ರಾಕೇಶ್ ಶರ್ಮಾ
ರಾಕೇಶ್ ಶರ್ಮಾ
ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯರಾಗಿ ಖ್ಯಾತರಾದವರು ರಾಕೇಶ್ ಶರ್ಮಾ. ಅವರು 1984 ವರ್ಷದ ಎಪ್ರಿಲ್ 3 ರಂದು ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-11 ರಲ್ಲಿ ಪಯಣಿಸಿ ಸುಮಾರು 8 ದಿನ ಅಂತರಿಕ್ಷದಲ್ಲಿ ಕಳೆದರು.
ರಾಕೇಶ್ ಶರ್ಮಾ 1949ರ ಜನವರಿ 13ರಂದು ಪಂಜಾಬಿನ ಪಟಿಯಾಲಾ ನಗರದಲ್ಲಿ ಜನಿಸಿದರು. ಭಾರತೀಯ ವಾಯು ಸೇನೆಯಲ್ಲಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ 1982 ವರ್ಷದ ಸೆಪ್ಟೆಂಬರ್ 20 ರಂದು ಅಂತರಿಕ್ ಯಾನಿಯಾಗಿ ಆಯ್ಕೆಯಾದರು.
ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ರಾಕೇಶ್ ಶರ್ಮಾ ಮತ್ತು ವಿಂಗ್ ಕಮ್ಯಾಂಡರ್ ರವೀಶ್ ಮಲ್ಹೊತ್ರಾ ಆಯ್ಕೆಯಾಗಿ ರಷ್ಯಾದ ಯೂರಿ ಗಗಾರಿನ್ ಕೇಂದ್ರದಲ್ಲಿ ಮತ್ತು ಬೆಂಗಳೂರಿನ ಇಸ್ರೋ ಕೇಂದ್ರಗಳಲ್ಲಿ ಅಂತರಿಕ್ಷಯಾನಕ್ಕಾಗಿ ತರಬೇತಿ ಪಡೆದರು. ಕೊನೆಯಲ್ಲಿ ರಾಕೇಶ್ ಶರ್ಮಾರನ್ನು ಅಂತರಿಕ್ಷಯಾನ ಮಾಡುವ ವ್ಯಕ್ತಿ ಎಂದು ಮತ್ತು ಅನಿವಾರ್ಯತೆಯ ಸಂದರ್ಭ ಏರ್ಪಟ್ಟಲ್ಲಿ ಅವರ ಬದಲಿ ವ್ಯವಸ್ಥೆಯಾಗಿ ರವೀಶ್ ಮಲ್ಹೊತ್ರಾ ಅವರೆಂದು ನಿರ್ಧರಿಸಲಾಯಿತು.
ಸೋವಿಯತ್ ಗಗನಯಾತ್ರಿ ಯೂರಿ ಮ್ಯಾಲಶೇವ್ ನೇತ್ವತ್ವದಲ್ಲಿ ಹಾಗು ಗೆನಡಿ ಸ್ಟ್ರೆಕಲೋವ್ ಜೊತೆಯಲ್ಲಿ ರಾಕೇಶ್ 1984ರ ಏಪ್ರಿಲ್ 3ರಂದು ಇಂದಿನ ಕಜಖಸ್ಥಾನದಲ್ಲಿರುವ ಬೈಕನೌರ್ ಅಂತರಿಕ್ಷಾ ಉಡಾವಣಾ ಕೇಂದ್ರದಿಂದ ಹಾರಿದ ಸೋಯಜ್ ಟಿ-11 ಏರಿ ಸಲ್ಯೂಟ್-7 ಅಂತರಿಕ್ಷ ನಿಲ್ದಾಣ ಸೇರಿದರು. ತಮ್ಮ 35 ನೇ ವಯಸ್ಸಿನಲ್ಲಿ ಅಂತರಿಕ್ಷಯಾನ ಮಾಡಿದ ರಾಕೇಶ್ ಶರ್ಮಾ ಅವರು ಸಲ್ಯೂಟ್-7 ನಿಲ್ದಾಣದಲ್ಲಿ 8 ದಿನ ಕಳೆದು ಹಲವಾರು ಪ್ರಯೋಗಗಳು ಮತ್ತು ಛಾಯಾಗ್ರಹಣ ನಡೆಸಿದರು. ಈ ಸಾಧನೆಯಿಂದಾಗಿ ಭಾರತ ಅಂತರಿಕ್ಷಯಾನ ಕೈಗೊಂಡ 14ನೇ ರಾಷ್ಟ್ರ ಮತ್ತು ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ 138ನೇ ಯಾತ್ರಿ ಎಂಬ ದಾಖಲೆ ಸೃಷ್ಟಿಯಾಯಿತು. 1984 ವರ್ಷದ ಏಪ್ರಿಲ್ 11ರಂದು ರಾಕೇಶ್ ಸೋಯಜ್ ಟಿ-10 ಏರಿ ಭೂಮಿ ಸೇರಿದರು.
ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಂತರಿಕ್ಷದಿಂದ ಭಾರತ ಹೇಗೆ ಕಾಣುತ್ತದೆ ಎಂದು ಕೇಳಿದಾಗ ಕವಿ ಮುಹಮ್ಮದ್ ಇಕ್ಬಾಲರ "ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ಥಾನ್ ಹಮಾರಾ (ಎಲ್ಲಾ ನಾಡಿಗಿಂತ ಹಿಂದೂಸ್ಥಾನ ಶ್ರೇಷ್ಟ)" ಕವಿತೆಯ ಸಾಲುಗಳನ್ನು ರಾಕೇಶ್ ವಾಚಿಸಿದ ಪ್ರಸಂಗ ಬಹು ಜನಪ್ರಿಯವಾಯಿತು.
ತಮ್ಮ ಸಾಧನೆಗಾಗಿ 1985ರಲ್ಲಿ ಭಾರತ ಸರ್ಕಾರದಿಂದ ರಾಕೇಶ್ ಶರ್ಮಾ ಅಶೋಕಚಕ್ರ ಪದಕ ಪಡೆದರು. ಯಾನದ ನಂತರ ವಾಯುಸೇನಾ ಪಡೆಯಿಂದ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಸೇರಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸಿದರು. ಕೊನೆಯಲ್ಲಿ ವಿಂಗ್ ಕಮ್ಯಾಂಡರ್ ಹುದ್ದೆ ಅಲಂಕರಿಸಿ, 2001 ರಲ್ಲಿ ರಾಕೇಶ್ ಶರ್ಮಾ ಎಚ್‌ಎಎಲ್ ಸೇವೆಯಿಂದ ನಿವೃತ್ತರಾದರು.
On the birth day of Rakesh Sharma, who was the first Indian to travel to space
ಕಾಮೆಂಟ್‌ಗಳು