ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸವಾಯಿ ಗಂಧರ್ವ


 ಸವಾಯಿ ಗಂಧರ್ವ


ಇಂದು ಸಂಗೀತಲೋಕದ ಮಹಾನ್ ತಾರೆಯಾದ ಸವಾಯಿ ಗಂಧರ್ವರ ಜನ್ಮದಿನ.  

ಧಾರವಾಡ ಜಿಲ್ಲೆಯ ಪುಟ್ಟ ತಾಲ್ಲೂಕಾದ ಕುಂದಗೋಳ ತನ್ನೊಡಲಿನ ಸಂಗೀತದಿಂದಾಗಿ ದೇಶ ವಿದೇಶಗಳಲ್ಲಿಯೂ ಇಂದು ಪರಿಚಿತವಾಗಿದೆ.  ಅಲ್ಲಿ ಬಂದು ಹಾಡುವುದು ಸಂಗೀತಗಾರರಿಗೆ ಖುಷಿ, ಭಕ್ತಿ, ಅಭಿಮಾನದ ಸಂಗತಿ.  ಅಲ್ಲಿಗೆ ಹೋಗುವುದೆಂದರೆ ಸಂಗೀತಪ್ರಿಯರಿಗೆ ತೀರ್ಥಯಾತ್ರೆಗೆ ಹೋದ ಹಾಗೆ.  ಏಕೆಂದರೆ ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ‘’ಗಂಧರ್ವ’ ಸವಾಯಿ ಗಂಧರ್ವರು ಜನಿಸಿದ ಊರು.  ಮೇರು ಕಲಾವಿದರೆನಿಸಿದ ಪಂಡಿತ್ ಭೀಮಸೇನ ಜೋಷಿ ಹಾಗೂ ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ಸಂಗೀತದ ತಾಲೀಮು ಕೊಟ್ಟ ಊರು.  

ಹುಬ್ಬಳ್ಳಿಗೆ 12 ಮೈಲಿ ದೂರದಲ್ಲಿರುವ ಕುಂದಗೋಳವು ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಅಲ್ಲಿನ ಆಡಳಿತ ಭಾಷೆ ಮರಾಠಿಯಾಗಿತ್ತು. ಇಂತಹ ಪರಿಸರದಲ್ಲಿ  ಹಿಂದೂಸ್ತಾನೀ ಸಂಗೀತದಲ್ಲಿ ದೇಶದ ಮನೆಮಾತಾಗಿ ಪ್ರಸಿದ್ಧರಾಗಿದ್ದ, ಸವಾಯಿ ಗಂಧರ್ವರು 1886ರ ಜನವರಿ 19ರಂದು ಜನಿಸಿದರು.  ಅವರ ಬಾಲ್ಯದ ಹೆಸರು ರಾಮಚಂದ್ರ ಗಣೇಶ ಕುಂದಗೋಳಕರ್.  ಎಲ್ಲರೂ ಇವರನ್ನು ರಾಮಭಾವು ಎನ್ನುತ್ತಿದ್ದರು.  ಅವರ ತಂದೆಯವರಾದ  ಗಣೇಶರಾವ್  ಹತ್ತಿರದ ಸಂಶಿ  ಎಂಬ ಊರಿನಲ್ಲಿ ಜನಿಸಿದವರು.  ತಾಯಿ  ಧಾರವಾಡದ ಹತ್ತಿರದ ಅಮ್ಮಿನಹಾಳ ಗ್ರಾಮದವರು.   

ಬಾಲಕ ರಾಮಭಾವು ಪಲ್ಲಕ್ಕಿ ಸೇವೆಯ ಸಮಯದಲ್ಲಿ ಭಜನೆ ಹಾಡುಗಳನ್ನು ಹಾಡುತ್ತಿದ್ದರು.  ಅವರ  ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲೇ ನಡೆಯಿತು. ಅವರ ಪ್ರೌಢಶಾಲಾ ವಿದ್ಯಾಭ್ಯಾಸ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲಿನಲ್ಲಿ ನಡೆಯಿತು. ಪ್ರತಿದಿನವೂ ರೈಲಿನಲ್ಲಿ ಹೋಗಿಬರಬೇಕಾಗಿತ್ತು.   ಆದರೆ ಇದು ಹೆಚ್ಚುದಿನ ಸಾಗಲಿಲ್ಲ.   ತಾಯಿಯ ಮರಣದಿಂದಾಗಿ ಚಿಕ್ಕಮ್ಮನ ಆಸರೆಯಲ್ಲಿ ನಾಡಿಗೇರವಾಡಿಯಲ್ಲೇ ಬೆಳೆದರು.  ಕಿರಾಣಾ ಘರಾಣೆಯ ಗಾಯಕ ಅಬ್ದುಲ್ ಕರೀಂ ಖಾನರು  'ಭೈರವಿ ರಾಗ'ದಲ್ಲಿ ಹಾಡಿದ ’ಜಮುನಾಕೆ ತೀರ್' ಎಂಬ ಗೀತೆ ಅವರ ಹೃದಯದಲ್ಲಿ ಅಚ್ಚೊತ್ತಿತು.  ಕಿರಾಣಾ ಘರಾಣೆಯ ಆದ್ಯ ಪ್ರವರ್ತಕರಾದ ಉಸ್ತಾದ ಅಬ್ದುಲ್ ಕರೀಮ್ ಖಾನ್ ಸಾಹೇಬರು ಕುಂದಗೋಳಕ್ಕೆ  ತಮ್ಮ ಶಿಷ್ಯರಾದ ನಾನಾಸಾಹೇಬ ನಾಡಿಗೇರರಲ್ಲಿ ಆಗಾಗ್ಗೆ ಬರುತ್ತಿದ್ದರು. ಬಾಲಕ ರಾಮಚಂದ್ರ ಗಣೇಶನ ಸಂಗೀತಾಸಕ್ತಿಯನ್ನು ಕಂಡ ಖಾನ್ ಸಾಹೇಬರು ಅವನನ್ನು ತಮ್ಮ  ಜೊತೆಯಲ್ಲಿ ಮಿರಜ್‍ಗೆ ಕರೆದುಕೊಂಡು ಹೋದರು. 

ಗುರುಗಳಿಗೆ ಶೃತಿ ತಂಬೂರಿ ಮೀಟುತ್ತಾ ಗಂಟೆಗಟ್ಟಲೆ ಸಂಗೀತವನ್ನು ಅವಲೋಕಿಸುವ ಅವಕಾಶವನ್ನು ರಾಮಭಾವು ಸದುಪಯೋಗಗೊಳಿಸಿಕೊಂಡರು.   ನಿಧಾನವಾಗಿ ಸ್ವರಬೆರೆಸುವ ತಾಲೀಮು  ಆರಂಭವಾಯಿತು.  ಹೀಗೆ ಶ್ರದ್ಧಾನಿಷ್ಠೆಗಳಿಂದ ಗುರುಸಾನ್ನಿಧ್ಯದಲ್ಲಿ ಸಂಗೀತವನ್ನು ತಮ್ಮದಾಗಿಸಿಕೊಂಡರು.  

ಅಬ್ದುಲ್ ಕರೀಂ ಖಾನರಿಗೆ ತಮ್ಮ ಶಿಷ್ಯರು ಚೆನ್ನಾಗಿ ಕಲಿತು ಒಳ್ಳೆಯ ಹೆಸರು ಪಡೆಯಬೇಕು ಎಂಬ ಇಚ್ಛೆಯಲ್ಲಿ ತಮ್ಮ ಶಿಷ್ಯರಿಗೆ ಎಂಟು ವರ್ಷಗಳ ಕರಾರು ವಿಧಿಸುತ್ತಿದ್ದರು.   ರಾಮಭಾವು ತಮ್ಮ ಗುರುಗಳ ಬಳಿಯಲ್ಲಿ ತಮ್ಮ ಶಿಕ್ಷಣದ ಅವಧಿಯನ್ನು ಪೂರ್ಣಗೊಳಿಸಲಿಲ್ಲ.  ಹೊಟ್ಟೆಪಾಡಿಗಾಗಿ ಮರಾಠಿ ನಾಟಕ ಕಂಪನಿಯೊಂದನ್ನು ಸೇರಿಕೊಂಡರು. ಆ ಸಮಯದಲ್ಲಿ  ಮಹಾರಾಷ್ಟ್ರದಲ್ಲಿ ಸಂಗೀತ ಹಾಗು ನಾಟಕರಂಗದಲ್ಲಿ ಪ್ರಸಿದ್ಧರಾದ ಬಾಲಗಂಧರ್ವರಿಗಿಂತಲೂ ಸಂಗೀತ ಹಾಗೂ ಅಭಿನಯದಲ್ಲಿ ಇವರು ಒಂದೂಕಾಲು ಮಡಿ ಹೆಚ್ಚು ಎನ್ನುವ ಅರ್ಥದಲ್ಲಿ ರಾಮಭಾವು ಕುಂದಗೋಳಕರ ಅವರನ್ನು ಸವಾಯಿ ಗಂಧರ್ವ ಎಂದು ಕರೆಯಲಾಯಿತು.  ಕೆಲಕಾಲ ಅವರಿಗೆ ಸ್ವರಹತ್ತುವುದರಲ್ಲಿ ತೊಂದರೆಯಿತ್ತು.  ಮುಂದೆ ಸ್ವರಹತ್ತಿತಲ್ಲದೆ ಹಲವಾರು ತಾಸು ಸಂಗೀತ  ಕಾರ್ಯಕ್ರಮ ಕೊಟ್ಟರು.  ಮೈಸೂರು, ಮಹಾರಾಷ್ಟ್ರ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಅವ್ಯಾಹತವಾಗಿ ಇವರ ಸಂಗೀತ ತಪಶ್ಚರ್ಯ ನಡೆಯಿತು.   ಮಂಜೀಖಾನ್ ಇಷ್ಟಪಟ್ಟರು. ಓಂಕಾರನಾಥ ಠಾಕೂರ ಕಲ್ಕತ್ತಾ ಪರಿಷತ್ತಿನಲ್ಲಿ ಆನಂದಶ್ರುಗಳಿಂದ ಫಿಯಾಜ್ ಖಾನರು ಮೆಚ್ಚಿದರು.  

ಕೆಲವೊಮ್ಮೆ, ಸವಾಯಿಗಂಧರ್ವರು ಮೊಕ್ಕಂಮಾಡಿದ ಸ್ಥಳದಲ್ಲಿಯೇ   ಬಾಲಗಂಧರ್ವರ  ನಾಟಕ ಕಂಪೆನಿಯೂ ಡೇರ ಹಾಕುತ್ತಿತ್ತು. ಆಗ, 'ದ್ರೌಪದಿ ನಾಟಕ'ದ ಪ್ರಯೋಗವನ್ನು ಬಾಲಗಂಧರ್ವರು ಮಾಡಿದಾಗ,  ಅದೇ ಕಥಾವಸ್ತುವನ್ನು ಬಳಸಿ 'ಆತ್ಮತೋಚ' ವೆಂಬ ಹೆಸರಿನಲ್ಲಿ ನಾಟಕವನ್ನು  ಸವಾಯಿ ಗಂಧರ್ವರಿದ್ದ  ನೂತನ ಸಂಗೀತ ಮಂಡಳಿ  ಪ್ರಯೋಗ ಮಾಡಿತು. ಇದರಲ್ಲಿ 'ದ್ರೌಪದಿ'ಯ ಪಾತ್ರವನ್ನು ರಾಮಭಾವೂ ಮಾಡಿದ್ದರು. ಅಭಿನಯದಲ್ಲಿ ಹೆಚ್ಚು ಸಾಮರ್ಥ್ಯವಿಲ್ಲದಿದ್ದರೂ   ಶಾಸ್ತ್ರೀಯ ಸಂಗೀತದ  ತರಬೇತಿಯ ಭದ್ರ ತಳಹದಿ ಅವರ ಅಭಿನಯಕ್ಕೆ ಬೇರೊಂದು ಕಳೆ ಕೊಟ್ಟಿತು.  ಸವಾಯಿ ಗಂಧರ್ವರ ಹಾಡುಗಾರಿಕೆಯನ್ನು ಕೇಳಿದ ಬಾಲ  ಗಂಧರ್ವರು ಮನಸೋತಿದ್ದರು.   ತಮ್ಮ ಪಾತ್ರಮುಗಿದ ಬಳಿಕ ಬಣ್ಣವನ್ನು ಅಳಿಸಿಕೊಂಡು ಸವಾಯಿ ಅವರ ಪಾತ್ರ ನಿರ್ವಹಣೆ ನೋಡಿ ಅವರ ಸಂಗೀತವನ್ನು ಕೇಳಲು ಬರುತ್ತಿದ್ದರು. ಹೀಗೆ ಅವರ ಮಧ್ಯೆ ಬೆಳೆದ ಮೈತ್ರಿ,  ಗೌರವ,  ಕೀರ್ತಿ,  ಧನಲಾಭ ಅಪಾರ ಯಶಸ್ಸನ್ನು ದೊರಕಿಸಿಕೊಟ್ಟಿತ್ತು.  ಗ್ರಾಮಾಫೋನ್ ಕಂಪೆನಿ ಅಬ್ದುಲ್ ಖಾನ್ ಸಾಹೇಬರ ಗೀತೆಗಳನ್ನು ತರುವ  ಮುಂಚೆಯೇ ಸವಾಯಿ ಗಂಧರ್ವರ   ಧ್ವನಿಮುದ್ರಿಕೆಗಳು ಮಾರುಕಟ್ಟೆಗೆ ಬಂದವು.

1916-41 ರ ವರೆಗಿನ 25 ವರ್ಷಗಳ ಕಾಲುಶತಮಾನದಲ್ಲಿ ಮಹತ್ವದ  ಶಿಷ್ಯ ಪರಂಪರೆ ಸೃಷ್ಟಿಯಾಯಿತು.  ಇವರಲ್ಲಿ ವಿ. ಎ. ಕಾಗಲ್ ಕರ್, ನೀಲ ಕಂಠ ಬುವಾ,  ಗಡಗೋಳಿ ವೆಂಕಟರಾವ್,  ರಾಮದುರ್ಗ ಕೃಷ್ಣಾ ಬಾಯಿ,  ಗಂಗೂಬಾಯಿ ಹಾನಗಲ್,  ಫಿರೋಜ್ ದಸ್ತಾರ್, ಭೀಮಸೇನ್ ಜೋಷಿ, ಬಸವರಾಜ ರಾಜ ಗುರು ಕನ್ನಡಿಗರು. 

ಮುಂದೆ ಸವಾಯಿ ಗಂಧರ್ವರು ಅನಾರೋಗ್ಯಕ್ಕೆ ತುತ್ತಾದರು.  ಮೇಲಾಗಿ ರಂಗಭೂಮಿಯ ಮಾಲಿಕತ್ವವನ್ನು ನಿಭಾಯಿಸಬೇಕಾಯಿತು. ವ್ಯವಹಾರ ಚತುರರಲ್ಲದ ಗಂಧರ್ವರು ಕೊನೆಗೆ, ತಮ್ಮ ಮನೆ, ಜಮೀನು, ಆಸ್ತಿಪಾಸ್ತಿಗಳನ್ನು  ಅಡವಿಟ್ಟು ಸಾಲ ತೀರಿಸಬೇಕಾಗಿಬಂತು.  1941ರಲ್ಲಿ  ಕೆಲವು ನಾಟಕಗಳನ್ನು ಆಡಿ ಅದರಲ್ಲಿ ಬಂದ ಹಣವನ್ನು ಸಾಲಗಾರರಿಗೆ ಕೊಟ್ಟು, ಕೈತೊಳೆದುಕೊಂಡರು.  1942ರಲ್ಲಿ ಸವಾಯಿ ಗಂಧರ್ವರಿಗೆ ಪಾರ್ಶ್ವವಾಯುವಿನಿಂದ ತೊಂದರೆಯಾಯಿತು. ಅವರು ತಮ್ಮ ಶಿಷ್ಯೆಯಾದ ಗಂಗೂಬಾಯಿ ಹಾನಗಲ್ ಅವರ ಮನೆಯಲ್ಲಿಯೆ ಉಳಿದುಕೊಂಡು ಚಿಕಿತ್ಸೆ ಪಡೆದರು.  

1946ರಲ್ಲಿ ಸವಾಯಿ ಗಂಧರ್ವರಿಗೆ  60 ವರ್ಷ. ಅವರ ಪ್ರಿಯ ಶಿಷ್ಯರು. ಪುಣೆ ಮುಂತಾದನಗರಗಳಲ್ಲಿ ಅವರ ಗೌರವಾರ್ಥವಾಗಿ ಸಂಗೀತೋತ್ಸವವನ್ನು ಆಯೋಜಿಸುತ್ತಿದ್ದರು. ಆ ಸಮಯದಲ್ಲಿ  ಬೇರೆಬೇರೆ ಘರಾಣೆಗಳ ಮೂಲದ ಹಿರಿಯ ಸಂಗೀತಗಾರರಾದ ರಾಮಕೃಷ್ಣ ಬುವ, ವಝೆ, ಭಾಸ್ಕರಬುವ ಬಖಲೆ, ರಹಿಮತ್ ಖಾನ್ ಸಾಹೇಬ, ಮಂಜೀಖಾನ್ ಸಾಹೇಬ, ಮುಂತಾದ ಹಿರಿಯ ಉಚ್ಚಮಟ್ಟದ ಸಂಗೀತಕಾರರು   ಭಾಗವಹಿಸುತ್ತಿದ್ದರು. 

ಸವಾಯಿ ಗಂಧರ್ವರಿಗೆ  ಹೈದರಾಬಾದ್ ಕರ್ನಾಟಕ  ಮಂಡಳಿಯ ಮಾನಪತ್ರ,   ಧರಪುರದ ಮಹಾರಾಜರ ಚಿನ್ನದ ಪದಕ, 1938ರಲ್ಲಿ  ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ ಪದವಿ, 1939ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್ ವಿಶೇಷವಾಗಿ ಗೌರವಿಸಿದ ಸುವರ್ಣಪದಕ ಮಂತಾದ ಅನೇಕ ಗೌರವಗಳು ಸಂದವು.  ದೇಶದ ವಿವಿಧ ಆಕಾಶವಾಣಿಗಳಲ್ಲಿ ಅವರ ಸಂಗೀತ ಕಾರ್ಯಕ್ರಮಗಳು  ಬಿತ್ತರಗೊಂಡವು.

ಭೀಮಸೇನ ಜೋಷಿ ಅವರು ತಮ್ಮ ಗುರುಗಳ ನೆನಪಿನಲ್ಲಿ ಅರವತ್ತರ ದಶಕದಿಂದಲೇ ಪುಣೆಯಲ್ಲಿ  ಪ್ರಾರಂಭಿಸಿದ ಸವಾಯಿ ಗಂಧರ್ವ ಸಂಗೀತೋತ್ಸವ ವಿಶ್ವಪ್ರಸಿದ್ಧಿ ಗಳಿಸಿತ್ತು.  ಈ ಮಹಾನ್ ಸಂಗೀತಾಚಾರ್ಯರು 1952ರ ಸೆಪ್ಟೆಂಬರ್ 12,ರಂದು ಈ ಲೋಕವನ್ನಗಲಿದರು.   ಕುಂದಗೋಳದಲ್ಲಿ ಪ್ರತಿವರ್ಷ ಭಾದ್ರಪದ ಕೃಷ್ಣಪಕ್ಷದ ನವಮಿ (ಅವಿಧವಾ ನವಮಿ)ಯಂದು ಸವಾಯಿ ಗಂಧರ್ವ ಪುಣ್ಯತಿಥಿ ಸಂಗೀತೋತ್ಸವ ನಡೆಯುತ್ತಾ ಬಂದಿದೆ.  

ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.  

On the birth anniversary of Sawai Gandharva

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ