೇ ಸಿದ್ಧಾಂತ ಅಥವಾ ಚಿಂತನೆಯನ್ನು ಕುರಿತಾದದ್ದಲ್ಲ. ನನ್ನ ಸಂದೇಶಗಳು ರೂಪಾಂತರಣೆಗಾಗಿನ  ರಾಸಾಯನಿಕ ಕ್ರಿಯೆಯಾಗಿದ್ದು  ವಿಜ್ಞಾನವೇ ಆಗಿದೆ.”

ಓಶೋ ಅವರು ಜನಿಸಿದ್ದು  ಮಧ್ಯಪ್ರದೇಶದ ಕುಚ್ ವಾಡಾ ಗ್ರಾಮದಲ್ಲಿ ಡಿಸೆಂಬರ್ 11, 1931ರಂದು.  ಮಾರ್ಚ್ 21,1953ರಂದು ಅವರು ಜಿವನದಲ್ಲಿ ಪರಮ ಸಿದ್ಧಿಯನ್ನು ಪಡೆದರೆಂದು ಹೇಳಲಾಗುತ್ತದೆ.  ಜನವರಿ 19, 1990ರಂದು ಓಶೋ ಕಮ್ಯೂನ್ ಇಂಟರ್ ನ್ಯಾಷನಲ್ ನಲ್ಲಿ ದೇಹತ್ಯಾಗ ಮಾಡಿದರು.

ಓಶೋರವರ ಸಮಾಧಿಯ ಮೇಲೆ ಸ್ವರ್ಣಕ್ಷರಗಳಲ್ಲಿ ಹೀಗೆ ಅಂಕಿತವಾಗಿದೆ:
OSHO
Never Born
Never Died
Only Visited This
Planet Earth Between
Dec 11 1931 – Jan 19 1990

ಓಶೋ ಅವರ ಪತಂಜಲಿ ಯೋಗಸೂತ್ರ,  ಶಂಕರಾಚಾರ್ಯರ ಭಜ ಗೋವಿಂದಂ ಮೂಢಮತೆ, ಸಂಭೋಗದಿಂದ ಸಮಾಧಿಯ ಕಡೆಗೆ, ಬುದ್ಧನ ‘Diamond Sutra’, ಯೋಗ ಮತ್ತು Insights for a New Way of Living ಮಾಲಿಕೆಯಲ್ಲಿನ Intelligence, Creativity, Awareness, Courage ಮುಂತಾದ ಹಲವಾರು ಪುಸ್ತಕಗಳು ನನಗೆ ಸಂತಸ ತಂದಿವೆ.  ಹೀಗಾಗಿ ಓಶೋ ಅವರು ಮನದಲ್ಲಿ ಗುರುವಾಗಿ ಆಪ್ತವಾಗಿ ನಿಂತಿದ್ದಾರೆ.  ನನ್ನನ್ನು ನಾನೇ ಕಂಡುಕೊಳ್ಳುವುದಕ್ಕೆ ಸಂಕೋಚವನ್ನು ತೆಗೆದ ಅಮೂಲ್ಯತೆ ನೀಡಿದ ಈ ಮಹಾನ್ ಗುರುವಿಗೆ ನನ್ನ ಆತ್ಮೀಯ ನಮನ.

On the birth anniversary of Osho

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ