ಆರ್ಯಭಟ
ಆರ್ಯಭಟ
ಭಾರತವು ಏಪ್ರಿಲ್ 19, 1975ರಂದು ತನ್ನ ಪ್ರಥಮ ಕೃತಕ ಭೂ ಉಪಗ್ರಹವನ್ನು ಅಂತರಿಕ್ಷ ಕಕ್ಷೆಗೆ ಹಾರಿಸಿತು. ಅದರ ಹೆಸರು "ಆರ್ಯಭಟ". ಪ್ರಾಚೀನ ಭಾರತದ ಅದ್ವಿತೀಯ ಗಣಿತ ಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಆರ್ಯಭಟರ ಗೌರವ ಸ್ಮರಣೆಗಾಗಿ ಅದಕ್ಕೆ ಈ ಹೆಸರು. ಆ ಮಹಾನ್ ವಿಜ್ಞಾನಿಯ ಹೆಸರು ಇಡೀ ಜಗತ್ತಿಗೇ ಗೊತ್ತಾಗುವಂತೆ ಮಾಡಿದ ಘಟನೆಯಿದು.
ಗಣಿತ, ಬೀಜಗಣಿತ ಮತ್ತು ಟ್ರಿಗ್ನಾಮೆಟ್ರಿಯಲ್ಲಿ (ತ್ರಿಕೋಣಮಿತಿ) ಆರ್ಯಭಟರು ಕಂಡು ಹಿಡಿದ ನಿಯಮಗಳು ಸಾರ್ವಕೌಲಿಕ ಮೌಲ್ಯವನ್ನು ಪಡೆದಿವೆ. ಸೂರ್ಯ ಮತ್ತು ಚಂದ್ರಯಾನದ ಕುರಿತಾಗಿ ಇವರು ಒದಗಿಸಿಕೊಟ್ಟ ಮಾಹಿತಿಗಳು ಇಂದಿನ ಆಧುನಿಕ ಯುಗ ತನ್ನ ಕಂಪ್ಯೂಟರ್ ಲೆಕ್ಕಗಳಲ್ಲಿ ವರ್ಣಿಸಿರುವ ಲೆಕ್ಕಾಚಾರಗಳಿಗೆ ಅತ್ಯಂತ ಸಮೀಪದ್ದಾಗಿವೆ.
ಆರ್ಯಭಟರು ಕ್ರಿ. ಶ. 476ರಲ್ಲಿ ಜನಿಸಿದರು. ಇವರು ಚಿಕ್ಕ ವಯಸ್ಸಿನಿಂದಲೇ ಗಣಿತ ಶಾಸ್ತ್ರವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದರು. ಬೀಜಗಣಿತ (ಆಲ್ಜಿಬ್ರಾ)ದ ಕುರಿತಾದ ವಿವರಗಳನ್ನು ತಿಳಿಸುವ ಅತ್ಯಂತ ಹಳೆಯ ಪುಸ್ತಕದ ಕರ್ತೃ ಆರ್ಯಭಟರೇ ಎಂದು ನಂಬಲಾಗಿದೆ. ಖಗೋಳ ಶಾಸ್ತ್ರ ಮತ್ತು ಗಣಿತಶಾಸ್ತ್ರಗಳ ಕುರಿತಾದ ತಮ್ಮ ಗ್ರಂಥದಲ್ಲಿ ಆತ ಬೀಜಗಣಿತದ ಬಗ್ಗೆ ಬರೆದಿದ್ದಾರೆ. ಆರ್ಯಭಟರು ಬೀಜಗಣಿತ ಕಂಡು ಹಿಡಿದವರೆಂದೂ ಹೇಳಲಾಗುತ್ತದೆ. ಪೈ (pai) ನ ಮೌಲ್ಯ 3.1416 ಎಂದು ಈ ಮಹಾನುಭಾವರು ನಿಖರವಾಗಿ ವಿವರಿಸಿದ್ದಾರೆ.
"ಆರ್ಯಭಟೀಯಮ್" ಎಂಬ ಆರ್ಯಭಟರ ಗ್ರಂಥ ಭಾರತೀಯ ಖಗೋಳ ವಿಜ್ಞಾನದ ಅಧ್ಯಯನಕ್ಕೆ ಬುನಾದಿಯಾಗಿದೆ. ಆರ್ಯಭಟರು ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಗೌರವಾನ್ವಿತ ಪಂಡಿತರಲ್ಲಿ ಒಬ್ಬರಾಗಿದ್ದರು. ಆ ಕಾಲದಲ್ಲಿ ಆರ್ಯಭಟ ಮತ್ತು ಇತರರ ಕೃತಿಗಳನ್ನು ಅರೇಬಿಕ್ ಭಾಷೆಗೆ ಅನುವಾದಿಸಲಾಗಿತ್ತು. ಅವು ಅರಬ್ ಜಗತ್ತಿಗೆ ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರಗಳ ಪರಿಚಯ ಮಾಡಿಕೊಟ್ಟವು.
ಆರ್ಯಭಟರು ಕೇವಲ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞರು ಮಾತ್ರವೇ ಆಗಿರಲಿಲ್ಲ, ಅವರೋರ್ವ ತತ್ವಜ್ಞಾನಿ ಕೂಡ ಆಗಿದ್ದರು.
ಪ್ರಾಚೀನ ಭಾರತದ ಈ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ, ವಿದ್ವಾಂಸ, ತತ್ತ್ವಜ್ಞಾನಿ ಕ್ರಿ.ಶ. 550ರಲ್ಲಿ ನಿಧನ ಹೊಂದಿದರು.
ಆರ್ಯಭಟರ ಗೌರವಾರ್ಥವಾಗಿ ಭಾರತ ಸರ್ಕಾರವು ಅವರ 1500ನೆಯ ಜನ್ಮ ವಾರ್ಷಿಕದ ಸಂದರ್ಭವಾದ 1977ರ ವರ್ಷದಲ್ಲಿ ದೆಹಲಿಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ನಡೆಸಿತ್ತು. ಈ ಸಮ್ಮೇಳನದಲ್ಲಿ ವಿಶ್ವದೆಲ್ಲೆಡೆಯಿಂದ ವಿದ್ವಾಂಸರುಗಳು ಭಾಗವಹಿಸಿದ್ದರು.
ಇನ್ನು ಆರ್ಯಭಟ ಉಪಗ್ರಹದ ಬಗ್ಗೆ ಹೇಳುವುದಾದರೆ ಅಂದಿನ ದಿನದಲ್ಲಿ ಅದು ಭಾರತೀಯರಿಗೆ ನಮ್ಮ ದೇಶದಲ್ಲೊಂದು ಅಪೂರ್ವ ಸಾಧನೆಯಾಯಿತು ಎಂಬ ಆತ್ಮವಿಶ್ವಾಸ ಮೂಡಿಸಿದ ಘಟನೆಯಂತಿತ್ತು. ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತ್ತು.
ಏಪ್ರಿಲ್ 21, 1975ರಲ್ಲಿ ಅಂದಿನ ಸೋವಿಯತ್ ಯೂನಿಯನ್ನಿನ ಸಹಾಯದಿಂದ ರಷ್ಯದ ಕಪುಟ್ಸಿನ್ ಯಾರ್ ಎಂಬ ಉಡ್ಡಯನ ಕೇಂದ್ರದಿಂದ ಈ ಉಪಗ್ರಹವನ್ನು ಕಕ್ಷೆಗೆ ಒಯ್ಯಲಾಯಿತು. ಉಪಗ್ರಹ 26ಮುಖಗಳನ್ನು ಹೊಂದಿದ್ದು, ಸುಮಾರು 1.4ಮೀ ವ್ಯಾಸವನ್ನು ಹೊಂದಿತ್ತು. 24ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು (ಬ್ಯಾಟರಿಗಳನ್ನು) ಅಳವಡಿಸಲಾಗಿತ್ತು. ಎಕ್ಸ್-ರೇ ಖಗೋಳಶಾಸ್ತ್ರದ ಅಧ್ಯಯನ, ಸೌರಭೌತಶಾಸ್ತ್ರದ ಅಧ್ಯಯನ ಈ ಉಪಗ್ರಹದ ಪ್ರಮುಖ ಉದ್ದೇಶಗಳಾಗಿದ್ದವು. ಈ ಉಪಗ್ರಹವು ತನ್ನ ಕಕ್ಷೆಯಿಂದ ಹೊರಬಂದ ನಂತರದಲ್ಲಿ ನಾಲ್ಕೈದು ದಿನಗಳು ಮಾತ್ರವೇ ಉಳಿಯಿತಾದರೂ ಅದು ಭಾರತೀಯ ಬಾಹ್ಯಾಕಾಶಯುಗಕ್ಕೆ ದೊರಕಿಸಿಕೊಟ್ಟ ಅನುಭವ ಮತ್ತು ಮುಂದಿನ ದಿನಗಳ ಆತ್ಮವಿಶ್ವಾಸದ ದೃಷ್ಟಿಯಿಂದ ಒಂದು ಮಹತ್ವಪೂರ್ಣ ಬೆಳವಣಿಗೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನಮ್ಮ ದೇಶದ ಶ್ರೀಮಂತ ಪರಂಪರೆಯ ಆಧ್ಯಾತ್ಮಿಕ ವೈಜ್ಞಾನಿಕ ದೃಷ್ಟಿಕೋನದ ಹಿನ್ನಲೆಯಲ್ಲಿ ಆರ್ಯಭಟ ಎಂಬುದು ಅಚ್ಚಳಿಯದ ಹೆಸರು. ಆ ಶ್ರೇಷ್ಠತೆಗೆ ನಮೋನ್ನಮಃ.
Aryabhata, the first of the major mathematician-astronomers from the classical age of Indian mathematics and Indian astronomy.
ಕಾಮೆಂಟ್‌ಗಳು