ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೇಳೂಚರಣ್


 ಕೇಳೂಚರಣ್ ಮೊಹಾಪಾತ್ರ


ಭಾರತದ ಮಹಾನ್ ನೃತ್ಯಕಲಾವಿದರ ಪಟ್ಟಿಯಲ್ಲಿ ಒಡಿಸ್ಸಿ ನೃತ್ಯ ಕಲಾವಿದರಾದ ಕೇಳೂಚರಣ್ ಮೊಹಾಪಾತ್ರ ಅವರ ಹೆಸರು ಪ್ರಮುಖ ಪಂಕ್ತಿಯದು.  ಅವರ ನೃತ್ಯಾಭಿನಯದಲ್ಲಿನ ಭಾವತನ್ಮಯತೆ ಅಪೂರ್ವವೆನಿಸುವಂತದ್ದು.  ವಯಸ್ಸಾಗಿದ್ದಾಗಲೂ ಅವರ ಅಭಿನಯದಲ್ಲಿ ಕಾಣುತ್ತಿದ್ದಂತ ರಾಧಾಸಖಿಭಾವದಂತಹ ಅಭಿವ್ಯಕ್ತಿ ಮನಮೋಹಕವೆನಿಸುವಂತಿತ್ತು.

ಕೇಳೂಚರಣ್ ಮೊಹಾಪಾತ್ರರ ಸಾಧನೆಯಷ್ಟೇ ಅವರು ಸವೆಸಿದ ಹಾದಿ ಕೂಡಾ ವೈವಿಧ್ಯಮಯವಾದದ್ದು.   1924ರ ಜನವರಿ 8ರಂದು ಒರಿಸ್ಸಾದ ಪುರಿ ಸಂಸ್ಥಾನದ ರಘುರಾಜಪುರ ಎಂಬಲ್ಲಿ ಅವರು ಜನಿಸಿದರು.  ಅವರ ತಂದೆ ‘ಜಾತ್ರಾ’ ರಂಗಪ್ರದರ್ಶನಗಳಲ್ಲಿ  ಖೋಲ ಎಂಬ ಡೋಲುವಾದನದಲ್ಲಿ ಹೆಸರುವಾಸಿಯಾಗಿದ್ದರು.  ಪುಟ್ಟ ಹುಡುಗನಾಗಿದ್ದ ಕೇಳೂಚರಣರು ತಮ್ಮ ತಂದೆ ಭಾಗವಹಿಸುತ್ತಿದ್ದ ಜಾತ್ರಾ ಪ್ರದರ್ಶನಗಳಲ್ಲಿನ ನಾಟ್ಯ ಸನ್ನಿವೇಶಗಳನ್ನು ಕಂಡು ಮೋಹಪರವರಶರಾಗುತ್ತಿದ್ದರು.  ‘ಗೋಟಿಪುವ’ ನೃತ್ಯದಲ್ಲಿ ಸದಾ  ತಲ್ಲೀನನಾಗಿರುತ್ತಿದ್ದ ಬಾಲಕ ಕೇಳೂಚರಣನಿಗೆ ಅವರ  ತಂದೆ, ಬಲಭದ್ರ ಸಾಹು ಎಂಬುವರ ಬಳಿ ನೃತ್ಯ ತರಬೇತಿಗೆ  ವ್ಯವಸ್ಥೆ ಮಾಡಿದರು. 

ಮುಂದೆ ಕೇಳೂಚರಣರು ಗುರು ಶ್ರೀ ಮೋಹನ ಸುಂದರ ಗೋಸ್ವಾಮಿ ಅವರ ರಸ ತಂಡವನ್ನು ಕೂಡಿಕೊಂಡು ನೃತ್ಯ, ಗಾಯನ, ಅಭಿನಯ, ರಂಗ ಕಲೆ ಮತ್ತು ಪ್ರದರ್ಶನ ಸಂಯೋಜನೆಗಳನ್ನು ಕಲಿತುಕೊಂಡರು.  ಹನ್ನೆರಡು ವರ್ಷಗಳ ಈ ಅನುಭವದಿಂದ ಹೊರಜಗತ್ತಿಗೆ ಬಂದಾಗ,  ಬದುಕಿನ ಅನಿವಾರ್ಯತೆಗಳಿಗಾಗಿ ಬೀಡಿ ಎಲೆ ಸುತ್ತುವುದು, ತೋಟಕ್ಕೆ ನೀರು ಹಾಯಿಸುವುದು ಮುಂತಾದ ಕೆಲಸಕಾರ್ಯಗಳ ಮೂಲಕ ಹೊಟ್ಟೆಪಾಡು ನಡೆಸಿದರು.  ಮುಂದೆ  ಕಟಕ್ ಪ್ರಾಂತ್ಯದಲ್ಲಿ   ಪ್ರಸಿದ್ಧವಾಗಿದ್ದ ಕವಿಚಂದ್ರ ಕಾಲಿ ಚಂದ್ರ ಪಟ್ನಾಯಕ್ ಅವರ ಅನ್ನಪೂರ್ಣ ಥಿಯೇಟರ್ಸ್ನಲ್ಲಿ ಅವರಿಗೆ ಉತ್ತಮ ಅವಕಾಶ ದೊರಕಿತು.  ಇಲ್ಲಿ ಹಲವು ರೀತಿಯ ಜವಾಬ್ಧಾರಿಗಳನ್ನು ನಿರ್ವಹಿಸುತ್ತಿದ್ದ ಕೇಳೂಚರಣರಿಗೆ ಒಮ್ಮೊಮ್ಮೆ ಅಭಿನಯಿಸಲೂ ಅವಕಾಶ ದೊರೆಯುತ್ತಿತ್ತು.  ಇಂತಹ ಒಂದು ಅವಕಾಶದಲ್ಲಿ ಅವರಿಗೆ  ‘ವಾಮಾಸುರ’ನ ಪಾತ್ರ ದೊರಕಿದಾಗ ಅವರ ಪ್ರಸಿದ್ಧಿ ಎಲ್ಲೆಡೆ ಹಬ್ಬಿತು.  ಮುಂದೆ ಅವರಿಗೆ ವೈವಿಧ್ಯಮಯ ಅವಕಾಶಗಳು ದೊರೆಯುತ್ತಿದ್ದಂತೆಲ್ಲ ಅವರ ಕಲೆಯೂ ಬೆಳಗತೊಡಗಿತು.  ತಮ್ಮ ಪ್ರದರ್ಶನ ಸಂಯೋಜನೆಗಳ ಮೂಲಕ ಅವರು ಒಡಿಸ್ಸಿ ನೃತ್ಯಪ್ರಕಾರಕ್ಕೆ ಪುನರುತ್ಥಾನವನ್ನೇ ನೀಡಿದರು.  

ಜೀವನದಲ್ಲಿನ ವಿವಿಧ ಆಯಾಮಗಳಲ್ಲಿ ಬೀಡಿ ಕಟ್ಟುವ ಕೂಲಿ ಕೆಲಸದಿಂದ ಮೊದಲ್ಗೊಂಡು ಶ್ರೇಷ್ಠ ಕಲಾವಿದರಾಗಿ ಬೆಳೆದು ನಿಂತ ಕೇಳೂಚರಣ ಮಹಾಪಾತ್ರರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಸಂಗೀತ ನೃತ್ಯ ಅಕಾಡಮಿ ಗೌರವ, ಕಾಳಿದಾಸ ಸಮ್ಮಾನ್ ಅಂತಹ ಮಹಾನ್ ಗೌರವಗಳು ಅರಸಿಬಂದವು.  ಇವೆಲ್ಲಕ್ಕೂ ಮಿಗಿಲಾಗಿ ತಮ್ಮ  ನೃತ್ಯಾಭಿನಯ ಸಂಯೋಜನೆಗಳ ಮೂಲಕ ಅವರು  ವಿಶ್ವದೆಲ್ಲೆಡೆ ಕಲಾರಸಿಕರ ಹೃದಯಸಿಂಹಾಸನವನ್ನೇ ಸೂರೆಗೊಂಡರು. 

2004ರ ಏಪ್ರಿಲ್ 7ರಂದು ತಮ್ಮ 80ರ ಆಸುಪಾಸಿನಲ್ಲಿ ನಿಧನರಾದ ಕೇಳೂಚರಣ ಮೊಹಾಪಾತ್ರರು ತಮ್ಮ ಕೊನೆಯ ದಿನಗಳವರೆಗೂ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದರು.  ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಚಿರವಿರಾಜಮಾನರಾಗಿದ್ದಾರೆ.

On the birth anniversary of great Odissi dance master Kelucharan Mohapatra, Keloocharan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ