ಸೌಮಿತ್ರ ಚಟರ್ಜಿ
ಸೌಮಿತ್ರ ಚಟರ್ಜಿ
ಸೌಮಿತ್ರ ಚಟರ್ಜಿ ಮಹಾನ್ ಕಲಾವಿದರು. ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾದ ಸೌಮಿತ್ರ ಚಟರ್ಜಿ 1999ರಲ್ಲಿ ಫ್ರಾನ್ಸ್ ದೇಶದ ಕಲಾ ಗೌರವ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ಕಲಾವಿದರೆನಿಸಿದವರು. ಇಂದು ಅವರ ಸಂಸ್ಮರಣೆ ದಿನ.
ಕೋಲ್ಕತ್ತಾ ಮೂಲದವರಾದ ಸೌಮಿತ್ರ ಚಟರ್ಜಿ 1935ರ ಜನವರಿ 19ರಂದು ಜನಿಸಿದರು. ತಮ್ಮ ಶಾಲಾ ದಿನಗಳಲ್ಲೇ ನಟನೆಯಲ್ಲಿ ಆಸಕ್ತರಾಗಿದ್ದ ಅವರು ಕಾಲೇಜಿನ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ರಂಗಭೂಮಿಯತ್ತ ಆಕರ್ಷಿತರಾದರು.
ಸೌಮಿತ್ರ ಚಟರ್ಜಿ ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರ 'ಅಪೂರ್ ಸಂಸಾರ್' ಇಂದ ಚಿತ್ರಜೀವನ ಆರಂಭಿಸಿ, ರೇ ಅವರ ಅಭಿಜನ್, ಚಾರುಲತಾ, ಅರಣ್ಯೆರ್ ದಿನ್ ರಾತ್ರಿ, ಅಶಾಇ ಸಂಕೇತ್, ಸೋನಾರ್ ಕೆಲ್ಲಾ, ಜೋಯಿ ಬಾಬಾ ಫೆಲುನಾಥ್, ಹಿರಕ್ ರಜರ್ ದೆಶೆ, ಘರ ಬೈರೆ, ಶಕಾ ಪ್ರೊಶಾಖಾ, ಘನಶತ್ರು ಮುಂತಾದ 14 ಚಿತ್ರಗಳಲ್ಲಿ ಪಾತ್ರವಹಿಸಿದ್ದರು. ಸತ್ಯಜಿತ್ ರೇ ಅಲ್ಲದೆ ಮೃಣಾಲ್ ಸೇನ್, ತಪನ್ ಸಿನ್ಹಾ, ಗೌತಮ್ ಘೋಷ್, ಅಪರ್ಣಾ ಸೇನ್ ಮತ್ತು ಅಂಜನ್ ದಾಸ್ ಸೇರಿದಂತೆ ಹಲವಾರು ಪ್ರಸಿದ್ಧ ನಿರ್ದೇಶಕರೊಂದಿಗೂ ಚಟರ್ಜಿ ಕೆಲಸ ಮಾಡಿದ್ದರು. ಆಕಾಶ್ ಕುಸುಮ್, ಕ್ಷುದಿತ ಪಶನ್, ಜಿಂದರ್ ಬಂಧಿ, ಅತೊನ್ಕೊ, ಸ್ವರಲಿಪಿ, ಒಟೊಲ್ ಜೊಲೆರ್ ಅಹೊಬನ್, ಸಾತ್ ಪಕೆ ಬಂಧಾ, ಪರಿಣೀತಾ, ಸಂಸಾರ್ ಸಿಮಂತೆ, ಗಣದೇವತಾ, ಪೋತ್ ಓ ಪ್ರಸಾದ್ ಅಗೋಮನ್ ಮುಂತಾದವು ಅವರ ಇನ್ನಿತರ ಪ್ರಸಿದ್ಧ ಚಿತ್ರಗಳು. ಹೀಗೆ ಅವರು 2016 ವರ್ಷದವರೆಗೆ ಸುಮಾರು 210 ಚಿತ್ರಗಳಲ್ಲಿ ನಟಿಸಿದ್ದರು. ಸ್ವಯಂ ಅವರೇ ನಿರ್ದೇಶಿಸಿದ್ದ ರಬೀಂದ್ರನಾಥ ಠಾಗೂರರ ಕಥೆ ಆಧಾರಿತ 1986ರ 'ಸ್ತ್ರೀ ಪತ್ರ' ಸಹಾ ವಿಮರ್ಶಕರಿಂದ ಪ್ರಶಂಸೆ ಗಳಿಸಿತು.
ಸೌಮಿತ್ರ ಚಟರ್ಜಿ ಚಲನಚಿತ್ರಗಳಲ್ಲಿದ್ದಾಗಲೂ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದು 'ನಾಮ್ ಜಿಬಾನ್', 'ರಾಜ್‌ಕುಮಾರ್', 'ಫೆರಾ', 'ನಿಕಾಂತಾ', 'ಗಟಕ್ ಬಿಡೆ', 'ನ್ಯಾಯ್‍ಮೂರ್ತಿ', 'ಟಿಕ್ಟಿಕಿ', 'ಲಿಯರ್ ಕಿಂಗ್' ಮುಂತಾದ ಪ್ರಸಿದ್ಧ ನಾಟಕಗಳಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನಗಳಲ್ಲಿ ತೊಡಗಿದ್ದರು. ಕೆಲವೊಂದು ನಾಟಕ ರಚನೆ, ಅನುವಾದ ಮತ್ತು ಕವಿತಾ ವಾಚನಗಳಲ್ಲೂ ಅವರು ಸಕ್ರಿಯರಾಗಿದ್ದರು.
ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಫ್ರಾನ್ಸ್ ಮತ್ತು ಇಟಲಿ ದೇಶದ ಗೌರವಗಳು, ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳು, ಅನೇಕ ಫಿಲಂಫೇರ್ ಪ್ರಶಸ್ತಿಗಳೂ ಸೇರಿದಂತೆ ಸೌಮಿತ್ರ ಚಟರ್ಜಿ ಅವರಿಗೆ ಅನೇಕ ಗೌರವಗಳು ಸಂದಿದ್ದವು.
ಚಟರ್ಜಿ ಅವರ ಜೀವನ ಕುರಿತು ಫ್ರೆಂಚ್ ಚಲನಚಿತ್ರ ನಿರ್ದೇಶಕ ಕ್ಯಾಥರೀನ್ ಬರ್ಜ್ ಅವರು 'ಗಾಚ್' ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದರು.
ಸೌಮಿತ್ರ ಚಟರ್ಜಿ 2020ರ ನವೆಂಬರ್ 15ರಂದು ನಿಧನರಾದರು.
On Remembrance Day of Soumitra Chatterji
ಕಾಮೆಂಟ್‌ಗಳು