ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚೂಡಾಮಣಿ ರಾಮಚಂದ್ರ


 ಚೂಡಾಮಣಿ ರಾಮಚಂದ್ರ 


ಡೊಳ್ಳು ಕುಣಿತದಂತಹ ತ್ರಾಣಾಧಾರಿತ ಕಲೆ ಗಂಡಸರಿಗೇ ಮಾತ್ರ ಎನ್ನುವ ಸಾಮಾನ್ಯ ಅಭಿಪ್ರಾಯವನ್ನು ಹುಸಿ ಮಾಡಿದವರು ಸಾಗರದ ಚೂಡಾಮಣಿ ರಾಮಚಂದ್ರ ಅವರು. ಜಗತ್ತಿನ 27 ರಾಷ್ಟ್ರದಲ್ಲಿ ‌ಇವರು ಮಲೆನಾಡು ಡೊಳ್ಳು ‌ಸದ್ದು ಮೊಳಗಿಸಿದ್ದಾರೆ. ವಯಸ್ಸು 73 ಆಗಿದ್ದರೂ ಇಂದೂ ಇವರ ಉತ್ಸಾಹ ಚೈತನ್ಯ ಚಟುವಟಿಕೆಗಳು ಯುವ ವಯಸ್ಸಿನವರನ್ನು ನಾಚಿಸುವಂತಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಗೌರವಗಳು ಇವರಿಗೆ ಸಂದಿವೆ.

ಸಾಗರದ ಮಹಿಳಾ ಸಮಾಜ, ಮಲೆನಾಡು ಗಮಕ ಕಲಾ ಸಂಘ, ತಾಲೂಕು ಕಸಾಪ ಮುಂತಾದ ಸಂಸ್ಥೆಗಳಲ್ಲಿ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿರುವ ಚೂಡಾಮಣಿ ಅವರು ಯಾವಾಗಲೂ ಹೊಸತನ್ನು ಯೋಚಿಸುವವರು. ಜನಪದ ಹಾಡು, ಕೋಲಾಟ, ವೀರಗಾಸೆ, ಲಂಬಾಣಿ ನೃತ್ಯ ಮುಂತಾದ ಕಲಾತ್ಮಕ ಕಾರ‍್ಯಗಳಲ್ಲಿ ತೊಡಗಿಕೊಂಡವರು. ಸ್ನೇಹ ಸಾಗರ ಮಹಿಳಾ ಮಂಡಳಿ ಮೂಲಕ ಸಾಮಾಜಿಕ ಕಾರ‍್ಯಗಳನ್ನು ನಡೆಸಿ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದವರು. ಸ್ವಯಂ ಉದ್ಯೋಗದ ವಿಶ್ವಾಸವನ್ನು ಅನೇಕರಲ್ಲಿ ಬಿತ್ತಿದ ಹಿರಿಮೆ ಇವರದ್ದಾಗಿದೆ. ವಿವಿಧ ರೀತಿಯ ತರಬೇತಿಗಳನ್ನು ನೀಡಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಲ್ಲಿ ಕಾರಣರಾಗಿದ್ದಾರೆ. ಎರಡು ಬಾರಿ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ರೂವಾರಿಯಾಗಿದ್ದಾರೆ. ಊರಿನ ಹಲವಾರು ಮಹಿಳೆಯರಿಗೆ, ಹೊಸತಲೆಮಾರಿನ ಹೆಣ್ಣುಮಕ್ಕಳಿಗೆ ಡೊಳ್ಳುಕುಣಿತದ, ಸಂಘಟನೆಯ, ನಾಟಕದ ಗೀಳು ಹಚ್ಚಿಸಿದವರು ಚೂಡಾಮಣಿ. 

ಚೂಡಾಮಣಿ ರಾಮಚಂದ್ರ ಅವರು ತಾವು ಮಾತ್ರ ಡೊಳ್ಳು ಕಟ್ಟಿದ್ದಲ್ಲ, ಜತೆಗಾರ್ತಿಯರೂ, ಶಾಲಾ ಕಾಲೇಜು ವಿದ್ಯಾರ್ಥಿನಿಯರೂ ಡೊಳ್ಳು ಕಲಿತು, ಪ್ರದರ್ಶಿಸಲು ಕಾರಣರಾಗಿದರು. ರಾಜ್ಯದ ಅನೇಕ ಭಾಗಗಳಲ್ಲಿ ಅಲ್ಲದೆ, ದಿಲ್ಲಿ, ಉತ್ತರ ಪ್ರದೇಶ, ಉತ್ತರಾಂಚಲ, ಗುಜರಾತ್‌, ಒಡಿಶಾ ಮುಂತಾದ ಕಡೆಗಳಲ್ಲಿ ನಡೆದ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ತಮ್ಮ ತಂಡದ ಕಲಾವಿದರ ಜತೆ ಡೊಳ್ಳು ಕುಣಿತ ಪ್ರದರ್ಶಿಸಿದ್ದಾರೆ.ಇದುವರೆಗೆ 27 ರಾಷ್ಟ್ರಗಳಲ್ಲಿ,  ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರದರ್ಶನ ನೀಡಿದ ಗರಿಮೆ ಇವರದ್ದು.

ಚೂಡಾಮಣಿ ರಾಮಚಂದ್ರ ಅವರು ಕವನ ಸಂಕಲನ, ಕಥಾಸಂಕಲನ, ಪ್ರವಾಸ ಕಥನಗಳನ್ನೂ  ಪ್ರಕಟಿಸಿದ್ದಾರೆ. ಮಗ ಸಂಜಯ್‌, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸವಾಗಿರುವ ಚೂಡಾಮಣಿ ಅವರು ಸದಾ ಚಟುವಟಿಕೆಯಲ್ಲಿರುವ ಅಪರೂಪದ ಮಹಿಳೆ. ಬದುಕಿನಲ್ಲಿನ ಹಲವಾರು ಸಂಕಟಗಳ ನಡುವೆ ಕ್ರಿಯಾಶೀಲತೆ ಕಾಪಾಡಿಕೊಂಡಿರುವ ಚೂಡಾಮಣಿ ಅವರು ಕಿರುಚಿತ್ರ ನಿರ್ಮಾಣದ ಮೂಲಕ ಸಹಾ ಸಾಧನೆ ಮಾಡಿದ್ದಾರೆ.

ಚೂಡಾಮಣಿ ರಾಮಚಂದ್ರ ಅವರಿಗೆ ಕಿತ್ತೂರು ಚನ್ನಮ್ಮ ಪ್ರಶಸ್ತಿ , ಜಾನಪದ ಅಕಾಡಮಿ ಪ್ರಶಸ್ತಿ ,  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಉತ್ಸಾಹದ ಚಿಲುಮೆಯಾಗಿ ನಮ್ಮ ನಾಡಿನ ಜಾನಪದ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಮೊಳಗಿಸುತ್ತಿರುವ ಹಿರಿಯರಾದ ಚೂಡಾಮಣಿ ರಾಮಚಂದ್ರರಿಗೆ ಮೆಚ್ಚುಗೆಪೂರ್ವಕ ನಮನಗಳು.

Our artiste Choodamani Ramachandra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ