ಕೆ. ಎಂ. ಕಾರಿಯಪ್ಪ
ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ
ಭಾರತೀಯ ಸೈನ್ಯವೆಂದರೆ ನಮ್ಮ ಕೊಡಗಿನ ವೀರರು ನೆನಪಾಗುತ್ತಾರೆ. ನಮ್ಮ ಭಾರತದ ಸೈನ್ಯದ ಪ್ರಪ್ರಥಮ ಫೀಲ್ಡ್ ಮಾರ್ಷಲ್, ಮಹಾದಂಡನಾಯಕ ಕೊದಂಡೆರ ಮಾದಪ್ಪ ಕಾರಿಯಪ್ಪ ಅವರು ಭಾರತೀಯ ಜನಮನದಲ್ಲಿ ಕಳಶಪ್ರಾಯರು.
ಕಾರಿಯಪ್ಪನವರು 1899ರ ಜನವರಿ 28ರಂದು ಕೊಡಗಿನ ಶನಿವಾರಸಂತೆಯಲ್ಲಿ ಜನಿಸಿದರು. ಅವರು ಸಂಬಂಧಿಗಳಲ್ಲಿ 'ಚಿಮ್ಮ' ಎಂದೆನಿಸಿದ್ದರು. ಕಾರಿಯಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಕೇಂದ್ರಿಯ ಪ್ರೌಢ ಶಾಲೆಯಲ್ಲಾಯಿತು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದರು. ಕಾಲೇಜಿನಲ್ಲಿ ಪುಸ್ತಕಗಳು ಮತ್ತು ಖ್ಯಾತ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದ್ದ ನಾಟಕಗಳು ಕಾರಿಯಪ್ಪನವರನ್ನು ಬಹಳಷ್ಟು ಆಕರ್ಷಿಸಿದ್ದವು. ಕಾರಿಯಪ್ಪನವರು ಹಾಕಿ ಮತ್ತು ಟೆನ್ನಿಸ್ ಆಟಗಳನ್ನು ಕುಶಲತೆಯಿಂದ ಆಡುತ್ತಿದ್ದರು. ಸಂಗೀತದಲ್ಲಿ ರಸಿಕತೆ ಹೊಂದಿದ್ದ ಅವರನ್ನು ಇಂದ್ರಜಾಲದಲ್ಲಿನ ಮಾಂತ್ರಿಕತೆಯ ಕೈ ಚಳಕ ಅಪಾರವಾಗಿ ಸೆಳೆದಿತ್ತು.
1918ರ ಮೊದಲನೆಯ ಮಹಾಯುದ್ಧ ಮುಗಿದಾಗ ಭಾರತೀಯರನ್ನೂ ಸೈನ್ಯಾಧಿಕಾರಿಗಳ ಸ್ಥಾನಕ್ಕೆ ಪರಿಗಣಿಸಬೇಕೆಂಬ ಕೂಗಿಗೆ ಬಲಬರತೊಡಗಿತ್ತು. ಈ ನಿಟ್ಟಿನಲ್ಲಿ ನಡೆದ ಹಲವಾರು ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಆಯ್ಕೆಗೊಂಡ ಕೆಲವೇ ಮಂದಿಯಲ್ಲಿ ಕಾರಿಯಪ್ಪನವರೂ ಒಬ್ಬರು. ನಂತರದಲ್ಲಿ ಸೇನೆಯಲ್ಲಿನ ಕಠಿಣ ತರಬೇತಿಯನ್ನು ಕಾರಿಯಪ್ಪ ಪಡೆದರು. ಇಂದೂರಿನ ಡೆಲ್ಲಿ ಕೆಡೆಟ್ ಕಾಲೇಜಿನಲ್ಲಿ ರಾಜನ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರ್ಪಡೆಗೊಂಡ ಕಾರಿಯಪ್ಪನವರು ಮುಂದೆ ಮುಂಬೈನ ಕಾರ್ನಾಟಿಕ್ ಪದಾತಿದಳಕ್ಕೆ ನಿಯುಕ್ತರಾದರು.
ಕಾರಿಯಪ್ಪನವರು ಮೊದಲಬಾರಿಗೆ ಈಗಿನ ಇರಾಕ್ ಎನಿಸಿರುವ ಅಂದಿನ ಮೆಸೊಪೊಟಾಮಿಯಾದಲ್ಲಿದ್ದ ವೇಲ್ಸ್ ರಾಜಕುಮಾರನ ಡೊಗ್ರಾ ದಳದೊಂದಿಗೆ ಸೈನ್ಯದ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು ವಿಕ್ಟೋರಿಯಾ ರಾಣಿಯ ಆಪ್ತದಳವಾದ 2ನೆ ರಾಜಪುತ ಲಘು ಪದಾತಿದಳಕ್ಕೆ ವರ್ಗಾಯಿಸಲಾಯಿತು. ಈ ದಳವೇ ಇವರು ಸೈನ್ಯದಿಂದ ನಿವೃತ್ತಿಯನ್ನು ಹೊಂದುವ ತನಕದ ಇವರ ನೆಲೆಯಾಗಿತ್ತು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಿಬ್ಬಂದಿ ಮಹಾವಿದ್ಯಾಲಯಕ್ಕೆ ತರಬೇತಿ ಪಡೆಯಲು ಸೇರಿದ ಮೊದಲ ಭಾರತೀಯ ಅಧಿಕಾರಿ ಕಾರಿಯಪ್ಪನವರಾಗಿದ್ದರು. ಮುಂದೆ 1946ರಲ್ಲಿ ಇವರಿಗೆ ಫ್ರಾಂಟಿಯರ್ ಬ್ರಿಗೇಡ್ ದಳದ ಬ್ರಿಗೇಡಿಯರ್ ಭಡ್ತಿ ನೀಡಲಾಯಿತು. ಪಾಕಿಸ್ಥಾನದ ಫೀಲ್ಡ್ ಮಾರ್ಷಲ್ ಮತ್ತು ರಾಷ್ಟ್ರಪತಿಯಾಗಿ ನಿಯುಕ್ತಗೊಂಡ ಅಯೂಬ್ ಖಾನ್ ಅಂದಿನ ದಿನಗಳಲ್ಲಿ ಕಾರಿಯಪ್ಪನವರ ಸಹಾಯಕ ಅಧಿಕಾರಿಯಾಗಿದ್ದರು.
1941-42ರ ಅವಧಿಯಲ್ಲಿ ಕಾರಿಯಪ್ಪನವರು ಇರಾಕ್, ಸಿರಿಯಾ ಮತ್ತು ಇರಾನ್ ಪ್ರದೇಶಗಳಲ್ಲಿ ಮತ್ತು 1943-44ರಲ್ಲಿ ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ಅವರು ವಝಿರಿಸ್ತಾನದಲ್ಲಿ ತಮ್ಮ ಸೈನಿಕ ಜೀವನದ ಅನೇಕ ವರ್ಷಗಳನ್ನು ಕಳೆದರು. 1942ರಲ್ಲಿ ಕಾರಿಯಪ್ಪನವರ ಸ್ವಾಧೀನಕ್ಕೆ ಒಂದು ತುಕಡಿಯನ್ನು ಒಪ್ಪಿಸಲಾಯಿತು. ಅಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಕಾರಿಯಪ್ಪನವರು. ಸ್ವಲ್ಪ ಸಮಯದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ 26ನೆಯ ಸೈನ್ಯವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಸ್ವಯಂ ಇಚ್ಛೆ ವ್ಯಕ್ತಪಡಿಸಿದ ಕಾರಿಯಪ್ಪನವರು ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದಾಗ ಅವರಿಗೆ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಗೌರವವನ್ನು ಪ್ರಧಾನ ಮಾಡಲಾಯಿತು.
1947ರಲ್ಲಿ ಯುನೈಟೆಡ್ ಕಿಂಗ್ಡಮ್ಮಿನ ಕಿಂಬರ್ಲಿಯಲ್ಲಿರುವ ಇಂಪೀರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಉನ್ನತ ಮಟ್ಟದ ಯುದ್ಧ ತಂತ್ರಜ್ಞಾನಗಳ ತರಬೇತಿಯನ್ನು ಕಾರಿಯಪ್ಪನವರು ಪಡೆದರು. ಇಂತಹ ತರಬೇತಿಯನ್ನು ಪಡೆದ ಮೊದಲ ಭಾರತೀಯರು ಕಾರಿಯಪ್ಪ. ಹೃದಯವಿದ್ರಾವಕವಾದ ವಿಭಜನೆಯ ಸಮಯದಲ್ಲಿ ಕಾರಿಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಸಂಯಮತೆಯಿಂದ ಮತ್ತೂ ಎರಡೂ ಪಕ್ಷಗಳಿಗೂ ಒಪ್ಪುವ ರೀತಿಯಲ್ಲಿ ನೆರವೇರಿಸಿದರು. ಇವರು ಈ ನಿರ್ಗಮನ ಕಾರ್ಯದ ಭಾರತದ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದರು.
ಸ್ವಾತಂತ್ರ್ಯಾನಂತರದಲ್ಲಿ ಕಾರಿಯಪ್ಪನವರ ಸ್ಥಾನವನ್ನು ಮೇಜರ್ ಜನರಲ್ ಪದವಿಗೆ ಏರಿಸಿ ಅವರನ್ನು ಸೈನ್ಯದ ಉಪದಂಡನಾಯಕರನ್ನಾಗಿ ನೇಮಿಸಲಾಯಿತು. ನಂತರ ಲೆಫ್ಟನೆಂಟ್ ಜನರಲ್ ಎಂದು ಆ ಪದವಿಯನ್ನು ಔನ್ನತ್ಯಗೊಳಿಸಿದಾಗ ಕಾರಿಯಪ್ಪನವರು ಈಸ್ಟರ್ನ್ ಆರ್ಮಿ ಕಮಾಂಡರ್ ಆದರು. 1947ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲ್ ಪ್ರದೇಶಗಳನ್ನು ವಾಪಸ್ ಪಡೆಯಲು ಸೈನ್ಯಕ್ಕೆ ಕಾರಿಯಪ್ಪನವರು ಸಮರ್ಥ ನಾಯಕತ್ವ ನೀಡಿ, ಲೆಹ್ ಪ್ರದೇಶಕ್ಕೆ ಕಡಿದುಹೋದ ಸಂಪರ್ಕವನ್ನು ಮರಳಿ ದೊರಕಿಸಿಕೊಟ್ಟರು. 1949ರಲ್ಲಿ ಅವರನ್ನು ಕಮಾಂಡರ್ ಇನ್ ಚೀಫ್ ಎಂದು ನೇಮಿಸಲಾಯಿತು. ಇಂಪೀರಿಯಲ್ ಆರ್ಮಿ ಎಂದು ಅಲ್ಲಲ್ಲಿ ಹಂಚಿಹೋಗಿದ್ದ ಭಾರತೀಯ ಸೈನ್ಯವನ್ನು ‘ರಾಷ್ಟ್ರೀಯ ಸೈನ್ಯವಾಗಿ’ ಒಂದುಗೂಡಿಸಿದ ಶ್ರೇಯಸ್ಸು ಕಾರಿಯಪ್ಪನವರಿಗೆ ಸಲ್ಲುತ್ತದೆ.
1953ರಲ್ಲಿ ಸೈನ್ಯದಿಂದ ನಿವೃತ್ತಿಯ ನಂತರದಲ್ಲಿ ಕಾರಿಯಪ್ಪನವರು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಭಾರತೀಯ ರಾಯಭಾರಿಯಾಗಿ ನಿಯೋಜಿಸಲ್ಪಟ್ಟಿದ್ದರು. ಬಹಳಷ್ಟು ದೇಶಗಳಲ್ಲಿನ ಸೈನ್ಯಗಳ ಸಂಘಟನೆಗಳ ಕಾರ್ಯದಲ್ಲಿ ಅವರು ತಮ್ಮ ಸೇವೆಯನ್ನು ನೀಡಿದ್ದರು. ಈ ನಿಟ್ಟಿನಲ್ಲಿ ಅವರು ಚೈನ, ಜಪಾನ್, ಅಮೆರಿಕ, ಗ್ರೇಟ್ ಬ್ರಿಟನ್ ಮತ್ತು ಬಹುತೇಕ ಯೂರೋಪ್ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಸಂಚಾರ ನಡೆಸಿದ್ದರು. ಅಮೆರಿಕಾದ ಅಧ್ಯಕ್ಷ ಟ್ರೂಮನ್ ಅವರು ಕಾರಿಯಪ್ಪನವರಿಗೆ 'Order of the Chief Commander of the Legion of Merit’ ಪ್ರಶಸ್ತಿ ನೀಡಿ ಗೌರವಿಸಿದ್ದರು.
1962, 1965, 1971ರಲ್ಲಿ ಯುದ್ಧಗಳಾದಾಗ ಕಾರಿಯಪ್ಪನವರು ಗಡಿಯಲ್ಲಿ ಸಂಚರಿಸಿ ಭಾರತೀಯ ಸೈನ್ಯಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಿದರು. “ಸೈನ್ಯದ ಯಾವುದೇ ದೊಡ್ಡ ಅಧಿಕಾರಿಯೂ ತನ್ನ ದಳದ ಯಾವುದೇ ಸಿಪಾಯಿಗಿಂತ ಹೆಚ್ಚಿನ ಮೌಲ್ಯದವನೇನಲ್ಲ” ಎಂಬ ಅವರ ಮಾತುಗಳು ಒಬ್ಬ ಉತ್ತಮ ನಾಯಕನ ಗುಣ ಲಕ್ಷಣಗಳನ್ನು ಸಮರ್ಥವಾಗಿ ಪ್ರತಿನಿಧಿಸುವಂತದ್ದಾಗಿದೆ. 1965ರ ಅವಧಿಯಲ್ಲಿ ಭಾರತೀಯ ವಾಯುದಳದ ಪೈಲಟ್ ಆದ ಅವರ ಮಗ ಪಾಕಿಸ್ಥಾನೀ ಸೇನೆಗೆ ಸೆರೆಸಿಕ್ಕ ಸಂದರ್ಭದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅವರ ಸಹಾಯಕರಾಗಿದ್ದ ಪಾಕಿಸ್ಥಾನದ ಅಧ್ಯಕ್ಷ ಅಯೂಬ್ ಖಾನ್ ಅವರು, ಕಾರಿಯಪ್ಪನವರಿಗೆ ಅವರ ಮಗನನ್ನು ಉಳಿದ ಶತ್ರುಸೈನಿಕರಂತೆ ಕಾಣುವುದಿಲ್ಲ ಎಂಬ ಮಾತನಾಡಿದಾಗ, ಅದನ್ನು ತಿರಸ್ಕರಿಸಿದ ಕಾರಿಯಪ್ಪನವರು “ಈ ದೇಶದ ಪ್ರತಿಯೊಬ್ಬ ಸೈನಿಕನೂ ನನ್ನ ಮಗನೆ” ಎಂದರು.
1983ರ ವರ್ಷದಲ್ಲಿ ಕಾರಿಯಪ್ಪನವರ ಉತ್ಕೃಷ್ಟ ಸೇವೆಯ ಸ್ಮರಣಾರ್ಥವಾಗಿ ಭಾರತ ಸರ್ಕಾರ ಅವರಿಗೆ ಫೀಲ್ಡ್ ಮಾರ್ಷಲ್ ಗೌರವವನ್ನು ಸಮರ್ಪಿಸಿತು. ತಮ್ಮ ನಿವೃತ್ತಿಯ ಬಹಳಷ್ಟು ವರ್ಷಗಳನ್ನು ಕಾರಿಯಪ್ಪನವರು ಮಡಿಕೇರಿಯ ಸುಂದರ ಪರಿಸರದಲ್ಲಿ ಕಳೆದರು. ಜೊತೆಗೆ ಸ್ವತಃ ಪ್ರಕೃತಿ ಪ್ರೇಮಿಯಾದ ಕಾರಿಯಪ್ಪನವರು ಜನರಿಗೆ ಪ್ರಕೃತಿ ಪ್ರೇಮ, ಸ್ವಚ್ಛತೆ ಮತ್ತು ಬದುಕಿನ ಹಲವಾರು ಸೌಂದರ್ಯ ವಿಚಾರಗಳ ಕುರಿತಾದ ಶಿಕ್ಷಣ ನೀಡುವ ಕೆಲಸವನ್ನು ಸಾಂಗವಾಗಿ ನಡೆಸಿದರು. ತೊಂಬತ್ತನಾಲ್ಕು ವರ್ಷಗಳ ಶುದ್ಧ ಜೀವನವನ್ನು ನಡೆಸಿದ ಕಾರಿಯಪ್ಪನವರು 1993ರ ಮೇ 15ರಂದು ಬೆಂಗಳೂರಿನಲ್ಲಿ ನಿಧನರಾದರು.
ಭಾರತದ ಈ ಮಹಾನ್ ನಿಷ್ಠಾವಂತ ಸೇನಾನಿಗೆ ನಮ್ಮ ಸಾಷ್ಟಾಂಗ ನಮನ.
On the birth anniversary of Field Marshal K M Cariappa
ಕಾಮೆಂಟ್‌ಗಳು