ಇರಾವತಿ ಕರ್ವೆ
ಇರಾವತಿ ಕರ್ವೆ
ಇರಾವತಿ ಕರ್ವೆ ಅವರು ಸಾಹಿತಿಯಾಗಿ, ಮಾನವಶಾಸ್ತ್ರಜ್ಞೆಯಾಗಿ, ಸಮಾಜಶಾಸ್ರಜ್ಞೆಯಾಗಿ ಮತ್ತು ಶಿಕ್ಷಣತಜ್ಞೆಯಾಗಿ ಪ್ರಸಿದ್ಧರಾಗಿದ್ದಾರೆ. ಇರಾವತಿ ಕರ್ವೆ, ಭಾರತದಲ್ಲಿ ಮಾನವಶಾಸ್ತ್ರದ ಕುರಿತ ಚಿಂತನೆಗಳು ಇನ್ನೂ ಶೈಶವಾವಸ್ಥೆಯಲ್ಲಿ ಇದ್ದಂತಹ ಕಾಲದಲ್ಲಿ ಆ ಕುರಿತು ಮಹತ್ವದ ಸಾಧನೆ ಮಾಡಿದವರು.
ಇರಾವತಿಯವರು 1905ರ ಡಿಸೆಂಬರ್ 15ರಂದು ಈಗಿನ ಬರ್ಮ ದೇಶದಲ್ಲಿ ಜನಿಸಿದರು. ಅಲ್ಲಿದ್ದ ಇರ್ರವಾಡಿ ನದಿಯ ಹೆಸರಿನ ಪ್ರೇರಣೆಯಿಂದ ಇವರಿಗೆ ಇರಾವತಿ ಹೆಸರನ್ನಿಡಲಾಯಿತು. ತಂದೆ ಗಣೇಶ ಹರಿ ಕರ್ಮಾರ್ಕರ್ ಅವರು ಬರ್ಮ ಹತ್ತಿ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದರು. ಇರಾವತಿಯವರು ಪುಣೆಯ ವಸತಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಫರ್ಗುಸನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿ 1926ರಲ್ಲಿ ಪದವಿ ಪಡೆದರು. ಮುಂಬೈ ವಿಶ್ವವಿದ್ಯಾಲಯದಿಂದ 1928ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇರಾವತಿ ಕರ್ವೆಯವರು ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಧೋಂಡೋ ಕರ್ವೆಯವರ ಪುತ್ರ ದಿನಕರ ಕರ್ವೆ ಅವರನ್ನು ಮದುವೆಯಾದರು. ಜರ್ಮನಿಯಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ ಗಳಿಸಿದ್ದ ದಿನಕರ ಕರ್ವೆ ಅವರು ಪತ್ನಿ ಇರಾವತಿಯವರಿಗೆ ಜರ್ಮನಿಯಲ್ಲಿ ಉನ್ನತ ಅಧ್ಯಯನವನ್ನು ಕೈಗೊಳ್ಳಲು ಪ್ರೋತ್ಸಾಹಿಸಿದರು. ಇರಾವತಿಯವರು ಜರ್ಮನಿಯಲ್ಲಿ ಮಾನವಶಾಸ್ತ್ರದಲ್ಲಿ ಡಾಕ್ಟೊರೇಟ್ ಪದವಿ ಪಡೆದರು.
ಇರಾವತಿಯವರು 1931ರಿಂದ 1936ರ ವರೆಗೆ ಮುಂಬಯಿಯ ಎಸ್ಎನ್‍ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆಡಳಿತಾಧಿಕಾರಿಗಳಾಗಿ, ಬೋಧಕರಾಗಿ ಮತ್ತು ಸಂಶೋಧಕರಾಗಿ ಕಾರ್ಯನಿರ್ವಹಿಸಿ 1939ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ವರ್ಗಾವಣೆಗೊಂಡು ಕೊನೆಯವರೆಗೆ ಅಲ್ಲಿಯೇ ಇದ್ದರು.
ಇರಾವತಿ ಕರ್ವೆಯವರು ಭಾರತದ ಮೊತ್ತಮೊದಲ ಮಾನವಶಾಸ್ತ್ರಜ್ಞೆ ಎಂದು ಪ್ರಸಿದ್ಧರು. ಮಹಿಳೆಯರ ಬದುಕಿನ ಕುರಿತಾದ ಚಿಂತನೆ, ಜಾನಪದ, ಮಾನವಶಾಸ್ತ್ರ, ಜಾತಿವಾದ ಹಾಗೂ ಅವುಗಳ ಪಾರಸ್ಪರಿಕ ಸಂಬಂಧಗಳ ಕುರಿತು ಅವರಿಗೆ ಸಂಶೋಧನೆಯಲ್ಲಿ ಅಪಾರ ಆಸಕ್ತಿಯಿತ್ತು. ಹೀಗಾಗಿ ಅವರು ಪುಣೆ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವನ್ನು ಹುಟ್ಟುಹಾಕಿದರು. ಹಲವು ವರ್ಷಗಳ ಕಾಲ ಅದರ ಮುಖ್ಯಸ್ಥೆಯಾಗಿ ಕೆಲಸ ಮಾಡಿದರು.
ಇರಾವತಿ ಕರ್ವೆ ಅವರು ಮರಾಠಿ ಮತ್ತು ಇಂಗ್ಲೀಷಿನಲ್ಲಿ ಅಮೂಲ್ಯ ಬರಹಗಳನ್ನು ನೀಡಿದ್ದಾರೆ. Kinship Organization in India (Deccan College, 1953), (ಭಾರತದಲ್ಲಿರುವ ಹಲವು ಸಮಾಜಶಾಸ್ತ್ರ ಸಂಸ್ಥೆಗಳ ಅಧ್ಯಯನ); Hindu Society — an interpretation (Deccan College, 1961), ಹಿಂದು ಸಮಾಜದ ಅಧ್ಯಯನ;
Maharashtra — Land and People (1968), ಮಹಾರಾಷ್ಟ್ರದಲ್ಲಿರುವ ಹಲವು ಸಂಸ್ಥೆಗಳು ಮತ್ತು ಧಾರ್ಮಿಕ ಆಚಾರಗಳ ಅಧ್ಯಯನ; Yuganta (ಯುಗಾಂತ), ಮಹಾಭಾರತದ ಹಲವು ಪಾತ್ರಗಳ ಅಧ್ಯಯನ ಮತ್ತು ವಿಮರ್ಶೆ; ಪರಿಪೂರ್ತಿ (ಮರಾಠಿ); ಭೋವರ (ಮರಾಠಿ); ಅಮಚಿ ಸಂಸ್ಕೃತಿ (ಮರಾಠಿ); ಸಂಸ್ಕೃತಿ (ಮರಾಠಿ); ಗಂಗಾಜಲ (ಮರಾಠಿ) ಮುಂತಾದವು ಇವುಗಳಲ್ ಇರಾವತಿ ಅವರ ಬರಹಗಳಲ್ಲಿ ಸೇರಿವೆ.
ಇರಾವತಿ ಕರ್ವೆ ಅವರ ‘ಯುಗಾಂತ' ಮರಾಠಿ ಕೃತಿಗೆ 1968ರ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಸಂದಿತು. ಕನ್ನಡದಲ್ಲಿ ಈ ಕೃತಿಯನ್ನು ಸರಸ್ವತಿ ಗಜಾನನ ರಿಸಬೂಡ, ಶ್ರೀಪತಿ ತಂತ್ರಿ, ಬಾಲಚಂದ್ರ ಜಯಶೆಟ್ಟಿ, ಎಚ್. ಎಸ್. ಶಿವಪ್ರಕಾಶ್ ಮುಂತಾದರು ಅನುವಾದಿಸಿದ್ದಾರೆ.
ಇರಾವತಿ ಕರ್ವೆ ಅವರು 1970ರ ಆಗಸ್ಟ್ 11ರಂದು ನಿಧನರಾದರು.
On the birth anniversary of Irawati Karve, an anthropologist, sociologist, educationist and writer
ಇರವತಿ ಕರ್ವೆ ಕೋಡುಗೆ
ಪ್ರತ್ಯುತ್ತರಅಳಿಸಿ