ಕೆ. ಎಮ್. ಶೇಷಗಿರಿ
ಕೆ. ಎಮ್. ಶೇಷಗಿರಿ
ಕೆ. ಎಮ್. ಶೇಷಗಿರಿ ಕಲಾವಿದರಾಗಿ ಹೆಸರಾಗಿದ್ದಾರೆ.
ಶೇಷಗಿರಿ ಅವರು 1974ರ ಜನವರಿ 7ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ಕೆ. ಮುಕುಂದಾಚಾರ್ಯರು ದಾವಣಗೆರೆಯ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಹೆಸರಾಂತ ಪ್ರಾಧ್ಯಾಪಕರಾಗಿ ಮತ್ತು ಸಂಸ್ಕೃತ ವಿದ್ವಾಂಸರಾಗಿ ಆಗಿದ್ದರು.
ಶೇಷಗಿರಿ ಅವರು 1990ರಲ್ಲಿ ಪಿಯುಸಿ ಹಂತದಲ್ಲಿದ್ದಾಗ ಕಾರ್ಯಕ್ರಮ ಒಂದರಲ್ಲಿ, ಶಿವರಾಮ ಕಾರಂತರು ರೋಟರಿ ಕ್ಲಬ್ ನಲ್ಲಿ ಪ್ರದರ್ಶಿತವಾಗಿದ್ದ ಶೇಷಗಿರಿ ಅವರ ಕೆಲವು ರೇಖಾಚಿತ್ರಗಳನ್ನು ಕಂಡು, ಚಿತ್ರಕಲೆಯಲ್ಲೇ ಮುಂದುವರೆಯುವಂತೆ ಆಡಿದ ಪ್ರೋತ್ಸಾಹದ ಮಾತುಗಳು, ಅವರ ವ್ಯವಸ್ಥಿತ ಚಿತ್ರಕಲಾ ಅಧ್ಯಯನಕ್ಕೆ ನಾಂದಿಯಾಯಿತು.
ಶೇಷಗಿರಿ ಅವರು 1991ರಿಂದ ಐದು ವರ್ಷಗಳ ಕಾಲ ಚಿತ್ರಕಲಾ ಡಿಪ್ಲೊಮಾ ವ್ಯಾಸಂಗದಲ್ಲಿದ್ದ ಸಂದರ್ಭದಲ್ಲಿ ಮೈಸೂರಿನ ದಸರಾ ಮಹೋತ್ಸವದಲ್ಲಿ ಉತ್ತಮ ಕಲಾಕೃತಿ ಪ್ರಶಸ್ತಿ ಗಳಿಸಿದರು. ಲಲಿತಕಲಾ ಅಕಾಡಮಿಯಿಂದ ವಿದ್ಯಾರ್ಥಿವೇತನವನ್ನು ಪಡೆದರು. 1995ರಲ್ಲಿ, ಖ್ಯಾತ ಚಿತ್ರಕಲಾವಿದರಾಗಿದ್ದ ದಿವಂಗತ ಡಾ. ಹಾಲಭಾವಿಯವರ ಸ್ಮರಣಾರ್ಥ, ಧಾರವಾಡದಲ್ಲಿ ಜರುಗಿದ ರಾಜ್ಯಮಟ್ಟದ ಕಲಾ ಶಿಬಿರದಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ವಯಸ್ಸಿನ ಕಲಾವಿದನೆಂಬ ಕೀರ್ತಿಗೆ ಪಾತ್ರರಾದರು.
1996ರಲ್ಲಿ ವಿನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಶೇಷಗಿರಿ ಅವರು, ಕೆಲವೇ ತಿಂಗಳುಗಳಲ್ಲಿ ಆನಿಮೇಷನ್ ಅನ್ನು ಸ್ವಪ್ರಯತ್ನದಿಂದ ಕಲಿತು ಕಿರ್ಲೋಸ್ಕರ್ ಮಲ್ಟಿಮೀಡಿಯಾದಲ್ಲಿ ನಂತರ ಫೀನಿಕ್ಸ್ ಗ್ಲೋಬಲ್ ಸಂಸ್ಥೆಯಲ್ಲಿ ಆನಿಮೇಟರ್ ಆಗಿ, ತಂಡದ ನಿರ್ವಾಹಕರಾಗಿ ಕಾರ್ಯಾರಂಭಿಸಿದರು. ಇದೇ ಸಂದರ್ಭದಲ್ಲಿ ನಾದಯೋಗಿ ಶ್ರೀತ್ಯಾಗರಾಜರ ಹಾಗೂ ಶ್ರೀಮಧ್ವಾಚಾರ್ಯರ ಕುರಿತಾದ ಆನಿಮೇಟೆಡ್ ಚಲನಚಿತ್ರಗಳನ್ನು ರಚಿಸುವ ಮತ್ತು ನಿರ್ದೇಶಿಸುವ ಅವಕಾಶ ಇವರಿಗೆ ಒದಗಿಬಂತು. ಜಿ. ವಿ. ಅಯ್ಯರ್ ಮತ್ತು ಬನ್ನಂಜೆ ಗೋವಿಂದಾಚಾರ್ಯರಂತಹ ಹಿರಿಯರು ಶೇಷಗಿರಿ ಅವರ ಆನಿಮೇಟೆಡ್ ಚಲನಚಿತ್ರಗಳ ಕಾರ್ಯವನ್ನು ಮೆಚ್ಚಿ ಬೆನ್ನು ತಟ್ಟಿದ್ದರು.
ಶೇಷಗಿರಿ ಅವರಿಗೆ 1997ರಲ್ಲಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ನಡೆಸುತ್ತಿದ್ದ ವಾರ್ಷಿಕ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಉತ್ತಮ ವ್ಯಂಗ್ಯಚಿತ್ರ ಬಹುಮಾನ ದೊರೆತಿತ್ತು. ನಂತರ ಅಮೂರ್ತ ಹಾಗೂ ನೈಜಶೈಲಿಯ ಚಿತ್ರರಚನೆಯ ಕಡೆ ಆಸಕ್ತಿ ಹೆಚ್ಚಾಗಿ ಅನೇಕ ತೈಲವರ್ಣ / ಆಕ್ರಲಿಕ್ ವರ್ಣಗಳ ಚಿತ್ರಗಳು, ಭಾವಚಿತ್ರಗಳು ಅವರಿಂದ ಮೂಡಿಬಂದವು. ಅವುಗಳಲ್ಲಿ ಕೆಲವು ಅಮೇರಿಕಾದ ನ್ಯೂಯಾರ್ಕ್ ನಗರದ ಹೃದಯಭಾಗದಲ್ಲಿ ಪ್ರಸಿದ್ಧವಾದ ಮೆಟ್-ಲೈಫ್ ಸಂಸ್ಥೆಯ ಗೋಡೆಗಳಲ್ಲಿ ಹಾಗೂ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಸ್ಥಾನಪಡೆದಿವೆ.
ಶೇಷಗಿರಿ ಅವರು ಸುಮಾರು 500ಕ್ಕೂ ಹೆಚ್ಚಿನ ಸಂಖ್ಯೆಯ ಪುಸ್ತಕದ ಮುಖಪುಟಗಳಿಗೆ ವಿನ್ಯಾಸ ಮಾಡಿದ್ದಾರೆ.
ಶೇಷಗಿರಿ ಅವರು ದೂರಶಿಕ್ಷಣದ ಮೂಲಕ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆವ ಸಂದರ್ಭದಲ್ಲಿ ಹಾಗೂ ನಂತರ ತತ್ಸಮಾನ ಎಂ. ಫಿಲ್ ಗಾಗಿ ಸಂಶೋಧನೆಗೆ ಆರಿಸಿಕೊಂಡದ್ದು ಅವರಿಗೆ ಪ್ರಿಯವಾದ ಪ್ರತಿಮಾಂಗ ಲಕ್ಷಣದ ವಿಷಯವನ್ನು. ಇದಕ್ಕಾಗಿ ಅವರು ಕೆಲವು ಪ್ರಾಚೀನ ತಂತ್ರಗಂಥಗಳ ಮತ್ತು ಶಿಲ್ಪಶಾಸ್ತ್ರ ಗ್ರಂಥಗಳ ಅಧ್ಯಯನ ಮಾಡಿದ್ದಾರೆ. ಅದರ ಪರಿಣಾಮವಾಗಿ ಉಡುಪಿಯ ಪಾಜಕದ ಬಳಿ ಪ್ರತಿಷ್ಠಾಪಿತವಾದ 32 ಅಡಿಯ ಏಕಶಿಲೆಯ ಶ್ರೀಮಧ್ವಾಚಾರ್ಯರ ಪ್ರತಿಮೆಯ ನಿರ್ಮಾಣದ ಸಾರಥ್ಯವನ್ನು ಶೇಷಗಿರಿ ವಹಿಸಿದ್ದರು. ಆ ನಂತರದಲ್ಲಿ ಕೂಡ ಅನೇಕ ಶಿಲಾ ಹಾಗೂ ಲೋಹ ಪ್ರತಿಮೆಗಳಿಗೆ ವಿನ್ಯಾಸವನ್ನು ಮತ್ತು ನಿರ್ಮಾಣದ ಮೇಲ್ವಿಚಾರಣೆಯನ್ನು ಮಾಡಿದ್ದಾರೆ. ಹಂಪೆಯ ನವಬೃಂದಾವನ ಗಡ್ಡೆಯಲ್ಲಿ ಶ್ರೀವ್ಯಾಸರಾಜರ ಬೃಂದಾವನದ ಧ್ವಂಸ ಪ್ರಕರಣ ನಡೆದ ನಂತರದಲ್ಲಿ ಅದರ ಪುನರ್ನಿರ್ಮಾಣ ಕಾರ್ಯದಲ್ಲಿ ಸಹಾ ಶೇಷಗಿರಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು. ಪೇಜಾವರಮಠದ ದಿವಂಗತ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನೂತನ ಬೃಂದಾವನದ ಪೂರ್ಣವಿನ್ಯಾಸದ ಜವಾಬ್ದಾರಿಯನ್ನು ಕೂಡಾ ಶೇಷಗಿರಿ ನಿರ್ವಹಿಸಿದ್ದಾರೆ.
ಶೇಷಗಿರಿ ಅವರು ಅನೇಕ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರಕಲಾ ಪಾಠವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಾಚೀನ ಭಾರತೀಯ ಚಿತ್ರಕಲಾ ವಿಧಾನ ಹಾಗೂ ಅದರ ಹಿಂದಿನ ಚಿಂತನೆಯನ್ನು ಅವರು ತಮ್ಮ ಪಾಠಕ್ರಮದಲ್ಲಿ ಬೆಳಸುತ್ತಿದ್ದಾರೆ. ಜೊತೆಗೆ ವರ್ಷಕ್ಕೆ ಎರಡು ಬಾರಿಯಾದರೂ ಪ್ರತಿಷ್ಠಿತ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿಗಳ ಪ್ರತಿಷ್ಠಿತ ರಾಷ್ಟ್ರೀಯ ಕಲಾಶಿಬಿರಗಳಲ್ಲಿ ಭಾಗವಹಿಸಿ ಚಿತ್ರಿಸುವ ಅವಕಾಶವನ್ನೂ ಅವರು ಸದುಪಯೋಗ ಪಡಿಸಿಕೊಳ್ಳುತ್ತಾ ಬಂದಿದ್ದಾರೆ.
ಇವೆಲ್ಲವನ್ನೂ ಅವರು ಪ್ರತಿಷ್ಠಿತ ಟಿಸಿಎಸ್ ಸಂಸ್ಥೆಯಲ್ಲಿ ಟೆಕ್ನಿಕಲ್ ಆರ್ಕಿಟೆಕ್ಟ್ ಜವಾಬ್ದಾರಿ ನಿರ್ವಹಿಸುವುದರ ಜೊತೆ ಮಾಡುತ್ತಿದ್ದಾರೆ ಎಂಬುದು ವಿಶೇಷ. ಅನೇಕ ಸಂಸ್ಥೆಗಳ ಸಲಹಾ ಸಮಿತಿಗಳಲ್ಲಿ ಸಹಾ ಅವರ ಸೇವೆ ಸಲ್ಲುತ್ತಿದೆ.
ಪ್ತತಿಭಾನ್ವಿತ ಶೇಷಗಿರಿ ಅವರ ಸಾಧನೆ ಮುಂದುವರೆಯುತ್ತಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಡುಹಬ್ಬದ ಶುಭಾಶಯ ಹೇಳೋಣ.
On the birth day of great talent and friend Sheshagiri KM
ಕಾಮೆಂಟ್‌ಗಳು