ಸಿ. ಅಶ್ವಥ್
ಸಿ. ಅಶ್ವಥ್
ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಪ್ರಸಿದ್ಧ 'ಗಾಂಧೀ' ಚಿತ್ರದಲ್ಲಿ, ಚಿತ್ರ ಪ್ರಾರಂಭವಾಗುವುದು ಗಾಂಧೀಜಿ ನಮ್ಮ ಕಣ್ಣ ಮುಂದೆ ಮೂಡುತ್ತಿದ್ದಾರೆ ಎಂದು ನಾವು ನೋಡುತ್ತಿರುವಂತೆಯೇ ಅವರ ಅಂತ್ಯದಿಂದ! ಆ ಚಿತ್ರ ನೋಡಿ ಬಂದ ಮೇಲೆ ನಮ್ಮಣ್ಣ ಹೇಳುತ್ತಿದ್ದರು. “ಇದೊಂದು ಅದ್ಭುತ ವಿಶ್ಲೇಷಣೆ. ಗಾಂಧೀ ಎಂಬ ವ್ಯಕ್ತಿಯಿಂದ ಪ್ರಾರಂಭವಾದ ಯುಗ ಆ ಮಹಾನ್ ವ್ಯಕ್ತಿಯೊಂದಿಗೆ ಮುಗಿದುಹೋಯಿತು” ಎಂದು. ದಶಕದ ಹಿಂದೆ ಇದೇ ದಿನ ನಮ್ಮ ಸಿ. ಅಶ್ವಥ್ ಅವರು, ಅವರ ಹುಟ್ಟಿದ ಹಬ್ಬದ ದಿನವೇ ನಿಧನರಾದಾಗ ಇನ್ನಿಲ್ಲದಂತೆ ಈ ಮಾತು ನೆನಪಾಗುತ್ತಿತ್ತು. ಸಿ. ಅಶ್ವಥ್ ಅವರು ಹಲವು ವಿಧದಲ್ಲಿ ಅವರೊಬ್ಬರೇ.
1990ರ ಆಸುಪಾಸಿನಲ್ಲಿ ನಮ್ಮ ‘ಎಚ್ಎಮ್‍ಟಿ ಕನ್ನಡ ಸಂಪದ’ದಲ್ಲಿ ಅವರ ಒಂದು ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ಅವರ ಮನೆಗೆ ಹೋದೆ. ಮುಂಚೆಯೇ ನಮ್ಮ ಸಹೋದ್ಯೋಗಿ ಮತ್ತು ಅಶ್ವಥ್ ಅವರ ಗೆಳೆಯ ನರಹರಿ ಎಂಬುವರು ಅಶ್ವಥ್ ಅವರಲ್ಲಿ ನಮ್ಮ ಇಚ್ಛೆ ಮತ್ತು ಇತಿಮಿತಿಗಳ ಬಗ್ಗೆ ಹೇಳಿದ್ದರು. ಎರಡೇ ಮಾತು. ‘ನರಹರಿ ಎಲ್ಲಾ ಹೇಳಿದ್ದಾರೆ. ನಿಮಗೆ ಏನು ಸಾಧ್ಯವೋ ಅದನ್ನು ರತ್ನಮಾಲ ಹತ್ರ ಕೊಡಿ. ಕಾರ್ಯಕ್ರಮ ಮಾಡೋಣ. ನಮಸ್ಕಾರ’. ಅಶ್ವಥ್ ಅವಶ್ಯಕವಿಲ್ಲದ ಏನನ್ನೂ ಆಡುವವರಲ್ಲ.
ಇನ್ನು ಕಾರ್ಯಕ್ರಮದ ದಿನ. ಮೈಕ್ ಕೆಳಗಿಡಲು ಮನಸ್ಸಿಲ್ಲದ ಹಲವರ ಭಾಷಣದ ನಂತರ ಸಂಗೀತ ಕಾರ್ಯಕ್ರಮ ಪ್ರಾರಂಭಗೊಂಡಿತು. ನಮ್ಮಲ್ಲೋ ಜನ ಕಮ್ಮಿ. ಒಂದಷ್ಟು ಜನ ಕೆಲವು ಅಧಿಕಾರಿಗಳು ಮೇಲಿದ್ದಾರೆ ಎಂದು ಬಂದು ಅವರ ಭಾಷಣ ಮುಗಿದ ನಂತರ ಹಲ್ಕಿರಿದು ಜಾಗ ಖಾಲಿ ಮಾಡುವ ಜನ. ಅಶ್ವಥ್ ಅವರಿಗೆ ಸ್ವಲ್ಪ ಹೊತ್ತು ಹಾಡಿದ ಮೇಲೆ “ಯಾಕೋ ಜನರಲ್ಲಿ ಉತ್ಸಾಹ ಇದೆ ಎನಿಸಲಿಲ್ಲ. ಬೇಗ ಮುಗಿಸೋಣವಾ ಅಂದ್ರು.” ಇಲ್ಲಿ ನಾವು ಕುಳಿತಿರುವವರು ಕಮ್ಮಿ ಸಂಖ್ಯೆ ಆದ್ರೂ ನಿಮ್ಮ ಹಾಡುಗಳಿಗಾಗಿ ಕಾದಿದ್ದೇವೆ ಎಂದಾಗ ಬಹಳಷ್ಟು ಹೊತ್ತು ಆತ್ಮೀಯವಾಗಿ ಹಾಡಿದರು”. ಅವರಿಗೆ ಎಲ್ಲವೂ ಸ್ಫೂರ್ತಿ, ಪ್ರೀತಿ, ಆತ್ಮೀಯತೆಗಳ ವಾತಾವರಣವಾಗಬೇಕು. ಉಳಿದಿದ್ದೆಲ್ಲಾ ಗೌಣ.
ಕಾಳಿಂಗ ರಾವ್ ಮತ್ತು ಅನಂತಸ್ವಾಮಿ ಭಾವಗೀತಾ ಯುಗಗಳನ್ನು ಕಂಡ ಕನ್ನಡಿಗರಿಗೆ ಅಂತದೇ ಮತ್ತೊಂದು ಭವ್ಯ ಲೋಕ ಸೃಷ್ಟಿಸಿಕೊಟ್ಟವರು ಸಿ. ಅಶ್ವಥ್. ಕೆ. ಎಸ್. ನರಸಿಂಹ ಸ್ವಾಮಿಗಳ ‘ಮೈಸೂರು ಮಲ್ಲಿಗೆ’ ಹಾಡುಗಳು ಸಿ. ಅಶ್ವಥ್ ಅವರ ದ್ವನಿಯಲ್ಲಿ ಹೊಸ ತರಂಗಗಳನ್ನೇ ಸೃಷ್ಟಿಸಿದವು. ‘ಶಿಶುನಾಳ ಷರೀಫರ’ ಹಾಡುಗಳು ಇಡೀ ಕರ್ನಾಟಕದ ಜನಹೃದಯಗಳಲ್ಲಿ ಅಶ್ವಥ್ ಸಂಗೀತದ ಮುಖೇನ ಗುಡುಗಲಾರಂಭಿಸಿತು. ಕವಿವರ್ಯರಾದ ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಎಸ್, ಕಣವಿ ಇವರೆಲ್ಲರ ಕವನ ಓದಲು ಬಾರದೆ ಇದ್ದವರಿಗೆ, ಅದೆಲ್ಲಾ ಬುದ್ಧಿವಂತರಿಗೆ ಎಂದು ಸುಮ್ಮನಿದ್ದವರಿಗೆ, ವರ್ಷಕ್ಕೊಂದು ತಿಂಗಳು ನವೆಂಬರಿನಲ್ಲಿ ಮಾತ್ರಾ ಬಾವುಟ ಹಾರಿಸಿ ಸಿನಿಮಾ ಹಾಡು ಕೇಳುತ್ತಿದ್ದವರಿಗೆ, ಸುಮ್ಮನೆ ಬಿಡುವಿನ ಸಮಯ ನೂಕುತ್ತಿದ್ದವರಿಗೆ ಹೀಗೆ ಎಲ್ಲರಿಗೂ ಅಶ್ವಥ್ ಅವರ ಸಂಯೋಜನೆ ಮತ್ತು ಧ್ವನಿಗಳ ಮುಖೇನ ಕನ್ನಡ ಕವಿವಾಣಿ ಸಮೀಪಿಸತೊಡಗಿತು. ಮುಂದೆ ಈ ಕವಿಗಳ ಪಟ್ಟಿಗೆ ಎಚ್. ಎಸ್. ವೆಂಕಟೇಶ್ ಮೂರ್ತಿ, ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ದೊಡ್ಡರಂಗೇ ಗೌಡ, ಬಿ. ಆರ್. ಲಕ್ಷ್ಮಣ ರಾವ್ ಹೀಗೆ ಅನೇಕ ಕವಿಗಳನ್ನು ಸೇರಿಸುತ್ತಲೂ ಹೋಯಿತು.
ಭಾವಗೀತೆಗಳ ಯುಗದಲ್ಲಿ ಕಾಲಿಟ್ಟ ಅಶ್ವಥ್ ಸಿನಿಮಾ ಸಂಗೀತದಲ್ಲೂ ಸಾಕಷ್ಟು ಬದಲಾವಣೆ ತಂದರು. ಅವರ ಸಂಗೀತ ನಿರ್ದೇಶನದ ಕಾಕನಕೋಟೆ, ಸ್ಪಂದನ ಮುಂತಾದವು ಅವರ ಪ್ರಾರಂಭದ ದಿನಗಳಲ್ಲೇ ಸಿನಿಮಾ ಲೋಕದಲ್ಲಿ ವಿಶಿಷ್ಟವೆನಿಸಿದವು. ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಷರೀಫ್ ಸಿನಿಮಾಗಳು ಸಿನಿಮಾದಲ್ಲೂ ಇನಿದನಿ ಮೂಡಿಸಿದವು. ಅದೇ ಸೊಬಗನ್ನು ನಂತರದ ವರ್ಷಗಳಲ್ಲಿ ಮೂಡಿಬಂದ ‘ನಾಗಮಂಡಲ’ ಭವ್ಯತೆಯಿಂದ ಮೆರೆಸಿತು. ಅವರು ಮನಸ್ಸು ಮಾಡಿದ್ದರೆ ಅಥವಾ ನಮ್ಮ ಕರ್ನಾಟಕದ ಸಿನಿಮಾ ಮಂದಿ ಕಲಾವಂತಿಕೆ ಬೇಡಿದ್ದರೆ ಅದಕ್ಕೆ ಸಿಗುತ್ತಿದ್ದ ವ್ಯಾಪ್ತಿ ಬೃಹದಾಗಿ ಹೆಮ್ಮರವಾಗುತ್ತಿತ್ತು ಎನ್ನುವುದು ಬೇರೆಯದೇ ಸಂಗತಿ. ಇದರಿಂದಾಚೆಗೆ ಸಹಾ ಅಶ್ವಥ್ ಸೃಜನಶೀಲವಾದ ಹೊಸತೊಂದು ಲೋಕವನ್ನೇ ಸೃಷ್ಟಿಸಿದರು.
‘ರಾಕ್ ಸಂಗೀತ’ ಎಂದು ಗೊತ್ತಿಲ್ಲದ ಬಂಡೆ ಕಲ್ಲು ಮಣ್ಣುಗಳ ಹಿಂದೆ ತಿರುಗುತ್ತಿದ್ದ ಬಹುತೇಕ ಯುವ ಜನಾಂಗ, ಅಲ್ಲಿನ ಬಣ್ಣ ಬಣ್ಣದ ವ್ಯಾಪಾರೀ ತಂತ್ರಗಳ ಸರಕಿಗೆ ಮೋಹದಿಂದ ಆಕರ್ಷಿಸಲ್ಪಟ್ಟವರೇ ವಿನಃ, ಆ ಪದ್ದತಿಯ ಸಂಗೀತ ಸ್ವಾದಕ್ಕಲ್ಲ ಎಂಬುದನ್ನು ಸ್ವಲ್ಪ ಕೂಲಂಕಷವಾಗಿ ಯೋಚಿಸಿದರೆ ಸುಲಭವಾಗಿಯೇ ತಿಳಿಯುವ ವಿಚಾರ. ನಮ್ಮಲ್ಲಿನ ಕಲೆ, ಸಂಗೀತ ಅಭಿವ್ಯಕ್ತಿಗಳಿಗೂ ಅಂತಹ ಸ್ಟೇಜ್ ಷೋಗಳಿಗೆ ದೊರಕುವ ಷೋಕೇಸಿಂಗ್ ನೀಡಿದರೆ ಅವು ಇನ್ನಷ್ಟು ವ್ಯಾಪ್ತಿ ಪಡೆಯಬಲ್ಲದು ಎಂಬುದು ಅಶ್ವಥ್ ಅವರ ಅರಿವಿನ ಕಣ್ಗಳಿಗೆ ಗೋಚರಿಸಿತು. ಹೀಗೆ ಮೂಡಿದ ‘ಕನ್ನಡವೇ ಸತ್ಯ’ ಸರಣಿಯ ಪ್ರತೀ ಕಾರ್ಯಕ್ರಮವೂ ಸಹಸ್ರ-ಲಕ್ಷಗಳ ಸಂಖ್ಯೆಯಲ್ಲಿ ಜನಮನವನ್ನು ತಲುಪುವಂತಾಗಿ ಕನ್ನಡ ಸಂಗೀತ ಸಂಸ್ಕೃತಿಗಳಿಗೇ ಒಂದು ವಿಶಿಷ್ಟ ತಿರುವನ್ನು ನೀಡಿತು. ಇದು ಕರ್ನಾಟಕ ಕಲಾರಂಗದಲ್ಲಿ ನಿಚ್ಚಳವಾಗಿ ಸೃಷ್ಟಿಯಾದ ಒಂದು ಮರೆಯಲಾಗದ ಇತಿಹಾಸ.
ಕವಿಗಳ ಮಾತುಗಳಿಗೆ ಭಾವವಿತ್ತ ಅಶ್ವಥ್ ಪ್ರಸಿದ್ಧ ಕಂಠಗಳಿಗೂ ಹೊಳಪಿತ್ತರು. ಅವರ ನಿರ್ದೇಶನದಲ್ಲಿ ನಿರಂತರ ಜೊತೆಗಿದ್ದ ರತ್ನಮಾಲಾ, ಮಾಲತಿ ಶರ್ಮ, ಅವರ ಸಮಕಾಲೀನ ಸುಬ್ಬಣ್ಣ, ಸುಲೋಚನ, ನಂತರದ ತಲೆಮಾರಿನ ಛಾಯ, ಸಂಗೀತ ಕಟ್ಟಿ, ಪಲ್ಲವಿ, ಅರ್ಚನ ಉಡುಪ ಮುಂತಾದ ಹಾಡುಗಾರರಲ್ಲಿ ಸೊಬಗಿನ ಮಾಧುರ್ಯ ತೆಗೆದಿದ್ದಾರೆ. ಅಷ್ಟೇಕೆ ಎಸ್. ಪಿ. ಬಾಲಸುಬ್ರಮಣ್ಯಂ, ರಾಜ್ ಕುಮಾರ್, ಜಾನಕಿ, ಪಿ. ಸುಶೀಲ ಅವರಂತಹ ಗಾಯಕರೂ ಸಿ. ಅಶ್ವಥ್ ಅವರ ನಿರ್ದೇಶನದಲ್ಲಿ ಮೂಡಿರುವ ಪರಿ ವಿಶಿಷ್ಟ ಸೊಬಗಿನದ್ದು.
ಧಾರಾವಾಹಿಗಳಲ್ಲಿ ಧಾರಾವಾಹಿಗಳನ್ನು ನೋಡದಿದ್ದರೂ ಅಶ್ವಥ್ ಅವರ ಸಂಗೀತಕ್ಕಾಗಿಯಾಗಿಯೇ ಅವುಗಳ ಪ್ರಾರಂಭ ಮತ್ತು ಅಂತ್ಯಗಳಿಗೆ ಕಿವಿ ಕೊಡುವಂತಾಗುತ್ತದೆ. ಅದರಲ್ಲೂ ಮಾಯಾಮೃಗ, ಮುಕ್ತ, ಗುಪ್ತಗಾಮಿನಿ, ಮನ್ವಂತರ ಹಾಡುಗಳು ಇನ್ನಿಲ್ಲದಂತೆ ನಮ್ಮನ್ನಾವರಿಸಿಬಿಡುತ್ತವೆ. ಅಷ್ಟೊಂದು ಮಂತ್ರ ಮುಗ್ಧ ಆಕರ್ಷಣೆಯಿದೆ ಅವರ ಸಂಗೀತಕ್ಕೆ.
ಅಶ್ವಥ್ ತರವಲ್ಲ ತಗಿ ನಿನ್ನ ತಂಬೂರಿ ಎಂದು ಹಾಡಿದರೆ ಕೃಷ್ಣ ಕೊಳಲನ್ನು ಊದಿದಾಗ ಬೃಂದಾವನಲ್ಲಿ ಅವನ ಹಿಂದೆ ಓಡಿದಂತೆ ನಮ್ಮ ಬೇಡದ ಕಾಳಜಿಗಳನ್ನೆಲ್ಲಾ ಬಿಟ್ಟು ಅಶ್ವಥ್ ಅವರ ಗಾನದಾಳಕ್ಕೆ ಸೆಳೆಯಲ್ಪಡುತ್ತದೆ ನಮ್ಮ ಹೃದಯ. ಕಾಣದ ಕಡಲಿಗೆ ಹಂಬಲಿಸುತ್ತದೆ ಮನ. ಎಲ್ಲೋ ಹುಡುಕಿದೆ ಇಲ್ಲದ ದೇವರ ಎಂಬಂತ ನಮ್ಮ ವ್ಯರ್ಥ ಪಯಣದಲ್ಲಿ ನಮ್ಮಾಳದಲ್ಲಿ ಇರುವ ನಂದನ ವನವನ್ನು ಹುಡುಕಲು ಹೋಗುತ್ತದೆ ಆಂತರ್ಯ. ಕೆಲವೊಮ್ಮೆ ಅಶ್ವಥ್ ಅವರ ವೈವಿಧ್ಯತೆ ಅಚ್ಚರಿ ಹುಟ್ಟಿಸುತ್ತದೆ. ತರವಲ್ಲ ತಗಿ ನಿನ್ನ ತಂಬೂರಿ, ಬಾ ಇಲ್ಲಿ ಸಂಭವಿಸು ಎಂದು ಜೋರಾದ ದನಿ ಒಂದೆಡೆಯಾದರೆ, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು ಎಂದು ಮುದ್ದು ಮಾಡಿ ನಮ್ಮನ್ನು ಮೌನಿಯಾಗಿ ಮಲಗಿಸುತ್ತದೆ.
ಅವರಿಲ್ಲದ ಈ ಲೋಕದಲ್ಲಿ ಅವರಂತಹ ಮಹನೀಯ ಕಲಾವಿದ ಮತ್ತೊಬ್ಬ ಬರಲು ಇನ್ನೆಷ್ಟು ವರ್ಷಗಳು ಉರುಳಬೇಕೋ ಎಂಬುದು ನಮ್ಮ ಊಹೆಗೆ ನಿಲುಕದ್ದು. ಆದರೆ ಅಶ್ವಥ್ ಅವರ ಧ್ವನಿ ಮತ್ತು ಸಂಯೋಜನೆಗಳು ಬೇಕೆಂದಾಗ ನಮ್ಮ ಬಳಿ ಸಿಗುತ್ತಿರುವದಷ್ಟೇ ಸದ್ಯಕ್ಕೆ ನಾವು ಉಳಿಸಿಕೊಂಡಿರುವ ಮಹತ್ತು. ಕಾಲ ಬಹಳ ಬೇಗ ಸಾಗಿ ಬಿಡುತ್ತಾನೆ. ನೋಡಿ ಅಶ್ವಥ್ ಅಂತಹ ಮಹನೀಯನನ್ನೂ ಅಳಿಸಿ 14 ವರ್ಷ ಸಾಗಿಬಿಟ್ಟ ಆ ನಿರ್ದಯಿ. ಆ ಪರಮಾತ್ಮ ಕೂಡ ಅಶ್ವಥ್ ನೇರ ಸಂಗೀತವನ್ನು ತಾನೊಬ್ಬನೇ ಕೇಳಬೇಕೆಂಬ ಸ್ವಾರ್ಥಿ. ಇದೇ ಅಶ್ವಥ್ ಹಾಡುತ್ತಿದ್ದ ‘ಬದುಕು ಮಾಯೆಯ ಮಾಟ’! ಆ ಮಹಾನ್ ಚೇತನಕ್ಕೆ ನಮನ.
Our great Music composer and unforgettable voice C Ashwath Sir
ಕಾಮೆಂಟ್‌ಗಳು