ವ್ಯಾಕರಣತೀರ್ಥ ಶಾಸ್ತ್ರಿ
ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು
ಕನ್ನಡ ಬಂಟರ ಬಂಟಂ
ಕನ್ನಡ ಕಿಂಕರರ ಕಿಂಕರರ ಕಿಂಕರ ನಾಂ
ಕಾನನದ ಲೆಂಕರ ಲೆಂಕಂ
ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ
1940ರಲ್ಲಿ ಧಾರವಾಡದಲ್ಲಿ ನಡೆದ ಅಖಿಲಭಾರತ 25ನೆಯ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ತಮ್ಮನ್ನು ಮೇಲಿನಂತೆ ಪರಿಚಯಿಸಿಕೊಂಡವರು ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು. ಸ್ವತಃ ಕನ್ನಡ ಮಾತೃಭಾಷೆಯವರಾಗಿ ಸಂಸ್ಕೃತದ ಪಾಂಡಿತ್ಯವನ್ನು ಗಳಿಸಿ ತೆಲುಗು, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ ಮುಂತಾದ ಹಲವು ಭಾಷಾ ಪರಿಣತಿಯನ್ನೂ ಪಡೆದುಕೊಂಡವರು ಇವರು. ಇಷ್ಟಾಗಿಯೂ ಅವರು ಕನ್ನಡ ನಾಡು, ನುಡಿ, ಸಾಹಿತ್ಯಕ್ಕಾಗಿಯೇ ತಮ್ಮ ಸಮಸ್ತ ಧೀಶಕ್ತಿಯನ್ನು ಮೀಸಲಾಗಿಟ್ಟರು.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ಹಿರೇಮಠದ ಪಟ್ಟದಯ್ಯನವರು ಮತ್ತು ಅವರ ಧರ್ಮಪತ್ನಿ ಬಸಮ್ಮನವರಿಗೆ 1892ರ ಜನವರಿ 3ರಂದು ಚಂದ್ರಶೇಖರರು ಜನಿಸಿದರು. ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಕೂಲಿ, ಭಿಕ್ಷೆ, ಮಠಗಳಲ್ಲಿ ಜೀವನ ಸಾಗಿಸಿದ ಬಾಲಕ ಚಂದ್ರಶೇಖರ. ಇಂತಹ ಒಂದು ನೆಲೆಯಾಗಿದ್ದುದು ಶಿರಹಟ್ಟಿಯ ಫಕೀರೇಶ್ವರ ಸ್ವಾಮಿಗಳ ಮಠ. ಅಲ್ಲಿ ಒಂದಿಷ್ಟು ಜ್ಯೋತಿಷ್ಯಶಾಸ್ತ್ರ ಕಲಿತ. ಅದು ಹಿಡಿಸಲಿಲ್ಲ. ಹಾವೇರಿಗೆ ಬಂದು ಹುಕ್ಕೇರಿಮಠದ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡ. 1915ರಲ್ಲಿ ಗದುಗಿನ ತೋಂಟದಾರ್ಯಮಠದ ಸಂಸ್ಕೃತ ಪಾಠಶಾಲೆಗೆ ಪ್ರವೇಶ ಪಡೆದ. ಆದರೆ ಚಂದ್ರಶೇಖರನಿಗೆ ಈ ಪಾಠಗಳಲ್ಲಿ ತೃಪ್ತಿ ಕಾಣಲಿಲ್ಲ. ಅಂತೆಯೇ ಸುಪ್ರಸಿದ್ಧ ಕಾಶಿ ಜಂಗವಾಡಿಮಠದ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡ. ಅಲ್ಲಿ ಸತತ ಏಳು ವರ್ಷ ವ್ಯಾಸಂಗ ಮಾಡಲು ಸದವಕಾಶ ಲಭಿಸಿತು. ಸಾಹಿತ್ಯ ಮತ್ತು ವ್ಯಾಕರಣಗಳಲ್ಲಿ ‘ಪಂಡಿತ’ ಹಾಗೂ ‘ಸಾಹಿತ್ಯಾಚಾರ್ಯ’ ಪದವಿಗಳನ್ನು ಅಲ್ಲಿ ಗಳಿಸಿದ. ನಂತರ ಕಲ್ಕತ್ತೆಗೆ ಹೋಗಿ ‘ವ್ಯಾಕರಣತೀರ್ಥ’ ಪದವಿ ಪಡೆದ. ಅಲ್ಲಿಂದ ಚಂದ್ರಶೇಖರ ‘ವ್ಯಾಕರಣತೀರ್ಥ ಪಂಡಿತ ಚಂದ್ರಶೇಖರ ಶಾಸ್ತ್ರಿಗಳಾಗಿ’ ಮಾರ್ಪಟ್ಟ.
1924ರಲ್ಲಿ ಕಾಶಿಯಿಂದ ತಾಯ್ನಾಡಿಗೆ ಮರಳಿಬಂದ ಶಾಸ್ತ್ರಿಗಳು ಚಿತ್ರದುರ್ಗದ ಸಂಸ್ಕೃತ ಪಾಠಶಾಲೆಯ ಜವಾಬ್ಧಾರಿಯನ್ನು ಹೊತ್ತುಕೊಂಡರು. ಅದೇ ವರ್ಷ ಯಾದಗಿರಿಯಲ್ಲಿ ಶಂಕರ ಕಾಲೇಜು ಆರಂಭಗೊಂಡಿತು. ಚಂದ್ರಶೇಖರ ಶಾಸ್ತ್ರಿಗಳು ಅದರ ಸ್ಥಾಪಕ ಪ್ರಾಚಾರ್ಯರಾದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ಪ್ರಸಾದನಿಲಯವನ್ನು ಆರಂಭಿಸಿದರು. ಇಡೀ ಕರ್ನಾಟಕದಲ್ಲಿಯೇ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂದು ಶಂಕರ್ ಕಾಲೇಜು ಹೆಸರುಗಳಿಸಿತು. ಅಖಿಲಭಾರತ ಮಟ್ಟದ ಸಂಸ್ಕೃತ ಪರೀಕ್ಷೆಗಳು ನಡೆಯುವಂಥ ಕೇಂದ್ರವಾಗಿ ಕಾಲೇಜು ಪರಿಗಣಿಸಲ್ಪಟ್ಟಿತು. ಸ್ವಲ್ಪದಿನ ಹುಬ್ಬಳಿಯ ಗಂಗಾಧರ ಸಂಸ್ಕೃತ ಕಾಲೇಜಿಗೆ ಬಂದು ಕಾರ್ಯ ನಿರ್ವಹಿಸಿದರಾದರೂ ಯಾದಗಿರಿಯ ಕಾಲೇಜಿನ ಪ್ರಮುಖರು ಅವರ ಮನವೊಲಿಸಲಾಗಿ ಪುನಃ ಯಾದಗಿರಿಗೆ ಬಂದು 1948ರಲ್ಲಿ ತಮ್ಮ ನಿವೃತ್ತಿಯಾಗುವವರೆಗೂ ಅಲ್ಲಿಯೇ ಕಾರ್ಯ ನಿವರ್ಹಿಸಿದರು.
ಹೀಗೆ ಚಂದ್ರಶೇಖರ ಶಾಸ್ತ್ರಿಗಳು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿ ಆಗಿನ ಕಾಲದಲ್ಲಿ ಶ್ರೇಷ್ಠವನಿಸಿದ ‘ವ್ಯಾಕರಣತೀರ್ಥ’ ಪದವಿಯನ್ನು ಪಡೆದು ಸಂಸ್ಕೃತ ಕಾಲೆಜುಗಳನ್ನು ಸ್ಥಾಪಿಸಿ ಅವುಗಳ ಅಭಿವೃದ್ಧಿಯಲ್ಲಿ ಸತತ ಎರಡೂವರೆ ದಶಕಗಳವರೆಗೆ ಶ್ರಮಿಸಿದರು. ತಮ್ಮ ವಿದ್ಯಾಭ್ಯಾಸ ಎಲ್ಲವೂ ಸಂಸ್ಕೃತವಾಗಿತ್ತು. ಹೀಗಿದ್ದೂ ಅವರು ಕನ್ನಡ ನಾಡು-ನುಡಿಗಳಿಗಾಗಿ ಸಲ್ಲಿಸಿರುವ ಸೇವೆ ಅನುಪಮವಾದುದು. ಹಳಗನ್ನಡ ಕಾವ್ಯಗಳನ್ನು, ವ್ಯಾಕರಣವನ್ನು ಆಳವಾಗಿ ಅಧ್ಯಯನ ಮಾಡಿದವರು. ವೇದಾಗಮಗಳನ್ನು ಮೂಲ ಸಂಸ್ಕೃತದಲ್ಲಿಯೇ ವ್ಯಾಸಂಗಗೈದು ಕನ್ನಡದ ವಚನಸಾಹಿತ್ಯಕ್ಕೆ ಅವು ಹೇಗೆ ಪ್ರೇರಕ-ಪೋಷಕವಾಗಿವೆ ಎಂಬುದನ್ನು ತುಲನಾತ್ಮಕವಾಗಿ ವಿವೇಚಿಸಿ ಅಮೂಲ್ಯವಾದ ಸಂಶೋಧನ ಲೇಖನಗಳನ್ನು ಕನ್ನಡದಲ್ಲಿಯೇ ರಚಿಸಿದರು.
ಚಂದ್ರಶೇಖರ ಶಾಸ್ತ್ರಿಗಳು ಕನ್ನಡದಲ್ಲಿ ಹಲವಾರು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ನೂರಾರು ಲೇಖನಗಳನ್ನು ನಾಡಿನ ಶ್ರೇಷ್ಠಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಅವರ ಉಪಲಬ್ದ ಕೃತಿಗಳಲ್ಲಿ ‘ಬಸವತತ್ವ ರತ್ನಾಕರ’, ‘ಕಾಡಸಿದ್ದೇಶ್ವರ ವಚನ’, ‘ಧಾರವಾಡದ ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ’ ಮಹತ್ವದ್ದಾಗಿವೆ. ಅವರ ಅನುಪಲಬ್ದ ಕೃತಿಗಳಲ್ಲಿ ‘ಧರ್ಮವೀರ ಶಂಕ್ರಣ್ಣನವರ ಚರಿತ್ರೆ’, ‘ಮದನಮೋಹನ ಮಾಲವೀಯರ ಚರಿತ್ರೆ’, ‘ಸ್ವತಂತ್ರ ಸಿದ್ದಲಿಂಗೇಶ್ವರ ವಚನ’, ‘ಸಿದ್ಧೇಶ್ವರ ವಚನ’, ‘ರಾಜಗಿರಿ’, ‘ಶಬರಶಂಕರ ಪಾರ್ಥಪುರಷ’, ‘ಲಿಂಗಾಧಾರಣವೂ ವೇದಮಂತ್ರಗಳೂ’, ‘ಚಾಣಕ್ಯನೀತಿ ದರ್ಪಣ’, ‘ಭಗವಾನ ಬಸವೇಶ್ವರ ಜಯಂತಿ’, ‘ರೇಣುಕ ವಿಜಯ’, ‘ಕೊಲ್ಲಿಪಾಕಿ’, ‘ಆತ್ಮಚರಿತ್ರೆ’ ಮುಂತಾದವುಗಳನ್ನು ಗುರುತಿಸಲಾಗಿದೆ.
ಚಂದ್ರಶೇಖರ ಶಾಸ್ತ್ರಿಗಳು ಕೇವಲ ಒಬ್ಬ ಸಂಸ್ಕೃತ ವಿದ್ವಾಂಸರಾಗಿ ಹಾಗೂ ಪಾಂಡಿತ್ಯಪೂರ್ಣ ಕೃತಿರಚನಕಾರರಾಗಿ ಮಾತ್ರ ನಿಲ್ಲದೆ ಶ್ರೇಷ್ಠ ಆಡಳಿತಗಾರರಾಗಿ, ಉತ್ತಮ ಸಂಶೋಧಕರಾಗಿ, ಪತ್ರಿಕೋದ್ಯಮಿಯಾಗಿ, ಸಂಘಟನಾಕಾರರಾಗಿ, ರಾಜಕೀಯ ವಿಮರ್ಶಕರಾಗಿ, ಕೃಷಿಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ಪ್ರಕಾಶಿಸಿದವರು. ಈ ವಿಷಯಗಳಲ್ಲಿ ಸಹಸ್ರಾರು ವಿಚಾರಪೂರ್ಣ ಲೇಖನಗಳನ್ನುಬರೆದಿದ್ದಾರೆ. 1926ರಲ್ಲಿ ಅವರು ಬರೆದ ‘ಭಗವಾನ್ ಬಸವೇಶ್ವರ ಜಯಂತಿ’ ಎಂಬ ಲೇಖನವನ್ನು ಹಲವು ಬಾರಿ ಮರುಮುದ್ರಣ ಮಾಡಿಸಿ ಹಂಚಲಾಯಿತಂತೆ. ಚಂದ್ರಶೇಖರ ಶಾಸ್ತ್ರಿಗಳು ಬಸವಣ್ಣನವರನ್ನೂ ಹಾಗೂ ಅವರ ವಚನಗಳನ್ನು ಕುರಿತು ವಿಶೇಷ ಅಧ್ಯಯನ, ಆಲೋಚನೆಗಳಿಗೆ ಹುಟ್ಟುಹಾಕಿದರು. ಪ್ರಾಯಃ ಇದರ ಪರಿಣಾಮವಾಗಿ ‘ಬಸವ ರತ್ನಾಕರ’ ಎಂಬ 700 ಪುಟಗಳ ಬೃಹತ್ ಗ್ರಂಥ ರೂಪುದಳೆದು 1961ರಲ್ಲಿ ಪ್ರಕಟಗೊಂಡಿತು. ಸುಪ್ರಸಿದ್ಧ ವಿದ್ವಾಂಸ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಪ್ರೊ. ಎನ್. ಎ. ನಿಕ್ಕಮ್ ಅವರು “ಈ ಗ್ರಂಥವು ಬಸವಣ್ಣನವರ ಜೀವನ ಮತ್ತು ದರ್ಶನಗಳನ್ನು ಕುರಿತು ಒಂದು ಶಾಶ್ವತ ಕೃತಿ ಎಂಬುದರಲ್ಲಿ ಸಂದೇಹವೇ ಇಲ್ಲ” ಎಂದು ಅಭಿಪ್ರಾಯಿಸಿದ್ದಾರೆ.
ಚಂದ್ರಶೇಖರ ಶಾಸ್ತ್ರಿಗಳು ತಮ್ಮ ಕೆಲವು ನಿಕಟವರ್ತಿಗಳೊಂದಿಗೆ ‘ಭಗವಾನ್ ಬಸವೇಶ್ವರ’ ಎಂಬ ಚಲನಚಿತ್ರವನ್ನು ನಿರ್ಮಿಸಲು ಪ್ರಯತ್ನಿಸಿದರು. ಚಲನಚಿತ್ರ ಪೂರ್ಣವಾಗದೆ ಹಾನಿಯನ್ನು ಅನುಭವಿಸಬೇಕಾಯಿತು. ಆದರೆ ಅವರು ಮೈಸೂರಿನಲ್ಲಿ ಇರುವಾಗಲೆಲ್ಲ ಅಲ್ಲಿ ಶ್ರೇಷ್ಠ ವಿದ್ವಾಂಸರ ಸಂಪರ್ಕ ಅವರಿಗೆ ವಿಶೇಷ ಲಾಭವನ್ನು ತಂದುಕೊಟ್ಟಿತು. ಮೈಸೂರಿನ ಹಲವು ಸಂಸ್ಥೆಗಳಿಗೆ ಅವರು ಭೇಟಿ ನೀಡಿ ವಿದ್ವತ್ ಸಮಾರಂಭಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದರು.
ಇದೆಲ್ಲಕ್ಕೂ ಹೆಚ್ಚಾಗಿ, ಕನ್ನಡ ನಾಟಕಗಳ ಬಗೆಗೆ ಅವರು ಇಟ್ಟುಕೊಂಡಿದ್ದ ಅಭಿಮಾನ ಬಹುದೊಡ್ಡದು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸತತ ಹದಿನೈದು ವರ್ಷ ಸೇವೆ ಸಲ್ಲಿಸಿದ್ದು ಅಷ್ಟೇ ಅಲ್ಲ, ಪರಿಷತ್ತು ಹುಟ್ಟಿದಾರಭ್ಯ ತಮ್ಮ ವಯಸ್ಸಿನ ನೂರು ವರ್ಷಗಳವರೆಗೂ ಒಂದೂ ಬಿಡದೆ ಎಲ್ಲ ಸಮ್ಮೇಳನಗಳಲ್ಲಿ ಉಪಸ್ಥಿತರಾಗಿ ಭಾಗವಹಿಸಿದ ದಾಖಲೆ ಇವರದು. ಅಂತೆಯೇ ಕನ್ನಡ ಸಾಹಿತ್ಯ ಪರಿಷತ್ತು ಚಂದ್ರಶೇಖರ ಶಾಸ್ತ್ರಿಗಳಿಗೆ ನೂರು ತುಂಬಿದ ಸಂದರ್ಭದಲ್ಲಿ ಪರಿಷತ್ತಿನ ಅತ್ಯುನ್ನತ ಗೌರವ ಸದಸ್ಯತ್ವವನ್ನು ನೀಡಿ ಸನ್ಮಾನಿಸಿತು.
ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಪ್ರದೇಶಗಳಲ್ಲಿ ವೃತ್ತಿ ಸೇವೆ ಸಲ್ಲಿಸಿ ಬೆಂಗಳೂರು-ಮೈಸೂರು ಭಾಗದ ವಿದ್ವಜ್ಜನರ ಸಂಪರ್ಕವನ್ನು ಇಟ್ಟುಕೊಂಡು; ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅಂತೆಯೇ ಅವರನ್ನು ವ್ಯಾಕರಣಶಾಸ್ತ್ರಿ ಎಂದು ಕರೆಯುವ ಬದಲು ‘ಏಕೀಕರಣಶಾಸ್ತ್ರಿ’ ಎಂದೇ ಅವರ ಸ್ನೇಹಿತರು ಕರೆಯುತ್ತಿದ್ದರಂತೆ. ‘ಹಿಂದೂಸ್ಥಾನಕ ಸ್ವಾತ್ರಂತ್ರ್ಯ ಸಿಗಲಿ ಬಿಡಲಿ ಕರ್ನಾಟಕ ಒಂದುಗೂಡಬೇಕು’ ಎನ್ನುವುದೇ ಅವರ ಮಂತ್ರವಾಗಿತ್ತು. ಹದಿಹರೆಯದಲ್ಲಿ ಇವರು ಏಕೀಕರಣ ಚಳುವಳಿಯಲ್ಲಿ ಧುಮುಕಿದರೆ ಮುದಿವಯಸ್ಸಿನಲ್ಲಿ ಗೋಕಾಕ ಚಳುವಳಿಯಲ್ಲಿ ಭಾಗಿಯಾಗಿದ್ದರು.
ಧಾರವಾಡದಲ್ಲಿ ನಡೆದ 25ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಕರ್ನಾಟಕ, ಕನ್ನಡ ಸಾಹಿತ್ಯ ಇವುಗಳನ್ನು ಕುರಿತು ಅವರು ವ್ಯಕ್ತಪಡಿಸಿದ ಚಿಂತನೆಗಳು ಅಮೋಘವಾಗಿವೆ.
1968ರಲ್ಲಿ ಇವರ ‘ಬಸವರತ್ನಾಕರ’ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1983ರಲ್ಲಿ ಕರ್ನಾಟಕ ರಾಜ್ಯದ ರಾಜ್ಯ ಪ್ರಶಸ್ತಿ, 1966ರಲ್ಲಿ ಸಂಶೋಧಕರಿಗಾಗಿ ಇರುವ ಚಿದಾನಂದ ಪ್ರಶಸ್ತಿಗಳು ಶಾಸ್ತ್ರಿಗಳಿಗೆ ಸಂದ ಪ್ರಮುಖ ಪ್ರಶಸ್ತಿಗಳಾಗಿವೆ.
ಇಪ್ಪತ್ತನೆಯ ಶತಮಾನದ ಆರಂಭಕಾಲದಿಂದ ಎಂಬತ್ತರ ದಶಕದವರೆಗೆ ನಿರಂತರವಾಗಿ ಆರುದಶಕಗಳಿಗೂ ಹೆಚ್ಚುಕಾಲ ಕನ್ನಡಕ್ಕಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಕನ್ನಡ ನಾಡು ನುಡಿಯ ಸೇವೆಗೆ ಹಂಬಲಿಸಿದ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ವೃದ್ಧಾಪ್ಯವನ್ನು ಮಾಗಳ ಗ್ರಾಮದಲ್ಲಿ ಕಳೆಯುತ್ತ ಅಲ್ಲಿಯೇ ದಿನಾಂಕ 1997ರ ಅಕ್ಟೋಬರ್ 24ರಂದು ಈಲೋಕವನ್ನಗಲಿದರು.
On the birth anniversary of great scholar Vyakarana Theertha Chandrashekhara Shastri
ಕಾಮೆಂಟ್‌ಗಳು