ಸ್ವಾತಿ ತಿರುನಾಳ್
ಸ್ವಾತಿ ತಿರುನಾಳ್
ಮಹಾನ್ ವಾಗ್ಗೇಯಕಾರರಲ್ಲೊಬ್ಬರಾದ ಸ್ವಾತಿ ತಿರುನಾಳ್ ತಿರುವಾಂಕೂರು ಸಂಸ್ಥಾನದ ಮಹಾರಾಜರಾಗಿದ್ದರು. ಹಾಗಿದ್ದೂ ಅವರು ಸಂಗೀತ ಲೋಕದ ವಾಗ್ಗೇಯಕಾರರಾಗಿ ಶೋಭಿಸಿದ ಮಹಾನ್ ಪ್ರತಿಭೆ. ಸ್ವಾತಿ ತಿರುನಾಳ್ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಾದ ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಸಮಕಾಲೀನರಾಗಿದ್ದವರು. ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತ ಪ್ರಕಾರಗಳೆರಡನ್ನೂ ಸಿದ್ಧಿಸಿಕೊಂಡಿದ್ದ ಅವರು ರಚಿಸಿದ ಕೀರ್ತನೆಗಳ ಸಂಖ್ಯೆಯೇ ನಾಲ್ಕುನೂರನ್ನೂ ಮೀರಿದ್ದು. ಹಿಂದೀ, ಸಂಸ್ಕೃತ, ತೆಲುಗು, ಮಲಯಾಳಂ ಅಲ್ಲದೆ ಕನ್ನಡದಲ್ಲೂ ಅವರು ಕೃತಿ ರಚಿಸಿದ್ದರು.
ಒಬ್ಬ ದಕ್ಷ ಮಹಾರಾಜರಾಗಿ ಉತ್ತಮ ಕಾನೂನು ವ್ಯವಸ್ಥೆ, ನ್ಯಾಯಾಲಯಗಳ ನಿರ್ಮಾಣ, ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಸೌಲಭ್ಯ, ವೀಕ್ಷಣಾಲಯ ನಿರ್ಮಾಣ, ಸರ್ಕಾರಿ ಮುದ್ರಣಾಲಯ ಸ್ಥಾಪನೆ, ಕೈಬರಹಗಳ ಗ್ರಂಥಭಂಡಾರ ಸ್ಥಾಪನೆ ಮುಂತಾದ ಅನೇಕ ಕಾರ್ಯಗಳಿಂದ ತಿರುವಾಂಕೂರು ಸಂಸ್ಥಾನಕ್ಕೆ ಆಧುನಿಕತೆ ತಂದುದಕ್ಕಾಗಿ ಸಹಾ ಸ್ವಾತಿ ತಿರುನಾಳರು ಪ್ರಸಿದ್ಧರು.
ತಿರುವಾಂಕೂರು ಸಂಸ್ಥಾನದ ಚೇರಾ ರಾಜಮನೆತನದಲ್ಲಿ ರಾಣಿ ಗೌರಿ ಲಕ್ಷ್ಮೀಬಾಯಿ ಮತ್ತು ರಾಜ ರಾಜ ವರ್ಮ ಕೋಯಿ ತಂಬುರನ್ ಅವರ ಎರಡನೇ ಪುತ್ರರಾಗಿ ಸ್ವಾತಿ ತಿರುನಾಳರು 1813ರ ಏಪ್ರಿಲ್ 16ರಂದು ಜನಿಸಿದರು. ಇರಯ್ಯಿಮ್ಮನ್ ತಂಬಿ ಎಂಬ ಪ್ರಸಿದ್ಧ ಮಲಯಾಳದ ಕವಿವರ್ಯರು ‘ಓಮಾನ ತಿಂಗಳ್ ಕಿಡಾವೋ’ ಎಂಬ ಪ್ರಸಿದ್ಧ ಲಾಲಿ ಹಾಡನ್ನು ಸ್ವಾತಿ ತಿರುನಾಳರು ಜನಿಸಿದಾಗ ರಚಿಸಿದರಂತೆ. ಸ್ವಾತಿ ತಿರುನಾಳರು ಇನ್ನೂ ನಾಲ್ಕು ವರ್ಷದ ಹಸುಳೆಯಾಗಿದ್ದಾಗಲೇ ಅವರ ತಾಯಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳನ್ನು ಆಹ್ವಾನಿಸಿ ಮಗುವಿನ ರಕ್ಷಣೆಯನ್ನು ಅವರಿಗೊಪ್ಪಿಸಿ ಮುಂದೆ ಈತ ರಾಜನಾಗಿ ಆಡಳಿತ ನಡೆಸುವುದಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರಂತೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಸ್ವಾತಿ ತಿರುನಾಳ್ ತಮ್ಮ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು. ಬಾಲ್ಯದಲ್ಲೇ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ, ಅಂಗಸಾಧನೆ, ಯುದ್ಧಕಲೆ ಹೀಗೆ ಎಲ್ಲದರಲ್ಲೂ ಕ್ಷಿಪ್ರಗತಿಯಲ್ಲಿ ಪರಿಣತಿ ಸಾಧಿಸಿದರು.
1829ರ ಇಸವಿಯಲ್ಲಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ರಾಜಪದವಿಗೆ ಅರ್ಹತೆ ಪಡೆದ ಸ್ವಾತಿ ತಿರುನಾಳರು ಮುಂದೆ ತಮ್ಮ ಅಲ್ಪಾಯುಷ್ಯ ಜೀವಿತದ ಅಂತ್ಯವಾದ 1846ರ ವರ್ಷದವರೆವಿಗೂ ಅಧಿಕಾರ ನಡೆಸಿದರು. ತಾಯಿಯಂತೆ ಲಾಲಿಸಿ ಪಾಲಿಸಿದ ಸ್ವಾತಿ ತಿರುನಾಳರ ಚಿಕ್ಕಮ್ಮ ಸ್ವಯಂ ಸಂಗೀತ ಸಾಧಕರಾಗಿದ್ದು ಚಿಕ್ಕವಯಸ್ಸಿನಿಂದಲೇ ತಿರುನಾಳರ ಕಲಿಕೆಗೆ ವಿಶೇಷ ಮುತುವರ್ಜಿ ವಹಿಸಿದರು. ತಂದೆ ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದ್ದು ಮಗನ ಜ್ಞಾನಕ್ಕೆ ನೀರೆರೆದರು. ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ ಮುನ್ರೋ ಅವರು ತಿರುನಾಳರ ಇಂಗ್ಲಿಷ್ ಕಲಿಕೆ ಬಗ್ಗೆ ಮುತುವರ್ಜಿ ವಹಿಸಿದ್ದರಂತೆ. ಈ ಭಾಷೆಗಳಲ್ಲದೆ ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಪರ್ಷಿಯನ್ ಭಾಷೆಗಳನ್ನು ಅವರು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದ್ದರು. ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಸ್ವಾತಿ ತಿರುನಾಳರು ಗಳಿಸಿದ್ದ ಜ್ಞಾನಾರ್ಜನೆ ಅಪಾರವಾಗಿತ್ತು. ವಿದೇಶೀಯ ವಿದ್ವಾಂಸರನ್ನೂ ಅಚ್ಚರಿಗೊಳಿಸಿದ್ದ ಇವರ ಜ್ಞಾನಚಾತುರ್ಯಗಳ ಬಗ್ಗೆ ಚರಿತ್ರಾರ್ಹ ಉಲ್ಲೇಖಗಳಿವೆ.
ಅಂದಿನ ಕಾಲದಲ್ಲಿ ಕೇರಳದ ನಾಡಿನಲ್ಲಿ ಸಂಗೀತವು ತನ್ನದೇ ಆದ ರೀತಿಯಲ್ಲಿ ಬೆಳಗುತ್ತಿತ್ತು. ಅದಕ್ಕೆ 'ಆಟಕಥಾ ಸಂಗೀತ' ಎಂದು ಹೆಸರಿತ್ತು. ಅಶ್ವಿನಿ ತಿರುನಾಳ್ ಎಂಬ ವಾಗ್ಗೇಯಕಾರರು ರಚಿಸಿದ ಕೆಲವು ಕೀರ್ತನೆಗಳು ಪ್ರಚಾರದಲ್ಲಿದ್ದವು. ರಾಮಪುರಂ ವಾರಿಯರ್ ಎಂಬುವವರು ರಚಿಸಿದ ಗೀತಗೋವಿಂದ ಮೊದಲಾದ ಕೃತಿಗಳೂ ಪ್ರಚಾರದಲ್ಲಿದ್ದವು. ಕಥಕ್ಕಳಿ ನೃತ್ಯದಲ್ಲೂ ಸಂಗೀತ ಬೆರೆತುಕೊಂಡಿತ್ತು.
ಕೇರಳದಲ್ಲಿದ್ದ ಕರ್ನಾಟಕ ಸಂಗೀತಕ್ಕೆ ಒಂದು ಹೊಸರೂಪವನ್ನು ಕೊಟ್ಟ ಕೀರ್ತಿ ಸ್ವಾತಿ ತಿರುನಾಳ್ ಅವರಿಗೆ ಸಲ್ಲುತ್ತದೆ. ಪದ್ಮನಾಭಸ್ವಾಮಿಯ ಭಕ್ತರಾಗಿದ್ದ ಸ್ವಾತಿ ತಿರುನಾಳ್ ಅವರು, ಶ್ರೀರಾಮಭಕ್ತರೂ, ಕರ್ನಾಟಕ ಸಂಗೀತಕ್ಕೆ ಮಕುಟಪ್ರಾಯರೂ ಆಗಿರುವ ತ್ಯಾಗರಾಜರ ಮೆಚ್ಚುಗೆಯನ್ನೂ ಪಡೆದಿದ್ದರೆಂದರೆ, ಅವರಿಗಿದ್ದ ಸಂಗೀತಜ್ಞಾನ, ರಚನಾಸಾಮರ್ಥ್ಯ ಎಷ್ಟರಮಟ್ಟಿನದು ಎಂದು ಊಹಿಸಬಹುದಾಗಿದೆ. ಮಹಾದೈವಭಕ್ತರೂ, ಚತುರರೂ, ರಾಜತಂತ್ರಜ್ಞರೂ ಆಗಿದ್ದ ತಿರುನಾಳರು ರಾಜ್ಯಭಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು. ಎಲ್ಲ ರೀತಿಯ ಕಲಾವಿದರಿಗೆ ಅಪಾರ ಪ್ರೋತ್ಸಾಹ ನೀಡಿದರು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್, ವಡಿವೇಲು, ಮೇರುಸ್ವಾಮಿ, ಕನ್ನಯ್ಯ, ಅನಂತ ಪದ್ಮನಾಭ ಗೋಸ್ವಾಮಿ, ಗೋವಿಂದ ಮಾರಾರ್ ಎಂಬುವವರು ಪ್ರಮುಖರು. ಪ್ರಸಿದ್ಧ ಸಾಹಿತಿಗಳಾದ ಕೋಯಿಲ್ ತಂಬುರಾನ್, ಇರಯಿಮ್ಮನ್ ತಂಬಿ, ರಾಮ ವಾರಿಯರ್ ಅವರುಗಳೂ ಇದ್ದರು. ಇತರ ಪ್ರಾಂತ್ಯಗಳಿಂದಲೂ ಕಲಾವಿದ ವಿದ್ವಾಂಸರನ್ನು ಕರೆಸಿ ಗೌರವಿಸುತ್ತಿದ್ದರು.
ಸ್ವಾತಿ ತಿರುನಾಳ್ ಅವರು ಕೇರಳದಲ್ಲಿ ಹರಿಕಥೆ ಸಂಪ್ರದಾಯವನ್ನು ರೂಢಿಗೆ ತಂದರು. ಇದಕ್ಕಾಗಿಯೇ 'ಕುಚೇಲೋಪಾಖ್ಯಾನ', 'ಅಜಮಿಳೋಪಾಖ್ಯಾನ' ಎಂಬ ಎರಡು ಕಥೆಗಳನ್ನು ಸಂಸ್ಕೃತದಲ್ಲಿ ರಚಿಸಿದರು. ತಂಜಾವೂರಿನ ಮಹಾರಾಜರಾದ ಶರಭೋಜಿಯವರ ಆಸ್ಥಾನದಲ್ಲಿದ್ದ ಅನಂತ ಪದ್ಮನಾಭ ಗೋಸ್ವಾಮಿ ಎಂಬ ಪ್ರಸಿದ್ಧ ಹರಿಕಥೆ ಭಾಗವತರನ್ನು ಆಹ್ವಾನಿಸಿ, ತಾವು ರಚಿಸಿದ ಎರಡು ಉಪಾಖ್ಯಾನಗಳನ್ನು ಅವರಿಗರ್ಪಿಸಿ ಕಥೋಪನ್ಯಾಸ ಮಾಡಿ ಅನುಗ್ರಹಿಸಬೇಕೆಂದು ಕೋರಿದರು. 'ಉತ್ಸವ ಪ್ರಬಂಧಂ', ‘ಭಕ್ತಿಮಂಜರಿ’, ‘ಮುಹಾನಪ್ರಶಾಂತ ಪ್ರಾಸ ವ್ಯವಸ್ಥಾ’, ‘ಸ್ವಾನಾನಂದೂರ ಪ್ರಬಂಧಂ’ ಮುಂತಾದ ಕೃತಿಗಳನ್ನೂ ಸ್ವಾತಿ ತಿರುನಾಳರು ರಚಿಸಿದರು.
ಕೇರಳದಲ್ಲಿ ಇವರ ಕಾಲದಲ್ಲಿದ್ದ ಸಂಗೀತ ಸಂಪ್ರದಾಯಕ್ಕೆ 'ಸೋಪಾನ ಸಂಪ್ರದಾಯ' ಎಂದು ಹೆಸರಿತ್ತು. ಹಿಂದೂಸ್ತಾನಿ ಸಂಗೀತದ ಕುರಿತು ಆಗ ಅಲ್ಲಿಯವರಿಗಿನ್ನೂ ತಿಳಿದಿರಲಿಲ್ಲ. ಆ ಕಾರಣಕ್ಕೇ ತಂಜಾವೂರಿಗೆ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದ ರಂಗಯ್ಯಂಗಾರರನ್ನೂ, ರಘುನಾಥರಾಯರೆಂಬ ವೈಣಿಕರನ್ನೂ, ಸಾರಂಗಿ ವಿದ್ವಾನ್ ಚಿಂತಾಮಣಿ ಭಾಗವತರನ್ನೂ ಗೌರವಿಸಿ ಆದರದಿಂದ ಬರಮಾಡಿಕೊಂಡರು.
ವಾಗ್ಗೇಯಕಾರರ ಶ್ರೇಣಿಯಲ್ಲಿ ಸ್ವಾತಿ ತಿರುನಾಳ್ ಮಹಾರಾಜರಿಗೆ ವಿಶೇಷ ಸ್ಥಾನವಿದೆ. ಹಲವಾರು ಭಾಷೆಗಳಲ್ಲಿ ಅವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ರಚನೆಗಳು, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳನ್ನು ಹೊಂದಿವೆ. ಅವರ ನವರತ್ನಮಾಲಿಕಾ, ನವವಿಧ ಭಕ್ತಿ ಮಂಜರಿ ಮೊದಲಾದವುಗಳಿಗೆ ವಿಶಿಷ್ಟ ಸ್ಥಾನವಿದೆ. ನೃತ್ಯಕ್ಕಾಗಿಯೇ ಮೀಸಲಿಡುವಂತೆ ಶೃಂಗಾರರಸ ಪ್ರಧಾನವಾದ ಅನೇಕ ಪದಗಳನ್ನು ರಚಿಸಿದ್ದಾರೆ. ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ ಮೊದಲಾದವುಗಳನ್ನು ಇವರು ರಚಿಸಿದ್ದಾರೆ. ಇವರು ತಮ್ಮ ಕೃತಿಗಳಿಗೆ ತಮ್ಮ ಕುಲಸ್ವಾಮಿಯಾದ ಶ್ರೀ ಪದ್ಮನಾಭಸ್ವಾಮಿಯ ಶ್ರೀನಾಮಗಳೆ ಆದ 'ಜಲಜನಾಭ', 'ಸರಸಿಜನಾಭ', 'ಕಂಜನಾಭ', 'ಸರಸೀರುಹನಾಭ' ಎಂಬ ಮುದ್ರೆಗಳನ್ನಿಟ್ಟಿದ್ದಾರೆ. ‘ರಾಜೀವಾಕ್ಷ ಬಾರೋ’ ಎಂಬ ಶಂಕರಾಭರಣಂ ರಾಗದಲ್ಲಿ ಅವರು ರಚಿಸಿರುವ ಕನ್ನಡದ ಕೃತಿಯೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ರಚಿಸಿರುವ ಕೃತಿಗಳು ಸಂಗೀತ ವಿದ್ವಾಂಸರ ಕಚೇರಿಗಳಲ್ಲಿ ನಿರಂತರವಾಗಿ ಹರಿಯುತ್ತಿದೆ. ಅವರ ‘ಭಾವಯಾಮಿ ರಘುರಾಮಂ’ ಎಂಬ ರಚನೆ ಸಮಸ್ತ ರಾಮಾಯಣವನ್ನೇ ಅಪೂರ್ವವೆಂಬಂತೆ ಗೀತೆಯೊಂದರಲ್ಲಿ ಕಟ್ಟಿಕೊಟ್ಟ ವಿಹಾರದಂತಿದೆ.
ಸ್ವಾತಿ ತಿರುನಾಳರು ತ್ಯಾಗರಾಜರ ಅನೇಕ ಕೃತಿಗಳನ್ನು ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿ ಅದಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸಿದರಾದರೂ ಅದು ಕೈಗೂಡಲಿಲ್ಲ. ಸ್ವಾತಿ ತಿರುನಾಳರು ತ್ಯಾಗರಾಜರ ಜೀವಿತಾವಧಿಯ ಅಂತ್ಯಕ್ಕೆ 12ದಿನಗಳ ಮೊದಲೇ 1846ನೇ ಡಿಸೆಂಬರ್ 25ರಂದು ತಮ್ಮ ಇಹಲೋಕದ ಬದುಕಿಗೆ ವಿದಾಯ ಹೇಳಿದರು.
ಮಹಾಮೇಧಾವಿಗಳೂ, ಸಾಹಿತಿಗಳೂ, ಆಡಳಿತಗಾರರೂ, ಕಲಾ ಪೋಷಕರೂ, ವಾಗ್ಗೇಯಕಾರರೂ ಆಗಿ ಬಾಳಿ ಕೇವಲ 34 ವರ್ಷಗಳ ಆಯುಷ್ಯದಲ್ಲೇ ಮಹಾ ಪ್ರತಿಭಾನ್ವಿತರೆನಿಸಿಕೊಂಡ ಮಹಾರಾಜ ಸ್ವಾತಿ ತಿರುನಾಳರ ಹೆಸರು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಚಿರಸ್ಮರಣೀಯವೆನಿಸಿದೆ.
ಅವರ ಕುರಿತಾದ ಚಲನಚಿತ್ರ ಮಲಯಾಳಂ ಭಾಷೆಯಲ್ಲಿ ಮೂಡಿಬಂದಿದ್ದು ಅದರಲ್ಲಿ ನಮ್ಮ ಅನಂತನಾಗ್ ಸ್ವಾತಿ ತಿರುನಾಳರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
On the birth anniversary of great musician Swathi Thirunal
ಕಾಮೆಂಟ್‌ಗಳು