ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೈಸೂರ್ ಪಾಕ್


ಮೈಸೂರ್ ಪಾಕ್ ಕಥೆ

1935ರ ವರ್ಷದ ಒಂದು ದಿನ ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭೋಜನಕ್ಕೆ ಎಲ್ಲವನ್ನೂ ಅಣಿಗೊಳಿಸಿದ್ದರು.  ಆದರೆ ರಾಜಭೋಜನದಲ್ಲಿ ಸಿಹಿ ತಿಂಡಿಯ ಜಾಗ ಖಾಲಿ ಇದ್ದು ಅದಕ್ಕೆ ಏನನ್ನು ಸಿದ್ಧಗೊಳಿಸುವುದು ಎಂದು ಮಾದಪ್ಪನವರು ಚಿಂತಿಸುತ್ತಾ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಇವುಗಳ ಪಾಕದ ಒಂದು ಪ್ರಯೋಗವನ್ನು ಮಾಡಿದರು.  ಮಹಾರಾಜರು ಊಟ ಮುಗಿಸುವ ವೇಳೆಗೆ ಪಾಕ ಗಟ್ಟಿಯಾದಾಗ  ಅದನ್ನು ಮಾದಪ್ಪನವರು ಮಹಾರಾಜರಿಗೆ ಅಳುಕಿನಿಂದಲೇ ನೀಡಿದರು.  ಈ ಸಿಹಿಯನ್ನು ಚಪ್ಪರಿಸಿ ಸವಿದ ಮಹಾರಾಜರು “ಇದೇನಿದು ಹೊಸ ರುಚಿ, ಇಷ್ಟು ಸ್ವಾದಿಷ್ಟವಾಗಿದೆ, ಇದರ ಹೆಸರೇನು?” ಎಂದು ಕೇಳಿದಾಗ ತಬ್ಬಿಬ್ಬಾದ ಮಾದಪ್ಪನವರು ಇದು ‘ಮೈಸೂರು ಪಾಕ’ ಎಂದರಂತೆ.  ಅಂದಿನಿಂದ ಈ ಮೈಸೂರು ಪಾಕ್ ವಿಶ್ವಪ್ರಸಿದ್ಧ.

"ಈ ಹೆಸರಿಗೆ ಇನ್ನೊಂದು ನಿಷ್ಪತ್ತಿಯೂ ಇದೆ. ಮಸೂರ್ ಎಂದರೆ ಹಿಂದಿಯಲ್ಲಿ ಕಡಲೆಬೇಳೆ ಎಂದರ್ಥ.  ಅದನ್ನು ಸಕ್ಕರೆ ಪಾಕದಲ್ಲಿ ಹಾಕಿ ಮಾಡಿದ್ದು ಎಂಬರ್ಥದಲ್ಲಿ ಮೈಸೂರ್ ಪಾಕ್ ಬಂದಿರಬಹುದು" ಎಂಬುದು ಹಲವು ವಿದ್ವಾಂಸರ ಅಭಿಪ್ರಾಯ.  ಆದರೆ ಕಡಲೆ ಬೇಳೆಗೆ ಬಳಕೆಯಲ್ಲಿರುವ ಹೆಸರು ಚನಾ ದಾಲ್.‍ ಭಾರತದ ಇತರ ಭಾಗಗಳಲ್ಲಿ ಸಾಕಷ್ಟು ತಿರುಗಿರುವ ಸಿಹಿತಿಂಡಿಪೋತನಾದ ನಾನು ಮಸೂರ್ ಪಾಕನ್ನು ಕೇಳಿಲ್ಲ.  ಏನೇ ಆಗಲಿ, ಮೈಸೂರಿನ ಹೆಸರಿನೊಂದಿಗಿರುವ ಈ ಸಿಹಿ ಹೆಸರನ್ನು ಅಳಿಸುವುದು ಅಷ್ಟು ಸುಲಭ ಅಲ್ಲ. 

ಅಂದ ಹಾಗೆ ಕಾಲಾನುಕ್ರಮದಲ್ಲಿ ಅಂದು ತಿನ್ನಲು ಗಟ್ಟಿಯಾಗಿ ಇಲ್ಲವೇ ಗರಿ ಗರಿಯಾಗಿದ್ದ ಮೈಸೂರು ಪಾಕು ಮುಂದೆ ಮೆದುರೂಪ ಪಡೆದು ಯಶಸ್ವಿಯಾಗಿದೆ.  ಹೀಗಿದ್ದರೂ ಮೈಸೂರು ಗ್ರಾಮೀಣ ಪ್ರದೇಶಗಳಲ್ಲಿ,  ಮನೆಗಳಲ್ಲಿ ಹಿಂದಿನ ಮೈಸೂರು ಪಾಕು ಕೂಡಾ ಇನ್ನೂ ಉಳಿದಿದೆ. 

ಕಥೆ ಏನಾದರೂ ಆಗಿರಲಿ ಆ ಸ್ವಾದ ಇಂದ ಬಾಯಲ್ಲಿ ನೀರೂರಿಸುವುದು ಮತ್ತು ಅಂದಿನ ದಿನಗಳಲ್ಲಿ ಒಂದಷ್ಟು ಹೆಚ್ಚು ತಿಂದಾಗ ಅದರ ತುಪ್ಪದ ಜಿಡ್ಡು ಗಂಟಲಿನಲ್ಲಿ ಕರ ಕರ ಮಾಡಿದ್ದನ್ನು ಮರೆಯಲುಂಟೆ 😊

Mysore Pak, an experiment made in Mysore in the year 1935

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ