ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಸುರೇಂದ್ರರಾವ್


 ಬಿ. ಸುರೇಂದ್ರರಾವ್ ನೆನಪು



ಬಿ. ಸುರೇಂದ್ರರಾವ್ ಇತಿಹಾಸ ಪ್ರಜ್ಞೆ ಮತ್ತು ಗ್ರಂಥಾಲಯ ಪರಂಪರೆಗಳಿಗೆ ಹೆಸರಾಗಿದ್ದವರು.  2019ರ ಡಿಸೆಂಬರ್ 11 ಅವರು ಈ ಲೋಕವನ್ನಗಲಿದ ದಿನ.

ಇತಿಹಾಸತಜ್ಞರಾಗಿ, ಪ್ರಾಧ್ಯಾಪಕರಾಗಿ,  ಬರಹಗಾರರಾಗಿ, ಉತ್ತಮ ಅನುವಾದಕರಾಗಿ ಮಹತ್ವದ ಕೃತಿಗಳನ್ನು ರಚಿಸಿದ್ದ  ಸುರೇಂದ್ರರಾವ್ ಅವರು ಪ್ರಸಿದ್ಧ ಸಂಗ್ರಹಕಾರರೂ ಆಗಿದ್ದರು. ಮಂಗಳ ಗಂಗೋತ್ರಿಯ ಹತ್ತಿರದಲ್ಲೇ ಇರುವ ಅಸೈಗೋಳಿಯ ಸುರೇಂದ್ರರಾವ್ ಅವರ 'ಅಮೃತವರ್ಷಿಣಿ' ನಿವಾಸದಲ್ಲಿ 15 ಸಾವಿರ ಪುಸ್ತಕಗಳಿದ್ದವು.

ಬಿ. ಸುರೇಂದ್ರರಾವ್ 1948ರ ನವೆಂಬರ್ 19ರಂದು ಉಪ್ಪಿನಂಗಡಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ 1970ರಲ್ಲಿ ಮೂರು ಚಿನ್ನದ ಪದಕಗಳಡನೆ ಇತಿಹಾಸದ ಎಂ.ಎ ಪಡೆದು, 1976ರಲ್ಲಿ ಪಿಎಚ್.ಡಿ ಗಳಿಸಿದ್ದರು.

ಬಿ. ಸುರೇಂದ್ರರಾವ್ 1973ರಿಂದ 82ರವರೆಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದು,  1982ರಲ್ಲಿ ಮಂಗಳೂರು ವಿವಿ ಇತಿಹಾಸ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ 2008ರಲ್ಲಿ ನಿವೃತ್ತರಾಗಿದ್ದರು

ಸುರೇಂದ್ರರಾವ್ ಅವರ ಮನೆಯ ಮಾಳಿಗೆ ಪೂರ್ತಿ ಪುಸ್ತಕಗಳಿಗೆ ಮೀಸಲಾಗಿತ್ತು. 'ಅಮೃತವರ್ಷಿಣಿ' ಎಂಬ ಅವರ ಮನೆಯ ಹೆಸರನ್ನು ಧ್ವನಿಸುವಂತೆ ಒಂದು ಸಾವಿರ ಗಂಟೆಗಳ ಕಾಲ ಆಲಿಸಬಹುದಾದ ಅಮೂಲ್ಯ ಸಂಗೀತದ ಧ್ವನಿ ಮುದ್ರಿಕೆಗಳೂ ಅವರಲ್ಲಿದ್ದವು.

ರಾವ್‌ ಅವರ ಪುಸ್ತಕ ಸಂಗ್ರಹದ ಇತಿಹಾಸ ರೋಚಕವಾದುದಾಗಿತ್ತು. ಅವರ ತಂದೆ ಬಂದಾರು ಶ್ರೀಪತಿ ರಾಯರು ವೃತ್ತಿಯಲ್ಲಿ ವಕೀಲರಾಗಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಅವರಿಗೆ ಭೂಗೋಳಶಾಸ್ತ್ರದ ಮೇಲೆ ವಿಶೇಷ ಒಲವಿತ್ತು. ಹಾಗೆಯೇ ಅವರ ಇಂಗ್ಲಿಷ್ ಕೂಡ ಬಹಳ ವಿಶಾಲವಾಗಿತ್ತು. ಆ ಭಾಷೆಯ ಕೆಲವು ಕೃತಿಗಳನ್ನು ಮತ್ತು ಮುಖ್ಯವಾಗಿ ನಿಘಂಟುಗಳನ್ನು ಖರೀದಿಸುತ್ತಿದ್ದರು. ಒಂದು ಪದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ಬೇರೆ ಬೇರೆ ನಿಘಂಟುಗಳಲ್ಲಿ ನೋಡಿ ಯಾವ ಅರ್ಥ ಸಮರ್ಪಕವಾಗಿದೆ ಎಂಬುದನ್ನು ಮಗ ಸುರೇಂದ್ರರಾವ್ ಅವರಿಗೆ ಹೇಳುತ್ತಿದ್ದರು.
ಶ್ರೀಪತಿರಾಯರಲ್ಲಿ ಅಪೂರ್ವವಾದ ಅಟ್ಲಾಸ್‌ಗಳ ಸಂಗ್ರಹವಿತ್ತು. ಈ ಅಟ್ಲಾಸ್‌ಗಳನ್ನು ನೋಡಿಯೇ ಕೆಲವು ದೇಶಗಳ ಭೌಗೋಳಿಕ ವಿವರಗಳನ್ನು ನೀಡುವಷ್ಟು ಅವರು ಸಮರ್ಥರಾಗಿದ್ದರು. ಇಂಗ್ಲೆಂಡ್‌ ಸುತ್ತಿ ಬಂದವರಲ್ಲಿ ಅಲ್ಲಿನ ರಸ್ತೆಗಳು ಮತ್ತು ಕಟ್ಟಡಗಳ ವಿವರಗಳನ್ನು ನಿಖರವಾಗಿ ಚರ್ಚಿಸುತ್ತಿದ್ದರು. ನಿಘಂಟುಗಳ ಸಂಗ್ರಹಕ್ಕೆ ಮತ್ತು ಇಂಗ್ಲಿಷ್ ಪುಸ್ತಕಗಳ ಓದಿಗೆ ತಮ್ಮ ತಂದೆಯೇ ಪ್ರೇರಣೆ ಎನ್ನುತ್ತಿದ್ದರು ಸುರೇಂದ್ರರಾವ್. ಅವರ ಸಂಗ್ರಹದಲ್ಲಿ ತಂದೆಯಿಂದ ಸಿಕ್ಕ ಬಳುವಳಿಗಳು ಸೇರಿದಂತೆ ಐವತ್ತಕ್ಕಿಂತ ಹೆಚ್ಚು ಕನ್ನಡ–ಇಂಗ್ಲಿಷ್‌ ನಿಘಂಟುಗಳು ಇದ್ದವು. ಆಕ್ಸ್‌ಫರ್ಡ್ ಡಿಕ್ಷನರಿ (ಕಾಂಪ್ರಹೆನ್ಸಿವ್ ಎರಡು ಸಂಪುಟಗಳು), ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೇರೆ ಬೇರೆ ಪ್ರಕಾಶಕರು ಪ್ರಕಟಿಸಿದ ಹಳೆಯದರಿಂದ ಹಿಡಿದು ಪಸಕ್ತದವರೆಗಿನ ತುಳು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ನಿಘಂಟುಗಳು ಇವರ ಸಂಗ್ರಹದಲ್ಲಿದ್ದವು. ಈ ನಿಘಂಟುಗಳನ್ನು, ಅವರು  ಶಬ್ದಗಳ ಅರ್ಥಕ್ಕಾಗಿ ಮಾತ್ರ ನೋಡದೆ,  ಪುಸ್ತಕದಂತೆ ಓದುತ್ತಿದ್ದರಂತೆ. ಅವರು "ನಿಘಂಟುಗಳನ್ನು ಓದುವುದೇ ಒಂದು ಅಪೂರ್ವ ಅನುಭವ" ಎನ್ನುತ್ತಿದ್ದರು. "ಕೆಲವು ನಿಘಂಟುಗಳ ಪುಟ ಪುಟಗಳಲ್ಲಿ ಅವರು ಬರೆದಿರುವ ತಿದ್ದುಪಡಿ ಮತ್ತು ಅವರ ಇತರ ಗುರುತುಗಳನ್ನು ನೋಡಿದರೆ ಅವರ ಮಾತಿನ ಯಥಾರ್ಥ ಅರಿವಾಗುತ್ತದೆ" ಎಂಬುದು ಅವರನ್ನು ತಿಳಿದವರ ಮಾತು.

ಸುರೇಂದ್ರರಾವ್ ಅವರ ಸಂಗ್ರಹದಲ್ಲಿ ಸಹಜವಾಗಿಯೇ ಇತಿಹಾಸದ ಗ್ರಂಥಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಈ ಸಂಗ್ರಹದ ವಿಶೇಷವೆಂದರೆ ಇತಿಹಾಸದ ಮೂಲ ಗ್ರಂಥಗಳು ಅಲ್ಲಿದ್ದವು. ಅಮೆರಿಕನ್, ಯುರೋಪಿಯನ್ ಹಾಗೂ ಏಷ್ಯನ್ ದೇಶಗಳ ಇತಿಹಾಸಗಳ ಕುರಿತಂತೆ ಹಲವು ಮಹತ್ವದ ಸಂಪುಟಗಳು, ಮೂಲಗ್ರಂಥಗಳು ಇವರ ಸಂಗ್ರಹದಲ್ಲಿದ್ದವು. ಕೆಲವು ಇತಿಹಾಸ ಸಂಪುಟಗಳ ಸಮಗ್ರ ಸೆಟ್‌ಗಳಿದ್ದವು. ಭಾರತದ ಚಾರಿತ್ರಿಕ ಅಧ್ಯಯನಕ್ಕೆ ಸಂಬಂಧಪಟ್ಟ ಮಹತ್ವದ ಲೇಖನಗಳು ಇರುವ ಇಂಡಿಯನ್ ಹಿಸ್ಟಾರಿಕಲ್ ರಿವ್ಯೂ (ಐಸಿಎಚ್‍ಆರ್), ಸೋಶಿಯಲ್ ಸೈಂಟಿಸ್ಟ್, ಇತಿಹಾಸ ದರ್ಪಣ, ಎಫಿಗ್ರಫಿಕ್‌ ಕರ್ನಾಟಕ ಸಂಚಿಕೆಯ ಎಲ್ಲಾ ಸಂಪುಟಗಳು, ರಾಮಾಯಣ, ಮಹಾಭಾರತದ ಸಂಸ್ಕೃತ ಸಂಪುಟಗಳು, ಫ್ರೆಂಚ್ ರೆವಲ್ಯೂಷನ್, ನೆಪೋಲಿಯನ್ ರೆವಲ್ಯೂಷನ್ (ಸುಮಾರು ಐವತ್ತಕ್ಕಿಂತ ಹೆಚ್ಚು ಗ್ರಂಥಗಳಿವೆ), ಚಾರಿತ್ರಿಕ ಪರಿಕಲ್ಪನೆಗಳ ಕೃತಿ ಮಾಲಿಕೆ (ಪೆಂಗ್ವಿನ್ ಎಡಿಶನ್), ಅವರ್ ಓರಿಯಂಟಲ್ ಹೆರಿಟೇಜ್, ಆಕ್ಸ್‌ಫರ್ಡ್ ಪ್ರಕಟಗೊಳಿಸಿದ ರೂಲರ್ಸ್ ಆಫ್ ಇಂಡಿಯನ್ ಸರಣಿ ಮೊದಲಾದ ಅಮೂಲ್ಯ ಗ್ರಂಥಗಳ ಸಂಗ್ರಹ ಇವುಗಳಲ್ಲಿ ಸೇರಿದ್ದವು. ರಾವ್‌ ಅವರ ಸಂಗ್ರಹದಲ್ಲಿ ತುಳು, ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ – ಹೀಗೆ ಐದು ಭಾಷೆಗಳಿಗೆ ಸಂಬಂಧಿಸಿದ ಗ್ರಂಥಗಳಿದ್ದವು. ಕಾರಂತರ ಸಮಗ್ರ ಸಂಪುಟ, ಕುವೆಂಪು ಸಾಹಿತ್ಯ ಸಂಪುಟ, ಎ.ಎನ್.ಮೂರ್ತಿರಾವ್, ಡಿವಿಜಿ, ಬೀಚಿ ಮೊದಲಾದ ಲೇಖಕರ ಕೃತಿಗಳು, ಕನ್ನಡದ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದ ಅಧ್ಯಯನಪೂರ್ಣ ಗ್ರಂಥಗಳು, ಎಸ್‌.ಎಲ್‌. ಭೈರಪ್ಪನವರ ಎಲ್ಲಾ ಕಾದಂಬರಿಗಳು ಇವರ ಸಂಗ್ರಹದಲ್ಲಿದ್ದವು. ಇಂಗ್ಲಿಷ್ ಓದು ಅವರಿಗೆ ಬಹಳ ಪ್ರಿಯವಾಗಿತ್ತು. ‘ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಮಟ್ಟದಲ್ಲಿ ಓದುವಾಗ ಸಿಕ್ಕ ಫಾ.ಕ್ಯಾಸ್ಟಲಿನೊ ಮತ್ತು ಯು.ಎಲ್.ಭಟ್ ಅವರಂತಹ ಗುರುಗಳು ನನ್ನ ಇಂಗ್ಲಿಷ್ ಪ್ರೇಮಕ್ಕೆ ಮೂಲ’ ಎಂದು ಸ್ಮರಿಸಿಕೊಳ್ಳುತ್ತಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಶೇಕ್ಸ್‌ಪಿಯರ್‌ನ ಎಲ್ಲಾ ನಾಟಕಗಳನ್ನು ಮೂಲದಲ್ಲಿಯೇ ಓದಿದ್ದರಂತೆ. ‘ಎಲ್ಲಾ ಅರ್ಥವಾಗಿತ್ತೋ’ ಎಂದು ಕೇಳಿದರೆ, ‘ಅರೆಬರೆ ಅಷ್ಟೇ’ ಎನ್ನುತ್ತಿದ್ದರು.

ಇತಿಹಾಸಕ್ಕೆ ಸಂಬಂಧಿಸಿದಂತೆ ತತ್ವಶಾಸ್ತ್ರ (ಫಿಲಾಸಫಿ ಆಫ್ ಹಿಸ್ಟರಿ), ಚರಿತ್ರೆಯ ಚರಿತ್ರೆ (ಹಿಸ್ಟರಿಯೋಗ್ರಫಿ), ಇತಿಹಾಸ ಸಿದ್ಧಾಂತಗಳು (ಥಿಯರಿಸ್ ಆಫ್ ಹಿಸ್ಟರಿ), ಇತಿಹಾಸ ಸಂಶೋಧನೆಯ ವಿಧಾನ (ರಿಸರ್ಚ್ ಮೆಥಡಾಲಜಿ)- ಇವು ರಾವ್ ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಅವರ ಗ್ರಂಥಾಲಯದ ಸುಮಾರು ಹತ್ತು ಸಾವಿರ ಪುಸ್ತಕಗಳು ಈ ವಿಷಯಕ್ಕೆ ಮೀಸಲಾಗಿದ್ದವು. ಲಭ್ಯವಿಲ್ಲದ ಎಷ್ಟೋ ಪುಸ್ತಕಗಳನ್ನು ನೆರಳಚ್ಚು ಮಾಡಿ ಇಟ್ಟುಕೊಂಡಿದ್ದರು.

ಭೌತಿಕ ರೂಪದಲ್ಲಿ ಮಾತ್ರವಲ್ಲ ಸುರೇಂದ್ರರಾವ್ ಅವರು ಧ್ವನಿರೂಪದಲ್ಲೂ ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಇಟ್ಟಿದ್ದರು. ‘ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡೇ ಓದಬೇಕು. ಬದಲಾಗಿ ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಸ್ತಕಗಳಿಂದ ಸಿಗುವ ಮೂರಿ (ಪರಿಮಳ, ವಾಸನೆ) ಸಿಗಲಾರದು’ ಎನ್ನುತ್ತಿದ್ದರು ಸುರೇಂದ್ರರಾವ್.

ಸುರೇಂದ್ರ ರಾವ್ ಅವರಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದ ದಿನಗಳಿಂದಲೇ ಪುಸ್ತಕ ಸಂಗ್ರಹದ ಗೀಳು ಹತ್ತಿಕೊಂಡಿತ್ತು. ಸಮಯ ಸಿಕ್ಕಾಗಲೆಲ್ಲ ಗೀತಾ ಬುಕ್ ಹೌಸ್‌ಗೆ ಹೋಗುತ್ತಿದ್ದರು. ರಸ್ತೆ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ಎರಡನೇ ಕೈ ಪುಸ್ತಕಗಳನ್ನು ಸಾಕಷ್ಟು ಖರೀದಿಸಿದ್ದರು. 40 ವರ್ಷಗಳಿಂದ ಪುಸ್ತಕ ಖರೀದಿಯನ್ನು ಒಂದು ವ್ರತದಂತೆ ಆಚರಿಸಿಕೊಂಡು ಬಂದಿದ್ದರು.

ಅಮೃತವರ್ಷಿಣಿಯಲ್ಲಿ ಏಕಾಂಗಿಯಾಗಿದ್ದ ಸುರೇಂದ್ರರಾವ್ ಅವರಿಗೆ ಸಂಗಾತಿಗಳೆಂದರೆ ಪುಸ್ತಕಗಳು ಮಾತ್ರವಾಗಿದ್ದವು. ವಿದ್ಯಾರ್ಥಿಗಳು ಮತ್ತು ಯಾರಾದರೂ ಸಂಶೋಧಾನಾಸಕ್ತರು ಬಂದರೆ ಗಂಟೆಗಟ್ಟಲೆ ಹರಟುತ್ತ, ಕೇಳಿದರೆ ಪುಸ್ತಕಗಳನ್ನು ಕೊಡುತ್ತಿದ್ದರು.

ಸುರೇಂದ್ರರಾವ್ ಅವರಿಗೆ ಸಂಗೀತ ಮತ್ತು ಕ್ರಿಕೆಟ್ ಅತ್ಯಂತ ಪ್ರಿಯವಾಗಿತ್ತು. ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತದ ಪ್ರಮುಖ ಪ್ರಸಿದ್ಧ ಸಂಗೀತಗಾರರ ಹಾಡುಗಳ ಧ್ವನಿಮುದ್ರಿಕೆಗಳು ಇವರಲ್ಲಿದ್ದವು. ರಶೀದ್‌ ಖಾನ್, ಭೀಮಸೇನ ಜೋಶಿ, ಎಂ.ಎಸ್‌.ಸುಬ್ಬುಲಕ್ಷ್ಮೀ, ಅಖಿಲ್ ಬ್ಯಾನರ್ಜಿ, ಗಂಗೂಬಾಯಿ ಹಾನಗಲ್ ಮೊದಲಾದ ಸಂಗೀತ ದಿಗ್ಗಜರ ಹಾಡುಗಳ ಕ್ಯಾಸೆಟ್‌ಗಳ ಸಮಗ್ರ ಸಂಗ್ರಹ ಇವರಲ್ಲಿತ್ತು. ಕ್ರೀಡಾಜಗತ್ತಿನ ದಾಖಲೆಗಳು ಇವರಿಗೆ ಬಾಯಿಪಾಠವಾಗಿದ್ದವು. ಇವರ ಬಳಿ ಕ್ರಿಕೆಟ್‌ಗೆ ಸಂಬಂಧಿಸಿದ ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿದ್ದವು. ಕ್ರಿಕೆಟ್ ಮತ್ತು ಸಂಗೀತದ ಪುಸ್ತಕಗಳ ಇಂಗ್ಲಿಷ್ ಬರವಣಿಗೆ ಇವರಿಗೆ ಇಷ್ಟವಾಗಿದ್ದವು. ಅವುಗಳ ಭಾಷಾ ಸೊಗಸು ಯಾವುದೇ ಸೃಜನಶೀಲ ಸಾಹಿತ್ಯಕೃತಿಗಳಿಗಿಂತ ಕಡಿಮೆಯಿಲ್ಲ ಎನ್ನುತ್ತಿದ್ದರು.
 
ಇತಿಹಾಸತಜ್ಞರಾಗಿದ್ದ ಸುರೇಂದ್ರರಾವ್ ಅವರು ಬಂಟ್ಸ್ ಇನ್ ಹಿಸ್ಟರಿ ಅಂಡ್ ಕಲ್ಚರ್, ವೇಸ್ ಆಂಡ್ ಬೈ ವೇಸ್ ಆಫ್ ಹಿಸ್ಟರಿ ಸೇರಿದಂತೆ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದರು. ಬ್ಯಾರಿ, ಕನ್ನಡ, ಇಂಗ್ಲಿಷ್ ನಿಘಂಟುಗಳನ್ನು ಪರಿಚಯಿಸಿದ್ದರು. ಬಿಎ ಮೊಯ್ದಿನ್ ಅವರ 'ನನ್ನೊಳಗಿನ ನಾನು' ಎಂಬ ಪುಸ್ತಕವನ್ನು ಅವರು 'ಐ ವಿತ್ ಇನ್ ಮಿ' ಎಂದು ಇಂಗ್ಲಿಷ್ಗೆ ಭಾಷಾಂತರಿಸಿದ್ದರು. ಕರ್ನಾಟಕದ ಕೀರ್ತನೆಗಳನ್ನು ಇಂಗ್ಲಿಷಿನಲ್ಲಿ Keertanas of Karnataka ಎಂದು ಅನುವಾದಿಸಿದ್ದರು.  ಇತ್ತೀಚಿನ ವರ್ಷಗಳಲ್ಲಿ Sati Kamale, The Rainboy Tulu Folk Tales, Laden in a golden bowl ಸೇರಿದಂತೆ ಚಿನ್ನಪ್ಪಗೌಡರೊಂದಿಗೆ  ಆರು ಕೃತಿಗಳನ್ನು ಆಂಗ್ಲಭಾಷೆಗೆ ಅನುವಾದಿಸಿದ್ದರು.  'ದಿ ಹಿಂದೂ' ಸಮೂಹದ ಪತ್ರಿಕೆಗಳಲ್ಲಿ ಅವರು ಅನೇಕ ಪ್ರಾಜ್ಞ ಲೇಖನಗಳನ್ನು ಮೂಡಿಸಿದ್ದರು.

ಸುರೇಂದ್ರರಾವ್ ಅವರ ಸಾಹಿತ್ಯ ಸೇವೆಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಸಂದಿದ್ದವು.

ಪ್ರೊ. ಬಿ. ಸುರೇಂದ್ರರಾವ್ ಅವರು 2019ರ ಡಿಸೆಂಬರ್ 11ರಂದು 71ನೆಯ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.

Remembrance of great historian Dr. B. Surendra Rao 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ