ಎನ್. ಮಂಗಳಾ
ಎನ್. ಮಂಗಳಾ
ಎನ್. ಮಂಗಳಾ ರಂಗಭೂಮಿಯಲ್ಲಿ ಪ್ರಸಿದ್ಧ 'ಸಂಚಾರಿ' ತಂಡದ ಸೂತ್ರಧಾರಿಣಿಯಾಗಿ ಮಹತ್ವದ ಕೊಡುಗೆ ನೀಡುತ್ತ ಬಂದಿದ್ದಾರೆ.
ಡಿಸೆಂಬರ್ 29 ಮಂಗಳಾ ಅವರ ಜನ್ಮದಿನ. ಅವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಮಂಗಳಾ ಅವರು ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಿ ‘ಸಮುದಾಯ’ದ ಮೂಲಕ ನಾಟಕರಂಗಕ್ಕೆ ಪಾದಾರ್ಪಣೆ ಮಾಡಿದವರು. ಮುಂದೆ ರಂಗಾಯಣದಲ್ಲಿ ಬಿ.ವಿ ಕಾರಂತರ ಗರಡಿಯಲ್ಲಿ ನಾಟಕ ಕಲಿಕೆಯ ಹಲವು ಸಾಧ್ಯತೆಗಳ ಬೆಳಕಿಗೆ ತೆರೆದುಕೊಂಡ ಇವರು ಅಲ್ಲಿಯೇ 13 ವರ್ಷಗಳ ಕಾಲ ರಂಗಕಲಾವಿದೆಯಾಗಿ ಕೆಲಸ ನಿರ್ವಹಿಸಿದರು. ಇವರು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಕೇಂದ್ರದಿಂದ ಜ್ಯೂನಿಯರ್ ಮತ್ತು ಸೀನಿಯರ್ ಫೆಲೋಶಿಪ್ ಗಳನ್ನು ಪಡೆದವರು. ಇವರು ಕಳೆದ ಎರಡು ದಶಕಗಳಲ್ಲಿ ರಂಗಭೂಮಿಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ವಸ್ತ್ರ ವಿನ್ಯಾಸಕಿಯಾಗಿ, ಮಾರ್ಗದರ್ಶಕಿಯಾಗಿ, ಸಂಘಟನಾ ಚತುರೆಯಾಗಿ ಅಪಾರ ಕೆಲಸ ಮಾಡುತ್ತ ಸಾಗಿದ್ದಾರೆ. ಪ್ರಸಿದ್ಧ ಸಂಚಾರಿ ಥಿಯೇಟರ್ ನಿರ್ವಹಣೆ ಹೊತ್ತು ಅದರ ಎರಡು ದಶಕಗಳ ಯಾನದಲ್ಲಿ ಅದ್ಭುತ ಕೆಲಸ ಮಾಡುತ್ತ ಬಂದಿದ್ದಾರೆ.
ಕನ್ನಡ ರಂಗಭೂಮಿಲ್ಲಿ ಕಳೆದ 20 ವರ್ಷಗಳಿಂದ ಹಲವು ಸಂಚಲನಗಳಿಗೆ ಹೆಸರಾದದ್ದು 'ಸಂಚಾರಿ ಥಿಯೇಟರ್'. ಇದು 'ಕನ್ನಡ ಸಾಂಸ್ಕೃತಿಕ ಲೋಕದೊಂದಿಗೆ ಬೆಸೆದುಕೊಂಡಿರುವ ನಂಟುಗಳು ನೂರೆಂಟು. "ಸಂಚಾರಿ” ಎಂಬದೊಂದು ಭಾವ. ಅದು ಸದಾ ಚಲನಶೀಲ. ಇದು ಮಿತಿಗಳನ್ನು ಮೀರುತ್ತ ಗಡಿಗಳನ್ನು ದಾಟುವ ಪರಿ. ಇದು ಹದಿನೆಂಟು ಪೂರೈಸಿರುವ 'ಸಂಚಾರಿ'ಯ ಪಯಣ. ರಂಗ ಕರಕುಶಲ ಮತ್ತು ನಾಟಕಗಳ ಪ್ರಚಾರಕ್ಕಾಗಿ ಸಂಚಾರಿ ಥಿಯೇಟರ್ 2004ರ ಆಗಸ್ಟ್ 3ರಂದು ಸ್ಥಾಪನೆಗೊಂಡಿತು. ಅಂದಿನಿಂದ ಇದು ನಿರಂತರವಾಗಿ ರಂಗಭೂಮಿಯ ವಿಶೇಷ ಪ್ರಯೋಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
‘ಸಂಚಾರಿ ಥಿಯೇಟರ್' ರಂಗ ಕಲಾವಿದರಾದ ಎನ್. ಮಂಗಳಾ, ರಂಗಾಯಣ ರಘು ಮತ್ತು ಗಜಾನನ ಟಿ. ನಾಯಕ್ ಅವರ ಕಲ್ಪನೆಯ ಕೂಸು. ಮಂಗಳಾ ಮತ್ತು ರಂಗಾಯಣ ರಘು ದಂಪತಿಗಳು ಸಂಚಾರಿ ರಂಗಭೂಮಿಯನ್ನು ಪ್ರಾರಂಭಿಸುವ ಮೊದಲು ಬಿ. ವಿ. ಕಾರಂತರ ಮಾರ್ಗದರ್ಶನದಲ್ಲಿ 'ರಂಗಾಯಣ'ದಲ್ಲಿದ್ದರು.
ಸಂಚಾರಿ ಥಿಯೇಟರ್ ತಂಡವು ದೇಶದೆಲ್ಲೆಡೆ ನಾಟಕಗಳನ್ನು ಪ್ರದರ್ಶಿಸಿದೆ. ಆಸಕ್ತ ಅಭ್ಯರ್ಥಿಗಳಿಗೆ ರಂಗ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಮಹಾನ್ ರಂಗದಂಪತಿಗಳಾದ ಬಿ.ವಿ.ಕಾರಂತ್ ಮತ್ತು ಪ್ರೇಮಾ ಕಾರಂತ್ ಸ್ಮರಣಾರ್ಥ ಮಕ್ಕಳಿಗಾಗಿ ಆಂತರಿಕ ಮತ್ತು ವಸತಿ ಕಾರ್ಯಾಗಾರಗಳನ್ನು ಸಹ ನಡೆಸುತ್ತಿದೆ. ವಯೋಮಿತಿಗನುಗುಣವಾಗಿ ಪೂರ್ವರಂಗ, ಆದಿರಂಗ, ಬಾಲರಂಗ ಮತ್ತು ಶಿಶುರಂಗ ಮುಂತಾದ ಕಾರ್ಯಾಗಾರಗಳನ್ನು ನಡೆಸಿ ಈ ಕಾರ್ಯಾಗಾರಗಳ ಮೂಲಕವೇ ಅನೇಕ ರಂಗಪ್ರಯೋಗಗಳಿಗೆ ಹುಟ್ಟು ನೀಡಿದೆ. ಸಂಚಾರಿ ಥಿಯೇಟರ್‌ನಲ್ಲಿ ಪ್ರಸನ್ನ, ಸಿಹಿ ಕಹಿ ಚಂದ್ರು, ಅರುಣ್ ಸಾಗರ್, ರಂಗಾಯಣ ರಘು ಸೇರಿದಂತೆ ಅನೇಕ ಅನೇಕ ಪ್ರಮುಖರು ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ.
ಸಂಚಾರಿ ಥಿಯೇಟರಿನ ರಂಗ ಪ್ರಯೋಗಗಳಲ್ಲಿ ಊರ್ಮಿಳಾ, ಅರಹಂತ, ಕಮಲಾಮಣಿ ಕಾಮಿಡಿ ಕಲ್ಯಾಣ, ಕೈಲಾಸಂ ಕೀಚಕ, ಧರೆಯೊಳಗಿನ ರಾಜಕರಣ, ನರಿಗಳಿಗೆ ಕೋಡಿಲ್ಲ, ಪಿನೋಕ್ಕಿಯೋ, ವ್ಯಾನಿಟಿ ಬ್ಯಾಗ್, ಶ್ರೀದೇವಿ ಮಹಾತ್ಮೆ, ನೋ ಪ್ರೆಸೆಂಟ್ಸ್ ಪ್ಲೀಸ್, ವೆನಿಸಿನ ವ್ಯಾಪಾರ, ನಿದ್ರಾನಗರಿ, ಭಗವದಜ್ಜುಕೀಯ, ಹಳ್ಳಿಯೂರ ಹಮ್ಮೀರ, ಮಾಮ ಮೋಶಿ, ಮುಡಿ ದೊರೆ ಮತ್ತು ಮೂವರ ಮಕ್ಕಳು, ಗಿಡ್ಡು ಟೈಲರ್ ಚಡ್ಡಿ ಸ್ಪೆಷಲಿಸ್ಟ್, ಒಗಟಿನ ರಾಣಿ, ಘಮ ಘಮ ಭಾವನಾ, ರಂಗಜಂಗಮನ ಸ್ಥಾವರ, ಕ್ಲೀನ್ ಅಂಡ್ ಕ್ಲಿಯರ್ - ಪಾಯಖಾನೆ, ಬಣ್ಣ ಬಯಲಾಯ್ತು, ವಿದ್ಯಾರ್ಥಿ ಭವನ, ಕಳೆದುಹೋದ ಹಾಡು, ಕುದುರೆ ಬಂತು ಕುದುರೆ ಮುಂತಾದ ಅನೇಕ ಪ್ರಯೋಗಗಳು ಹೊರಹೊಮ್ಮಿವೆ.
ಸಂಚಾರಿ ಥಿಯೇಟರ್ ಅನೇಕ ಕಲಾವಿದರನ್ನು ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಕ್ಕೆ ನೀಡುತ್ತ ಬಂದಿದೆ. ‘ನಾನು ಅವನಲ್ಲ’ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ದಿವಂಗತ ಸಂಚಾರಿ ವಿಜಯ್ ಇವರಲ್ಲೊಬ್ಬರು. ಸ್ವಯಂ ಮಂಗಳ ಅವರಿಗೆ ತಲೆದಂಡ ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ ಸಂದಿದೆ.
ಹೀಗೆ ಅಪರಿಮಿತ ಸಾಧನೆಗಳ 'ಸಂಚಾರಿ' ತಂಡ ಹಾಗೂ ಕನ್ನಡ ರಂಗಭೂಮಿಯಲ್ಲಿನ ವ್ಯಾಪಕ ಕಲಾಸಂಚಾರಿ ಆಗಿರುವ ನಮ್ಮ ಆತ್ಮೀಯರಾದ ಮಂಗಳಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to our Mangala N, a Great name in theater 🌷🙏🌷
ಕಾಮೆಂಟ್‌ಗಳು