ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಭಾವು


 ಪಂಡಿತ್  ರಾಮಭಾವು ಬಿಜಾಪುರೆ 

ಪಂಡಿತ್  ರಾಮಭಾವು ಬಿಜಾಪುರೆ ಹಾರ್ಮೋನಿಯಂ ವಾದನದಲ್ಲಿ ಮಹಾನ್ ಹೆಸರು.  ಅವರು ಉತ್ತರಾದಿ ಸಂಗೀತ ಕ್ಷೇತ್ರದಲ್ಲಿ ಎಂಟು ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿ, ಸಂಗೀತವನ್ನು ಶ್ರೀಮಂತಗೊಳಿಸಿದವರು. 

ರಾಮಭಾವು ಅವರು 1917ರ ಜನವರಿ 7ರಂದು ಜನಿಸಿದರು. ತಂದೆ ಕಾಗವಾಡದ ಕಲ್ಲೋಪಂತ ಬಿಜಾಪುರೆ.  ಕಲ್ಲೋಪಂತರು ಪ್ರಾಥಮಿಕ ಶಾಲಾ ಶಿಕ್ಷಕರು, ಸಾಹಿತಿಗಳು, ಸಂಗೀತಾರಾಧಕರು. ಸಂಗೊಳ್ಳಿ ರಾಯಣ್ಣ, ಸಂಶಯ ಸಂಭ್ರಮ, ಇದೇ ಸಾರಾಯಿ ಮೊದಲಾದ ನಾಟಕಗಳ ಕರ್ತೃ. ಶಿವ ಚಿದಂಬರ ಚರಿತ್ರೆ, ಅಡವಿ ಸಿದ್ದೇಶ್ವರ ಚರಿತ್ರೆ, ಎಂಬ ಕೃತಿಗಳನ್ನೂ ಬರೆದಿದ್ದರು. ತಾಯಿ ಗೋದೂಬಾಯಿ ದಾಸರಪದಗಳನ್ನು ಜಾನಪದಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಆ ದಿನಗಳಲ್ಲೇ ಮುಲ್ಕೀ ಪರೀಕ್ಷೆ ಪಾಸು ಮಾಡಿದ್ದ ಮಹಿಳೆ. ರಾಮಚಂದ್ರನ ದೊಡ್ಡಪ್ಪ ತಬಲ ವಾದಕರು. ಸುಸಂಸ್ಕೃತ ಕುಟುಂಬ, ಸಂಗೀತಮಯ ವಾತಾವರಣ ಬಾಲಕ ರಾಮಚಂದ್ರನ ಮೇಲೆ ಪ್ರಭಾವ ಬೀರಿತ್ತು.

ಕಲ್ಲೋಪಂತರಿಗೆ ಕಾಗವಾಡದಿಂದ ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮಕ್ಕೆ ವರ್ಗವಾಯಿತು. ಕಲ್ಲೋಪಂತರ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ನಾಟಕದ ಮಾಸ್ತರ್ ಅಣ್ಣಿಗೇರಿ ಮಲ್ಲಯ್ಯನವರಿಂದ ರಾಮಚಂದ್ರನಿಗೆ ಸಂಗೀತ ಶಿಕ್ಷಣ ದೊರೆಯಿತು. ಮಲ್ಲಯ್ಯನವರು ನಾಲ್ಕು ತಿಂಗಳ ಕಾಲ ಕಲ್ಲೋಪಂತರ ಮನೆಯಲ್ಲೇ ಉಳಿದು, ರಾಮಚಂದ್ರನಿಗೆ ಹಾರ್ಮೋನಿಯಂ ಪಾಠ ಹೇಳಿದರು. ಕಲ್ಲೋಪಂತರ ಮನೆಯಲ್ಲಿ ಇದ್ದದ್ದು ಲೆಗ್ ಹಾರ್ಮೋನಿಯಂ. ಕುರ್ಚಿ ಅಥವಾ ಎತ್ತರದ ಸ್ಟೂಲಿನ ಮೇಲೆ ಕುಳಿತು, ಕಾಲಿನಿಂದ ತಿದ್ದಿ ಒತ್ತಿ ನುಡಿಸಬೇಕಾದ ವಾದ್ಯ. ಪುಟ್ಟ ಬಾಲಕನಿಗೆ ಕುರ್ಚಿಯ ಮೇಲೆ ಕುಳಿತು ಭಾತೆ ಅಥವಾ ತಿದಿ ಒತ್ತಲು ಕಾಲುಗಳು ಎಟುಕುತ್ತಿರಲಿಲ್ಲ. ಗುರುಗಳಾದ ಮಲ್ಲಯ್ಯ ಇಲ್ಲವೆ ತಂದೆ ತೊಡೆಯ ಮೇಲೆ ಕೂರಿಸಿಕೊಂಡು, ಭಾತೆ ಒತ್ತಬೇಕಾಗಿತ್ತು, ರಾಮಚಂದ್ರ ಗುರುಗಳು ಹೇಳುತ್ತಿದ್ದ ಸ್ವರಗಳನ್ನು ಹಾರ್ಮೋನಿಯಂನಲ್ಲಿ ಗುರುತಿಸಿ ತಕ್ಷಣ ನುಡಿಸಿ ಬಿಡುತ್ತಿದ್ದ. ಶಿಷ್ಯನ ಈ ಕೌಶಲದಿಂದ ಗುರುಗಳ ಉತ್ಸಾಹವೂ ಹೆಚ್ಚುತ್ತಿತ್ತು. ನಾಲ್ಕು ತಿಂಗಳ ಶಿಕ್ಷಣದ ನಂತರ ಮಲ್ಲಯ್ಯ ತಮ್ಮ ಊರಿಗೆ ಹೋದ ಮೇಲೆ ಕಲ್ಲೋಪಂತರೇ  ಗುರುಸ್ಥಾನದಲ್ಲಿ ನಿಂತು ಪಾಠ ಮುಂದುವರೆಸಿದರು. ಅಕ್ಕತಂಗೇರ ಹಾಳದ ಶ್ರೀಮಂತ ಗಂಗಪ್ಪ ದೇಶಪಾಂಡೆ ರಾಮಚಂದ್ರನ ಪ್ರತಿಭೆಯನ್ನು ಗಮನಿಸಿ ತಮ್ಮಲ್ಲಿದ್ದ ಹಾರ್ಮೋನಿಯಂ ಕೈಪೆಟ್ಟಿಗೆಯನ್ನು ರಾಮಚಂದ್ರನಿಗೆ ಕೊಟ್ಟರು. ರಾಮಚಂದ್ರನಿಗೆ ಈಗ ಸ್ವತಃ ಅಭ್ಯಾಸ ಮಾಡುವುದು ಸಾಧ್ಯವಾಯಿತು. ದೇಶಪಾಂಡೆಯವರ ಬಿಡದಿಗೆ ಬರುವ ಕೀರ್ತನಕಾರರಿಗೆ ಸಾಥಿ ಕೊಡುವಷ್ಟು ರಾಮಚಂದ್ರ ಸಮರ್ಥನಾದ.

 ಪತ್ನಿ ವಿಯೋಗವಾದಾಗ  ಕಲ್ಲೋಪಂತರು ಮಗನ ಭವಿಷ್ಯ ರೂಪಿಸುವ ದೃಷ್ಟಿಯಿಂದ ಅಕ್ಕತಂಗೇರಹಾಳ ಬಿಟ್ಟು ವರ್ಗಮಾಡಿಸಿಕೊಂಡು 1929ರಲ್ಲಿ ಬೆಳಗಾವಿಗೆ ಬಂದರು. ಬೆಳಗಾವಿಯಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರೆಲ್ಲಾ ಅಲ್ಲಿ ನೆಲೆಸಿದ್ದರು. ಖ್ಯಾತ ಗಾಯಕರಾದ ರಾಮಕೃಷ್ಣ ಬುವಾವಝೆ, ಶಿವರಾಮ ಬುವಾವಝೆ, ಪಂಡಿತ ಕಾಗಲಕರ ಬುವಾ, ಶ್ರೇಷ್ಠ ಹಾರ್ಮೋನಿಯಂ ವಾದಕರಾದ ಪಂಡಿತ್ ರಾಜವಾಡೆ, ವಿಠ್ಠಲರಾವ್ ಕೋರಗಾಂವಕರ, ತಬಲ ವಾದಕರಾದ ಅಬ್ಬಾ ಸಾಹೇಬ್, ಮೆಹಬೂಬ ಸಾಬ, ನಾರಾಯಣರಾವ್ ಚಿಕ್ಕೋಡಿ ಅವರಲ್ಲದೆ ತಂತಿವಾದ್ಯಗಳನ್ನು ನುಡಿಸುವ ಖ್ಯಾತ ವಾದಕರು ಬೆಳಗಾವಿಯಲ್ಲಿದ್ದು, ಅದು ಸಂಗೀತದ ಪ್ರಮುಖ ಕೇಂದ್ರವಾಗಿತ್ತು.

ರಾಮಚಂದ್ರ ಮೊದಲು ಕಾಗಲಕರ ಬುವಾ ಅವರಲ್ಲಿ ಹಾಡುಗಾರಿಕೆಯನ್ನು ಕಲಿಯಲು ಆರಂಭಿಸಿದರು. ಎಂಟು ವರ್ಷಕಾಲ ಪಂಡಿತ್ ರಾಜವಾಡೆ, ಪಂಡಿತ ಗೋವಿಂದರಾವ್ ಗಾಯವಾಡೆ ಇವರ ಸಾನ್ನಿಧ್ಯದಲ್ಲಿ ಹಾರ್ಮೋನಿಯಂ ನುಡಿಸುವುದನ್ನು ಕಲಿಯ ತೊಡಗಿದರು. ಯೌವ್ವನಾವಸ್ಥೆಗೆ ಬಂದಾಗ, ರಾಮಚಂದ್ರರವರ ಕಂಠ ಒಡೆಯಿತು. ಬಾಲ್ಯದ ಕೋಮಲ ಮಾರ್ದವತೆ ಕಳೆದು ಗಡಸಾಗ ತೊಡಗಿದಾಗ ಹಾಡುಗಾರಿಕೆಯನ್ನು ಬಿಟ್ಟು, ಹಾರ್ಮೋನಿಯಮ್ ವಾದ್ಯ ನುಡಿಸುವುದರಲ್ಲಿ ಪ್ರಭುತ್ವ ಪಡೆಯಲು ರಾಮಚಂದ್ರ ಬಿಜಾಪುರೆ ಕೇಂದ್ರೀಕರಿಸಿದರು.  ಧಾರವಾಡದಲ್ಲಿದ್ದ ಹಣವಂತರಾವ್ ವಾಳವೇಕರ್, ಅವರ ಸಾನ್ನಿಧ್ಯದಲ್ಲಿ ಇವರ ವಾದನ ಕೌಶಲಕ್ಕೆ ಮತ್ತಷ್ಟು ಘನತೆ-ಮೆರಗು ಬಂದಿತು.

ರಾಮಚಂದ್ರ-ರಾಮಭಾವು ವಿಜಾಪುರೆ ವೃತ್ತೀಜೀವನದ ಶುಭ ಆರಂಭವಾದುದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಗುರ್ಲ ಹೊಸೂರಿನ ಚಿದಂಬರೇಶ್ವರ ಸನ್ನಿಧಿಯಲ್ಲಿ ಒಂದು ವಾರ ಕಾಲ ಸಂಗೀತ ಸೇವೆ ನಡೆಸಲು ಪಂಡಿತ ರಾಮಕೃಷ್ಣ ಬುವಾವಝೆ ಅವರು ಆಮಂತ್ರಿತರಾಗಿದ್ದರು. ಅವರಿಗೆ ಹಾರ್ಮೋನಿಯಂ ಸಾಥಿ ಆಗಿ ರಾಮಭಾವು ಹೋಗಿದ್ದರು. ಒಂದು ವಾರ ಕಾಲದ ಉತ್ಸವ ಮುಗಿದ ಮೇಲೆ ವ್ಯವಸ್ಥಾಪಕರು ರಾಮಭಾವು ಅವರಿಗೆ 21ರೂಪಾಯಿ ಸಂಭಾವನೆ ಕೊಟ್ಟರು. ದೈವ ಸನ್ನಿಧಿಯಲ್ಲಿ ದೊರೆತ ಮೊದಲ ಸಂಭಾವನೆ. ನೆನಪಿನ ಪ್ರಸಾದವಾಗಿ ರಾಮಭಾವು ಅದನ್ನು ಕೊನೆಯವರೆಗೆ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.

ಚಿದಂಬರೇಶ್ವರ ಸನ್ನಿಧಿಯಲ್ಲಿ ಆರಂಭವಾದ ಅವರ ಸಂಗೀತ ಯಾತ್ರೆ, ಯಶೋಯಾತ್ರೆಯಾಗಿ ಬೆಳೆದು, ನಾಡಿನ ಎಲ್ಲ ಹಿರಿಯ ಗಾಯಕರಿಗೆ, ವಾದ್ಯ ವಾದಕರಿಗೆ ಹಾರ್ಮೋನಿಯಂ ಸಾಥಿಯಾಗಿ, ಗಾಯಕರ, ಶೋತೃಗಳ ಅಭಿಮಾನ, ಗೌರವಕ್ಕೆ ಪಾತ್ರರಾದರು. ಉಸ್ತಾದ್ ಬಡೇ ಗುಲಾಂ ಆಲಿಖಾನ್, ಮಾಲವಿಕಾ ಕಾನನ್, ಉಸ್ತಾದ್ ಅಮೀರ್‍ಖಾನ್, ಉಸ್ತಾದ್ ಫಯ್ಯಾಜ್‍ಖಾನ್, ಉಸ್ತಾದ್ ನಿಸ್ಸಾರ್ ಹುಸ್ಸೇನ್ ಖಾನ್, ಡಾ. ಗಂಗೂಬಾಯಿ ಹಾನಗಲ್, ಡಾ. ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಕುಮಾರ ಗಂಧರ್ವ, ಹೀರಾಬಾಯಿ ಬಡೋದೇಕರ್, ಕಿಶೋರಿ ಅಮೋಣಕರ್, ಪರ್ವಿನ್ ಸುಲ್ತಾನ, ಪಂಡಿತ್ ಜಸರಾಜ್, ಉಸ್ತಾದ್ ವಿಲಾಯತ್ ಖಾನ್, ಪ್ರಭಾ ಅತ್ರೆ ಮೊದಲಾದ ಹಿಂದೂಸ್ತಾನಿ ಸಂಗೀತ ದಿಗ್ಗಜರೆಲ್ಲರ ನೆಚ್ಚಿನ ಸಾಥಿಯಾಗಿ ರಾಮಭಾವು ಹಾರ್ಮೋನಿಯಮ್ ನುಡಿಸಿದ್ದರು. ಪುಣೆಯಲ್ಲಿ ಅವರಿಗೆ 'ಸಂಗೀತ್ಕಾರ್ ಪುರಸ್ಕಾರ್' ಲಭ್ಯವಾಯಿತು. ಈ ಎಲ್ಲ ಉತ್ತರಾದಿ ಸಂಗೀತದ ಮೇರು ಕಲಾವಿದರ ಸಾಥಿಯಾಗಲು ಕಾರಣ, ರಾಮಭಾವು ಅವರು ಪ್ರಧಾನ ಗಾಯಕರಿಗೆ ನೀಡುತ್ತಿದ್ದ ಗೌರವ, ವೇದಿಕೆಯ ಮೇಲಿನ ಸೌಜನ್ಯಪೂರ್ಣ ನಡವಳಿಕೆ. ಗಾಯಕನ ಮನೋಧರ್ಮ ಅನುಸರಿಸಿ, ಅವರ ಗಾಯನದೊಂದಿಗೆ, ತಮ್ಮ ವಾದನವನ್ನು ಸಾಮರಸ್ಯಗೊಳಿಸಿ, ಕಛೇರಿಗೆ ಮೆರುಗು ಕೊಡುತ್ತಿದ್ದ ಸಾಥಿ.

ರಾಮಭಾವು ಕೇವಲ ಸಾಥಿಯಾಗಿ ಉಳಿಯಲಿಲ್ಲ.  ಅವರದ್ದೇ ಪ್ರಧಾನ ಭೂಮಿಕೆಯ ಹಾರ್ರ್ಮೋನಿಯಂ ಕಾರ್ಯಕ್ರಮಗಳು ಆಕಾಶವಾಣಿ ಕೇಂದ್ರಗಳಿಂದ ಹಾಗೂ ಭಾರತದ ಎಲ್ಲ ನಗರಗಳಲ್ಲೂ ನಡೆದು ಪ್ರಸಿದ್ಧಿಪಡೆದವು. 

ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ 'ಸಾಥಿ'ಯಾಗಿ ಮಾತ್ರವಲ್ಲ. ಅವರು ಗುರುವಾಗಿ  ಏಳೂವರೆ ದಶಕಗಳಿಗೂ ಹೆಚ್ಚು ಕಾಲ ಬೆಳೆಸಿರುವ ಶಿಷ್ಯವೃಂದ ಸಹಸ್ರಾರು  ಸಂಖ್ಯೆಯಲ್ಲಿದೆ. ಬೆಳಗಾವಿಯ  ವಿವಿಧ ಪ್ರದೇಶಗಳಿಗೆ ಸೈಕಲ್ ಮೇಲೆ ಹೋಗಿ ಅವರು ಆಸಕ್ತರಿಗೆಲ್ಲಾ ಸಂಗೀತವನ್ನು ಕಲಿಸಿದ್ದರು. ಬಿಜಾಪುರೆ ಅವರ ಸೈಕಲ್‍ಯಾತ್ರೆ ಸಂಗೀತವಲಯದಲ್ಲೆಲ್ಲಾ ಪ್ರಸಿದ್ಧವಾದದ್ದು.

ಬಿಜಾಪುರೆಯವರು ಬೆಳಗಾವಿಯಲ್ಲಿ 1938ರಲ್ಲಿ ಆರಂಭಿಸಿದ ಶ್ರೀರಾಮ ಸಂಗೀತ ವಿದ್ಯಾಲಯದ ಸುವರ್ಣಮಹೋತ್ಸವ 1991ರಲ್ಲಿ ನಡೆಯಿತು. ಈ ಶಾಲೆಯಲ್ಲಿ ಅನೇಕ ಸಹಸ್ರಾರು ಮಂದಿ ಸಂಗೀತ ಕಲಿತಿದ್ದಾರೆ. ಅಂಧ ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಶಿಕ್ಷಣ. 

ಬಿಜಾಪುರೆಯವರು ಅಖಿಲಭಾರತ ಗಂಧರ್ವ ವಿದ್ಯಾಲಯ ಮತ್ತು ಕರ್ನಾಟಕ ಸರಕಾರದ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. 'ಪ್ರಾಥಮಿಕ ಶಾಲಾ ಸಂಗೀತ ಶಿಕ್ಷಕ' ಇವರು ರಚಿಸಿರುವ ಸಂಗೀತ ಶಿಕ್ಷಣಕ್ಕೆ ಸಂಬಂಧಪಟ್ಟ ಉಪಯುಕ್ತ ಪುಸ್ತಕ.

ಪಂ. ಬಿಜಾಪುರೆಯವರನ್ನು ಅರಸಿಕೊಂಡು ಬಂದ ಸನ್ಮಾನಗಳು, ಸತ್ಕಾರಗಳು ಅಸಂಖ್ಯ. ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ (1982), ಕರ್ನಾಟಕ ಕಲಾತಿಲಕ ಪ್ರಶಸ್ತಿ (1985) ಮುಂತಾದ ಗೌರವಗಳೇ ಅಲ್ಲದೆ ಕರ್ನಾಟಕ ಸರಕಾರದ 'ಸಂಗೀತ ವಿದ್ವಾನ್ ಗೌರವ’ (2001) ಮತ್ತು ಕರ್ನಾಟಕ ಸರಕಾರ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಯಾದ ಟಿ. ಚೌಡಯ್ಯ ಪ್ರಶಸ್ತಿ (2001) ಗೌರವಕ್ಕೆ ಪಾತ್ರರಾದ ಪ್ರಥಮ ಹಾರ್ಮೋನಿಯಂ ವಾದಕರಿವರು.

ಮಹಾನ್ ಸಂಗೀತ ಸಪಸ್ವಿಗಳಾದ ಪಂಡಿತ್ ಬಿಜಾಪುರೆ ಅವರು 2010 ವರ್ಷದ ನವೆಂಬರ್ 19ರಂದು ಈ ಲೋಕವನ್ನಗಲಿದರು.  ಅವರ ಸಂಗೀತ ಸುನಾದ ಚಿರಸ್ಮರಣೀಯ.

On the birth anniversary of great musician and Harmonium player Pandit Rambhau  Bijapure 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ