ಆರ್. ಎಸ್. ರಾಜಾರಾಮ್
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ ಸಂಸ್ಥೆ ಸುಮಾರು 5300 ಕನ್ನಡದ ಮಹತ್ಕೃತಿಗಳನ್ನು ನೀಡಿದೆ. ಈ ಬೃಹತ್ ಸಾಧನೆಯ ಹಿಂದೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮಕ ಶ್ರಮ ವಹಿಸಿದವರು ಆರ್. ಎಸ್. ರಾಜಾರಾಮ್. 'ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ನವಕರ್ನಾಟಕದ ಘೋಷವಾಕ್ಯದ ಮೂಲಕ ಕನ್ನಡಿಗರಿಗೆ ಉತ್ತಮ ಪುಸ್ತಕಗಳು ದೊರಕುವಂತೆ ಮಾಡಿದವರು ರಾಜಾರಾಮ್.
ರಂಗಸ್ವಾಮಿ ಶ್ರೀರಾಮ್ ರಾಜಾರಾಮ್ ಅವರು 1941ರ ಜನವರಿ 30ರಂದು ಜನಿಸಿದರು. ಮೂಲ ಆಂಧ್ರಪ್ರದೇಶದ ನೆಲೆಯಿಂದ ಎಷ್ಟೋ ತಲೆಮಾರಿನ ಹಿಂದೆ ಕರ್ನಾಟಕದ ವಿವಿಧ ಭಾಗಗಳಿಗೆ ಬಂದು ನೆಲೆಸಿರುವವರ ಪೈಕಿ ರಾಜಾರಾಮ್ ಅವರ ಕುಟುಂಬವೂ ಒಂದು. ತಂದೆ ಶ್ರೀರಾಮ್. ತಾಯಿ ರಾಜಮ್ಮ. ರಾಜಾರಾಮ್ ವರ್ಷದ ಮಗುವಿದ್ದಾಗಲೇ ತಾಯಿಯನ್ನು ಕಳೆದುಕೊಂಡರು. ತಂದೆ ಶ್ರೀರಾಮ್ ಅವರಿಗೆ ತಾವು ನಡೆಸುತ್ತಿದ್ದ ಫ್ಯಾನ್ಸಿ ಸ್ಟೋರನ್ನು ರಾಜಾರಾಮ್ ನೋಡಿಕೊಳ್ಳಬೇಕೆಂಬ ಆಸೆ ಇತ್ತು. ಆದರೆ ಮಗ ರಾಜಾರಾಮ್ ಒಪ್ಪಲಿಲ್ಲ. ಮಂಗಳೂರಿನಲ್ಲಿ ಓದಿ, ಅನಂತರ ಪುತ್ತೂರಿಗೆ ದೊಡ್ಡಪ್ಪನ ಮನೆಗೆ ಬಂದರು. ಹೈಸ್ಕೂಲು ಶಿಕ್ಷಣಕ್ಕೆ ವಿದಾಯ ಹೇಳಿದರು. ಆಗ ಕಮ್ಯುನಿಸ್ಟ್ ನಾಯಕ ಬಿ.ವಿ. ಕಕ್ಕಿಲಾಯ ಅವರಿಗೆ ಈ ಹುಡುಗನ ಹುರುಪು ಕಂಡು ಬೆಂಗಳೂರಿನ ನವಕರ್ನಾಟಕ ಸಂಸ್ಥೆಗೆ ಕಳಿಸಿದರು.
1960ರಲ್ಲಿ ಆರಂಭಗೊಂಡಿದ್ದ ನವರ್ನಾಟಕ ಸಂಸ್ಥೆ ಈ ಹೊತ್ತಿಗೆ ಬೆಂಗಳೂರಿನ ‘ಸೆಂಚುರಿ ಬುಕ್ ಹೌಸ್’, ಮಂಗಳೂರಿನ ‘ಪ್ರಭಾತ್ ಬುಕ್ ಹೌಸ್’, 'ಜನಶಕ್ತಿ ಪ್ರಿಂಟರ್ಸ್ ಮತ್ತು ಪ್ರಕಾಶನ’ ಮುಂತಾದವುಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.
ನವಕರ್ನಾಟಕಕ್ಕೆ ಅಂದಿನ ದಿನದಲ್ಲಿ ಸಂಸ್ಕೃತ ವಿದ್ವಾಂಸರಾಗಿದ್ದವರು ಎಸ್. ರಾಮಚಂದ್ರ ಭಟ್ ಅವರ ಮುಂದಾಳತ್ವ ಇತ್ತು. ಅಂದಿನ ದಿನಗಳಲ್ಲಿ
ನವಕರ್ನಾಟಕದ ಪ್ರಕಟಣೆ ಮತ್ತು ವಿತರಣೆಗಳು ಮೂಲತಃ ರಷ್ಯನ್ ಪುಸ್ತಕಗಳಾಗಿದ್ದವು. ಆ ಹಂತದಲ್ಲಿ ರಾಜಾರಾಮ್ ಅವರು ಭಟ್ ಅವರ ಬಳಿಗೆ ಬಂದರು. ಮುಖ್ಯವಾಗಿ ಮುದ್ರಣ ಮತ್ತು ಪುಸ್ತಕ ಮಾರಾಟದ ಕೆಲಸ ರಾಜಾರಾಮ್ ಅವರದಾಗಿತ್ತು.
ಬ್ರಿಗೇಡ್ ರಸ್ತೆಯ ಒಂದೆಡೆ ಪುಸ್ತಕಗಳ ರಾಶಿ ಹಾಕಿಕೊಂಡು ಒಂದು ಪುಸ್ತಕದ ಆಯ್ದ ಪ್ಯಾರಾವನ್ನು ಗಟ್ಟಿಯಾಗಿ ಓದಿ, ದಾರಿಹೋಕರನ್ನು ಆಕರ್ಷಿಸುವ ಹೊಸ ತಂತ್ರವೊಂದನ್ನು ರಾಜಾರಾಮ್ ರೂಢಿಸಿಕೊಂಡಿದ್ದರು. ಮತ್ತೆ ಬೆಂಗಳೂರಿನ ಜನಶಕ್ತಿ ಮುದ್ರಣಾಲಯದಲ್ಲಿ ಅಚ್ಚುಮೊಳೆಯಿಂದ ತೊಡಗಿ, ಪ್ರಕಟಿಸುವವರೆಗೆ ಪ್ರಕಾಶನದ ಎಲ್ಲ ಮಜಲುಗಳನ್ನೂ ಅರ್ಥೈಸಿಕೊಂಡರು.
ನವಕರ್ನಾಟಕ ಸಂಸ್ಥೆಯನ್ನು ಸ್ವತಂತ್ರ ಪ್ರಕಾಶನ ಸಂಸ್ಥೆಯಾಗಿ ಬೆಳೆಸಲೇಬೇಕೆಂಬ ಆಕಾಂಕ್ಷೆ ರಾಜಾರಾಮ್ ಅವರಲ್ಲಿತ್ತು. ಅದರ ಫಲವಾಗಿ ‘ವಿಶ್ವ ಕಥಾಕೋಶ’ ಪ್ರಕಟಣೆಗೊಂಡಿತು. 'ವಿಶ್ವ ಕಥಾಕೋಶ’ 87 ದೇಶಗಳ 317 ಕಥೆಗಳ ಸಂಗ್ರಹ. ಅವುಗಳನ್ನು ಅನುವಾದ ಮಾಡಲು ಲೇಖಕರ ಪಡೆಯೇ ಮೂಡಿತು. ಅನೇಕ ಎಂಬೆಸಿಗಳಿಗೆ ಪತ್ರ ಬರೆದು ಒಪ್ಪಿಗೆ ಪಡೆದರು. ನಿರಂಜನ ಅವರನ್ನು
ಸಂಪಾದಕರಾಗಲು ಒಪ್ಪಿಸಿದರು. 1980–82ರಲ್ಲಿ ಈ ಯೋಜನೆ ಮುಗಿದು ನವಕರ್ನಾಟಕಕ್ಕೆ ಹೆಸರು ಬಂತು. ಆಗ 25 ಸಂಪುಟಗಳ ಒಟ್ಟು ಬೆಲೆ ರೂ. 250. ಇದು ಓದುಗರಿಗೆ ಹೊರೆಯಾಗಬಾರದೆಂದು ಸಿಂಡಿಕೇಟ್ ಬ್ಯಾಂಕಿನವರನ್ನು ಒಪ್ಪಿಸಿ ಆ ಮೊತ್ತವನ್ನು ಪುಸ್ತಕಕೊಳ್ಳಲು ಸಾಲವಾಗಿ ಕೊಡುವ ಏರ್ಪಾಡನ್ನೂ ಮಾಡಿದರು.
ವಿಶ್ವಕಥಾಕೋಶವೇ ಅಲ್ಲದೆ ರಾಜಾರಾಮ್ ಅವರ ಮೂಲಕ ಮೂಡಿದ ನವಕರ್ನಾಟಕ ಸಂಸ್ಥೆಯ ಪ್ರಥಮಗಳು ಹಲವಾರು. 'ಕರ್ನಾಟಕದ ಏಕೀಕರಣ ಇತಿಹಾಸ’ (ಸಂ: ಡಾ. ಎಚ್.ಎಸ್. ಗೋಪಾಲರಾವ್); 'ಪ್ರಜಾವಾಣಿ’ಯ ಜನಪ್ರಿಯ ಅಂಕಣವಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’ದ ಗ್ರಂಥರೂಪ; ಪ್ರೊ. ಜಿ. ರಾಮಕೃಷ್ಣ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಸ್ವಾತಂತ್ರ್ಯೋತ್ತರ ಭಾರತ ಅವಲೋಕನ’; ಹಾ. ಮಾ. ನಾಯಕ್ ಮತ್ತು ಅನಂತರ ಪ್ರಧಾನ ಗುರುದತ್ ಅವರ ಸಂಪಾದಕತ್ವದಲ್ಲಿ ಹೊರಬಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರನ್ನು ಕುರಿತು ‘ನವಕರ್ನಾಟಕ ಸಾಹಿತ್ಯ ಸಂಪದ’; ಜಗತ್ತಿನ ಅನೇಕ ಮಹನೀಯರನ್ನು ಕುರಿತು ಅನೇಕ ಲೇಖಕರ ಬರಹ ಒಳಗೊಂಡ ಡಾ. ನಾ. ಸೋಮೇಶ್ವರ ಅವರ ಸಂಪಾದನಾ ನೇತೃತ್ವದ 'ವಿಶ್ವಮಾನ್ಯರು' ಮಾಲಿಕೆ; ವಿಜ್ಞಾನ ಪ್ರಸರಣ ಉದ್ಧೇಶದ ‘ಜ್ಞಾನ ವಿಜ್ಞಾನ ಕೋಶ’;
‘ನವಕರ್ನಾಟಕ ಕಲಾದರ್ಶನ’ (ಸಂ: ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ವಿಜಯಾ. ಸಿ.ಆರ್. ಕೃಷ್ಣರಾವ್) ಮುಂತಾದವುಗಳನ್ನೊಳಗೊಂಡ ಮಹತ್ವದ ವೈವಿಧ್ಯಗಳಿವೆ.
ರಾಜಾರಾಮ್ ಅವರು ನವರ್ನಾಟಕದ ಮೂಲಕ ‘ನೆಮ್ಮದಿಯ ನಾಳೆ ನಮ್ಮದು’ ಎಂಬ ಘೋಷವಾಕ್ಯ ರೂಪಿಸಿ ‘ಹೊಸತು’ ಪತ್ರಿಕೆಯನ್ನೂ ಸ್ಥಾಪಿಸಿದರು.
ರಾಜಾರಾಮ್ ಬೆಂಗಳೂರಿನ ಆಸ್ಟಿನ್ ಟೌನ್ ಬಡಾವಣೆಯಲ್ಲಿ ಮನೆ ಕೊಂಡಾಗ ಅಲ್ಲೊಂದು ಹೊಸ ಶಾಲೆಯನ್ನೇ ತೆರೆಯಲು ಕಾರಣರಾದರು.
ರಾಜಾರಾಮ್ ಅವರು 2017ರಲ್ಲಿ ‘ನವಕರ್ನಾಟಕ’ದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಿದ ಸಂದರ್ಭದಲ್ಲಿ,‘ನವಕರ್ನಾಟಕದ ಅಭಿವಂದನೆ’ ಸಂದಿತು.
ಆರ್. ಎಸ್. ರಾಜಾರಾಮ್ ಅವರ ಕುರಿತು ‘ನವಕರ್ನಾಟಕ ಪ್ರಕಾಶನದ ರೂವಾರಿ ಆರ್.ಎಸ್. ರಾಜಾರಾಮ್’ ಮತ್ತು ಪರಂಜ್ಯೋತಿ ಸ್ವಾಮಿ ಅವರು ಬರೆದ ‘ಸೃಷ್ಟಿಯ ಸೆಲೆ ಆರ್. ಎಸ್. ರಾಜಾರಾಮ್ ಬದುಕು–ಸಾಧನೆ’ ಎಂಬ ಪುಸ್ತಕಗಳು ಮೂಡಿಬಂದವು.
ಆರ್. ಎಸ್ ರಾಜಾರಾಮ್ ಅವರಿಗೆ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತು.
ಹಿರಿಯರಾದ ಆರ್. ಎಸ್. ರಾಜಾರಾಮ್ ಅವರ ಹಿರಿತನದ ಬದುಕು ಹಿತವಾಗಿರಲಿ.
R. S. Rajaram
ಕಾಮೆಂಟ್‌ಗಳು