ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಗನ್ನಾಥ ಬಾಬು


ನಮ್ಮ ಆಪ್ತ ಜಗನ್ನಾಥ ಬಾಬು ಇನ್ನಿಲ್ಲ


ನಮಗೆ ಕೆಲಸದ ವಾತಾವರಣದಲ್ಲಿ ಶಾಂತಿ, ತಾಳ್ಮೆ, ಪ್ರೀತಿ - ವಿಶ್ವಾಸ, ಮೇಲು ಕೀಳೆಂಬುದಿಲ್ಲದ ಸಮಾನತೆ ಮುಂತಾದವುಗಳನ್ನು ಕಲಿಸಿಕೊಟ್ಟವರು ಜಗನ್ನಾಥ ಬಾಬು ಸಾರ್.  ಇಂದು ಅವರು ನಿಧನರಾಗಿರುವುದು ಅಂತರಂಗದಲ್ಲಿ ದುಃಖ ಮೂಡಿಸಿದೆ.  ಯಾರಾದರೂ ಹೋದಾಗ ಕಣ್ಣಲ್ಲಿ ನೀರು ಹನಿದ ಘಟನೆ ಇತ್ತೀಚಿನ ವರ್ಷದಲ್ಲಿ ನನ್ನ ಅನುಭವಕ್ಕೆ ಬಂದದ್ದು ಕಡಿಮೆ. ಇಂದು ಅಂತಹ ಒಂದು ಅನುಭವ ಆಗುತ್ತಿದೆ.

ಜಗನ್ನಾಥ ಬಾಬು ಸಾರ್ 1953ರ ಜುಲೈ 1ರಂದು ಜನಿಸಿದವರು. ಜಗನ್ನಾಥ ಬಾಬು ಸಾರ್ ಅವರು ಸುಮಾರು 1991ರ ಸಮಯದಲ್ಲಿ ನಾನಿದ್ದ ಎಚ್ ಎಮ್ ಟಿ ಕೈಗಡಿಯಾರ ಮಾರುಕಟ್ಟೆ ವಿಭಾಗಕ್ಕೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಬಂದರು.  ಅವರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಇತರ ಪದವಿಗಳನ್ನು ಪಡೆದುದರ ಜೊತೆಗೆ ಅಪಾರ ಪ್ರಾಜ್ಞತೆ ಉಳ್ಳವರಾಗಿದ್ದರು.

ಜಗನ್ನಾಥ ಬಾಬು ಅವರು ನಮ್ಮ ಕಚೇರಿಗೆ ಬಂದದ್ದು ನಮಗೆ ಹೊಸ ತಂಗಾಳಿಯ ಸ್ಪರ್ಶದಂತಿತ್ತು.  ಅಲ್ಲಿಯವರೆಗೆ ನಾವೆಲ್ಲ ಬಾಸ್, ಸೂಪರಿಂಟೆಂಡೆಂಟ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್, ಸೀನಿಯರ್ ಕ್ಲರ್ಕ್, ಕ್ಲರ್ಕ್ ಎ, ಕ್ಲರ್ಕ್ ಬಿ, ಅಪ್ರೆಂಟಿಸ್ ಮುಂತಾದ ಹಂತಗಳಲ್ಲಿ ನಮ್ಮ ಅಸ್ಮಿತೆಯನ್ನು ಕಂಡುಕೊಂಡವರು.  (ನಾನು ಅಪ್ರೆಂಟಿಸ್ ಇಂದ 1980ರಲ್ಲಿ ಮೆಟ್ಟಿಲು ಹತ್ತಿದವ.). 

ನಾವು ನಮ್ಮ ಎಚ್ ಎಮ್ ಟಿ ಅಕೌಂಟ್ಸ್ ವಿಭಾಗದ ಜೀವನದಲ್ಲಿ ಹಗಲಿರುಳೂ ಚೆನ್ನಾಗಿ ಕೆಲಸ ಮಾಡುವುದೇ ನಮ್ಮ ಜೀವನದ ಔನ್ನತ್ಯದ ಭಾವ ಎಂದು ಭಾವಿಸಿಕೊಂಡಿದ್ದ ದಿನಗಳವು.  ಯಾವ ಕೆಲಸ ಯಾಕೆ, ಅದರರ್ಥ ಏನು, ಉದ್ದೇಶ ಏನು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಂತೋಷದಿಂದ ನನ್ನ ಸಂತೋಷಕ್ಕೆ ಕೆಲಸ ಮಾಡುತ್ತಿದ್ದ ಕ್ಯಾಟಗರಿಗೆ ನಾನು ಸೇರಿದವ. ಚೆನ್ನಾಗಿ ಕೆಲಸ ಮಾಡುವವ ಎಂದು ನಮ್ಮ ವಾತಾವರಣದಲ್ಲಿ ಗುರುತಿಸಿಕೊಳ್ಳಬೇಕು ಎಂಬುದರ ಹೊರತಾಗಿ ಬೇರೆ ಏನನ್ನೂ ನಾನು ಹೆಚ್ಚು ಚಿಂತಿಸದವ.  ಆ ಬದುಕಲ್ಲೊಂದು ನೆಮ್ಮದಿ ಸಂತೋಷವಿತ್ತು.

1980ರಿಂದ 1990ರ ಒಂದು ದಶಕದಲ್ಲಿನ ನಮ್ಮ ಬಹುತೇಕ ಎಚ್ಎಮ್‍ಟಿ ಬದುಕು ಒಂದು ರೀತಿಯಲ್ಲಿ ಬಾಸ್ ಹೇಗೆ ನಿರ್ಣಯಿಸಿದರೆ ಹಾಗೆ.  ಅವರ ಮುಂಗೋಪ, ಅಹಂ, ಕೋಪದ ನೋಟಕ್ಕೆ ಗುರಿಯಾಗದ ಹಾಗೆ ಬದುಕಬೇಕು ಎಂಬ ಕಾಳಜಿಯಲ್ಲಿ ಬದುಕು ನಡೆಯುತ್ತಿತ್ತು.  ಅದರಲ್ಲಿ ಕೊನೆಯ ಒಂದೆರಡು ವರ್ಷ,  ಏನೂ ನಿರ್ಣಯಿಸದೆ ಹುಚ್ಚುಚ್ಚಾಗಿ ಮಾತನಾಡಿ ವಾತಾವರಣವನ್ನು ಅಸಹ್ಯ ಮಾಡಿದ್ದ ಒಬ್ಬ ಅಧಿಕಾರಿಯ ಆಳ್ವಿಕೆಯನ್ನೂ ನಾವು ಅನುಭವಿಸಿದೆವು.

ಹೀಗೆ ಒಂದು ದಶಕ ಕಳೆದ ನಮ್ಮ ವೃತ್ತಿ ಜೀವನದಲ್ಲಿ ಬಂದವರು ಜಗನ್ನಾಥ ಬಾಬು.  ಅವರು ಬಂದ ತಕ್ಷಣವೇ ಕಚೇರಿಯಲ್ಲಿ ಎಲ್ಲ ರೀತಿಯ ಅಹಂಮಿಕೆ ಮತ್ತು ಕೀಳರಿಮೆಯ ಗೋಡೆಗಳೆಲ್ಲ ಬಿದ್ದು ಕೆಲಸದ ಆವರಣ ಸ್ನೇಹಪೂರ್ಣವಾಯ್ತು.  ಬಂದ ವಾರದಲ್ಲೇ ಸ್ನೇಹಕೂಟ ಏರ್ಪಡಿಸಿದರು.  ನಮ್ಮ ಆವರಣಕ್ಕೆ ಬರುವ ಮುಂಚೆಯೇ ಬಾಬು ಎಚ್‍ಎಮ್‍ಟಿ ಇಂಟರ್ನ್ಯಾಶನಲ್ ಸಂಸ್ಥೆಯ ಮೂಲಕ ವಿದೇಶಗಳಲ್ಲಿ ಕೆಲಸ ಮಾಡಿ ಬಂದಿದ್ದರು.   ವಿಭಾಗದ ಕೆಲಸಗಳ ಕಂಪ್ಯೂಟರೀಕರಣದಲ್ಲಿ ಹೊಸ ವೇಗ ತಂದರು. ವಾತಾವರಣ ಸ್ನೇಹಪೂರ್ಣವಾಯ್ತು. ಅಂತೆಯೇ ಕೆಲಸದ ಸಾಗುವಿಕೆಯ ಗತಿಯಲ್ಲಿ ಹೊಸತನ ತುಂಬಿ ಬಂತು.

ಜಗನ್ನಾಥ ಬಾಬು ಅವರು ನಮ್ಮ ಅಧಿಕಾರಿಯಾಗಿದ್ದ ಅವಧಿಯಲ್ಲಿ ನಾನು ಕಾರ್ಮಿಕ ಸಂಘದ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದು ಜಯಗಳಿಸಿದ್ದೆ.  ಕಾರ್ಮಿಕ ಸಂಘ ಮತ್ತು ಆಡಳಿತವರ್ಗದ ಭಿನ್ನಾಭಿಪ್ರಾಯಗಳ ನಡುವೆಯೂ ನಮ್ಮ ಬಾಂಧವ್ಯ ಉತ್ತಮವಾಗಿತ್ತು.  ನಾನು ಕಾರ್ಮಿಕ ಸಂಘದ ಕಾರ್ಯದರ್ಶಿಯಾಗಿದ್ದರೂ ಕಚೇರಿ ಕೆಲಸ ಮಾಡುತ್ತಿದ್ದೆ. ‍ಆದರೂ ಕಾರ್ಮಿಕ ಸಂಘ, ಕನ್ನಡ ಸಂಪದ ಮತ್ತು ಕಚೇರಿ ಕೆಲಸದ ಮೂರು ದೋಣಿಗಳಲ್ಲಿ ಕಾಲಿಟ್ಟು ಒದ್ದಾಡುತ್ತಿದ್ದ ನನ್ನ ಕೆಲಸಗಳಲ್ಲಿ ವೆತ್ಯಯವಾಗುತ್ತಿದ್ದುದು ಅವರಿಗೆ ಸ್ವಲ್ಪ ಕಷ್ಟವಾಗಿದ್ದರೂ ನನ್ನ ಕುರಿತು ಸಹಾನುಭೂತಿ ಉಳ್ಳವರಾಗಿದ್ದರು.

ಜಗನ್ನಾಥ ಬಾಬು ಅವರು ಸ್ನೇಹಪರರಾಗಿದ್ದರೂ ಮೇಲಧಿಕಾರಿಗಳ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳುತ್ತಿದ್ದುದು ಕೆಲವು ಅಹಮಿಕೆಯ ಆಡಳಿತಗಾರರಿಗೆ ಇಷ್ಟವಾಗಿರಲಿಲ್ಲ.  ಹಾಗಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ನಮ್ಮ ವಿಭಾಗದಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಆಗುವಂತೆ ಮಾಡಿದರು.  ಇದು ಅವರ ಜೊತೆ ಕೆಲಸ‍ ಮಾಡುತ್ತಿದ್ದವರಿಗೆ ತೀವ್ರ ನಿರಾಸೆ ತಂದಿತು.  ಅಂತಹ ಮನುಷ್ಯ ನಮ್ಮ ಜೊತೆ ಇರುವುದು ತಪ್ಪಿತಲ್ಲ ಎಂಬ ನೋವು ಕಾಡಿತು. ಅವರಿಗೂ ಅದು ನೋವು ತಂದ ವಿಚಾರವಾಗಿತ್ತು.

ಇಲ್ಲಿ ನೆನಪಾಗುವ ಮತ್ತೊಂದು ವಿಚಾರವೆಂದರೆ, ಜಗನ್ನಾಥ ಬಾಬು ಅವರ ಸ್ನೇಹ ನಡೆಯನ್ನು  ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಂಡ ಕೆಲವು ಮಧ್ಯಮ ಹಂತದ ಮೇಲ್ವಿಚಾರಕ ವರ್ಗದ ಜನ ಕಾರ್ಯನಿರ್ವಹಣೆಯ ದಕ್ಷತೆಯಲ್ಲಿ ಸಡಿಲತೆಯನ್ನು ಸೃಷ್ಟಿಸಿದ್ದರು.  ನೇರವಾಗಿ ನುಡಿಯುತ್ತಿದ್ದ ನಾನು ಜಗನ್ನಾಥ ಬಾಬು ಅವರು ವರ್ಗವಾದ ಸಂದರ್ಭದಲ್ಲಿ "ಸಾರ್ ನೀವು ತುಂಬಾ ಒಳ್ಳೆಯವರಾಗಿದ್ರಿ,  ನಿಮ್ಮ ಸ್ನೇಹವನ್ನು ನಾವುಗಳು ನಮ್ಮ ಕಾರ್ಯವೈಖರಿಯಲ್ಲಿ ದುರುಪಯೋಗಪಡಿಸೆಕೊಂಡೆವು ಅನಿಸುತ್ತೆ" ಎಂದು ಭಾಷಣದಲ್ಲಿ ಹೇಳಿಬಿಟ್ಟೆ.  ಅದು ಅವರನ್ನು ಅಪಾರವಾಗಿ ಕೊರೆಯುತ್ತಿತ್ತು.  ಅದನ್ನು ಅವರು ಬಹಳ ಜನದ ಬಳಿ ಹೇಳಿ ನೋವುಪಟ್ಟಿದ್ದರು. ಆ ಘಟನೆಯಾಗಿ ಸುಮಾರು 13 ವರ್ಷದ ನಂತರ  ನಾನು ಕುಟಂಬದೊಡನೆ ದುಬೈಗೆ ಹೊರಟ ಸಂದರ್ಭದಲ್ಲಿ ಆ ಮಾತು ಬಂದಾಗ ಸಾರ್, "ನಾನು ಹಾಗೆ ಹೇಳಿದ್ದು ತಪ್ಪು, ಕ್ಷಮಿಸಿ" ಎಂದಾಗ ಅವರ ಹೃದಯಕ್ಕೆ ಶಾಂತಿ ಸಿಕ್ಕಭಾವ ಮೂಡಿತು. ನಾವು ಎಲ್ಲೋ ಹೇಗೋ ಆಡುವ ಮಾತು ನಮ್ಮ ಉದ್ದೇಶ ಬೇರೆಯದೇ ಇದ್ದರೂ ಮೃದು ಮನಗಳನ್ನು ನೋಯಿಸುತ್ತದೆ ಎಂಬ ಪಾಠ ಕಲಿತೆ.  ಆದರೂ ಅಷ್ಟೊಂದು ಸುದೀರ್ಘ ಕಾಲ ಒಂದು ಮಾತು ಅವರನ್ನು ಬಾಧಿಸಿತ್ತು ಎಂಬುದು ನನಗೆ ಇಂದೂ ಪಶ್ಚಾತ್ತಾಪವಿದೆ.

ಮುಂದೆ ಬಾಬು ಅವರು ತಮ್ಮದೇ ಆದ ಚಾರ್ಟರ್ಡ್ ಅಕೌಂಟೆಂಟ್ ಕಛೇರಿ ತೆರೆದರು.  ಸಿಎ ಇಂಟರ್ ಪದವಿ ಮತ್ತು ಫೈನಲ್ ಒಂದು ಗ್ರೂಪ್ ಪೂರೈಸಿರುವ ನನ್ನ ಪತ್ನಿ ಲಲಿತ ಅವರ ಕಚೇರಿಯಲ್ಲಿ  ಕೆಲವು ವರ್ಷ ಕಾರ್ಯನಿರ್ವಹಿಸುತ್ತಿದ್ದರು.  ನಮ್ಮಿಬ್ಬರ ಕುರಿತೂ ಬಾಬು ಅಕ್ಕರೆ ಹೊಂದಿದ್ದು ಎಲ್ಲ ವಿಚಾರಗಳನ್ನೂ ಮುಕ್ತವಾಗಿ ಚರ್ಚಿಸುತ್ತಿದ್ದರು.  ಮುಂದೆ ನಾವು ದುಬೈಗೆ ಬಂದ ನಂತರದಲ್ಲಿ ಬಾಬು ಅವರ ಯುವ ಪುತ್ರ ಅಪಘಾತದಲ್ಲಿ ನಿಧನನಾದ. ಆ ಘಟನೆಯ ನಂತರ ಅವರನ್ನು ಭೇಟಿ ಮಾಡಿದಾಗ ಅವರಲ್ಲಿ ಎಂದಿನ ನಗುವಿದ್ದರೂ ದುಃಖ ಅಂತರಂಗದಲ್ಲಿ ಮಡುಗಟ್ಟಿದ್ದು ನಮ್ಮ ಅನುಭವಕ್ಕೆ ಬಂದಿತ್ತು.  

ಮುಂದೆ ಜಗನ್ನಾಥ್ ಬಾಬು ಸಾರ್ ಅವರನ್ನು ಕಳೆದ ದಶಕದಲ್ಲಿ ನೋಡಲಿಲ್ಲ.  ಒಬ್ಬರು ಇಲ್ಲವಾದಾಗಲೇ ನಮಗೆ ಆ ವ್ಯಕ್ತಿಯ ಮೌಲ್ಯ ನೆನಪಾಗುವುದು.  ಜಗನ್ನಾಥ್ ಬಾಬು ಸಾರ್ ನಿಮ್ಮ ಒಳ್ಳೆಯತನ ಸಮರ್ಥಗುಣ ಮರೆಯಲಾರೆ.  ಏನೋ ಕಳೆದುಕೊಂಡ ಭಾವ.  ನಿಮಗೆ ನನ್ನ ಅಂದಿನ ಮಾತು ಸರಿಯಾಗಿ ತಲುಪಿರಲಿಲ್ಲ.  ಇಂದು ಕೂಡಾ ನನ್ನಲ್ಲಿನ ನಿಮ್ಮ ಕುರಿತಾದ ಗೌರವ ಮತ್ತು  ಪ್ರೀತಿ ತಲುಪುತ್ತದೆಯೊ ಇಲ್ಲವೊ ಗೊತ್ತಿಲ್ಲ.  ನಿಮಗೆ ನನ್ನ ಹೃದಯಪೂರ್ವಕ ನಮನ. ನಾನಂತೂ ನಿಮ್ಮ ಮರೆಯಲಾರೆ. 

Our great boss, guide and affectionate friend Jagannath Babu Sir expired today 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ